‘ ಸಾಹಿತ್ಯ ಭೂಷಣ’ ಶ್ರೀ ಸಿದ್ಧರಾಮ ಹೊನ್ಕಲ್ ಅವರಿಗೆ ನೀಡಲೇಬೇಕು ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ – ಮುಕ್ಕಣ್ಣ ಕರಿಗಾರ

ಪ್ರಸ್ತುತ

‘ ಸಾಹಿತ್ಯ ಭೂಷಣ’ ಶ್ರೀ ಸಿದ್ಧರಾಮ ಹೊನ್ಕಲ್ ಅವರಿಗೆ ನೀಡಲೇಬೇಕು ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್

ಮುಕ್ಕಣ್ಣ ಕರಿಗಾರ

ಗುಲ್ಬರ್ಗಾ ವಿಶ್ವವಿದ್ಯಾಲಯವು ತನ್ನ ಶೈಕ್ಷಣಿಕ ವ್ಯಾಪ್ತಿಯ ಜಿಲ್ಲೆಗಳಲ್ಲಿನ ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ಸಲ್ಲಿಸಿದ ಸಾಧಕರುಗಳಿಗೆ ಇಷ್ಟರಲ್ಲಿಯೇ ಗೌರವ ಡಾಕ್ಟರೇಟ್ ನೀಡುವುದಾಗಿ ತಿಳಿದು ಬಂದಿದೆ.ಸಹಜವಾಗಿಯೇ ಆಕಾಂಕ್ಷಿಗಳು ಗೌರವ ಡಾಕ್ಟರೇಟ್ ಪಡೆಯಲು ಪ್ರಯತ್ನ,ಕಸರತ್ತು ಮಾಡುತ್ತಿರುತ್ತಾರೆ.ಯಾರು ಯಾರು ಗೌರವ ಡಾಕ್ಟರೇಟ್ ಪಡೆಯಲು ತವಕಿಸುತ್ತಿದ್ದಾರೋ ನನಗೆ ತಿಳಿಯದು.ಆದರೆ ನನಗೆ ಪರಿಚಿತರಿರುವ ಈ ಭಾಗದ ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಅವರ ಸಾಹಿತ್ಯಕ್ಷೇತ್ರದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕು.ಅದರಿಂದ ಗುಲ್ಬರ್ಗಾ ವಿಶ್ವವಿದ್ಯಾಲವು ನಿಜವಾದ ಅರ್ಹರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ,ಗೌರವಿಸಿದಂತೆ ಆಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವವರನ್ನು ಕಂಡಾಗ ‘ ಇಂಥವರಿಗೂ ಸಿಕ್ಕಿತೆ ಗೌರವ ಡಾಕ್ಟರೇಟ್?’ ಎನ್ನುವ ಅನುಮಾನ ಕಾಡುವುದರ ಜೊತೆಗೆ ಬೇಸರವೂ ಆಗುತ್ತಿದೆ.ಯಾವ ಯಾವುದೋ ಕಾರಣಗಳಿಗಾಗಿ ಯಾರುಯಾರಿಗೋ ಗೌರವ ಡಾಕ್ಟರೇಟ್ ನೀಡುವ ಬದಲು ನಿಜವಾದ ಅರ್ಹತೆ ಮತ್ತು ವ್ಯಕ್ತಿತ್ವಗಳನ್ನು ಗುರುತಿಸಿ,ಗೌರವ ಡಾಕ್ಟರೇಟ್ ನೀಡಬೇಕು.ಹಾಗಾದಾಗ ವಿಶ್ವವಿದ್ಯಾಲಯದ ಘನತೆ- ಗೌರವಗಳು ಹೆಚ್ಚುತ್ತವೆ.ನಾನು ಗೌರವ ಡಾಕ್ಟರೇಟ್ ಗೆ ಶಿಫಾರಸ್ಸು ಮಾಡುತ್ತಿರುವ,ಒತ್ತಾಯಿಸುತ್ತಿರುವ ಸಿದ್ಧರಾಮ ಹೊನ್ಕಲ್ ಅವರು ಎಲ್ಲ ರೀತಿಯಿಂದಲೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆಯಲು ಅರ್ಹರು.

