ಸಂತರು – ಮುಕ್ಕಣ್ಣ ಕರಿಗಾರ

ಚಿಂತನೆ

ಸಂತರು

ಮುಕ್ಕಣ್ಣ ಕರಿಗಾರ

ಸಂತರ ಬದುಕು ಲೋಕವಿಸ್ಮಯಕಾರಿಯಾದದ್ದು.ಲೋಕದೊಳಿದ್ದೇ ಲೋಕವನ್ನು ಮೀರಿರುವ ವಿಶಿಷ್ಟ ಚೇತನರೇ ಸಂತರು.ಎಲ್ಲರೊಳಿದ್ದು ಎಲ್ಲರಂತಾಗದ ‘ ತನ್ನಂತೆ ತಾನಿರುವ’ ವರೇ ಸಂತರು.ಸಂತರು ಲೋಕದ ಜನರೊಂದಿಗೆ ಬೆರೆಯುತ್ತಾರೆ,ಲೋಕ ಜನರ ಕಷ್ಟ- ಸುಖಗಳಿಗೆ ಸ್ಪಂದಿಸುತ್ತಾರೆ.ಆದರೆ ಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳುವುದಿಲ್ಲ.ತಮ್ಮ ಬಳಿ ಬರುವವರ ತಾಪ- ಬವಣೆಗಳನ್ನು ಕಳೆಯುವ ಸಂತರು ಲೋಕದ ಕೋಪ- ತಾಪಗಳಿಗೆ ಉದ್ವಿಗ್ನರಾಗುವುದಿಲ್ಲ.ಪ್ರಶಾಂತ ಚಿತ್ತವೇ ಸಂತರ ಲಕ್ಷಣ.

ಸಂತರು ಆಡಂಬರ ಪ್ರಿಯರಲ್ಲ.ದೊಡ್ಡದೊಡ್ಡ ಸಿಂಹಾಸನದಲ್ಲಿ ಕುಳಿತುಕೊಳ್ಳುವ,ಬಂಗಾರ- ಬೆಳ್ಳಿ ಕಿರೀಟಗಳನ್ನು ಧರಿಸುವ ಬಯಕೆಯೂ ಸಂತರಲ್ಲಿ ಇರುವುದಿಲ್ಲ.ಜನರು ತಮ್ಮನ್ನು ಹೊಗಳಬೇಕು,ಹೊತ್ತು ತಿರುಗಬೇಕು ಎಂಬ ಕ್ಷುದ್ರ ಬಯಕೆಗಳಿರುವುದಿಲ್ಲ ಸಂತರಲ್ಲಿ.ಎ.ಸಿ ರೂಮುಗಳಲ್ಲಿ ಕುಳಿತುಕೊಳ್ಳಬೇಕು,ವಿಲಾಸಿ ಕಾರುಗಳಲ್ಲಿ ಸಂಚರಿಸಬೇಕು ಎನ್ನುವ ತೆವಲೂ ಸಂತರಿಗಿರುವುದಿಲ್ಲ.ತಾವಿರುವ ಎಡೆ ಹೆಚ್ಚೆಂದರೆ ಅದರ ಸುತ್ತಮುತ್ತಣ ಸ್ಥಳ,ಪ್ರದೇಶಗಳಿಗೆ ಮಾತ್ರ ಸಂಚರಿಸುವ ಸಂತರಿಗೆ ಲೋಕಪ್ರದಕ್ಷಿಣೆಯ ಹುಚ್ಚೂ ಇರುವುದಿಲ್ಲ.ಕಾಲ್ನಡಿಗೆ ಇಲ್ಲವೆ ಬಸ್ಸುಗಳಲ್ಲಿ ಸಂಚರಿಸಲು ಹಿಂದೆ ಮುಂದೆ ನೋಡರು ಸಂತರು.

ಸೊಗಸಾಗಿ ಭಾಷಣ ಮಾಡಿ ಜನರನ್ನು ರಂಜಿಸುವ,ಮೆಚ್ಚಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲಾರರು ಸಂತರು.ತಮ್ಮ ಬದುಕಿನಿಂದಲೇ ಲೋಕಕ್ಕೆ ಸ್ಫೂರ್ತಿಯಾಗುವ ಸಂತರಿಗೆ ಭಾಷಣ,ಪ್ರವಚನ,ಉಪನ್ಯಾಸ,ಉಪದೇಶಗಳ ವ್ಯಾಮೋಹ ಇರುವುದಿಲ್ಲ.ಸಂತರು ಹೆಚ್ಚು ಮಾತನಾಡುವುದಿಲ್ಲ ಆದರೆ ಅವರು ಆಡುವ ಪ್ರತಿಮಾತು ಅರ್ಥಪೂರ್ಣವಾಗಿರುತ್ತದೆ,ಮೌಲ್ಯಯುತವಾಗಿರುತ್ತದೆ.’ ಮಾತು ಮಂತ್ರವಾದ’ ವ್ಯಕ್ತಿತ್ವ ಸಂತರದು.ಪದವಿ- ಪ್ರಶಸ್ತಿಗಳ ಹಂಬಲವಾಗಲಿ ಗೌರವಡಾಕ್ಟರೇಟ್ ಪಡೆಯಬೇಕು ಎನ್ನುವ ವಾಂಛೆಯಾಗಲಿ ಸಂತರಲ್ಲಿರುವುದಿಲ್ಲ.ಬದಲಿಗೆ ಸಂತರ ವ್ಯಕ್ತಿತ್ವವೇ ನೂರಾರು ಪಿ ಎಚ್ ಡಿ ಪ್ರಬಂಧಗಳ ವಸ್ತುವಾಗುತ್ತದೆ.ಮಹಾಕಾವ್ಯ,ಮಹಾಜೀವನ ಗಾಥೆಗಳ ಸೃಷ್ಟಿಗೆ ಕಾರಣವಾಗುತ್ತದೆ ಸಂತರ ಬದುಕು.

