ಪ್ರತಿಭೆ,ಅರ್ಹತೆಗೆ ಅವಕಾಶವಿಲ್ಲದಿದ್ದರೆ ನಾಡು ಬೆಳೆದೀತು ಹೇಗೆ ? – ಮುಕ್ಕಣ್ಣ ಕರಿಗಾರ

ನಿಷ್ಠುರವಾಕ್ಕು

ಪ್ರತಿಭೆ,ಅರ್ಹತೆಗೆ ಅವಕಾಶವಿಲ್ಲದಿದ್ದರೆ ನಾಡು ಬೆಳೆದೀತು ಹೇಗೆ ?

ಮುಕ್ಕಣ್ಣ ಕರಿಗಾರ

ಷಣ್ಮುಖ ಹೂಗಾರ ನನ್ನ ಪ್ರತಿಭಾವಂತ ಶಿಷ್ಯ,ನನ್ನ ಹೆಮ್ಮೆಯ ಶಿಷ್ಯರುಗಳಲ್ಲೊಬ್ಬರು.ನಾನು ನಮ್ಮೂರು ಗಬ್ಬೂರಿನ ಸರಕಾರಿ ಪದವಿಪೂರ್ವ ಕಾಲೇಜಿನ ‘ ಕನ್ನಡ ಮೇಷ್ಟ್ರು’ ಆಗಿದ್ದ ಕಾಲದಲ್ಲಿ ನಾನು ಸಂಪಾದಿಸಿದ ಸಾವಿರಾರು ಶಿಷ್ಯರ ಬಳಗದಲ್ಲಿ ಅವರೂ ಒಬ್ಬರು,ಪ್ರತಿಭೆ,ಪರಿಶ್ರಮದಿಂದ ಮೇಲೆದ್ದು ಬಂದ ಪ್ರತಿಭಾವಂತರ ಪೈಕಿ ವಿಶಿಷ್ಟ ವ್ಯಕ್ತಿತ್ವ ಉಳ್ಳವರು.ನನ್ನಿಂದ ಸ್ಫೂರ್ತಿ ಪಡೆದು ಸ್ಪರ್ಧಾಪರೀಕ್ಷೆಗಳನ್ನು ಬರೆದವರಲ್ಲಿ ಛಲಬಿಡದೆ ‘ ಮರಳಿಯತ್ನವ ಮಾಡುತ್ತಲೇ ಇರುವ’ ಗಟ್ಟಿಗರು.ಕರ್ನಾಟಕ ಲೋಕಸೇವಾ ಆಯೋಗದ ಪತ್ರಾಂಕಿತ ಅಧಿಕಾರಿಗಳ ಸ್ಪರ್ಧಾಪರೀಕ್ಷೆಗಳ ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಮೌಖಿಕ ಪರೀಕ್ಷೆಯಲ್ಲಿ ವಿಫಲರಾದ ದುರಾದೃಷ್ಟವಂತರು; ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಾಯಕ ಪ್ರಾಧ್ಯಾಪಕರ ಹುದ್ದೆಯಲ್ಲೂ ಅವಕಾಶವಂಚಿತರು.ಷಣ್ಮುಖ ಹೂಗಾರ ಬರೆಯದೆ ಇರುವ ಸ್ಪರ್ಧಾಪರೀಕ್ಷೆಗಳಿಲ್ಲ.ಸ್ಪರ್ಧಾಪರೀಕ್ಷೆಗಳಿಗೆ ಮಾರ್ಗದರ್ಶಿ ಪುಸ್ತಕಗಳನ್ನು ಬರೆದಿರುವ,ಸ್ಪರ್ಧಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ನಡೆಸಿರುವ ಷಣ್ಮುಖ ಹೂಗಾರ ಎಷ್ಟೇ ಪ್ರಯತ್ನಿಸಿದರೂ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುತ್ತಿಲ್ಲ ! ಕೊನೆಗೆ ನಾನೇ ಬೇಸತ್ತು ‘ ಸಾಕು ಮಾಡಯ್ಯ ಈ ಹುಚ್ಚು ಹೋರಾಟ,ಮದುವೆಯಾಗಿ ಹೆಂಡಿರು ಮಕ್ಕಳೊಂದಿಗೆ ಸುಖವಾಗಿರು.ಹಣೆಯಲ್ಲಿ ಇಲ್ಲ ಎಂದು ಸುಮ್ಮನಾದರಾಯಿತು’ ಎಂದೆ.ಈ ಮಾತುಗಳನ್ನು ಹೇಳುವಾಗ ನಾನು ಗದ್ಗದಿತನಾಗಿದ್ದೆ.ಷಣ್ಮುಖನಂತಹ ಪ್ರತಿಭಾವಂತರು ‘ಹಣೆಬರಹ’ ಎಂದು ನಂಬಿ ಕೈಚೆಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯ ದಿನಗಳಿವು.

