ಈ ಕಾವು ತಣ್ಣಗಾಗಲಿ ಅನ್ನುವ ಆಶಯದೊಂದಿಗೆ ಸಾಧ್ಯವಾದರೆ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ಏನಂತೀರಿ?? – ದೀಪಕ್ ಶಿಂಧೆ

ಹೇಗಾದ್ರೂ ಮಾಡಿ ಇನ್ನೂ ಒಂದು ತಿಂಗಳು ಈ ಪರಂಗಿ ಹಣ್ಣಿನ ವ್ಯಾಪಾರ ಮಾಡಿ ಕಾಸು ಹೊಂದಿಸಿದ್ರೆ ತಿಂಗಳ ಕೊನೆಯ ದಿನ ಕಾಣಿಸುವ ಚಾಂದ ತಾರೆಯ ಕ್ಷಣಕ್ಕೆ ತಿಂಗಳ ಉಪವಾಸ ಕೊನೆಗೊಳಿಸಿ ಹಬ್ಬ ಮಾಡಲು ಒಂದಷ್ಟು ಹಣವಾದರೂ ಆಗುತ್ತದೆ ಅನ್ನುವ ಆಸೆಯನ್ನ ಮನಸ್ಸಿನಲ್ಲಿ ಇಟ್ಟುಕೊಂಡ ನಬಿಸಾಬ್ ಧಾರವಾಡದ ನುಗ್ಗಿಕೇರಿಯ ಆಂಜನೇಯ ದೇವಸ್ಥಾನದ ಮುಂದೆ ಕಲ್ಲಂಗಡಿ ವ್ಯಾಪಾರ ಶುರು ಇಟ್ಟುಕೊಂಡಿದ್ದ.ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತ ಇದ್ದರೆ ಇನ್ನೊಂದು ಕಡೆ ಜಾತಿ ಧರ್ಮದ ಸಂಘರ್ಷದ ಕಾವು ಕೂಡ ಹೆಚ್ಚುತ್ತಿರುವದು ತಾನಾಯಿತು ತನ್ನ ದುಡಿಮೆ ಆಯಿತು ಅಂತ ಬದುಕುವ ನಬಿಸಾಬನಂತವರಿಗೆ ಅದು ಹೇಗೆ ತಾನೆ ತಿಳಿಯೋದಕ್ಕೆ ಸಾಧ್ಯ.ನೀವ್ ಮುಸಲ್ ರು ನಮ್ ಗುಡಿಗೋಳ ಮುಂದ ವ್ಯಾಪಾರ ಮಾಡಬ್ಯಾಡ್ರಿ ಅಂತ ಹೇಳಿವಲ್ಲ.ಕೇಳುದಿಲ್ಲ ಮಕ್ಕಳರ್ಯಾ…..ಏ ಒಡದ ಒಗೀರಿ ಎಲ್ಲ ಅಂತ ಕೇಸರಿ ಶಾಲು ಹಾಕಿದ ಯುವಕನೊಬ್ಬ ಅಬ್ಬರಿಸುತ್ತಿದ್ದಂತೆಯೆ ಐದು ಕ್ವಿಂಟಾಲಿನಷ್ಟು ಕಲ್ಲಂಗಡಿ ನೆಲಕ್ಕೆ ಬಿದ್ದು ರಸ್ತೆಯೆಲ್ಲ ಕೆಂಪು ಕೆಂಪಾದ ನೀರು ಹರಿಯತೊಡಗಿತ್ತು.ಅತ್ತ ಧಾರವಾಡದ ಆಸ್ಪತ್ರೆಯಲ್ಲಿ ಬಡ ಹೆಣ್ಣುಮಗಳೊಬ್ಬಳು ಹೆರಿಗೆ ನೋವಿನಿಂದ ನರಳಾಡತೊಡಗಿದ್ದಳು. ನೋಡಿ ಎಬಿ ನೆಗೆಟಿವ್ ರಕ್ತ ಬೇಕು ಆ ಹೆಣ್ಣಮಗಳಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದೆ.ಮಗು ಅಡ್ಡ ತಿರುಗಿದೆ ಅರ್ಜಂಟಾಗಿ ರಕ್ತ ಹೊಂದಿಸಿದ್ರೆ ಸಿಜರ್ ಮಾಡ್ತೀವಿ ಇಲ್ಲ ಅಂದ್ರೆ ಹೊಟ್ಟೇಲಿ ಮಗು ಬದುಕೋದು ಕಷ್ಟ ಅಂತ ಅದೇ ಕೇಸರಿ ಶಾಲಿನ ಹುಡುಗನ ತಮ್ಮನಿಗೆ ವೈದ್ಯರು ಹೇಳಿಯಾಗಿತ್ತು ಡಾಕ್ಟರ್ ನಂದು ಓ ಪಾಜಿಟಿವ್ ಇದೆ ತಂಗೀದು ಬಿ ಪಾಜಿಟಿವ್ ಅಡ್ಜಸ್ಟ ಆಗುತ್ತಾ ನೋಡಿ ಅಂತ ಅವನು ವೈದ್ಯರ ಅಂಗಲಾಚತೊಡಗಿದ್ದ.ಇತ್ತ ಸುದ್ದಿ ತಿಳಿದು ಓಡಿ ಬಂದ ಮಾಧ್ಯಮದವರು ತಮ್ಮ ಟಿ ಆರ್ ಪಿಯ ತೆವಲಿಗೆ ಬಿದ್ದು ಪ್ರಶ್ನೆಗಳ ಸುರಿಮಳೆಯನ್ನೇ ಕಲ್ಲಂಗಡಿ ವ್ಯಾಪಾರಿ ನಬೀಸಾಬನ ಮೇಲೆ ಸುರಿಸತೊಡಗಿದ್ದರು.ಸಾಲ ಮಾಡಿ ಕೊಂಡು ತಂದು ಲಾಭದ ನಿರೀಕ್ಷೆಯಲ್ಲಿ ಇದ್ದ ನಬೀಸಾಬ ಕಣ್ಣ ಮುಂದೆಯೇ ರಸ್ತೆಗೆ ಬಿದ್ದು ಒಡೆದು ಹೋದ ಕಲ್ಲಂಗಡಿ ತುಣುಕುಗಳನ್ನು ನೋಡಿ ನೆಲಕ್ಕೆ ಬಿದ್ದು ಅಳುವದೊಂದೇ ಬಾಕಿ ಇತ್ತು.ಹದಿನೈದು ವರ್ಷಗಳಿಂದ ಇದೇ ದೇವಸ್ಥಾನದ ಮುಂದೆ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡ ನಬೀಸಾಬನಿಗೆ ಭೂಮಿ ಬಾಯಿ ತೆರೆದ ಅನುಭವ.ದೈವಕ್ಕೆ ಇದೇ ಬೇಕಾಗಿದ್ದರೆ ಎಲ್ಲರೂ ಕೂಡಿ ಕೊಂದ್ ಬಿಡ್ರಿ ನನ್ನ ನಾನು ಒಬ್ಬಂವ್….. ಅವರು ಹತ್ತ ಮಂದಿ… ಒಂದೆರಡ ಎತ್ತಿ ಇಡೂದರಾಗ ಎಲ್ಲಾ ಪಟ್ ಪಟ್ ಅಂತ ಒಡದ್ ಹಾಕ್ಯಾರಿ ಏನ್ ಮಾಡೂದು?? ಯಾರನ ಕೇಳೂದು??? ಅಂತ ಉಕ್ಕಿ ಬಂದ ನೋವಿನ ಜೊತೆಗೆ ತನ್ನೊಳಗಿನ ಆಕ್ರೋಶ ಮತ್ತು ಹತಾಶೆಯನ್ನ ಹೊರಗೆ ಹಾಕಿದ್ದ ನಬೀಸಾಬನ ವರದಿ ಟೀವಿಯ ಪರದೆಗಳಲ್ಲಿ ಆಗಷ್ಟೇ ಭಿತ್ತರವಾಗತೊಡಗಿತ್ತು.ಆದರೆ ಇತ್ತ ಕಡೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯ ನೋವು ಮತ್ತು ರಕ್ತದ ಕೊರತೆಯಿಂದ ನರಳುತ್ತಿದ್ದವಳಿಗೆ ಅದೇ ಮುಸ್ಲಿಂ ಯುವಕನೊಬ್ಬ ಪವಿತ್ರ ರಮ್ ಜಾನ್ ತಿಂಗಳ ದಾನದ ರೂಪದಲ್ಲಿ ಸರ್ ನಂದು ಏಬಿ ನೆಗೆಟಿವ್ ಇದೆ ತಗೋಳಿ ಡಾಕ್ಟರ್ ಸಾಬ್ ಅಂತ ನಿರುಮ್ಮಳವಾಗಿ ರಕ್ತದಾನ ಮಾಡಿ ಕೈಗೆ ಹತ್ತಿಯ ಅಳ್ಳಿ ಇಟ್ಟುಕೊಂಡು ಹೊರಗೆ ಹೆಜ್ಜೆ ಹಾಕತೊಡಗಿದ್ದ.