ಚಿಂತನೆ : ಮುಕ್ಕಣ್ಣ ಶಿವ – ಮುಕ್ಕಣ್ಣ ಕರಿಗಾರ

ಶಿವನನ್ನು ‘ಮುಕ್ಕಣ್ಣ’ ಎನ್ನುತ್ತಾರೆ.ಅಂದರೆ ಶಿವನು ಮೂರು ಕಣ್ಣುಗಳನ್ನುಳ್ಳವನು ಎಂದರ್ಥ.ಸಂಸ್ಕೃತದ ತ್ರ್ಯಯಂಬಕನೇ ಕನ್ನಡದ ಮುಕ್ಕಣ್ಣ.ಅಂಬಕ ಎಂದರೆ ಕಣ್ಣು ,ಅಂಬಕ ತ್ರಯಗಳನ್ನುಳ್ಳವನು ತ್ರಯಂಬಕ.ಬ್ರಹ್ಮ,ವಿಷ್ಣು,ಇಂದ್ರಾದಿ ದೇವತೆಗಳಿಗೆ ಎರಡು ಕಣ್ಣುಗಳಿದ್ದರೆ ಶಿವನಿಗೆ ಮೂರು ಕಣ್ಣುಗಳು! ಆದ್ದರಿಂದ ಶಿವನು ಅಸಮಾಕ್ಷ.ಸಮವಲ್ಲದ ಕಣ್ಣುಗಳುಳ್ಳವನು.ಸಮ ಎಂದರೆ ಎರಡು,ಅಸಮ ಎಂದರೆ ಮೂರು.ಶಿವನದೆಲ್ಲವೂ ಹೀಗೆಯೇ ವಿಶೇಷ,ವಿಶಿಷ್ಟ,ವಿಪರೀತ!ಇತರರಿಗಿಂತ ಭಿನ್ನನಾಗಿರುವುದು ಶಿವನ ವಿಶೇಷವಾದರೆ ತನ್ನದೆ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದುವ ಮೂಲಕ ಆತ ವಿಶಿಷ್ಟ; ಅರ್ಥಕ್ಕೆ,ಊಹೆಗೆ,ಕಲ್ಪನೆಗೆ ನಿಲುಕದವನು,ಯಾವುದಕ್ಕೂ ಎಟುಕದವನು ಆದ್ದರಿಂದ ವಿಪರೀತನವನು.

ಶಿವನ ಮೂರು ಕಣ್ಣುಗಳಾದರು ಯಾವವು ? ನಮ್ಮಂತೆ ಕರ್ಮಚಕ್ಷುಗಳಲ್ಲ.ಸೂರ್ಯ,ಚಂದ್ರ ಮತ್ತು ಅಗ್ನಿಯರೇ ಶಿವನ ಮೂರು ಕಣ್ಣುಗಳು!ಶಿವನು ಸೂರ್ಯ,ಚಂದ್ರ,ಅಗ್ನಿಯರ ಮೂಲಕ ತನ್ನ ಲೋಕೋದ್ಧಾರದ ಲೀಲೆ ನಟಿಸುವನು,ಪ್ರಪಂಚ ವ್ಯವಹಾರವನ್ನು ನಿರ್ವಹಿಸುವನು.ಶಿವನು ಮೂಲತಃ ನಿರಾಕಾರ ಪರಬ್ರಹ್ಮನಿದ್ದು ವಿಶ್ವದುತ್ಪತ್ತಿಯ ಸಂಕಲ್ಪದಿಂದ ವಿಶ್ವೇಶ್ವರ ಲೀಲೆ ನಟಿಸುವನು.ನಿರಾಕಾರನಾಗಿದ್ದ ಶಿವನು ಲೋಕ ನಿರ್ಮಾತೃವಾಗಲು ಶಿವ ಇಲ್ಲವೆ ಹರ ಎನ್ನುವ ರೂಪ ಧರಿಸುವನು.ನಿರಾಕಾರ ಪರಬ್ರಹ್ಮನಾದ ಪರಶಿವನು ಸಾಕಾರ ಶಿವನಾಗಿ ಪ್ರಕಟಗೊಳ್ಳುವನು.ಸಾಕಾರ ಶಿವನು ಜಗದುತ್ಪತ್ತಿ ಲೀಲೆಗಾಗಿ ಸೂರ್ಯ ಚಂದ್ರ ಮತ್ತು ಅಗ್ನಿಯರನ್ನು ತನ್ನ ಮೂರು ಕಣ್ಣುಗಳನ್ನಾಗಿ ಹೊಂದಿ ಆ ಮೂರುಕಣ್ಣುಗಳ ಮೂಲಕ ಲೋಕಲೀಲೆಯನ್ನಾಡುವನು,ಲೋಕವನ್ನು ನೋಡುವನು.