ಕನ್ನಡ ಸಾಹಿತ್ಯದ ಬಹುಪ್ರಕಾರಗಳಲ್ಲಿ ಕೈಯಾಡಿಸಿ,ಹೆಸರು ಮಾಡಿರುವ ಸಿದ್ಧರಾಮ ಹೊನ್ಕಲ್ ಅವರು ಇದುವರೆಗೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.ಸಂಖ್ಯೆಯಿಂದಷ್ಟೇ ಅಲ್ಲ ಸತ್ತ್ವಬಲದಿಂದಲೂ ಅವರ ಸಾಹಿತ್ಯ ಸಮೃದ್ಧವಾಗಿದೆ.ಆ ಕಾರಣದಿಂದಾಗಿಯೇ ನಮ್ಮ ಮಹಾಶೈವ ಧರ್ಮಪೀಠದಲ್ಲಿ ಅವರಿಗೆ 2021 ನೇ ಸಾಲಿನ ” ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದೆವು.ಮಹಾಶೈವ ಧರ್ಮಪೀಠದಿಂದ “ಸಾಹಿತ್ಯಭೂಷಣ ಪ್ರಶಸ್ತಿ” ಪಡೆಯುವುದು ಎಂದರೆ ಅದು ಸಾಮಾನ್ಯ ಸಂಗತಿಯಲ್ಲ.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷನಾಗಿರುವ ನನ್ನ ಅಧ್ಯಕ್ಷತೆಯಲ್ಲಿನ ಕವಿ ಸಾಹಿತಿ ವಿಮರ್ಶಕರುಗಳನ್ನು ಸದಸ್ಯರುಗಳನ್ನಾಗಿ ಉಳ್ಳ ಸಮಿತಿಯು ಸಾಹಿತಿಗಳ ವ್ತಕ್ತಿತ್ವ ಮತ್ತು ಸಾಹಿತ್ಯಕೊಡುಗೆಯನ್ನು ನಿಷ್ಪಕ್ಷಪಾತವಾಗಿ ಮೌಲ್ಯಮಾಪನ ಮಾಡುತ್ತದೆ.ಡಾ.ಎನ್ ಎಚ್ ಪೂಜಾರ್ ಅವರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿದ್ದು ಅವರು ಪ್ರಶಸ್ತಿಗೆ ಪರಿಗಣಿಸಬಹುದಾದ ಕವಿ- ಸಾಹಿತಿಗಳ ಹೆಸರುಗಳನ್ನು ಪಟ್ಟಿ ಮಾಡುತ್ತಾರೆ.ನನ್ನ ಅಧ್ಯಕ್ಷತೆಯಲ್ಲಿನ ಸಮಿತಿಯು ಪ್ರತಿವರ್ಷ ಆ ವರ್ಷದ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.ಇದುವರೆಗೆ ಸರ್ವಶ್ರೀ ಜಿ ಎಸ್ ಶಿವರುದ್ರಪ್ಪ,ಬಿ ಎ ಸನದಿ,ಶಾಶ್ವತಯ್ಯ ಮುಕ್ಕುಂದಿ ಮಠ,ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು ಮತ್ತು ಡಾ.ಚಂದ್ರಶೇಖರ ಕಂಬಾರ ಅವರಂತಹ ಸಾಹಿತ್ಯ ಕ್ಷೇತ್ರದ ಖ್ಯಾತನಾಮರುಗಳು,ದಿಗ್ಗಜರುಗಳಿಗೆ ಮಹಾಶೈವ ಧರ್ಮಪೀಠವು ಸಾಹಿತ್ಯ ಪ್ರಶಸ್ತಿಗಳನ್ನಿತ್ತು ಗೌರವಿಸಿದೆ.