ಡಾ. ಬಿ ಆರ್ .ಅಂಬೇಡ್ಕರ್ ಮತ್ತು ಭಗವದ್ಗೀತೆ – ಮುಕ್ಕಣ್ಣ ಕರಿಗಾರ

ವಿಚಾರ

ಡಾ. ಬಿ ಆರ್ .ಅಂಬೇಡ್ಕರ್ ಮತ್ತು ಭಗವದ್ಗೀತೆ

ಮುಕ್ಕಣ್ಣ ಕರಿಗಾರ

ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 131 ನೇ ಜಯಂತಿ.ದೇಶದಾದ್ಯಂತ ಸಂವಿಧಾನಶಿಲ್ಪಿಯ ಜಯಂತಿಯನ್ನಾಚರಿಸಿ,ಅವರ ತತ್ತ್ವಾದರ್ಶಗಳ ಚಿಂತನೆ,ವ್ಯಾಖ್ಯಾನ ಮತ್ತು ಅವರ ಅಗಾಧಪ್ರತಿಭಾಶಾಲಿ ವ್ಯಕ್ತಿತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಭಾರತದ ಇತಿಹಾಸ ಮತ್ತು ಸಂಸ್ಕೃತಿಗಳ ಆಳವಾದ ಅಧ್ಯಯನದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶವು ಮೂಲತಃ ಜನಪದರ ದೇಶ; ಜನಪದ ಸಂಸ್ಕೃತಿ ಈ ದೇಶದ ಮೂಲ ಸಂಸ್ಕೃತಿ ಎನ್ನುವುದನ್ನು ಸಮರ್ಥವಾಗಿ ನಿರೂಪಿಸಿದ್ದಾರೆ.ಜನಪದರ ಧರ್ಮ ,ಸಂಸ್ಕೃತಿಗಳನ್ನು ಬ್ರಾಹ್ಮಣ ಸಂಸ್ಕೃತಿ ಹೇಗೆ ಆಪೋಶನ ತೆಗೆದುಕೊಂಡಿತು ಎನ್ನುವುದನ್ನು ಅವರು ಹತ್ತುಹಲವು ವಿದ್ವತ್ ಪೂರ್ಣ ಕೃತಿಗಳಲ್ಲಿ ವಿವರಿಸಿದ್ದಾರೆ.ಇತ್ತೀಚೆಗೆ ಭಗವದ್ಗೀತೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಬಗ್ಗೆ ಚರ್ಚೆಗಳಾಗುತ್ತಿವೆ.ಗುಜರಾತ ಸರ್ಕಾರವು ಈ ವರ್ಷದಿಂದಲೇ ಶಾಲಾ ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಬೋಧಿಸಲಾಗುವುದು ಎಂದು ನಿರ್ಧರಿಸಿದ ಬಳಿಕ ಕರ್ನಾಟಕ ಸರಕಾರವು ಈ ವರ್ಷದಿಂದಲೇ ನಮ್ಮ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆಯ ಬೋಧನೆಯನ್ನು ಸೇರಿಸಲು ನಿರ್ಧರಿಸಿದ್ದು ಶಿಕ್ಷಣ ಸಚಿವರು ತೀರ ಇತ್ತೀಚೆಗೆ ಅದನ್ನು ಸ್ಪಷ್ಟಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಭಗವದ್ಗೀತೆಯನ್ನು ಕುರಿತು ಡಾ. ಬಿ.ಆರ್ .ಅಂಬೇಡ್ಕರ ಅವರ ಅಭಿಪ್ರಾಯ ಏನಾಗಿತ್ತು ಎನ್ನುವ ಕುತೂಹಲದಿಂದ ನನ್ನ ಪುಸ್ತಕ ಭಂಡಾರದೊಳಿದ್ದ ಡಾ.ಅಂಬೇಡ್ಕರ ಅವರ ಪುಸ್ತಕಗಳನ್ನು ತೆಗೆದೆ.ಕನ್ನಡಪುಸ್ತಕ ಪ್ರಾಧಿಕಾರ,ಕುವೆಂಪು ಭಾಷಾ ಪ್ರಾಧಿಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳು ಸೇರಿದಂತೆ ಕನ್ನಡದ ಹಲವಾರು ಇಲಾಖೆ,ಸ್ವಾಯತ್ತ ಸಂಸ್ಥೆಗಳು ಪ್ರಕಟಿಸಿದ ಅಂಬೇಡ್ಕರ್ ಅವರ ಕುರಿತ ಪುಸ್ತಕಗಳು ಮತ್ತು ಅವರ ಸಮಗ್ರ ಸಾಹಿತ್ಯ ನನ್ನ ಪುಸ್ತಕ ಭಂಡಾರದಲ್ಲಿವೆ.ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಯನ್ನು ಆಧರಿಸಿ ಗದಗಿನ ‘ ಲಡಾಯಿ’ ಪ್ರಕಾಶನವು ಡಾ. ಬಿ.ಆರ್.ಅಂಬೇಡ್ಕರ್ ಅವರ ” ಭಗವದ್ಗೀತೆ V/S ಬೌದ್ಧ ತತ್ತ್ವ’ ಎನ್ನುವ ಪುಸ್ತಕವನ್ನು ಪ್ರಕಟಿಸಿದೆ.