ಭಕ್ತಿ,ವೀರರಸ ಮಿಶ್ರಿತ ವಿಶಿಷ್ಟ ಕಾವ್ಯ ” ಶ್ರೀ ವೀರಭದ್ರ ವಿಜಯ ” – ಮುಕ್ಕಣ್ಣ ಕರಿಗಾರ

.          ವಿಮರ್ಶೆ

ಭಕ್ತಿ,ವೀರರಸ ಮಿಶ್ರಿತ ವಿಶಿಷ್ಟ ಕಾವ್ಯ ” ಶ್ರೀ ವೀರಭದ್ರ ವಿಜಯ “

ಮುಕ್ಕಣ್ಣ ಕರಿಗಾರ

ನಾಲ್ಕೈದು ದಿನಗಳ ಹಿಂದೆ ಕವಿ ಮಿತ್ರರೂ ಹಿರಿಯರೂ ಆಗಿರುವ ಅಯ್ಯಪ್ಪಯ್ಯ ಹುಡಾ ಅವರು ಫೋನ್ ಮಾಡಿ ” ಶ್ರೀ ವೀರಭದ್ರ ವಿಜಯ” ಎನ್ನುವ ಭಕ್ತಿಕಾವ್ಯ ಒಂದನ್ನು ಪ್ರಕಟಿಸಿದ್ದು ನನಗೆ ಕಳುಹಿಸುವುದಾಗಿ ತಿಳಿಸಿದರು.ಸೋಜಿಗದ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ ನಾನು ” ಶ್ರೀ ವೀರಭದ್ರ ವಿಜಯಂ” ಎನ್ನುವ ಮಹಾಕಾವ್ಯ ಒಂದನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯುವ ಸಿದ್ಧತೆಯಲ್ಲಿ ತೊಡಗಿದ್ದೆ.ಅದರ ಪೂರ್ವಭಾವಿಯಾಗಿ ದಕ್ಷನನ್ನು ನಿಗ್ರಹಿಸಿ,ಅನುಗ್ರಹಿಸಿದ ವೀರಭದ್ರನು ದಕ್ಷನಿಗೆ ಶಿವ ಸರ್ವೋತ್ತಮ ತತ್ತ್ವವನ್ನು ಬೋಧಿಸುವ ” ಶಿವಗೀತೆ” ಎನ್ನುವ ಕೃತಿರಚನೆಯಲ್ಲಿ ತೊಡಗಿದ್ದೇನೆ.ವೀರಭದ್ರನು ನೆಲಮೂಲ ಸಂಸ್ಕೃತಿಯಾದ ಶೈವಧರ್ಮ ಮತ್ತು ಸಂಸ್ಕೃತಿಗಳ ರಕ್ಷಕ,ಶಿವಸರ್ವೇಶ್ವರ ತತ್ತ್ವದ ಪ್ರತಿಪಾದಕ,ಪ್ರತಿಷ್ಠಾಪಕ.ಶಿವದ್ವೇಷಿಗಳಾದ ಆರ್ಯರನ್ನು ಅವರ ಸಂಸ್ಕೃತಿಯನ್ನು ಮೆಟ್ಟಿನಿಂತ ಕಲಿವೀರ,ಗಂಡುಗಲಿ.ಆ ಕಾರಣದಿಂದ ನನಗೆ ವೀರಭದ್ರನಲ್ಲಿ ಆಸಕ್ತಿ,ಭಕ್ತಿ- ಗೌರವಗಳು.ಹತ್ತು ವರ್ಷಗಳ ಹಿಂದೆ ಕೊಪ್ಪಳದಲ್ಲಿದ್ದಾಗ ” ಕಣಿವೆ ವೀರಭದ್ರ ಮಹಿಮಾ ಕಾವ್ಯಂ” ಎನ್ನುವ ಕಾವ್ಯ ಒಂದನ್ನು ಬರೆದಿದ್ದೆ.