ಅಂತಹ ವಿಶಿಷ್ಟ ವ್ಯಕ್ತಿತ್ವಗಳ ಸಾಲಿನಲ್ಲಿ ಸೇರಿ ಮಹಾಶೈವ ಧರ್ಮಪೀಠದ 2021 ನೇ ಸಾಲಿನ ” ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ” ಪಡೆದಿದ್ದಾರೆ ಸಿದ್ಧರಾಮ ಹೊನ್ಕಲ್ ಅವರು ಎನ್ನುವುದು ಅವರ ವ್ಯಕ್ತಿವಿಶಿಷ್ಟತೆ ಮತ್ತು ಪ್ರತಿಭಾ ವಿಶೇಷತೆಗೆ ಸಾಕ್ಷಿ.ಮಹಾಶೈವ ಧರ್ಮಪೀಠದ ಸಾಹಿತ್ಯಭೂಷಣ ಪ್ರಶಸ್ತಿಯೂ ಸೇರಿದಂತೆ ಹತ್ತು ಹಲವು ಪದವಿ ಪ್ರಶಸ್ತಿಗಳನ್ನು ಪಡೆದಿರುವ ಸಿದ್ಧರಾಮ ಹೊನ್ಕಲ್ ಅವರು ‘ ಪಂಚನದಿಗಳ ನಾಡಿನಲ್ಲಿ’ ಎನ್ನುವ ಪ್ರವಾಸ ಕಥನಕ್ಕೆ ೧೯೯೬ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ( ೨೦೦೬),ಸಂಕ್ರಮಣ ಸಾಹಿತ್ಯ ಬಹುಮಾನ(೧೯೯೧),ಅತ್ತಿಮಬ್ಬೆ ಪ್ರಶಸ್ತಿ(೨೦೦೭-೦೮) ಇವು ಅವರು ಪಡೆದ ನೂರಾರು ಪ್ರಶಸ್ತಿಗಳಲ್ಲಿ ಕೆಲವು ಮುಖ್ಯ ಪ್ರಶಸ್ತಿಗಳು.ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳು,ವಿಚಾರಗೋಷ್ಠಿಗಳು ಸೇರಿದಂತೆ ಹಲವಾರು ಪ್ರತಿಷ್ಠಿತ ಸಾಹಿತ್ಯ ವೇದಿಕೆಗಳಲ್ಲಿ ಕವನ ವಾಚನ,ವಿಚಾರ ಮಂಡನೆ ಮಾಡಿರುವ ಸಿದ್ಧರಾಮ ಹೊನ್ಕಲ್ ಅವರು ಶಹಾಪುರ ತಾಲೂಕಾ ಕಸಾಪ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವರಲ್ಲದೆ ೨೦೧೭ ರಲ್ಲಿ ಶಹಾಪುರ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಾಗೂ ೨೦೧೮ ರಲ್ಲಿ ನಡೆದ ಯಾದಗಿರಿ ಜಿಲ್ಲೆಯ ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವದಿಂದಲೂ ಗೌರವಿಸಲ್ಪಟ್ಟಿದ್ದಾರೆ.

ಸಾಹಿತಿಯಾಗಿ ಮಾತ್ರವಲ್ಲ, ಸರಳ-ಸಜ್ಜನಿಕೆಯ ಸುಸಂಸ್ಕೃತ ಮನಸ್ಸಿನ ವ್ಯಕ್ತಿತ್ವದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಡುತ್ತಿರುವ ಸಿದ್ಧರಾಮ ಹೊನ್ಕಲ್ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದರೆ ವಿಶ್ವವಿದ್ಯಾಲಯವು ಪ್ರತಿಭಾವಂತರನ್ನು ಗುರುತಿಸಿ,ಗೌರವಿಸುತ್ತದೆ ಎನ್ನುವ ಜನಮನ್ನಣೆಗೆ ಪಾತ್ರವಾಗುತ್ತದೆ.

ಮುಕ್ಕಣ್ಣ ಕರಿಗಾರ

16.04.2022