ಪ್ರಕಾಶನದ ಮುಖ್ಯಸ್ಥರಾದ ಬಸೂ ಅವರು ಭಗವದ್ಗೀತೆಯನ್ನು ಶಾಲೆ ಕಾಲೇಜುಗಳಲ್ಲಿ ಏಕೆ ಬೋಧಿಸಬಾರದು ಎನ್ನುವುದನ್ನು ಪುಸ್ತಕದ ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ಭಾರತಕ್ಕೆ ಸ್ವಾತಂತ್ರ್ಯ ಎಷ್ಟು ಮಹತ್ವವೋ ಅಷ್ಟೇ ಮಹತ್ವದ್ದು ನಮ್ಮ ಸಂವಿಧಾನ.ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯದ ಸವಿಯನ್ನು ಭಾರತದ ದಲಿತರು,ಶೂದ್ರರು,ಮಹಿಳೆಯರು,ಬಡವರು,ನಿರ್ಲಕ್ಷಿತರು,ತುಳಿತಕ್ಕೆ ಒಳಗಾದವರು ಮತ್ತು ಕಡೆಗಣಿಸಲ್ಪಟ್ಟವರು ಅನುಭವಿಸಬೇಕಾದರೆ ಸಂವಿಧಾನದ ಅಗತ್ಯ ಇದೆಮತ್ತು ಅವರ ಬಾಳು ವಿಕಸಿಸಲು ಸಂವಿಧಾನದ ಆಸರೆ ಬೇಕೇಬೇಕು.ನಮ್ಮ ಸರಕಾರಿ ಶಾಲೆ ಕಾಲೇಜುಗಳಲ್ಲಿ ಓದುತ್ತಿರುವವರು ಗ್ರಾಮೀಣ ಪ್ರದೇಶದ,ಬಡವರು,ದಲಿತರು ಮತ್ತು ಶೂದ್ರರು,ಅಲ್ಪಸಂಖ್ಯಾತರ ಮಕ್ಕಳುಗಳು.ಶ್ರೀಮಂತರ ಮಕ್ಕಳು ಪ್ರತಿಷ್ಠಿತ ಖಾಸಗಿ ಶಾಲೆ ಕಾಲೇಜುಗಳಲ್ಲಿ ಓದುತ್ತಾರೆ.ಬಡವರ ಮಕ್ಕಳು ವಿದ್ಯಾರ್ಜನೆ ಮತ್ತು ಹೊಟ್ಟೆಪಾಡಿನ ಉದ್ಯೋಗ ಹಿಡಿಯುವ ಆಸೆಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಾರೆ.ಇಂತಹ ಸರಕಾರಿ ಶಾಲೆ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ,ಅವರ ಪ್ರತಿಭೆಯನ್ನು ಎತ್ತರಿಸುವ,ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಂತಹ ಶಿಕ್ಷಣ ನೀಡಬೇಕು. ಭಗವದ್ಗೀತೆಯ ಕುರಿತು ಏನಾಗಿತ್ತು ನಮ್ಮ ಸಂವಿಧಾನಶಿಲ್ಪಿಯವರ ಅಭಿಪ್ರಾಯ ಏನಾಗಿತ್ತು ಎನ್ನುವುದನ್ನು ಈ ಲೇಖನದ ಮೂಲಕ ನನ್ನ ಓದುಗ ಮಿತ್ರರುಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇಂಗ್ಲೀಷಿನಲ್ಲಿ ಬರೆದ ಈ ಪ್ರಬಂಧದಲ್ಲಿ ಡಾ. ಅಂಬೇಡ್ಕರ್ ಅವರು ಭಗವದ್ಗೀತೆಯ ಬಗ್ಗೆ ಪ್ರಚಾರದಲ್ಲಿರುವ ಮಿಥ್ಯೆಗಳನ್ನು ಬಯಲಿಗೆಳೆದಿದ್ದಾರೆ.ಬಾಲಗಂಗಾಧರ ತಿಲಕರಂತಹ ಗೀತಾಭಕ್ತರ ಗೀತೆಯ ಕುರಿತಾದ ಅಭಿಪ್ರಾಯಗಳು ಹೇಗೆ ಸುಳ್ಳಾಗಿವೆ,ಅಪಕ್ವವಾಗಿವೆ ಎಂಬುದನ್ನು ಸಮರ್ಥವಾಗಿ ನಿರೂಪಿಸಿದ್ದಾರೆ.ಹಲವು ವಿದ್ವಾಂಸರ ಕೃತಿಗಳ ಆಧಾರದ ಮೇಲೆ ಈ ಪ್ರಬಂಧವನ್ನು ಬರೆದಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರು ಹತ್ತಾರು ಬಾರಿ ಭಗವದ್ಗೀತೆಯನ್ನು ಓದಿ ಅದರ ಮೌಲ್ಯಮಾಪನ ಮಾಡಿದ್ದಾರೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಪ್ರಸ್ತಾಪಿಸಲ್ಪಟ್ಟ ವಿಷಯವನ್ನು ಅವರು ಅಧ್ಯಾಯ ಮತ್ತು ಶ್ಲೋಕಗಳೊಂದಿಗೆ ವಿವರಿಸಿದ್ದಾರೆ.ಭಗವದ್ಗೀತೆ ಧಾರ್ಮಿಕ ಗ್ರಂಥವೂ ಅಲ್ಲ,ತತ್ತ್ವ ಬೋಧನೆಯ ಗ್ರಂಥವೂ ಅಲ್ಲ; ಬದಲಿಗೆ ಬ್ರಾಹ್ಮಣವಾದದ ಪುಷ್ಟಿಗಾಗಿ ಮಹಾಭಾರತದಲ್ಲಿ ಸೇರಿಸಲ್ಪಟ್ಟ ಪ್ರಕ್ಷಿತ್ತ ಭಾಗ ಎನ್ನುವುದನ್ನು ಸೋದಾಹರಣವಾಗಿ ನಿರೂಪಿಸಿದ್ದಾರೆ.