ಶಿವ ಸಂಸ್ಕೃತಿಯ ಪ್ರತಿಷ್ಠಾಪನೆ ಮತ್ತು ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನನ್ನಲ್ಲಿ ಸಹಜವಾಗಿಯೇ ಶಿವಸಾಹಿತ್ಯ ಬರೆಯುವ ಕವಿಸಾಹಿತಿಗಳ ಬಗ್ಗೆ ಗೌರವ,ಪ್ರೀತಿ ಆದರಾಭಿಮಾನಗಳುಂಟು.ಶ್ರೀ ಅಯ್ಯಪ್ಪಯ್ಯ ಹುಡಾ ಅವರು ರಾಯಚೂರು ಜಿಲ್ಲೆಯ ಸತ್ತ್ವಯುತ ಬರಹಗಾರರಲ್ಲೊಬ್ಬರು ಮತ್ತು ನನ್ನಂತೆಯೇ ಶಿವಸಾಹಿತ್ಯದಲ್ಲಿ ಆಸಕ್ತಿ ಉಳ್ಳವರಾದುದರಿಂದ ಅವರೊಂದಿಗೆ ಆತ್ಮೀಯ ಸಂಬಂಧವೂ ಇದೆ.ಅವರು ‘ಪುಸ್ತಕ ಕಳಿಸುವೆ’ ಎಂದಾಗ ‘ ಕೂಡಲೆ ಕಳುಹಿಸಿ,ನಾನು ಗಬ್ಬೂರಿನಲ್ಲಿ ಇರುವ ದಿನಗಳಲ್ಲೇ ಅದನ್ನು ಓದಿ,ಪ್ರತಿಕ್ರಿಯಿಸುವೆ’ ಎಂದಿದ್ದೆ.ಅಯ್ಯಪ್ಪಯ್ಯ ಹುಡಾ ಅವರು ಪ್ರೀತಿಪೂರ್ವಕವಾಗಿ ಕಳುಹಿಸಿದ ” ಶ್ರೀ ವೀರಭದ್ರ ವಿಜಯ” ಭಕ್ತಿ ಕಾವ್ಯವು ಕೈಸೇರಿ ಆನಂದವಾಯಿತು; ಸಾಹಿತ್ಯ ರಚನೆಯಾದಿ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಓದಿದೆ.

” ಶ್ರೀ ವೀರಭದ್ರ ವಿಜಯ” ಎನ್ನುವ ಕಾವ್ಯವು ಅಯ್ಯಪ್ಪಯ್ಯ ಹುಡಾ ಅವರ ಮಾಗಿದ ಶಿವಭಕ್ತಿಹೃದಯದ ಅನುಭವದ ಸಾರವಾಗಿ ಮೂಡಿಬಂದ ೧೦೧ ಭಕ್ತಿಕವನಗಳುಳ್ಳ ಕೃತಿ,ಶ್ರೇಷ್ಠ ಸ್ತುತಿ ಸಾಹಿತ್ಯ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಅಂಗಸಂಸ್ಥೆಯಾಗಿರುವ ಶ್ರೀ ಮದ್ವೀರಶೈವ ಸದ್ಬೋಧನ ಸಂಸ್ಥೆ( ರಿ) ಯ ಪ್ರಸಾರಾಂಗದಿಂದ ಇತ್ತೀಚೆಗೆ ಪ್ರಕಟಗೊಂಡಿರುವ ” ಶ್ರೀ ವೀರಭದ್ರ ವಿಜಯ” ಭಕ್ತಿರಸವನ್ನು ಕಾವ್ಯವಸ್ತುವನ್ನಾಗಿ ಉಳ್ಳ ಭಕ್ತಿಕಾವ್ಯ.