ತಮ್ಮ ಬಳಿ ಬರುವ ಎಲ್ಲರನ್ನೂ ಹಚ್ಚಿಕೊಳ್ಳುವ,ಎಲ್ಲರ ಕಷ್ಟಗಳಿಗೆ ಮರುಗುವ,ಕಾರ್ಪಣ್ಯಗಳಿಗೆ ಕರಗುವ ಸಂತರು ಲೋಕಜನರ ಸಮಸ್ಯೆಗಳನ್ನು‌ ಪರಿಹರಿಸುತ್ತಾರಾದರೂ ಯಾರನ್ನೂ ನನ್ನವರು ಎಂದು ಭ್ರಮಿಸುವುದಿಲ್ಲ,ಲೋಕ ಸಂಬಂಧಗಳ ಬಲೆಗೆ ಸಿಲುಕುವುದಿಲ್ಲ.ತಮ್ಮ ಬಳಿ ಬರುವ ಬಡವರು- ಶ್ರೀಮಂತರಲ್ಲಿ ಭೇದವನ್ನೆಣಿಸದ ಸಂತರು ಎಲ್ಲರಲ್ಲೂ ಪರಮಾತ್ಮನ ಚೈತನ್ಯವನ್ನೇ ಕಾಣುತ್ತಾರೆ.ಲೋಕಸಂಚರಿಸಿ ಉಪನ್ಯಾಸ,ಪ್ರವಚನ ನೀಡುವ ಗೊಡವೆಗೆ ಹೋಗದ ಸಂತರು ತಮ್ಮ ಬಳಿ ಬಂದವರಲ್ಲಿ ಲೋಕೋತ್ತರ ಬದುಕಿನ ಆನಂದದ ಬೀಜಗಳನ್ನು ಬಿತ್ತುತ್ತಾರೆ.ಸಂತರ ಬದುಕು ಸೂರ್ಯನಂತೆ.ಸೂರ್ಯನು ಎಲ್ಲಿಗೂ ಹೋಗದೆ ಇದ್ದಲ್ಲಿಯೇ ಇದ್ದು ಲೋಕವನ್ನು ಬೆಳಗುತ್ತಾನೆ.ಭೂಮಿಯು ಸೂರ್ಯನ ಸುತ್ತ ತಿರುಗಿ ತನ್ನಲ್ಲಿ ನೆಲೆಗೊಂಡ ಚರಾಚರಗಳ ಬದುಕಿಗೆ ಶಕ್ತಿ,ಸ್ಫೂರ್ತಿ,ಬೆಳಕನ್ನು ಪಡೆಯುತ್ತದೆ.ಹಾಗೆಯೇ ಸಂತರ ಬಳಿ ಬರುವ ವ್ಯಕ್ತಿಗಳು ಸಂತರ ಲೋಕಾನುಗ್ರಹ ವ್ಯಕ್ತಿತ್ವದಿಂದ ಸ್ಫೂರ್ತಿಪಡೆಯುತ್ತಾರೆ,ಕಾಣುತ್ತಾರೆ ಹೊಸಬೆಳಕನ್ನು.ಲೋಕಜನರಲ್ಲಿ ಇರದ ಹೊಸಬೆಳಕು ಸಂತರ ಕಣ್ಣುಗಳಲ್ಲಿರುತ್ತದೆ.ಸೂರ್ಯನಂತೆ ಬೆಳಕಾಗುವ ಸಂತರು ತಮ್ಮ ವ್ಯಕ್ತಿತ್ವವಿಶೇಷತೆಯೆಂಬ ಬೆಳದಿಂಗಳಿಂದ ಲೋಕಸಮಸ್ತರ ಬಾಳಿಗೆ ಬೆಳದಿಂಗಳಾಗಿ ಸ್ಫೂರ್ತಿ ತುಂಬುತ್ತಾರೆ.

ಮುಕ್ಕಣ್ಣ ಕರಿಗಾರ

04.05.2022