ಕನ್ನಡದ ಅಸ್ಮಿತೆಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯ-ಶರಣುಕುಮಾರ

ಕನ್ನಡದ ಅಸ್ಮಿತೆಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯ- ಶರಣುಕುಮಾರ

ಮಾನ್ವಿ ಮೇ.5: ‘ಕನ್ನಡ ನಾಡು, ನುಡಿಯ ಅಸ್ಮಿತೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯ’ ಎಂದು ಉಪನ್ಯಾಸಕ ಶರಣುಕುಮಾರ ಮುದ್ದಂಗುಡ್ಡಿ ಹೇಳಿದರು.

ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ‘ ಕನ್ನಡದ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ‘ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಶತಮಾನದುದ್ದಕ್ಕೂ ನಾಡಿನ ನೆಲ, ಜಲ ಹಾಗೂ ಭಾಷೆಯ ಹಿತರಕ್ಷಣೆಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಪ್ರಸ್ತುತ ಸಂದರ್ಭದಲ್ಲಿ ಉದ್ಭವಿಸಿರುವ ಸಾಮಾಜಿಕ ಸವಾಲುಗಳು ಹಾಗೂ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚು ಕ್ರಿಯಾಶೀಲವಾಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ಉದ್ಯಮಿ ಮನ್ಸಾಲಿ ವೆಂಕಯ್ಯ ಶೆಟ್ಟಿ ಅವರು ‘ ಮಾನ್ವಿಯ ಜಗನ್ನಾಥದಾಸರು’ ಕುರಿತು ಪ್ರತಿ ವರ್ಷ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಸಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿಗೆ ರೂ25ಸಾವಿರ ದೇಣಿಗೆ ನೀಡಿದರು.
ಕನ್ನಡಪರ ಸೇವೆಗಾಗಿ ಹಿರಿಯ ಕನ್ನಡ ಉಪನ್ಯಾಸಕಿ ರತ್ನಾಬಾಯಿ ಶಿರೋಳ್ಕರ್, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀನಾಥ ಚೌದರಿ, ಸಾಹಿತ್ಯ ಭವನದ ಪರಿಚಾರಕ ಬಂದೇನವಾಜ್ ಅವರನ್ನು ಪರಿಷತ್ತಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಜಟಾಯು ಚಾನಲ್ ವರದಿಗಾರ ಬಸವರಾಜ ಕನ್ನಾರಿ ಹಾಗೂ ಪತ್ರಿಕಾ ಛಾಯಾಗ್ರಾಹಕ ಶಿವಕುಮಾರ ಸಜ್ಜನ್ ಅವರನ್ನು ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು.
ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆಲ್ಲಾ ವರ್ಗೀಸ್, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು, ಜಿಲ್ಲಾ ವಿಶೇಷ ಆಹ್ವಾನಿತರಾದ ಈರಣ್ಣ ಮರ್ಲಟ್ಟಿ ಹಾಗೂ ರಮೇಶಬಾಬು ಯಾಳಗಿ, ಜಿಲ್ಲಾ ಗೌರವ ಸದಸ್ಯ ಬಸವರಾಜ ಭೋಗಾವತಿ, ಹಿರಿಯ ಪತ್ರಕರ್ತ ಸಿ.ವಿ.ರಾಮಾಂಜನೇಯಲು ಹಾಗೂ ತಾಲ್ಲೂಕು ಘಟಕದ ಮಹಿಳಾ ಪ್ರತಿನಿಧಿ ಉಷಾಜ್ಯೋತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಜಂಗಮರಹಳ್ಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಹರ್ಷವರ್ಧನ್ ನಿರೂಪಿಸಿದರು. ನಿಹಾರಿಕಾ ನಾಯಕ ಹಾಗೂ ಶಾಂತಾ ಅವರು ನಾಡಗೀತೆ, ಪ್ರಾರ್ಥನೆ ಗೀತೆ ಹಾಡಿದರು. ಪ.ಜಾ ಪ್ರತಿನಿಧಿ ಲಕ್ಷ್ಮಣರಾವ್ ಕಪಗಲ್ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಸುರೇಶಕುಮಾರ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ಬಿಷ್ಠಪ್ಪ ಅಬ್ಬಿಗೇರಿ, ಕಾರ್ಯಕಾರಿ ಸಮಿತಿಯ ಸದಸ್ಯ ಶರಣಯ್ಯ ಸ್ವಾಮಿ ಮತ್ತಿತರ ಪದಾಧಿಕಾರಿಗಳು ಇದ್ದರು.