ಭಗವದ್ಗೀತೆಯು ಅತ್ಯಂತ ಪುರಾತನವಾದದ್ದು ಎನ್ನುವುದನ್ನು ನಿರಾಕರಿಸುವ ಡಾ.ಅಂಬೇಡ್ಕರ್ ಅವರು ತಿಲಕರು ಮತ್ತಿತರು ಮಂಡಿಸಿದ ಅಭಿಪ್ರಾಯವನ್ನು ಅಲ್ಲಗಳೆಯುತ್ತಾ ಡಾ.ಅಂಬೇಡ್ಕರ್ ಅವರು ” ‘ ಗೀತೆ ‘ಯು ಗುಪ್ತರ ದೊರೆ ಬಾಲಾದಿತ್ಯನ ಕಾಲದಲ್ಲೇ ರಚನೆಯಾಯಿತೆಂದು ಪ್ರೊ.ಕೋಸಾಂಬಿ ವಾದಿಸುತ್ತಾರೆ.ಬಾಲಾದಿತ್ಯ ಆಂಧ್ರವಂಶವನ್ನು…ಇಸವಿಯಲ್ಲಿ ನಿರ್ಮೂಲ ಮಾಡಿದ ಗುಪ್ತವಂಶಕ್ಕೆ ಸೇರಿದವನು.ಆತ ಪಟ್ಟಕ್ಕೆ ಬಂದಿದ್ದು ಕ್ರಿ.ಶ ೪೬೭ ರಲ್ಲಿ.’ ಗೀತೆ’ ಇಷ್ಟು ಈಚಿನದೆನ್ನಲು ಕೋಸಾಂಬಿಯವರು ಕೊಡುವ ‘ ಕಾರಣಗಳು’ ಎರಡು. ಕ್ರಿಸ್ತಶಕ ೭೮೮ ರಲ್ಲಿ ಹುಟ್ಟಿ ೮೨೦ ರಲ್ಲಿ ಮೃತಪಟ್ಟ ಶಂಕರಾಚಾರ್ಯರು ‘ ಭಗವದ್ಗೀತೆ’ ಗೆ ಭಾಷ್ಯ ಬರೆಯುವ ಮುನ್ನ ಅದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.ಶಂಕರಾಚಾರ್ಯರಿಗೆ ಕೇವಲ ೫೦ ವರ್ಷಗಳ ಮುಂಚಿನ ಶಾಂತರಕ್ಷಿತನ ‘ ತತ್ವ ಸಂಗ್ರಹ’ ದಲ್ಲಂತೂ ಗೀತೆಯ ಪ್ರಸ್ತಾಪವಿಲ್ಲ.ಇನ್ನು ಎರಡನೇ ಕಾರಣ – ವಸುಬಂಧ ಎಂಬಾತ ” ವಿಜ್ಞಾನವಾದ” ಎಂಬ ಪಂಥವನ್ನು ಹುಟ್ಟುಹಾಕಿದ. ‘ ಬ್ರಹ್ಮಸೂತ್ರ ಭಾಷ್ಯ’ ದಲ್ಲಿ ಈ ವಿಜ್ಞಾನವಾದದ ವಿಮರ್ಶೆ ಇದೆ.’ ಗೀತೆ’ ಯಲ್ಲಿ ಬ್ರಹ್ಮಸೂತ್ರ ಭಾಷ್ಯದ ಪ್ರಸ್ತಾಪವಿದೆ.ಈ ಬಸುಬಂಧು ಗುಪ್ತರ ದೊರೆ ಬಾಲಾದಿತ್ಯನ ಕುಲಗುರುವಾಗಿದ್ದ.ಆದ್ದರಿಂದ ‘ ಭಗವದ್ಗೀತೆ’ ಯು ಬಾಲಾದಿತ್ಯನ ಕಾಲದಲ್ಲಿ ಅಂದರೆ ಕ್ರಿಶ.೪೬೭ ರ ಸುಮಾರಿಗೆ ರಚಿತವಾಗಿರಬೇಕು ಅಥವಾ ಕೊನೆಪಕ್ಷ ಮೂಲಗೀತೆಗೆ ಆ ಕಾಲದಲ್ಲಿ ಕೆಲವು ಭಾಗಗಳನ್ನು ಸೇರಿಸಿರಬೇಕು ”

ಭಗವದ್ಗೀತೆಯ ಭಾಷೆ,ಶೈಲಿ,ಪುನರುಕ್ತಿ ದೋಷಗಳ ಬಗ್ಗೆಯೂ ವಿದ್ವಾಂಸರ ಮತಗಳೊಂದಿಗೆ ವಿವರಿಸುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಗೀತೆಯ ಪ್ರಕ್ಷಿಪ್ರ ಭಾಗಗಳ ಬಗ್ಗೆ ಚರ್ಚಿಸುತ್ತಾ “ಬೇರೆ ಬೇರೆ ಸಂಪಾದಕರ ಕೈಯಲ್ಲಿ ‘ ಗೀತೆ’ ಬೇರೆ ಬೇರೆ ಆವೃತ್ತಿಗಳನ್ನು ಕಂಡಿದೆ ಎಂಬುದನ್ನು ಎಲ್ಲರೂ ಒಪ್ಪಿದರೂ ಯಾವ ಭಾಗಗಳು ಮೂಲ,ಇನ್ನಾವ ಭಾಗಗಳನ್ನು ನಂತರ ಸೇರಿಸಲಾಗಿದೆ ಎಂಬುದರಲ್ಲಿ ಒಮ್ಮತವಿಲ್ಲ.ದಿವಂಗತ ರಾಜರಾಮಶಾಸ್ತ್ರೀ ಭಾಗವತ ಅವರ ಅಭಿಪ್ರಾಯದಲ್ಲಿ ಮೂಲ ‘ ಗೀತೆ’ ಯಲ್ಲಿದ್ದುದು ೬೦ ಶ್ಲೋಕಗಳು ಮಾತ್ರ.ಹಂಬೋಲ್ಟ್ ಅವರು ಗೀತೆಯ ಮೊದಲ ಹನ್ನೊಂದು ಅಧ್ಯಾಯಗಳು ಮಾತ್ರ ಕೃತಿಯೆಂದೂ,೧೨ ರಿಂದ ೧೮ ರ ವರೆಗಿನ ಅಧ್ಯಾಯಗಳನ್ನು ಸೇರಿಸಲಾಯಿತೆಂದು ಬರೆದಿದ್ದರು.ಮೊದಲ ಹದಿನಾಲ್ಕು ಅಧ್ಯಾಯಗಳು ಮಾತ್ರ ಆ ಕಾವ್ಯದ ಮೂಲಭಾಗವೆಂಬುದು ಹಾಪ್ಕಿನ್ಸ್ ದೃಷ್ಟಿಯಾಗಿತ್ತು.ಪ್ರೊ.ರಾಜವಾಡೆಯವರು ಹತ್ತು ಹಾಗೂ ಹನ್ನೊಂದನೆಯ ಅಧ್ಯಾಯಗಳು ಕೃತ್ರಿಮ ಎಂದು ಭಾವಿಸಿದ್ದರು.ಪ್ರೊ.ಗಾರ್ಬೆ ಗೀತೆಯಲ್ಲಿ ಮೂಲದಲ್ಲಿಲ್ಲದ ೧೪೬ ಶ್ಲೋಕಗಳನ್ನು ಅಂದರೆ ಐದನೇ ಒಂದು ಭಾಗಕ್ಕಿಂತ ಹೆಚ್ಚಿನದಷ್ಟನ್ನು ಹೊಸದಾಗಿ ಸೇರಿಸಲಾಗಿದೆ ಅನ್ನುತ್ತಾರೆ”.