ಸೂರ್ಯನು ಸೃಷ್ಟಿ ತತ್ತ್ವದ ಪ್ರತೀಕ,ಚಂದ್ರನು ಸ್ಥಿತಿ ತತ್ತ್ವದ ಪ್ರತೀಕ,ಅಗ್ನಿಯು ಸಂಹಾರ ತತ್ತ್ವದ ಪ್ರತೀಕ.ಸೃಷ್ಟಿ,ಸ್ಥಿತಿ,ಲಯಗಳೆಂಬ ಈ ಉಜ್ಜುಗ ತ್ರಯಗಳ ನಿರ್ವಹಣಾ ಮೂರ್ತಿಗಳಾಗಿ ಬ್ರಹ್ಮ,ವಿಷ್ಣು ಮತ್ತು ರುದ್ರರು ಕಾಣಿಸಿಕೊಳ್ಳುತ್ತಾರೆ.ಬ್ರಹ್ಮನಲ್ಲಿ ಸೂರ್ಯ ತತ್ತ್ವ ವಿದ್ದರೆ ವಿಷ್ಣುವಿನಲ್ಲಿ ಚಂದ್ರತತ್ತ್ವವಿದೆ.ರುದ್ರನಲ್ಲಿ ಅಗ್ನಿ ತತ್ತ್ವ ಪ್ರಕಟಗೊಂಡಿದೆ.ಪರಶಿವನು ಬ್ರಹ್ಮ,ವಿಷ್ಣು ಮತ್ತು ರುದ್ರರೆಂಬ ಮೂರು ಮೂರ್ತಿಗಳ ಮೂಲಕ ವಿಶ್ವಲೀಲೆಯನ್ನಾಡುವನು.ಸೂರ್ಯೋದಯವಾದೊಡನೆ ಸೃಷ್ಟಿಗೋಚರವಾಗುತ್ತದೆ,ಪ್ರಕೃತಿ ವ್ಯವಹಾರ ಪ್ರಾರಂಭವಾಗುತ್ತದೆ.ಇದು ಬ್ರಹ್ಮನ ಕಾರ್ಯ.ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಜೀವರುಗಳನ್ನು ಪೊರೆಯುವುದು ವಿಷ್ಣುವಿನ ಕೆಲಸ.ದೇಹವು ಬ್ರಹ್ಮಕಾರ್ಯವಾದರೆ ಬುದ್ಧಿಭಾವಗಳು ವಿಷ್ಣುಕಾರ್ಯಗಳು.ಚಂದ್ರನು ಮನಸ್ಸಿನ ಅಧಿದೇವತೆ.ಮನಸ್ಸು ಉಳ್ಳವರಾದ್ದರಿಂದಲೇ ಮನುಷ್ಯರಾದ ನಾವು ಮನಸ್ಸು ಮಾಡಿಯೇ ಏನನ್ನಾದರೂ ಸಾಧಿಸುತ್ತೇವೆ.ಮನಸ್ಸು ಮಾಡುವುದೇ ಬುದ್ಧಿಯಕಾರ್ಯ.ಬುದ್ಧಿ ಭಾವಗಳನ್ನು ಪ್ರಚೋದಿಸಿ ವಿಷ್ಣುವು ವೃತ್ತಿ,ಉದ್ಯೋಗಗಳನ್ನು ಸಂಕಲ್ಪಿಸಿ ಜಗತ್ತನ್ನು ಪೊರೆಯುತ್ತಾನೆ.ಬ್ರಹ್ಮನಿಂದ ಸೃಷ್ಟಿಗೊಂಡುದುದೆಲ್ಲವೂ ವಿಷ್ಣುವಿನಿಂದ ಪೋಷಣೆಗೊಂಡು ಬೆಳೆಯುತ್ತಲೇ ಹೋದರೆ ಜಗತ್ತಿನಲ್ಲಿ ಸ್ಥಳವೆಲ್ಲಿರುತ್ತದೆ ?ಹುಟ್ಟಿದ್ದೆಲ್ಲವೂ ವಿಕಾಸಗೊಳ್ಳುತ್ತಲೇ ಇದ್ದರೆ ನಿಲ್ಲಲು ನೆಲೆಯಾದರೂ ಎಲ್ಲಿ ? ಅದಕ್ಕಾಗಿಯೇ ರುದ್ರಮೂರ್ತಿಯ ಲಯ ತತ್ತ್ವ.ರುದ್ರನು ಪ್ರಳಯತತ್ತ್ವದ ಅಧಿಪತಿಯಾಗಿ ಬ್ರಹ್ಮನಿಂದ ಹುಟ್ಟಿ,ವಿಷ್ಣುವಿನಿಂದ ಪೊರೆಯಲ್ಪಟ್ಟ ಜೀವರುಗಳನ್ನು ಸಂಹರಿಸುತ್ತಾನೆ,ಪ್ರಪಂಚವನ್ನು ಪ್ರಳಯ ಮಾಡುತ್ತಾನೆ.ನಾಶವಾಗದೆ ಮರುಸೃಷ್ಟಿ ಸಾಧ್ಯವಿಲ್ಲವಾದ್ದರಿಂದ ಪ್ರಳಯವೂ ಸೃಷ್ಟಿಗೆ ಪೂರಕ ಕಾರ್ಯವೆ.ಹುಟ್ಟಿದವರೆಲ್ಲ ಸಾಯಲೇಬೇಕು,ಹುಟ್ಟಿದ್ದೆಲ್ಲ ಅಳಿಯಲೇಬೇಕು.ಈ ಹುಟ್ಟು ಅಳಿವುಗಳ ನಡುವಿನ ‘ ಇರುವಷ್ಟು ದಿನವೇ’ ಬಾಳ್ವೆ, ಬದುಕು,ಪ್ರಪಂಚ.