ಶಿಷ್ಯ ಷಣ್ಮುಖ ನೆನಪಾದದ್ದು ಪತ್ರಿಕೆಗಳಲ್ಲಿ ಓದುತ್ತಿರುವ ಪರೀಕ್ಷಾ ಅಕ್ರಮಗಳ ವರದಿಗಳ ಕಾರಣದಿಂದ.ಪ್ರತಿಭೆಯನ್ನು ಪೋಷಿಸಿ,ಪೊರೆದು ಪ್ರಬುದ್ಧ ನಾಡು ಕಟ್ಟುವ ಅಧಿಕಾರಿವರ್ಗವನ್ನು ರೂಪಿಸಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳು ಜನರ ವಿಶ್ವಾಸಕಳೆದುಕೊಂಡು ಸತ್ತ್ವಹೀನ ಸಂಸ್ಥೆಗಳಾಗಿವೆ.ಕೆ ಪಿ ಎಸ್ ಸಿ ಯ ಯಾವ ಪರೀಕ್ಷೆಯೂ ಕೆ ಎ ಟಿ,ಹೈ ಕೋರ್ಟ್ ಮೆಟ್ಟಿಲುಗಳನ್ನು ಹತ್ತದೆ ಸುಸೂತ್ರವಾಗಿ ಫಲಿತಾಂಶ ಪ್ರಕಟಗೊಂಡ ನಿದರ್ಶನಗಳಿಲ್ಲ ಇತ್ತೀಚಿನ ವರ್ಷಗಳಲ್ಲಿ.ಕರ್ನಾಟಕ ಲೋಕಸೇವಾ ಆಯೋಗವು ಒಮ್ಮೊಮ್ಮೆ ಹಿಡಿತಕ್ಕೆ ಸಿಕ್ಕುತ್ತಿಲ್ಲವೆನ್ನಿಸಿ ರಾಜಕಾರಣಿಗಳು ಕಂಡುಕೊಂಡ ಪರ್ಯಾಯ ಸಂಸ್ಥೆಯಾಗಿ ಶಾಸನದ ಮೂಲಕ ಜನ್ಮತಳೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಶುದ್ಧತೆ- ಬದ್ಧತೆಗಳು ಪ್ರಶ್ನಾತೀತವೇನಲ್ಲ. ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪರ್ಯಾಯವಾಗದು.ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ಸಂವಿಧಾನಬದ್ಧ ಸಂಸ್ಥೆಗಳು.ಆದರೆ ಪರೀಕ್ಷಾ ಪ್ರಾಧಿಕಾರ ರಾಜ್ಯದ ಶಾಸನದ ಮೂಲಕ ಹುಟ್ಟಿದ ಸಂಸ್ಥೆ.ಕೆ ಪಿ ಎಸ್ ಸಿ ಯ ಬದ್ಧತೆ,ತತ್ತ್ವಾದರ್ಶ,ಅಭ್ಯರ್ಥಿಗಳ ಆಯ್ಕೆಯ ವಿಧಿ ವಿಧಾನಗಳ ಗುಣಮಟ್ಟವನ್ನು ಕೆಇಎಯಲ್ಲಿ ನಿರೀಕ್ಷಿಸಲಾಗದು.ಕೆ ಪಿ ಎಸ್ ಸಿ ಯು ತನ್ನ ಗಟ್ಟಿತನವನ್ನು ಕಳೆದುಕೊಂಡು ಕೋರ್ಟಗಳಿಂದ ಅವಹೇಳನಕ್ಕೆ ಗುರಿಯಾಗುತ್ತ,ತನ್ನ ಸಾಂವಿಧಾನಿಕ ಬದ್ಧತೆಯನ್ನು ಎತ್ತಿಹಿಡಿಯುವಲ್ಲಿ ಸೋಲುತ್ತಿರುವುದರಿಂದ ಕೆ ಇ ಎ ಗಳಂತಹ ಸಂಸ್ಥೆಗಳು ಬೆಳೆಯುತ್ತಿವೆ.