ಗೀತೆಯ ಮೂಲವನ್ನು ಚರ್ಚಿಸುತ್ತ ಅದು ಮಹಾಭಾರತದಲ್ಲಿ ಇಲ್ಲವಾದರೂ ವ್ಯಾಸನೇ ಗೀತೆಯ ಕರ್ತೃ ಇರಬಹುದು ಎನ್ನುವ ಡಾ. ಅಂಬೇಡ್ಕರ ಅವರ ಮಾತುಗಳು ;

” ‘ ಗೀತೆ’ ಯ ಗ್ರಂಥಕರ್ತ ಯಾರೆಂಬ ಬಗ್ಗೆಯೂ ಎಲ್ಲಿಯೂ ಉಲ್ಲೇಖವಿಲ್ಲ,ಯುದ್ಧ ಭೂಮಿಯಲ್ಲಿ ಕೃಷ್ಣ ಅರ್ಜುನರ ನಡುವೆ ನಡೆದ ಸಂವಾದ ಸಂದರ್ಭದಲ್ಲಿ ಕೃಷ್ಣನು ಅರ್ಜುನನಿಗೆ ತನ್ನ ತತ್ವವನ್ನು ಪ್ರತಿಪಾದಿಸಿ ಹೇಳುವುದೇ ‘ ಗೀತೆ’.ಈ ಸಂಭಾಷಣೆಯನ್ನು ಸಂಜಯ,ಕೌರವರ ತಂದೆಯಾದ ಧೃತರಾಷ್ಟ್ರನಿಗೆ ನಿರೂಪಿಸುತ್ತಾನೆ.’ ಗೀತೆ’ ಯ ಹಿನ್ನೆಲೆಯಾದ ಘಟನೆ ಮಹಾಭಾರತದ್ದೇ ಆದ್ದರಿಂದ ‘ ಗೀತೆ’ ಯೂ ಮಹಾಭಾರತದಲ್ಲೇ ಇರಬೇಕಾಗಿತ್ತು,ಆದರೆ ಅದು ಅಲ್ಲಿಲ್ಲ.ಇದು ಪ್ರತ್ಯೇಕವಾದ ಸ್ವತಂತ್ರ ಕೃತಿಯಾಗಿದೆ.ಅಷ್ಟಾದರೂ ಬರೆದವರಾರೆಂಬ ಹೆಸರಿಲ್ಲ,ಅರ್ಜುನ ಮತ್ತು ಕೃಷ್ಣರ ಸಂವಾದವನ್ನು ಧೃತರಾಷ್ಟ್ರನಿಗೆ ವರದಿ ಮಾಡಲು ವ್ಯಾಸ ಸಂಜಯನಿಗೆ ಹೇಳುತ್ತಾನೆ ಎಂಬುದಷ್ಟೇ ನಮಗೆ ಗೊತ್ತಿರುವುದು.ಆದ್ದರಿಂದ ವ್ಯಾಸನೇ ‘ ಗೀತೆ’ ಯ ಗ್ರಂಥಕರ್ತನಿರಬಹುದೆಂದು ಹೇಳಬಹುದು”

ಭಗವದ್ಗೀತೆಯ ಸಂದೇಶ ಮತ್ತು ಅದರ ತಾತ್ವಿಕಾಂಶಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಮೌಲ್ಯಮಾಪನ ಮಾಡುವುದು ಹೀಗೆ ;

