ಲೈಬ್ರರಿ: ಆ ದೃಶ್ಯ ಈಗ ಇಲ್ಲ , ಆದರೂ ಒಮ್ಮೆ ಹೋಗಿ ಬನ್ನಿ ..!! – ರಾಮು ಅರಕೇರಿ

ದೃಶ್ಯ ಈಗ ಇಲ್ಲ , ಆದರೂ ಒಮ್ಮೆ ಹೋಗಿ ಬನ್ನಿ …!!

ಭಾನುವಾರ ಬಂತೆಂದರೆ ಲೈಬ್ರರಿಯ ಆವರಣದಲ್ಲಿರುತ್ತಿದ್ದೆವು.
ಬುದ್ಧಿವಂತರ ಕೈಯಲ್ಲಿನ ಇಂಗ್ಲೀಷ್ ಪುಸ್ತಕಗಳು, ಮೂಡಿಗೆ ಬಂದು ಮೂಲೆಯಲ್ಲೊಬ್ಬರು ಕುಳಿತು ಓದುತ್ತಿದ್ದ ಕಾದಂಬರಿಗಳು, ಏನೋ ಕಳೆದುಕೊಂಡವರಂತೆ ಮಾಹಿತಿ ಪುಸ್ತಕಗಳನ್ನು ಹೆಕ್ಕುತ್ತಿದ್ದ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು, ಕಥೆ ಪುಸ್ತಕಗಳನ್ನು‌ ಹುಡುಕುತ್ತಿದ್ದ ಮಕ್ಕಳು, ನಿನ್ನೆಯ ಪೇಪರ್ ನ್ನು ಇಂದು ಹಿಡಿದು ಓದುತ್ತಿದ್ದ ವೃದ್ಧರು, ಅಡ್ವೆಂಚರಸ್ ಆಗಿ ತುಂಬಾ ಡೆಡಿಕೇಶನ್ ನಿಂದ ಕುಂತಲ್ಲೇ ಸಮಾಜ ಸುಧಾರಣೆ ಮಾಡಬಲ್ಲ ರೇಂಜಿಗೆ ಫೀಲಾಗಿ ಹಾಯ್ ಬೆಂಗಳೂರು , ಲಂಕೇಶ್ ನಂತಹ ವಾರಪತ್ರಿಕೆಗಳನ್ನ ಓದುತ್ತಿದ್ದ ಸೋಮಾರಿಗಳು, ನಿರುದ್ಯೋಗಿಗಳು. ಹೀಗೆ ಎಲ್ಲರನ್ನೂ ಕಾಣಬಹುದಾಗಿತ್ತು.

ಲೈಬ್ರರಿಯಾತ ನೀವು ಪುಸ್ತಕ ತಂದಿಲ್ಲ, ಹಳೆದು ಬಾಕಿ‌ಇದೆ . ಮೊನ್ನೆ ನೋಡಲು‌ ತೆಗೆದುಕೊಂಡು ಹೋದ್ರಿ ಅದೂ ಬಂದಿಲ್ಲ , ಇದು ಬಂದಿಲ್ಲ ಅಂತಾ ತಡವರಿಸುತ್ತಿದ್ದ ಮತ್ತು ಅದೇ ಪ್ರೀತಿಯಿಂದ ಮತ್ತೊಂದು ಪುಸ್ತಕ ಲೆಕ್ಕಕ್ಕೆ ಬರೆದು ಕೊಡುತ್ತಿದ್ದ .