ಬ್ರಹ್ಮನು ಅದ್ವೈತ ತತ್ತ್ವವಾದರೆ ವಿಷ್ಣುವು ದ್ವೈತ ತತ್ತ್ವ ರುದ್ರನು ದ್ವೈತ ಅದ್ವೈತಗಳನ್ನು ಮೀರಿದ ಶಕ್ತಿವಿಶಿಷ್ಟಾದ್ವೈತನು.ಬ್ರಹ್ಮನು ಏಕೋಭಾವದಿಂದ ಜೀವರುಗಳನ್ನು ಸೃಷ್ಟಿಸುತ್ತಾನೆ.ಲೋಕಪಾಲಕನಾದ ವಿಷ್ಣುವು ಜೀವರುಗಳ ಗುಣ ಕರ್ಮ ಸ್ವಭಾವ ವಿಶೇಷಗಳಿಗನುಗುಣವಾಗಿ ಶಿಷ್ಟರು,ದುಷ್ಟರು ,ಒಳಿತು- ಕೆಡುಕು,ಬೇಕು- ಬೇಡ,ಇಷ್ಟ- ಅನಿಷ್ಟ, ಕತ್ತಲೆ- ಬೆಳಕು,ಪೂರ್ಣ- ಅಪೂರ್ಣ ಭಾವಗಳೆಂಬ ದ್ವಂದ್ವವನ್ನುಂಟು ಮಾಡಿ ಜಗತ್ತನ್ನು ಪೊರೆಯುವನು.ರುದ್ರನಲ್ಲಿ ಶಿವಶಕ್ತಿ ವಿಶೇಷವು ಪ್ರಕಟಗೊಂಡಿದ್ದರಿಂದ ಅವನು ಪ್ರಪಂಚವನ್ನು ನಾಶ ಮಾಡಬಲ್ಲನಷ್ಟೇ ಅಲ್ಲ,ಪ್ರಳಯಗೊಂಡ ಪ್ರಪಂಚವನ್ನು ಭಸ್ಮರೂಪದಲ್ಲಿ ಶೇಖರಿಸಿಟ್ಟುಕೊಂಡು ಆ ಬೂದಿಯಿಂದಲೇ ಮುಂದಿನ ಸೃಷ್ಟಿಗೆ ಪ್ರೇರಕನಾಗುವನು.ರುದ್ರನು ಸ್ಮಶಾನವಾಸಿ ಎಂಬುದು ಈ ಕಾರಣದಿಂದ.ಈ ಪ್ರಪಂಚವೆಲ್ಲವೂ ಸ್ಮಶಾನವೆ,ಮಹಾಸ್ಮಶಾನವಿದು.ಎಂಬತ್ನಾಲ್ಕು ಲಕ್ಷ ಜೀವರಾಶಿಗಳು ಎಷ್ಟು ಬಾರಿ ಹುಟ್ಟಿ ಸತ್ತಿವೆಯೋ ಲೆಕ್ಕವಿಟ್ಟವರಾರು? ಮನುಷ್ಯರಾದ ನಾವು ಹುಟ್ಟಿ ಹುಟ್ಟಿ ಸತ್ತಿದ್ದೇವೆ.ಇಂದಿನ ನಮ್ಮ ನೆಲೆಯು ಹಿಂದಣವರ ಸ್ಮಶಾನ! ಹುಟ್ಟಿ ಸತ್ತ ಜೀವರುಗಳೆಲ್ಲ ಭೂತಾಯಿಯ ಮಡಿಲಲ್ಲೇ ಮಣ್ಣಾಗಿದ್ದರಿಂದ ಪ್ರಪಂಚವೆಲ್ಲವೂ ಸ್ಮಶಾನ.ಈ ಸ್ಮಶಾನ ತತ್ತ್ವದ ಅಧಿಪತಿ ರುದ್ರ.