ವೀರಭದ್ರನ ರೌದ್ರತೆಯನ್ನು ತಮ್ಮ ಎದೆಯಾಳದ ಭಕ್ತಿ ಭಾವದಿಂದ ಆರ್ದವವಾಗಿಸಿ,ವೀರಭದ್ರನ ಲೋಕಕಾರುಣ್ಯಗುಣವನ್ನು ಕೃತಿಯಾಗಿಸಿದ್ದಾರೆ ಅಯ್ಯಪ್ಪಯ್ಯ ಹುಡಾ ಅವರು ಎನ್ನುವುದು ಕೃತಿಯ ವಿಶೇಷತೆ.ಆರ್ಯಸಂಸ್ಕೃತಿಯ ವೈಭವೀಕರಣದ ಈ ದಿನಮಾನಗಳಲ್ಲಿ ನೆಲಮೂಲ ಸಂಸ್ಕೃತಿಯ ಮಹಾನ್ ಚೈತನ್ಯರುಗಳಾದ ವೀರಭದ್ರ,ಬಸವಣ್ಣನವರನ್ನು ಮರೆತ ವಂಧಿಮಾಗದಿರು ಕಂಡವರಿಗೆ ಜೈಕಾರ ಹಾಕುತ್ತಿರುವ ದುರ್ದಿನಗಳಲ್ಲಿ ಅಯ್ಯಪ್ಪಯ್ಯ ಹುಡಾ ಅವರಿಂದ ” ವೀರಭದ್ರ ವಿಜಯ” ಎನ್ನುವ ಕೃತಿಯು ವೀರಭದ್ರನ ಪ್ರೇರಣೆಯಂತೆ ಮೂಡಿಬಂದಿದ್ದರದು ಸಹಜ.ವೀರಭದ್ರನೇ ಅಯ್ಯಪ್ಪಯ್ಯ ಹುಡಾ ಅವರಿಗೆ ಸ್ಫೂರ್ತಿ,ಪ್ರೇರಣೆಗಳನ್ನಿತ್ತಿರಬೇಕು.ಶಿವ ಸಂಸ್ಕೃತಿಯು ಮಂಕಾಗಿ,ಅನ್ಯ ಸಂಸ್ಕೃತಿಗಳು ಮುನ್ನೆಲೆಗೆ ಬಂದು ಮೆರೆಯುತ್ತಿರುವ ಕಳವಳಕಾರಿ ದಿನಗಳಲ್ಲಿ ವೀರಭದ್ರವಿಜಯದಂತಹ ಹತ್ತಾರು ಕೃತಿಗಳು ಪ್ರಕಟಗೊಂಡು ‘ ಸತ್ತಂತಿಹರನ್ನು’ ಬಡಿದೆಚ್ಚರಿಸಬೇಕಿದೆ.ತಮ್ಮ ನೆಲದ ಸಂಸ್ಕೃತಿ,ಹಿರಿಮೆ- ಗರಿಮೆಗಳನ್ನರಿಯದ ಜನಕೋಟಿಯು ಸಮೂಹಸನ್ನಿಪೀಡಿತರಾಗಿ ಅನ್ಯಸಂಸ್ಕೃತಿಯ ದಾಸರಾಗುತ್ತಿರುವ ದಿನಗಳಲ್ಲಿ ಮತ್ತೆ ಬರಲಿ ಶ್ರೀವೀರಭದ್ರ ಎಂದು ಆಶಿಸುವ ಕವಿ ಅಯ್ಯಪ್ಪಯ್ಯ ಹುಡಾ ಅವರ ಧ್ವನಿಗೆ ಸಹಮತ ವ್ಯಕ್ತಪಡಿಸುತ್ತ ಮುಂಬರಲಿರುವ ” ಶ್ರೀ ವೀರಭದ್ರ ವಿಜಯಂ” ಮಹಾಕಾವ್ಯದ ಮುನ್ಸೂಚನೆಯಾಗಿ ಮೂಡಿಬಂದ ಮಹಾಕೃತಿ ‘ ವೀರಭದ್ರ ವಿಜಯ’ ದ ಬಗೆಗೆ ಕೆಲವು ಮಾತುಗಳನ್ನು ನನ್ನ ಓದುಗಮಿತ್ರರೊಂದಿಗೆ ಹಂಚಿಕೊಳ್ಳುವೆ.