” ಭಗವದ್ಗೀತೆ ಬೋಧಿಸುವ ಸಂದೇಶ ಏನು ಎಂಬುವರ ಬಗ್ಗೆ ಇಂತಹ ವೈವಿಧ್ಯಮಯವಾದ ಅಭಿಪ್ರಾಯ ಕಾಣುವುದು ದೊಡ್ಡ ಆಶ್ಚರ್ಯದ ಸಂಗತಿಯಲ್ಲ.ವಿದ್ವಾಂಸರು ದಾರಿ ತಪ್ಪಿದರೆಂಬುದೇ ಇದಕ್ಕೆ ನನ್ನ ಉತ್ತರ.ಖುರಾನ್,ಬೈಬಲ್ ಅಥವಾ ಧಮ್ಮಪದದ ಹಾಗೆ ಭಗವದ್ಗೀತೆಯೂ ಕೂಡ ಒಂದು ಸಂದೇಶವನ್ನು ಕೊಡುತ್ತದೆ ಎಂಬ ಭಾವನೆಯಿಂದ ಅವರು ಹೊರಟಿದ್ದಾರೆ.ನನ್ನ ಅಭಿಪ್ರಾಯದಲ್ಲಿ ಈ ಭಾವನೆ ಸಂಪೂರ್ಣವಾಗಿ ತಪ್ಪು ಭಾವನೆಯಾಗಿದೆ.ಭಗವದ್ಗೀತೆಯು ದೇವವಾಣಿಯಲ್ಲ.ಆದ್ದರಿಂದ ಅದು ಯಾವ ಸಂದೇಶವನ್ನೂ ಕೊಡಲಾರದು.ಅದನ್ನು ಹುಡುಕುವುದು ವ್ಯರ್ಥ.ಭಗವದ್ಗೀತೆ ಧರ್ಮಗ್ರಂಥವೂ ಅಲ್ಲ,ದರ್ಶನ ಗ್ರಂಥವೂ ಅಲ್ಲ ಎಂಬುದೇ ನನ್ನ ಉತ್ತರ.ತಾತ್ವಿಕ ನೆಲೆಗಟ್ಟಿನ ಮೇಲೆ ಕೆಲವು ಧಾರ್ಮಿಕ ನಂಬಿಕೆಗಳನ್ನು ಸಮರ್ಥಿಸುವುದೇ ಭಗವದ್ಗೀತೆಯ ಉದ್ದೇಶ.ಈ ಕಾರಣದಿಂದ ಅದನ್ನು ಯಾರಾದರೂ ಧರ್ಮಗ್ರಂಥ ಅಥವಾ ದರ್ಶನಗ್ರಂಥ ಎಂದು ಕರೆಯಲಿಚ್ಛಿಸಿದರೆ ಅವರು ಹಾಗೆಯೇ ಮಾಡಲಿ; ಆದರೆ ಅದು ಮೂಲಭೂತವಾಗಿ ಇದಾವುದೂ ಅಲ್ಲ,ಅದು ಧರ್ಮವನ್ನು ಸಮರ್ಥಿಸಲು ತತ್ವಜ್ಞಾನವನ್ನು ಬಳಸುತ್ತದೆ.”

“ಭಗವದ್ಗೀತೆಯನ್ನು ಓದಿದರೆ ಮೊಟ್ಟಮೊದಲಿಗೆ ಗೊತ್ತಾಗುವ ವಿಷಯವೆಂದರೆ ಯುದ್ಧದ ಸಮರ್ಥನೆ.ರಾಜ್ಯಕ್ಕಾಗಿ ಸ್ವಜನರನ್ನು ಕೊಲ್ಲುವುದಿಲ್ಲವೆಂದೂ ಯುದ್ಧ ಮಾಡುವುದಿಲ್ಲವೆಂದೂ ಅರ್ಜುನ ಘೋಷಿಸಿದ್ದ; ಯುದ್ಧದಲ್ಲಿ ಕೊಲ್ಲುವುದನ್ನೂ ಯುದ್ಧದ ಸಮರ್ಥನೆಯನ್ನೂ ಕೃಷ್ಣ ಹೇಳುತ್ತಾನೆ.ಯುದ್ಧದ ಈ ತಾತ್ವಿಕ ಸಮರ್ಥನೆಯನ್ನು ೨ ನೇ ಅಧ್ಯಾಯದ ೧೧ ರಿಂದ ೨೮ ರವರೆಗಿನ ಶ್ಲೋಕಗಳಲ್ಲಿ ನೋಡಬಹುದು.ಭಗವದ್ಗೀತೆ ಕೊಡುವ ಯುದ್ಧದ ಸಮರ್ಥನೆಯ ವಾದ ಎರಡು ಧಾಟಿಯಲ್ಲಿ ಸಾಗುತ್ತದೆ.ಒಂದನೆಯ ವಾದವೆಂದರೆ ಲೋಕ ನಶ್ವರ,ಮನುಷ್ಯ ಶಾಶ್ವತವಲ್ಲ.ಕೊನೆಗೆ ಎಲ್ಲವೂ ನಶಿಸಲೇಬೇಕು.ಮನುಷ್ಯ ಸಾಯುತ್ತಾನೆ.ಮನುಷ್ಯನ ಸ್ವಾಭಾವಿಕ ಸಾವಿಗೂ ಅಥವಾ ಅವನು ಹಿಂಸೆಗೀಡಾಗಿ ಸಾಯುವುದಕ್ಕೂ ಯಾವುದೇ ಭೇದವನ್ನು ವಿವೇಕಿಗಳು ಮಾಡುವುದಿಲ್ಲ.ಜೀವ ಅಶಾಶ್ವತ.ಅದು ಕೊನೆಗೊಂಡಿತೆಂದು ಏತಕ್ಕೆ ಕಣ್ಣೀರು ಕರೆಯಬೇಕು ?ಸಾವು ಅನಿವಾರ್ಯ.ಅದು ಹೇಗೆ ಉಂಟಾಯಿತು ಎಂದು ಏಕೆ ತಲೆಕೆಡಿಸಿಕೊಳ್ಳುವುದು ? ಯುದ್ಧ ಸಮರ್ಥನವಾದದ ಎರಡನೇ ಧಾಟಿ ಎಂದರೆ ದೇಹ ಮತ್ತು ಆತ್ಮ ಎರಡೂ ಒಂದೇ ಎಂಬ ತಪ್ಪು ತಿಳಿವಳಿಕೆ.ಅವೆರಡೂ ಬೇರೆಬೇರೆಯಾದವು.ಈ ಎರಡು ವಿಚಾರಗಳು ಎಷ್ಟು ಸ್ಪಷ್ಟವಾಗಿವೆಯೆಂದರೆ ದೇಹ ನಶ್ವರವಾದರೆ ಆತ್ಮ ಅಮರ.ಸಾವು ಬಂದರೆ ಶರೀರ ಸಾಯುತ್ತದೆ.ಆತ್ಮ ಸಾಯುವುದಿಲ್ಲ.ಅದು ಸಾಯದಿರುವುದಷ್ಟೇ ಅಲ್ಲ ಅದನ್ನು ಗಾಳಿ ಒಣಗಿಸಲಾರದು,ಬೆಂಕಿ ಸುಡಲಾರದು,ಶಸ್ತ್ರ ಕತ್ತರಿಸಲಾರದು.ಆದ್ದರಿಂದ ಮನುಷ್ಯನನ್ನು ಕೊಂದಾಗ ಅವನ ಆತ್ಮ ಸತ್ತಿತೆಂದು ತಿಳಿಯುವುದು ತಪ್ಪು.ಆಗ ದೇಹಮಾತ್ರ ಸಾಯುತ್ತದೆ.ವ್ಯಕ್ತಿಯು ಹಳೆಯ ಬಟ್ಟೆಗಳನ್ನು ಸುಡುವಂತೆ ಆತ್ಮನ ಸತ್ತ ದೇಹವನ್ನು ತ್ಯಜಿಸುತ್ತದೆ; ಅದು ಹೊಸ ಹೊಸ ದೇಹಗಳನ್ನು ತೊಟ್ಟು ಮುಂದುವರೆಯುತ್ತದೆ.ಆತ್ಮ ಎಂದೂ ಕೊಲೆಯಾಗದಿರುವುದರಿಂದ ವ್ಯಕ್ತಿಯನ್ನು ಕೊಲ್ಲುವುದು ಯಾವುದೇ ಚಳುವಳಿಯ ವಿಷಯವಾಗುವುದಿಲ್ಲ.ಆದ್ದರಿಂದ ಯುದ್ಧ ಮತ್ತು ಕೊಲೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಅಥವಾ ಲಜ್ಜೆಪಡಬೇಕಾಗಿಲ್ಲವೆಂದು ಭಗವದ್ಗೀತೆ ವಾದಿಸುತ್ತದೆ”.