ಮನುಷ್ಯರಲ್ಲಿ ಸತ್ತ್ವ,ರಜ ಮತ್ತು ತಮೋಗುಣಗಳೆಂಬ ಮೂರು ಗುಣಗಳಿರುತ್ತವೆ.ಈ ಮೂರು ಗುಣಗಳನ್ನು ಬಂಗಾರ,ಬೆಳ್ಳಿ ಮತ್ತು ಕಬ್ಬಿಣ ಎನ್ನುವ ಮೂರು ಲೋಹಗಳಿಗೆ ಹೋಲಿಸಿದ್ದಾರೆ.ಶುದ್ಧ,ಅಶುದ್ಧ ಮತ್ತು ಸಿದ್ಧಸ್ವಭಾವಗಳೇ ಗುಣತ್ರಯಗಳು.ಬ್ರಹ್ಮನು ಸತ್ತ್ವಗುಣತತ್ತ್ವವಾಗಿ,ವಿಷ್ಣುವು ರಜೋಗುಣ ತತ್ತ್ವವಾಗಿಯೂ ರುದ್ರನು ತಮೋಗುಣ ತತ್ತ್ವನಾಗಿಯೂ ಪ್ರಕಟಗೊಂಡಿದ್ದಾರೆ ಜೀವಿಗಳಲ್ಲಿ ಮತ್ತು ಪ್ರಪಂಚದಲ್ಲಿ.ಸೂರ್ಯನು ಶಿವನ ಬಲಗಣ್ಣು ಆದರೆ ಚಂದ್ರನು ಶಿವನ ಎಡಗಣ್ಣು.ಶಿವನ ಮೂರನೇ ಕಣ್ಣು ಆದ ಅಗ್ನಿಯು ಶಿವನ ಹಣೆಯಲ್ಲಿರುತ್ತಾನೆ.ಆದ್ದರಿಂದ ಶಿವನು ಹಣೆಗಣ್ಣನೂ ಹೌದು,ಫಾಲಾಕ್ಷನೂ ಹೌದು.ಶಿವನ ಬಲಗಣ್ಣು ಎಡಗಣ್ಣುಗಳೆರಡು ಸದಾ ತೆರೆದಿದ್ದರೆ ಮೂರನೇ ಕಣ್ಣು ಮುಚ್ಚಿರುತ್ತದೆ ಇಲ್ಲವೆ ಅರೆತೆರೆದ ‘ ಅನಿಮಿಷ ನೇತ್ರ’ ವಾಗಿರುತ್ತದೆ.ಮೂರನೇ ಕಣ್ಣು ವಿನಾಶಕಾರಿಯಾದ ಪ್ರಳಯದ ಕಣ್ಣು ಆಗಿರುವುದರಿಂದ ಶಿವನು ಅದನ್ನು ಕೆಲವೇ ಸಂದರ್ಭಗಳಲ್ಲಿ,ಅಪರೂಪಕ್ಕೊಮ್ಮೆ ಎಂಬಂತೆ ತೆರೆಯುತ್ತಾನೆ.
ಶಿವನ ಮೂರನೇ ಕಣ್ಣು ಸಮತೆಯ ಸಂಕೇತ,ಪೂರ್ಣತೆಯ ಕುರುಹು.ಹುಟ್ಟಿ ಬೆಳೆದ ಎಲ್ಲವನ್ನೂ ನಿರ್ಮೋಹದಿಂದ,ಮಮಕಾರ ರಹಿತವಾಗಿ ಸುಡುವ ಕಣ್ಣು ಅದಾದ್ದರಿಂದ ಮೂರನೇ ಕಣ್ಣು ನಿರ್ಲಿಪ್ತತೆಯ,ನಿರ್ಮೋಹತ್ವದ,ನಿರ್ಭಾವದ,ನಿಶೂನ್ಯದ,ನಿರಂಜನದ ಸಂಕೇತ.ಅರ್ಧನಾರೀಶ್ವರ ಲೀಲೆ ನಟಿಸಿದ ಶಿವನ ಬಲಭಾಗವು ಪುರುಷ ಇಲ್ಲವೆ ಶಿವನಾದರೆ ಎಡಭಾಗವು ಗೌರಿ ಇಲ್ಲವೆ ಪಾರ್ವತಿ ನಾಮದ ಶಕ್ತಿ,ಪ್ರಕೃತಿ ತತ್ತ್ವ.ಈ ಎರಡರ ನಡುವಣ ಮಧ್ಯದ ಭ್ರೂಮಧ್ಯವೆಂಬ ಹಣೆ ಮತ್ತದರ ಕಣ್ಣು ಶಿವನ ಪರಬ್ರಹ್ಮ ತತ್ತ್ವದ,ನಿರಾಕಾರದ ಬೆಡಗು.

26.04.2022