ಕೈಗೆ ಹುಣ್ಣು ಆದರೆ ಹುಣ್ಣನ್ನು ಕೀಳಬೇಕೇ ಹೊರತು ಕೈಯನ್ನೇ ಕತ್ತರಿಸಬಾರದು.ಕೆಪಿಎಸ್ ಸಿ ಯನ್ನು ಕುರಿತಾದ ಅಪನಂಬಿಕೆಗಳು,ಅವಾಂತರಗಳ ಪ್ರಕರಣಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಸುಧಾರಿಸಿ,ಸರಿ ದಾರಿಗೆ ತರಬೇಕೇ ಹೊರತು ಪರೀಕ್ಷಾ ಪ್ರಾಧಿಕಾರಗಳಂತಹ ಸಂಸ್ಥೆಗಳನ್ನು ಹುಟ್ಟುಹಾಕಬಾರದು.ಈಗ ಕೆ ಪಿ ಎಸ್ ಸಿ ಯಂತೆಯೇ ಕೆ ಇ ಎ ಯು ಕೂಡ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ.

ಕರ್ನಾಟಕ ಲೋಕಸೇವಾ ಆಯೋಗವಾಗಲಿ ,ಕರ್ನಾಟಕ ಪರೀಕ್ಷಾ ಪ್ರಾಧಿಕಾರವಾಗಲಿ ರಾಜ್ಯದ ಸಿವಿಲ್ ಸೇವೆಯ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪ್ರತಿಭೆ ಮತ್ತು ಅರ್ಹತೆಗೆ ಆದ್ಯತೆ ನೀಡಬೇಕು.ಪರಿಶಿಷ್ಟಜಾತಿ,ಪರಿಶಿಷ್ಟ ವರ್ಗಗಳು ಮತ್ತು ವಿಕಲಚೇತನರನ್ನು ಹೊರತುಪಡಿಸಿ ಮಿಕ್ಕೆಲ್ಲರನ್ನು ಮೆರಿಟ್ ನ ಆಧಾರದಲ್ಲೇ ಆಯ್ಕೆ ಮಾಡಬೇಕು.ಪ್ರಿಲಿಮಿನರಿ ,ಮುಖ್ಯ ಪರೀಕ್ಷೆ ಮತ್ತು ಸಂದರ್ಶನಗಳೆಂಬ ಮೂರು ಹಂತಗಳಲ್ಲಿ ನಡೆಯುತ್ತಿರುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪರ್ಧಾರ್ಥಿಗಳು ಲಿಖಿತ ಪರೀಕ್ಷೆಗಳಲ್ಲಿ ಪಡೆದ ಹೆಚ್ಚಿನ ಅಂಕಗಳ ಮೆರಿಟೇ ನಿರ್ಣಾಯಕ,ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ ಅದಕ್ಕೆ ಪೂರಕವಷ್ಟೆ.ಲೋಕಸೇವಾ ಆಯೋಗ ಮತ್ತು ಪರೀಕ್ಷಾ ಪ್ರಾಧಿಕಾರಗಳಲ್ಲಿ ಹಣಬಲ,ತೋಳ್ಬಲ ಮತ್ತು ಜಾತಿಬಲಗಳು ನುಸುಳಿದ ಪರಿಣಾಮ ಹಲವು ಅವಾಂತರಗಳು,ಅಡ್ಡದಾರಿಗಳು.ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಾಜಕಾರಣಿಗಳು,ಅಧಿಕಾರಸ್ಥರು,ಉಳ್ಳವರು ಬಲಪ್ರದರ್ಶಿಸತೊಡಗಿದರು.ರಾಜಕಾರಣಿಗಳ ಹಂಗು- ಮುಲಾಜಿಗೊಳಗಾಗಿದ್ದ ಕೆ ಪಿ ಎಸ್ ಸಿಯ ಪದಾಧಿಕಾರಿಗಳು,ಕೆ ಇ ಎ ಯ ಅಧಿಕಾರಿ ವರ್ಗ ಅಸಹಾಯಕತೆಯನ್ನು ವ್ಯಕ್ತಪಡಿಸತೊಡಗಿದರು.ಅಸಹಾಯಕತೆಯ ಜೊತೆಗೆ ಪರೀಕ್ಷೆಗಳ ಬಗೆಗಿನ ಜನರ ವಿಶ್ವಾಸ ಕಳೆದುಕೊಳ್ಳುವಲ್ಲಿ ಅವರ ಸ್ವಹಿತಾಸಕ್ತಿ ಮತ್ತುದುರ್ಬಲತೆಗಳೂ ಕಾರಣವಾಗಿವೆ.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳಾಗಿ ಆಯ್ಕೆಗೊಳ್ಳುವರು ಕಳಂಕರಹಿತ,ಸಚ್ಚಾರಿತ್ರ್ಯದ,ಪ್ರತಿಭಾವಂತರೂ ದೂರದೃಷ್ಟಿ ಉಳ್ಳವರೂ ಆಗಿರಬೇಕು.ಜಾತಿಗೊಬ್ಬರಂತೆ ಸದಸ್ಯರನ್ನು ಆಯ್ಕೆ ಮಾಡುವುದಾಗಲಿ,ಜನಪ್ರತಿನಿಧಿಗಳ ಬಂಧು- ಸಂಬಂಧಿಕರು,ಬೇಕಾದವರುಗಳನ್ನು ನೇಮಕ ಮಾಡುವುದಾಗಲಿ ಸಲ್ಲದು.ಕಾಲಮಾನದ ವಿಪರೀತವೆಂಬಂತೆ ವಿವಿಧ ‘ಮಾನ’ದಂಡಗಳಡಿ ಆಯ್ಕೆಯಾಗುತ್ತಿರುವ ಕೆ ಪಿ ಎಸ್ಸಿಯ ಅಧ್ಯಕ್ಷರು,ಸದಸ್ಯರು ಆದವರುಗಳಿಂದ ಪ್ರಾಮಾಣಿಕತೆ- ಪಾರದರ್ಶಕತೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ.ಪರೀಕ್ಷಾ ಅಕ್ರಮಗಳು,ಅವಾಂತರಗಳಿಗೆ ಕೇವಲ ಕೆ ಪಿಎಸ್ಸಿ ಮತ್ತು ಕೆ ಇ ಎ ಗಳನ್ನು ಹೊಣೆಗಾರ ಸಂಸ್ಥೆಗಳನ್ನಾಗಿ ಮಾಡಲಾಗದು.ರಾಜಕಾರಣದ ಪ್ರವೇಶವೇ ಈ ಸಂಸ್ಥೆಗಳು ದುರ್ಬಲಗೊಳ್ಳಲು ಕಾರಣ.ರಾಜಕಾರಣ ಎಲ್ಲವೂ ಅಲ್ಲ; ಎಲ್ಲವೂ ಆಗಲೂ ಬಾರದು.ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ವಿಶೇಷ ಸ್ಥಾನ ಮಾನಗಳಿರಬೇಕು ನಿಜ,ಆದರೆ ಎಲ್ಲ ಸಂಸ್ಥೆಗಳನ್ನು ನಿಯಂತ್ರಿಸುವಷ್ಟು,ಸಾಂವಿಧಾನಿಕ ಸಂಸ್ಥೆಗಳ ಹಣೆಬರಹ ನಿರ್ಧರಿಸುವಷ್ಟು ಅಪರಿಮಿತ ಅಧಿಕಾರ ಇರಬಾರದು.ಜನಪ್ರತಿನಿಧಿಗಳಾದವರಿಗೆ ಬುದ್ಧಿವಂತರನ್ನು ಬೆಂಬಲಿಸುವುದು,ಪ್ರತಿಭಾವಂತರಿಗೆ ಹಕ್ಕು ಅವಕಾಶಗಳನ್ನು ಕಲ್ಪಿಸುವುದು ತಮ್ಮ ಸಾಂವಿಧಾನಿಕ ಜವಾಬ್ದಾರಿ ಎಂದು ಮನವರಿಕೆ ಆಗಬೇಕು.ಇತ್ತೀಚೆಗೆ ಜನಪ್ರತಿನಿಧಿಗಳಲ್ಲಿ ಸೌಜನ್ಯ ಮರೆಯಾಗುತ್ತಿದೆ; ಸದ್ವರ್ತನೆಯ ಬದಲು ಸ್ವೇಚ್ಛಾಚಾರ ಹೆಚ್ಚುತ್ತಿದೆ.ರಾಜಕಾರಣದ ಬಾಹುಗಳು ಬಲಗೊಂಡು ಎಲ್ಲವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಪರಿಣಾಮವಾಗಿ ಕೆ ಪಿ ಎಸ್ ಸಿ ಮತ್ತು ಕೆ ಇ ಎ ಗಳಂತಹ ಸಂಸ್ಥೆಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ.ಈ ಸಂಸ್ಥೆಗಳನ್ನು ನಂಬಿದ ಬಡ,ಪ್ರತಿಭಾವಂತ ಸ್ಪರ್ಧಾರ್ಥಿಗಳ ಕನಸುಗಳು ಕಮರುತ್ತಿವೆ.ಉಳ್ಳವರೇ ಹಣಬಲದಿಂದ ಉನ್ನತ ಅವಕಾಶಗಳನ್ನು ಕೊಳ್ಳೆ ಹೊಡೆಯುತ್ತಾ ಹೋದರೆ ಪ್ರತಿಭಾವಂತರ ಪಾಡು ಏನಾಗಬೇಕು? ಬಡವರು- ದುರ್ಬಲರಿಗೆ ಉನ್ನತ ಅಧಿಕಾರ- ಹುದ್ದೆಗಳು ಗಗನಕುಸುಮವಾದರೆ ಸಾಮಾಜಿಕ ನ್ಯಾಯಕ್ಕೆ ಅರ್ಥವೆಲ್ಲಿ ?ಪ್ರಬಲರೇ ದುರ್ಬಲರ ಅವಕಾಶಗಳನ್ನು ಕಸಿದುಕೊಳ್ಳುತ್ತಾ ಹೋದರೆ ಸಾಂವಿಧಾನಿಕ ಮೌಲ್ಯಗಳಿಗೆ ಬೆಲೆ ಏನು ?ಬಡವರು,ದುರ್ಬಲರು ಕಷ್ಟಪಟ್ಟು ಓದಿಯೂ ಅವಕಾಶವಂಚಿತರಾಗುತ್ತಾರೆ ಎಂದರೆ ಸರ್ವರುನ್ನತಿಯ ಪ್ರಬುದ್ಧ ಸಂವಿಧಾನದ ಆಶಯ ಸಾಕಾರಗೊಳ್ಳುವುದಾದರೂ ಹೇಗೆ ?

ಮುಕ್ಕಣ್ಣ ಕರಿಗಾರ

26.04.2022