” ಭಗವದ್ಗೀತೆ ಕೊಡುವ ಇನ್ನೊಂದು ಪ್ರಶ್ನಾತೀತ ನಂಬಿಕೆಯ ತಾತ್ವಿಕ ಸಮರ್ಥನೆಯೆಂದರೆ ಚಾತುರ್ವರ್ಣ.ಚಾತುರ್ವರ್ಣ ದೈವ ಸೃಷ್ಟಿಯೆಂದೂ ಆದ್ದರಿಂದ ಪವಿತ್ರವೆಂದೂ ಭಗವದ್ಗೀತೆಯು ನಿಸ್ಸಂದೇಹವಾಗಿ ಹೇಳುತ್ತದೆ.ಆದರೆ ಅದರ ಸಮಂಜಸ ಅದನ್ನು ಅವಲಂಬಿಸಿಲ್ಲ.ಮಾನವರ ಅಂತರ್ಗತ ಅಜನ್ಮ ಗುಣಗಳ ತತ್ವದೊಂದಿಗೆ ಚಾತುರ್ವರ್ಣ ಸಿದ್ಧಾಂತವನ್ನು ತಳುಕುಹಾಕಿ ಅದಕ್ಕೆ ಒಂದು ತಾತ್ವಿಕ ನೆಲೆಗಟ್ಟನ್ನು ಅದು ಒದಗಿಸುತ್ತದೆ.ಮನುಷ್ಯನ ವರ್ಣವನ್ನು ಮನಸೇಚ್ಛೆ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಭಗವದ್ಗೀತೆ ಹೇಳುತ್ತದೆ.ಆದರೆ ಅದನ್ನು ಅವನ ಗುಣಕರ್ಮ ವಿಭಾಗಗಳಿಗೆ ಅನುಸಾರವಾಗಿ ನಿರ್ಧರಿಸಲಾಗಿದೆ”.