ಕವನಗಳನ್ನು ರಚಿಸುವುದು ಸುಲಭ; ಆದರೆ ಸ್ತುತಿಸಾಹಿತ್ಯ ರಚಿಸುವುದು ಕಷ್ಟಕರ.’ ನಾನೃಷಿ ಕುರಿತೇ ಕಾವ್ಯಂ’ ಎನ್ನುವುದು ಇಂತಹ ದೈವಿಕಸಾಹಿತ್ಯ,ಸ್ತುತಿಸಾಹಿತ್ಯವನ್ನು ಕುರಿತ ಮಾತು; ಲೋಕಸಾಹಿತ್ಯವನ್ನು ಕುರಿತ ಮಾತಲ್ಲ.ಜನಪ್ರಿಯ ಸಾಹಿತ್ಯ ಪ್ರಕಾರಗಳಾದ ಕಥೆ,ಕವನ,ನಾಟಕ,ಕಾದಂಬರಿಗಳನ್ನು ಹೇಗೂ ಬರೆಯಬಹುದು; ಯಾರೂ ಬರೆಯಬಹುದು.ಆದರೆ ಸ್ತುತಿ ಸಾಹಿತ್ಯ ಬರೆಯುವವರು ವಿಶಾಲಹೃದಯಿಗಳು,ಲೋಕಾನುಕಂಪೆಯುಳ್ಳವರೂ ದೈವಾನುಗ್ರಹಕ್ಕೆ ಪಾತ್ರರಾದವರೂ ಆಗಿರಬೇಕಾಗಿರುತ್ತದೆ.ಸ್ತುತಿಸಾಹಿತ್ಯವು ಉದ್ದೇಶಿತ ದೈವದ ಮಹಿಮೆಯನ್ನು ಬಣ್ಣಿಸುವಾಗ ಆ ದೈವದ ಮೂರ್ತಿ ನಮ್ಮೆದುರು ನಿಂತಿದೆ ಎಂಬಂತೆ ಚಿತ್ರಿಸಬೇಕು.ಅಯ್ಯಪ್ಪಯ್ಯ ಹುಡಾ ಅವರು ವೀರಭದ್ರನನ್ನು,ಆತನ ರೌದ್ರಾವತಾರ, ಭೀಕರ- ಭಯಾನಕತೆಗಳೊಂದಿಗೆ ಆತನ ಕಾರುಣ್ಯವಿಶೇಷವನ್ನು ಓದುಗರ ಕಣ್ಣೆದುರು ನಿಲ್ಲುವಂತೆ ಬಣ್ಣಿಸಿದ್ದಾರೆ.ದಕ್ಷನ ಯಜ್ಞಧ್ವಂಸದ ನಿಮಿತ್ತವಾಗಿ ವೀರಭದ್ರನು ಉದಿಸಿ,ಯಜ್ಞಸಂಸ್ಕೃತಿಯನ್ನು ಮೆಟ್ಟಿನಿಂತು ಭಕ್ತಿ ಸಂಸ್ಕೃತಿಯನ್ನು ಎತ್ತಿಹಿಡಿದದ್ದೇ ಕಾವ್ಯವಸ್ತು.ವೀರಭದ್ರನ ರುದ್ರಭೀಕರತೆಯನ್ನು,ಆತನ ಕಠಿಣಪಾದಾಘಾತಕ್ಕೆ ಭುವಿಭಾನುಗಳು ನಡುಗುವ ಪರಿಯನ್ನು ಓದುಗರ ಎದೆಯಲ್ಲಿ ಕಂಪನವನ್ನುಂಟು ಮಾಡುವಂತೆ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಹುಡಾ ಅವರು.ಇಷ್ಟುಮಾತ್ರವಲ್ಲದೆ ಮಹಾರುದ್ರಾವತಾರಿ ವೀರಭದ್ರನು ದುಷ್ಟಶಿಕ್ಷಕ ಶಿಷ್ಟಪರಿಪಾಲಕನಾಗಿ ತನ್ನನ್ನು ನಂಬಿದವರನ್ನು,ಶಿವಭಕ್ತರನ್ನು ಪೊರೆದು ಉದ್ಧರಿಸುವ ಶಿವಭಕ್ತಿಪೋಷಕನೆಂಬ ಗುಣವಿಶೇಷದತ್ತಲೂ ಓದುಗರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.ವೀರಭದ್ರನ ರುದ್ರಗುಣಗಾಂಭಿರ್ಯವನ್ನು ಬಣ್ಣಿಸಲು ಸಂಸ್ಕೃತ ಮತ್ತು ಹಳೆಗನ್ನಡ ನುಡಿ ವಿಶಿಷ್ಟತೆಯನ್ನು ತೋರ್ಪಡಿಸಿದ್ದಾರೆ ಅಲ್ಲಲ್ಲಿ.ವೀರಭದ್ರನನ್ನು ಕುರಿತ ನೂರೊಂದು ಕವನಗಳಲ್ಲಿ ಅಲ್ಲಲ್ಲಿ ಪುನರುಕ್ತಿದೋಷವಿದ್ದರೂ ಅದುಭಕ್ತಿರಸವಿಶೇಷತೆಯಲ್ಲಿ ದೋಷವೆನ್ನಿಸದೆ ಕಾವ್ಯದ ಗುಣವಾಗಿಯೇ ಮಾರ್ಪಡುತ್ತದೆ.