ಕಳೆದ ಕೆಲ ವರ್ಷಗಳ ಹಿಂದಷ್ಟೆ ಯುಗಾದಿ ಹಬ್ಬದ ನಿಮಿತ್ಯ ಗೆಳೆಯ ಶೌಕತ್ ಅಲಿ ನಮ್ಮ ಮನೆಗೆ ಬಂದು ಹೋಳಿಗೆಯನ್ನ ಇನ್ನೊಂದು ನೀಡಿ ಅಕ್ಕ ಅಂತ ಕೇಳಿ ಹೋಳಿಗೆ ನೀಡಿಸಿಕೊಂಡದ್ದು ನನ್ನ ಹೆಂಡತಿ ಅಣ್ಣಾ ತುಪ್ಪ ತಗೋರಿ ಅಂತ ಎರಡು ಚಮಚ ತುಪ್ಪ ನೀಡಿದ್ದು ರಮಜಾನ್ ಹಬ್ಬಕ್ಕೆ ನಾನು ಅವರ ಮೆನೆಗೆ ಹೋಗಿ ಬಾಡೂಟ ಮಾಡುತ್ತಿದ್ದಾಗ ಅವರ ಅಮ್ಮೀಜಾನ್ ಅಭಿ ಲೇವ್ ಬೇಟಾ ಜವಾರಿ ಮುರ್ಗಿ ಹೇ ಅನ್ನುತ್ತ ಸಾಕೆಂದರು ತನ್ನ ಮಗನಷ್ಟೇ ನನ್ನ ಮೇಲೂ ಪ್ರೀತಿ ಮತ್ತು ಮಮಕಾರದಿಂದ ತಟ್ಟೆಗೆ ಬಡಿಸುವಾಗ ಶಾವಿಗೆಯ ಖೀರು ಸವಿದದ್ದು ಎಲ್ಲವೂ ನೆನಪಾಗಿ ನನ್ನ ಕಣ್ಣುಗಳು ಹನಿಗೂಡ ತೊಡಗಿದ್ದವು.ಅಂದ ಹಾಗೆ ಭಾರತ ಪಾಕಿಸ್ತಾನ ಇಭ್ಭಾಗವಾದಾಗ “ಮರೇತೋ ಯಹೀ ಮರೇಂಗೆ ಪರದೇಸ್ ನಹಿ ಜಾಯೇಂಗೆ” ಅಂತ ರೈಲು ಬಸ್ಸು,ಟ್ರಕ್ಕು ಹತ್ತದೆ ಉಳಿದ ಅದೇ ಮುಸ್ಲಿಂ ಕುಟುಂಬಗಳು ಇಂದು ಮಟನ್ ಚಿಕನ್ ಮಾರಬಾರದು,ದಶಕಗಳಿಂದ ಹಿಜಾಬ್ ಧರಿಸಿಕೊಂಡೇ ಶಾಲೆಗೆ ಬಂದ ಹುಡುಗಿಯರು ಅದನ್ನ ಇನ್ನುಮುಂದೆ ಧರಿಸಬಾರದು,ಹಿಂದೂ ದೇವಸ್ಥಾನದ ಎದುರು ಹೊಟ್ಟೆಪಾಡಿಗಾಗಿ ಮುಸ್ಲಿಮರು ವ್ಯಾಪಾರ ಮಾಡಬಾರದು,ಐದು ಹೊತ್ತಿನ ನಮಾಜಿಗೆ ಇಂತಿಷ್ಟೇ ಪ್ರಿಕ್ವೆನ್ಸಿಯ ಮೈಕ್ ಬಳಸಬೇಕು,ಟೋಪಿವಾಲಗಳ ಹತ್ತಿರ ಮಾವಿನ ಹಣ್ಣು ಖರೀದಿಸಬೇಡಿ,ಹಲಾಲ್ ಕಟ್ ಬೇಡ ಜಟ್ಕಾ ಇರಲಿ ಅಂತ ತಿನ್ನುವ ಆಹಾರದಲ್ಲೂ ಜಾತಿ ಮಂತ್ರ ಜಪಿಸುವ ದೇಶದ್ರೋಹಿಗಳಿಗೆ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಜಾತಿ ