ನಡೆಯುವುದು ಗೊತ್ತಿರುವವನಿಗೆ ಎಲ್ಲ ಕಡೆ ದಾರಿಗಳೇ!- ಚಾಮರಾಜ ಸವಡಿ

ನಡೆಯುವುದು ಗೊತ್ತಿರುವವನಿಗೆ ಎಲ್ಲ ಕಡೆ ದಾರಿಗಳೇ!
     *ಚಾಮರಾಜ ಸವಡಿ

ಸಾಮಾನ್ಯವಾಗಿ ಪಾಲುದಾರಿಕೆ ವ್ಯವಹಾರಗಳು ವಿಫಲವಾಗುವುದೇ ಹೆಚ್ಚು. ಏಕೆ?

ಯೋಜನೆಯೊಂದನ್ನು ಸಾಕಾರಗೊಳಿಸಲು ಹಲವರು ಕೈ ಜೋಡಿಸಿರುತ್ತಾರೆ. ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುವ ಭರವಸೆ ಕೊಟ್ಟಿರುತ್ತಾರೆ. ತಮ್ಮ ಶ್ರಮ, ಬುದ್ಧಿವಂತಿಕೆ, ಅನುಭವ, ಬ್ರ್ಯಾಂಡ್, ಹಣವನ್ನು ವಿನಿಯೋಗಿಸುವುದಾಗಿ ಹೇಳಿರುತ್ತಾರೆ. ಲಾಭವೇ ಆಗಲಿ, ನಷ್ಟವೇ ಆಗಲಿ- ಸಮಾನವಾಗಿ ಹಂಚಿಕೊಳ್ಳುವ ನಿರೀಕ್ಷೆ ಇಂತಹ ಪಾಲುದಾರಿಕೆಯಲ್ಲಿರುತ್ತದೆ.

ಆದರೆ, ಯೋಜನೆ ಮುಂದುವರಿದಂತೆ, ಭರವಸೆ ನೀಡಿದ ಪೈಕಿ ಕೆಲವರ ತೊಡಗಿಕೊಳ್ಳುವಿಕೆಯ ಪ್ರಮಾಣ, ಉತ್ಸಾಹ ಮತ್ತು ಇಚ್ಛಾಶಕ್ತಿ ಕಡಿಮೆಯಾಗುತ್ತಾ ಹೋಗುತ್ತವೆ. ನೆಪಗಳು ಹುಟ್ಟಿಕೊಳ್ಳುತ್ತವೆ. ಅಂಥವರು ತಮ್ಮ ವೈಯಕ್ತಿಕ ಯೋಜನೆಗಳಲ್ಲಿ ತೋರಿಸುವ ಉತ್ಸಾಹವನ್ನು ಪಾಲುದಾರಿಕೆ ಯೋಜನೆಯಲ್ಲಿ ತೋರಿಸುವುದಿಲ್ಲ.

ಆಗ ಯೋಜನೆಯ ಭಾರ ಉಳಿದವರ ಮೇಲೆ ಬೀಳುತ್ತದೆ. ಕೊನೆಕೊನೆಗೆ ಎಲ್ಲವನ್ನೂ ಅವರೇ ನಿರ್ವಹಿಸಬೇಕಾಗುತ್ತದೆ.

ಒಂದು ವೇಳೆ ಯೋಜನೆ ಯಶಸ್ವಿಯಾದರೆ, ಆಗ ನಿಷ್ಕ್ರಿಯರಾಗಿದ್ದವರು ಸಕ್ರಿಯರಾಗುತ್ತಾರೆ. ಲಾಭದಲ್ಲಿ ತಮ್ಮ ಪಾಲು ಪಡೆಯುವುದು ಅವರ ಉದ್ದೇಶ.

ಯೋಜನೆಯ ನೇತೃತ್ವ ವಹಿಸಿದ ವ್ಯಕ್ತಿ ಜಂಟಲ್‌ ಮನ್‌ (ಇದಕ್ಕೆ ಕನ್ನಡದಲ್ಲಿ ಪರ್ಯಾಯ ಅರ್ಥ ಮೂಡಿಸುವ ಶಬ್ದ ಹೊಳೆಯುತ್ತಿಲ್ಲ) ಆಗಿದ್ದರೆ, ಎಲ್ಲರಿಗೂ ಸಮ ಪಾಲು ಕೊಡುತ್ತಾನೆ. ಆದರೆ, ಇಂತಹ ಅನುಭವಗಳಿಂದ ಆತ ಪಾಠ ಕಲಿತವನಾಗಿದ್ದರೆ, ಯಾರ‍್ಯಾರ ಶ್ರಮ ಎಷ್ಟೆಷ್ಟಿದೆಯೋ, ಅಷ್ಟೇ ಪಾಲನ್ನು ಮಾತ್ರ ನೀಡುತ್ತಾನೆ.

ಅಲ್ಲಿಗೆ, ಆತನ ಮೇಲೆ ಆರೋಪಗಳು ಶುರುವಾಗುತ್ತವೆ. ಕೆಲಸದಲ್ಲಿ ನಿಷ್ಕ್ರಿಯರಾಗಿದ್ದವರು, ಕಡಿಮೆ ಸಕ್ರಿಯರಾಗಿದ್ದವರು ಈಗ ಆರೋಪ ಮಾಡುವುದರಲ್ಲಿ ಸಕ್ರಿಯರಾಗುತ್ತಾರೆ.

ಒಂದು ವೇಳೆ ಯೋಜನೆ ವಿಫಲವಾಯಿತೆಂದುಕೊಳ್ಳೋಣ. ನಿಷ್ಕ್ರಿಯರೆಲ್ಲರೂ ಆಗ ಸದ್ದಿಲ್ಲದೇ ಹಿಂದಕ್ಕೆ ಸರಿದುಬಿಡುತ್ತಾರೆ. ನಷ್ಟದ ಹೊಣೆಯನ್ನು ಅವರು ಹೊರಲಾರರು.

ಏಕೆ ಹೀಗೆ?

ಏಕೆಂದರೆ, ಯೋಜನೆಯಲ್ಲಿ ನನ್ನ ಕೊಡುಗೆ ಎಷ್ಟಿದೆ ಎಂಬ ಪ್ರಶ್ನೆಯನ್ನು ಇಂಥವರು ಎಂದಿಗೂ ಕೇಳಿಕೊಳ್ಳುವುದೇ ಇಲ್ಲ. ನನ್ನ ಕೊಡುಗೆ ಎಷ್ಟಿದೆಯೋ ಅಷ್ಟು ಪಾಲು ನನಗೆ ಸಿಕ್ಕಿದೆ ಎಂದು ತೃಪ್ತರಾಗುವುದಿಲ್ಲ. ಲಾಭ ಬಂದರೆ ಸಮಪಾಲು, ನಷ್ಟವಾದರೆ ದಿಕ್ಕಾಪಾಲಾಗುವುದಷ್ಟೇ ಅವರಿಗೆ ಗೊತ್ತಿರುತ್ತದೆ. ಯೋಜನೆಯೊಂದರ ಯಶಸ್ಸಿನಲ್ಲಿ ತನ್ನ ಕೊಡುಗೆ ಎಷ್ಟಿದೆಯೋ ಅಷ್ಟನ್ನು ಪಡೆಯುವುದು ಜಂಟಲ್‌ ಮನ್‌ ದಾರಿ ಎಂಬುದನ್ನು ಇಂಥವರು ಅರ್ಥ ಮಾಡಿಕೊಳ್ಳುವುದೇ ಇಲ್ಲ.

ಪಾಲುದಾರಿಕೆ ಯೋಜನೆಗಳು ವಿಫಲವಾಗಲು ಇದು ಮುಖ್ಯ ಕಾರಣ.

ಒಬ್ಬನ ಜೊತೆಗೆ ಪಾಲುದಾರಿಕೆಯಲ್ಲಿ ಇದ್ದುಕೊಂಡೇ, ಪಾಲುದಾರರ ಶತ್ರುಗಳ ಜೊತೆಗೆ ಓಡಾಡುವುದು, ಅವರ ಮುಂದೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವುದು, ಅಂಥವರ ಜೊತೆಗಿನ ಒಡನಾಟವನ್ನು ಇತರ ಪಾಲುದಾರರೊಂದಿಗೆ ಮುಚ್ಚಿಡುವುದು, ಪಾಲುದಾರಿಕೆ ಅವಧಿಯಲ್ಲಿ ಕಲಿತ ಕೌಶಲ್ಯಗಳನ್ನು ಬೇರೆ ಕಡೆ ಬಳಸಿ ತಮಗೆ ಅನುಕೂಲ ಮಾಡಿಕೊಳ್ಳುವುದು ಖಂಡಿತವಾಗಿ ಜಂಟಲ್‌ ಮನ್‌ ದಾರಿಯಲ್ಲ. ಇಂತಹ ಘಟನೆಗಳು ಪಾಲುದಾರಿಕೆಯ ಬುನಾದಿಯನ್ನೇ ಸಡಿಲವಾಗಿಸುತ್ತವೆ. ಅಪನಂಬಿಕೆ ಮೂಡಲು ಕಾರಣವಾಗುತ್ತವೆ. ಕ್ರಮೇಣ ಪಾಲುದಾರಿಕೆಯ ಉದ್ದೇಶವೇ ವಿಫಲವಾಗಿಬಿಡುತ್ತದೆ.

ಹೀಗೆ ಪಾಲುದಾರಿಕೆ ಒಡೆದುಹೋದಾಗೆಲ್ಲ, ಕೆಲಸ ಸರಿಯಾಗಿ ಮಾಡಿದವರ ಮೇಲೆಯೇ ಹೆಚ್ಚು ಆರೋಪಗಳು ಬರುತ್ತವೆ. ತಮ್ಮ ವೈಫಲ್ಯವನ್ನು ಮುಚ್ಚಿಡುವುದಕ್ಕಾಗಿ, ಕೆಲಸ ಮಾಡಿದವರ ಮೇಲೆಯೇ ದೂಷಾರೋಪ ಮಾಡಲಾಗುತ್ತದೆ. ವೈಫಲ್ಯತೆಗೆ ಅವರೇ ಕಾರಣ ಎಂದು ಆಡಿಕೊಳ್ಳುವ ಮೂಲಕ, ತಾವು ಸಾಚಾ ಎಂಬುದನ್ನು ಬಿಂಬಿಸುವ ಪ್ರಯತ್ನಗಳು ನಡೆಯುತ್ತವೆ.

ವೈಯಕ್ತಿಕವಾಗಿ ಇಂತಹ ಸಾಕಷ್ಟು ಆರೋಪಗಳನ್ನು ನಾನು ಎದುರಿಸಿದ್ದೇನೆ. ತಮ್ಮ ಕೊಡುಗೆ ಕಡಿಮೆ ಇದ್ದರೂ ಸಮಪಾಲು ಪಡೆದವರು, ಯಾವುದೋ ಸಂದರ್ಭದಲ್ಲಿ ಪಾಲು ಕಡಿಮೆಯಾಗಿದ್ದಕ್ಕೆ ನನ್ನನ್ನು ದೂಷಿಸಿದ್ದಾರೆ. ಆತ ಹೆಚ್ಚು ಕೆಲಸ ಮಾಡಿದ್ದಾನೆ, ಯೋಜನೆಯ ಯಶಸ್ಸಿನಲ್ಲಿ ಆತನ ಪಾಲೇ ಮುಖ್ಯವಾಗಿರುವುದರಿಂದ ಹೆಚ್ಚು ತೆಗೆದುಕೊಳ್ಳಲಿ ಬಿಡಿ ಎಂಬ ಔದಾರ್ಯವೂ ಇಂಥವರಿಂದ ಬರುವುದಿಲ್ಲ. ಸಮ ಕೊಡುಗೆಯೂ ತಮ್ಮ ಕರ್ತವ್ಯವಾಗಿತ್ತು ಎಂಬುದನ್ನು ಮರೆತು, ಸಮ ಪಾಲು ಪಡೆಯುವುದು ನನ್ನ ಹಕ್ಕು ಎಂದು ವಾದಿಸತೊಡಗುತ್ತಾರೆ.

ಇಂತಹ ಪ್ರತಿಯೊಂದು ಪಾಠವೂ, ಪ್ರತಿಯೊಂದು ಆರೋಪವೂ ನನ್ನನ್ನು ಸ್ವಾವಲಂಬಿಯಾಗಿಸಿದೆ. ಹೆಚ್ಚು ಆತ್ಮವಿಶ್ವಾಸ ತುಂಬಿದೆ. ಹೊಸ ಅವಕಾಶಗಳನ್ನು ಕೊಟ್ಟಿದೆ. ಹೊಸ ಯೋಜನೆಗಳನ್ನು ರೂಪಿಸುವ ಹಾಗೂ ಅವನ್ನು ಖುದ್ದಾಗಿ ನಿರ್ವಹಿಸುವ ಉಮೇದು ತುಂಬಿದೆ. ಆರ್ಥಿಕವಾಗಿ ನಷ್ಟವಾಗಿದ್ದರೂ, ಬೌದ್ಧಿಕವಾಗಿ ಹೆಚ್ಚು ಲಾಭವೇ ಆಗಿದೆ.

ಏಕೆಂದರೆ, ನಡೆಯುವುದು ಗೊತ್ತಿರುವವನಿಗೆ ಎಲ್ಲ ಕಡೆ ದಾರಿಗಳೇ!

ಅಲ್ಲವೆ?

ಚಾಮರಾಜ ಸವಡಿ,
ಹಿರಿಯ ಪತ್ರಕರ್ತ, ಕೊಪ್ಪಳ
ಮೊ:9886317901