‘ಧರ್ಮ ದೇವರು ಎಲ್ಲ ಮೌನವಾಗಿಹರಿಂದು
ಧರ್ಮರಕ್ಷಣೆಗಾಗಿ ಮತ್ತೆ ಬಾ ನೀನಿಂದು
ಭಕುತರ ಬದುಕಿಗೆ ನೆಮ್ಮದಿಯ ಕರುಣಿಸುತ
ಅವರ ಮನ ಮನೆಗಳಲ್ಲಿ ಜ್ಯೋತಿ ಬೆಳಗಿಸುತ
ಎನ್ನುವ ‘ಭುವಿಗೆ ಅವತರಿಸುವ ಶ್ರೀ ವೀರಭದ್ರ’ ಕವನದ ಸಾಲುಗಳು ಕವಿದು ಆವರಿಸಿದ ಕಳವಳದ ದಿನಗಳ ದುಸ್ಥಿತಿ,ಶಿವಭಕ್ತರ ಹತಾಶೆ,ನೋವು- ನಿಟ್ಟುಸಿರುಗಳ ದಾಖಲೆಯಾಗಿದೆ.ಈ ವಿಷಮ ಪರಿಸ್ಥಿತಿಯಿಂದ ಹೊರಬರಲು ವೀರಭದ್ರನು ಅವತರಿಸಲು ಪ್ರಾರ್ಥಿಸುವುದೊಂದೇ ಪರಿಹಾರೋಪಾಯ ಎನ್ನುವ ಕವಿಯಲ್ಲಿ ನಾಡಿನ ತನ್ನ ಸಂಸ್ಕೃತಿಯ ಜನರ ನಿರ್ವೀರ್ಯತೆಯ ಬಗ್ಗೆ ಸಾತ್ವಿಕ ಆಕ್ರೋಶವೂ ಅಡಗಿದೆ.ಹುಲಿಯಂತೆ ಬದುಕಬೇಕಿದ್ದ ಶಿವಸಂಸ್ಕೃತಿಯ ವಾರಸುದಾರರು ಅಧಿಕಾರ- ಅವಕಾಶಗಳ ಆಸೆಯಲ್ಲಿ ಬಾಲಮುದುರಿಕೊಂಡ ಇಲಿಯಂತೆ ಬಿದ್ದಿರುವ ವೈಪರೀತ್ಯದ ಬಗ್ಗೆ ತೀಕ್ಷ್ಣ ನೋವೂ ವ್ಯಕ್ತಗೊಂಡಿದೆ.’ ವೀರತ್ವದ ಮೇರುಗಿರಿ ಶ್ರೀ ವೀರಭದ್ರ’ , ‘ ವೀರ ವಿರಕ್ತಾಯ’ , ‘ದಿವ್ಯ ಚರಣಂ ಅಂತಃಕರಣಂ’, ‘ಪರಂಜ್ಯೋತಿ ಪ್ರಭೆ’ , ‘ಜ್ಞಾನಭಾಸ್ಕರ’, ‘ ದಕ್ಷ ಸಂಹಾರಿ ‘ ,’ ಕಂಡೆ ಗುರುವೀರನ’ , ‘ ರುದ್ರಜಗಮಲ್ಲ’ , ‘ ಹನುಮಂತ ಲಿಂಗವಂತ’ , ‘ ಪ್ರಚಂಡ ಶೌರ್ಯಭದ್ರ ‘ , ‘ ಶ್ರೀ ವೀರಪುಂಗವ ವೀರಭದ್ರ’, ‘ವರವೀರಭದ್ರ’ , ‘ ಭವ್ಯ ಭಾರತದ ದಿವ್ಯಮೂರ್ತಿ’ , ‘ದೇವಮಂಗಲಂ’ ಕವನಗಳು ಸಂಕಲನದ ಉತ್ತಮಕವನಗಳಾಗಿದ್ದು ವೀರಭದ್ರನ ವೀರೋದಾತ್ತವ್ಯಕ್ತಿಶ್ರೀಯನ್ನು ಅಕ್ಷರರೂಪದಲ್ಲಿ ಸೆರೆಹಿಡಿಯುವಲ್ಲಿ ಯಶಸ್ಸು ಕಂಡಿವೆ.ಭಕ್ತಿರಸವು ಓತಪ್ರೋತವಾಗಿ ಪ್ರವಹಿಸುವ ‘ ವೀರಭದ್ರ ವಿಜಯ’ ಕಾವ್ಯಕೃತಿಯು ವಿಶಿಷ್ಟ ಕಾವ್ಯಕೃತಿಯಾಗಿದ್ದು ವೀರಭದ್ರನು ಶೈವ,ವೀರಶೈವ ಸಂಸ್ಕೃತಿಗಳ ಪ್ರದೀಪಕನು ಮಾತ್ರವಲ್ಲ; ಯಜ್ಞ ಯಾಗಾದಿ ಸಂಸ್ಕೃತಿಗಳನ್ನು ಮೆಟ್ಟಿನಿಂತ ಧೀರ,ನೆಲಮೂಲಸಂಸ್ಕೃತಿಯ ಸಾರವೇ ಪುರುಷಾಕಾರ ತಳೆದ ವೀರಾದಿವೀರ,ಭಕ್ತಿ,ಜ್ಞಾನ,ವೈರಾಗ್ಯಗಳೆಂಬ ಶಿವಯೋಗತ್ರಯಗಳನ್ನು ತೊಳಗಿ ಬೆಳಗಿದ ಶಿವಯೋಗಭಾಸ್ಕರ, ಅಲ್ಪತೆ,ಆಲಸ್ಯ,ಅಜ್ಞಾನತಿಮಿರಾಂಧಾಕರವನ್ನು ಹೊಡೆದಟ್ಟುವ ಶಿವತತ್ತ್ವ ಮಾರ್ತಾಂಡ ಎನ್ನುವ ವೀರಭದ್ರನ ಗುಣವಿಶೇಷಣಗಳನ್ನು ಮನಮುಟ್ಟುವಂತೆ ಬಣ್ಣಿಸಿದ್ದಾರೆ.ಓದಲೇಬೇಕಾದ ಕೃತಿ,ಸತ್ಕೃತಿ ಶಿವಕವಿ ಅಯ್ಯಪ್ಪಯ್ಯ ಹುಡಾ ಅವರ ಶಿವಭಕ್ತಿಯ ಬೆಡಗಿನಲ್ಲಿ ಒಡಮೂಡಿದ ‘ ವೀರಭದ್ರ ವಿಜಯ’. ವೀರಭದ್ರವಿಜಯವು ನಾಡಜನರ ಸಂಸ್ಕೃತಿ,ಜನಪದರ ಸಂಸ್ಕೃತಿಯ ಕೆಚ್ಚು ಸತ್ತ್ವಗಳನ್ನು ಎಚ್ಚರಿಸುವ ಜಾಗೃತಿಕಾವ್ಯವಾಗಿ,ಕಾವ್ಯಕಹಳೆಯಾಗಿ ಮೊಳಗಲಿ.

ಮುಕ್ಕಣ್ಣ ಕರಿಗಾರ

‌20.02.2022