ಪ್ರಬಂಧಕ್ಕೆ ಬೇಕಾದ ಮಾಹಿತಿಗಳು, ಭಾಷಣಕ್ಕೆ ಬೇಕಾದ ಸಾಲುಗಳು, ಸಂತಸ ಕೊಡುತ್ತಿದ್ದ ಸಾಹಿತ್ಯ ಗಳು, ಮೂಡಿಯಾಗಿಸುತ್ತಿದ್ದ ಕಾದಂಬರಿಗಳು, ವಿಚಾರ ಶೀಲರನ್ನಾಗಿಸುತ್ತಿದ್ದ ಜೀವನ ಚರಿತ್ರೆಗಳು, ಬುದ್ದಿಗೆ ಕೆಲಸ ಕೊಡುತ್ತಿದ್ದ ಸಂಶೋಧನಾ ಗ್ರಂಥಗಳು , ಉದ್ಯೋಗ ವಿವರಣೆಯ ಮ್ಯಾಗ್ಜಿನ್ ಗಳು ಏನೆಲ್ಲವೂ ಸಿಕ್ಕೇ ಸಿಗುತ್ತಿದ್ದ ತಾಣಗಳಾಗಿದ್ದವು ಗ್ರಂಥಾಲಯಗಳು…

ಮೇಲೆ ವಿವರಿಸಿದ ಅನುಭೂತಿ ನಿಮ್ಮದೂ ಆಗಿದ್ದರೆ ಒಮ್ಮೆ ಈಗಿನ ಲೈಬ್ರರಿಗಳಿಗೆ ಭೇಟಿಕೊಟ್ಟು ಬನ್ನಿ. ಆ ದೃಶ್ಯವೇ ಬದಲಾಗಿದೆ..

ಮನೆಯಲ್ಲಿ ಟೈಂಪಾಸ್ ಆಗದೇ ಬಂದಿರುವ ಮುದುಕ , ಆವರಣದಲ್ಲಿ ಯಾವುದೋ ಹುಡುಗಿ ಜೊತೆ ಹಲ್ಲು ಕಿರಿಯುತ್ತಿರುವ ಯುವಕ, ಧೂಳಿಡಿದ ಪುಸ್ತಕಗಳು, ಲೈಬ್ರರಿಯನ್ ಆದ ತಪ್ಪಿಗೆ ಆ ಸ್ಥಳದಲ್ಲಿ ಕೂಡುವ ಸಂಯಮವೂ ಇಲ್ಲದೆ ಹತ್ತು ನಿಮಿಷಕ್ಕೊಮ್ಮೆ ಹೊರಗಡೆ ಹೋಗಿ ಬರುವ ಗ್ರಂಥಪಾಲಕ. ಎಷ್ಟೋ ದಿನಗಳಿಗೊಮ್ಮೆ ಭೇಟಿಯಾದಂತೆ ಹರಟುವ ಸ್ನೇಹಿತರು. ಬಂದು ವರ್ಷಗಳೇ ಆದರೂ ಹೊಂದಿಸದ ಹೊಸ ಗ್ರಂಥಗಳು , ಯಾರೋ ಓದಿ ಮೂಲೆಯಲ್ಲಿ ಎಸೆದ ಹರಿದ ಪೇಪರ್ ಗಳು.

ಊಹೂಂ ಆ ದಿನಗಳ ರುಚಿ ಇಂದು ಸಿಗದು ಬಿಡಿ.‌ಚಿತ್ರಣ ಸಂಪೂರ್ಣ ಬದಲಾಗಿದೆ. ಇಂಟರ್ನೆಟ್ , ಆಧುನಿಕ ಜೀವನ ಶೈಲಿ ನಮ್ಮ‌ ಬದುಕಿನಲ್ಲಿ ಲೈಬ್ರರಿ ಸ್ಥಾನವನ್ನು ಕಿತ್ತು ಕೊಂಡಿದೆ. ಆದರೂ ಸಮಯ ಸಿಕ್ಕರೆ ಗ್ರಂಥಾಲಯಗಳ ಕಡೆಗೊಮ್ಮೆ ಹೋಗಿ ಬನ್ನಿ..

ನಿಮ್ಮವನು,

ರಾಮು ಅರಕೇರಿ,
ಸಂಡೂರು. ಮೊ:+919449492031