” ಭಗವದ್ಗೀತೆ ನೀಡುವ ತಾತ್ವಿಕ ಸಮರ್ಥನೆಯ ಮೂರನೆಯ ಪ್ರಶ್ನಾತೀತ ನಂಬಿಕೆಯೆಂದರೆ ಕರ್ಮಮಾರ್ಗ,ಭಗವದ್ಗೀತೆಯ ಅರ್ಥದಲ್ಲಿ ಕರ್ಮಮಾರ್ಗ ಎಂದರೆ ಮೋಕ್ಷ ಮಾಡುವ ಯಜ್ಞಯಾಗಾದಿಗಳಾಗಿವೆ.ಭಗವದ್ಗೀತೆ ಉದ್ದಕ್ಕೂ ಕರ್ಮಮಾರ್ಗವನ್ನು ಎತ್ತಿಹಿಡಿಯುತ್ತದೆ ಹಾಗೂ ಅದನ್ನು ದೊಡ್ಡದಾಗಿ ಪ್ರತಿಪಾದಿಸುತ್ತದೆ.ಕರ್ಮಮಾರ್ಗಕ್ಕೆ ಅಂಟಿಕೊಂಡು ಅದನ್ನು ಸಂಪೂರ್ಣವಾಗಿ ಕುರೂಪಗೊಳಿಸಿದ್ದ ಕೊಳೆಯನ್ನೆಲ್ಲ ತೊಳೆದು ಅದನ್ನು ಸಮರ್ಥಿಸುವ ವಿಧಾನವನ್ನು ಅದು ಅನುಸರಿಸುತ್ತದೆ.ಮೂಢನಂಬಿಕೆಯೇ ಅದರ ಹೊಲಸು,ಇದನ್ನು ಹೋಗಲಾಡಿಸಲು ಕರ್ಮಯೋಗದ ಅವಶ್ಯಕ ಷರತ್ತಾಗಿ ಬುದ್ಧಿಯೋಗದ ತತ್ತ್ವವನ್ನು ಗೀತೆ ಹೇಳುತ್ತದೆ.ಸ್ಥಿತಪ್ರಜ್ಞರಾಗಲು( ಸಮಬುದ್ಧಿ) ಕರ್ಮಕಾಂಡ ಆಚರಿಸುವುದರಲ್ಲಿ ಯಾವ ತಪ್ಪೂ ಇಲ್ಲ.ಕರ್ಮಕಾಂಡಕ್ಕೆ ಅಂಟಿದ ಎರಡನೆಯ ಹೊಲಸೆಂದರೆ ಕರ್ಮಾಚರಣೆಯ ಹಿಂದಿನ ಸ್ವಾರ್ಥಬುದ್ಧಿ ಇದನ್ನು ಹೋಗಲಾಡಿಸಲು ಭಗವದ್ಗೀತೆಯು ಅನಾಸಕ್ತಿಯೋಗ ಅಂದರೆ ಫಲಾಪೇಕ್ಷೆಯಿಲ್ಲದೆ ಕರ್ಮಮಾಡು ಎಂಬ ತತ್ವವನ್ನು ಗೀತೆ ಹೇಳುತ್ತದೆ.ಬುದ್ಧಿಯೋಗದಲ್ಲಿ ನೆಲೆಯೂರಿ– ಅನಾಸಕ್ತಿಯೋಗವಾದರೆ ಕರ್ಮಕಾಂಡದಲ್ಲಿ ತಪ್ಪೇನು ? ಈ ರೀತಿಯಾಗಿ ಕರ್ಮಯೋಗವನ್ನು ಭಗವದ್ಗೀತೆ ಸಮರ್ಥಿಸುತ್ತದೆ.ಮೊದಲು ಇರದಿದ್ದ ತಾತ್ವಿಕ ಸಮರ್ಥನೆಯನ್ನು ಇತರ ಸಿದ್ಧಾಂತಗಳಿಗೂ ಇದೇ ಧಾಟಿಯಲ್ಲಿ ಕೊಡುವುದು ಸಂಪೂರ್ಣ ಸಾಧ್ಯ ಎಂಬುದನ್ನು ಗೀತೆ ಈ ರೀತಿ ತೋರಿಸುತ್ತದೆ…”

ಬುದ್ಧನ ಪ್ರಭಾವವನ್ನು ಮಂಕಾಗಿಸಲೆಂದೇ ಹುಟ್ಟಿದರೂ ಭಗವದ್ಗೀತೆಯು ಬೌದ್ಧಧರ್ಮದ ತತ್ವ,ಸಂದೇಶಗಳನ್ನು ಯಥೇಚ್ಛವಾಗಿ ಕೆಲವೊಮ್ಮೆ ಯಥಾವತ್ತಾಗಿ ಬಳಸಿದೆ ಎನ್ನುವುದನ್ನು ನಿದರ್ಶನಗಳ ಸಹಿತ ವಿವರಿಸಿರುವ ಡಾ.ಅಂಬೇಡ್ಕರ ಅವರು ಹೇಳುವ ಕೆಲವು ಮಾತುಗಳು;–” ಬೌದ್ಧಧರ್ಮದ ಪ್ರಹಾರದಿಂದ ಅವುಗಳನ್ನು ರಕ್ಷಿಸಲು ಭಗವದ್ಗೀತೆ ಅಸ್ತಿತ್ವಕ್ಕೆ ಬಂತು.ಬುದ್ಧ ಬೋಧಿಸಿದ್ದು ಅಹಿಂಸೆ.ಅದನ್ನು ಬೋಧನೆಯಷ್ಟೇ ಮಾಡಲಿಲ್ಲ.ಬ್ರಾಹ್ಮಣರನ್ನು ಬಿಟ್ಟರೆ ಉಳಿದೆಲ್ಲ ಜನರೂ ಅದನ್ನು ಜೀವನ ಮಾರ್ಗವೆಂದು ಅಂಗೀಕರಿಸಿದರು.ಅವರು ಹಿಂಸೆಯ ಬಗ್ಗೆ ಹೇವರಿಕೆ ತಾಳಿದರು.ಬುದ್ಧ ಚಾತುರ್ವರ್ಣದ ವಿರುದ್ಧ ಬೋಧಿಸಿದನು…” ” ಭಗವದ್ಗೀತೆ ಬ್ರಹ್ಮ ನಿರ್ವಾಣವನ್ನು ಚರ್ಚಿಸುತ್ತದೆ… ಈ ನಿರ್ವಾಣ ತತ್ತ್ವವನ್ನು ಗೀತೆ ಎಲ್ಲಿಂದ ತೆಗೆದುಕೊಂಡಿತು ?ಅದು ಉಪನಿಷತ್ತುಗಳಿಂದಲ್ಲ ಎಂಬುದು ಖಚಿತ.’ ನಿರ್ವಾಣ’ ಶಬ್ದವನ್ನು ಯಾವ ಉಪನಿಷತ್ತೂ ಕೂಡ ಬಳಸುವುದಿಲ್ಲ,ಈ ಇಡೀ ವಿಚಾರವೇ ವಿಶಿಷ್ಟವಾಗಿ ಬೌದ್ಧಧರ್ಮದ್ದು; ಅದನ್ನು ಬೌದ್ಧಧರ್ಮದಿಂದಲೇ ತೆಗೆದುಕೊಳ್ಳಲಾಗಿದೆ…”. ” ಸಂಕ್ಷಿಪ್ತವಾಗಿ ಹೇಳುವುದಾದರೆ ಬುದ್ಧ ಸುತ್ತಗಳ ಮೇಲೆಯೇ ಭಗವದ್ಗೀತೆ ಉದ್ದೇಶಪೂರ್ವಕವಾಗಿ ರೂಪಿತವಾಗಿದೆ.ಬುದ್ಧಸುತ್ತಗಳು ಸಂಭಾಷಣೆಗಳಾಗಿವೆ.ಭಗವದ್ಗೀತೆಯು ಕೂಡ ಹಾಗೆಯೇ ಇದೆ.ಬುದ್ಧನ ಧರ್ಮ ಸ್ತ್ರೀಯರಿಗೂ ಶೂದ್ರರಿಗೂ ಮೋಕ್ಷವನ್ನು ದಯಪಾಲಿಸಿತು;ಸ್ತ್ರೀಯರಿಗೂ ಮತ್ತು ಶೂದ್ರರಿಗೆ ಮೋಕ್ಷ ಕೊಡಲು ಕೃಷ್ಣ ಕೂಡಾ ಮುಂದೆ ಬರುತ್ತಾನೆ.ಬೌದ್ಧರು ” ನಾನು ಬುದ್ಧನಿಗೆ ಶರಣು ಹೋಗುತ್ತೇನೆ ; ಧಮ್ಮಕ್ಕೆ ಶರಣು ಹೋಗುತ್ತೇನೆ; ಸಂಘಕ್ಕೆ ಶರಣು ಹೋಗುತ್ತೇನೆ” ಎಂದು ಹೇಳುತ್ತಾರೆ.ಹಾಗೆ ಕೃಷ್ಣ ಕೂಡ ಹೇಳುತ್ತಾನೆ; ” ಸರ್ವ ಧರ್ಮಗಳನ್ನು ಪರಿತ್ಯಾಗ ಮಾಡಿ ನನ್ನೊಬ್ಬನಿಗೆ ಶರಣುಹೋಗು”. ಬೌದ್ಧಧರ್ಮ ಮತ್ತು ಗೀತೆಗೂ ಇರುವಷ್ಟು ಸಾದೃಶ್ಯ ಬೇರಾವುದಕ್ಕೂ ಇಲ್ಲ”

ಇಂತಹ ಸಂಗತಿಗಳನ್ನಲ್ಲದೆ ತಿಲಕರು ಅತಿಶಯೋಕ್ತಿಯಿಂದ ನಿರೂಪಿಸಿದ ಕೃಷ್ಣನ ವ್ಯಕ್ತಿತ್ವವನ್ನು ಮಹಾಭಾರತದ ಪ್ರಸಂಗಗಳೊಂದಿಗೆ ವಿವರಿಸುತ್ತ ಕೃಷ್ಣ ಮಹಾಭಾರತದ ಕಾಲದಲ್ಲಿ ದೇವರು ಆಗಿರಲಿಲ್ಲ ಎಲ್ಲರಂತೆ ಸಾಮಾನ್ಯ ಯೋಧ,ಮುಖ್ಯ ರಾಜನೀತಿಜ್ಞ ಮತ್ತು ಪಾಂಡವರ ಹಿತೈಷಿ ಆಗಿದ್ದ ಎನ್ನುವುದನ್ನು ಎತ್ತಿತೋರಿಸಿದ್ದಾರೆ. ಭಗವದ್ಗೀತೆಯನ್ನು ” ಏನೆಲ್ಲವೂ ಹೌದು” ಎಂದು ಕೊಚ್ಚುತ್ತಿರುವವರ ನಡುವೆ ಭಗವದ್ಗೀತೆಯನ್ನು ಕುರಿತಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್.ಅಂಬೇಡ್ಕರ್ ಅವರ ವಿಚಾರ ಏನಾಗಿತ್ತು ಎನ್ನುವುದು ಚರ್ಚಿಸಲ್ಪಡಬೇಕು.ಆ ನಿಟ್ಟಿನಲ್ಲಿ ಈ ನನ್ನ ಲೇಖನವು ಒಂದು ಪುಟ್ಟ ಚರ್ಚಾ ಸಾಮಗ್ರಿಯಷ್ಟೆ.ಆಸಕ್ತಿ ಉಳ್ಳವರು ಅಂಬೇಡ್ಕರ್ ಅವರ ಬದುಕು ಬರಹಗಳ ಕೃತಿಶ್ರೇಣಿಗಳನ್ನು ಓದಬೇಕು.ನಮ್ಮ ಬದುಕು ಸಮೃದ್ಧವಾಗಲು,ನಾವು ಪುರುಷಸಿಂಹರಾಗಿ,ಸ್ವಾಭಿಮಾನದಿಂದ ತಲೆ ಎತ್ತಿ ತಿರುಗಲು ಬೇಕಾದ ಎಲ್ಲವೂ ಡಾ. ಬಿ ಆರ್ ಅಂಬೇಡ್ಕರ್ ಅವರ ಸಾಹಿತ್ಯದಲ್ಲಿದೆ.ವೈಜ್ಞಾನಿಕ ಪ್ರಗತಿಯ ಈ ಪ್ರಜಾಪ್ರಭುತ್ವ ಕಾಲದಲ್ಲೂ ಶೂದ್ರರು,ದಲಿತರು,ಮಹಿಳೆಯರು ‘ ಸ್ವಾತಂತ್ರ್ಯಕ್ಕೆ ಅರ್ಹರಲ್ಲ’ ಎಂಬಂತೆ ವರ್ತಿಸುವ ವಿಕೃತ ಮನಸ್ಕರುಗಳು ಹೇರುವ ಶಾಸ್ತ್ರ- ಸಂಹಿತೆಗಳ ಕಟ್ಟಿನೊಳಗೆ ಬಂಧಿಗಳಾಗುವುದಕ್ಕಿಂತ ಸ್ವಾಭಿಮಾನದ ಪಥವನ್ನು ತೆರೆದಿಡುವ ಅಂಬೇಡ್ಕರ ಅವರ ಸಾಹಿತ್ಯವನ್ನು ಓದುವುದೇ ಉನ್ನತಿಯ ಮಾರ್ಗ.

ಮುಕ್ಕಣ್ಣ ಕರಿಗಾರ

14.04.2022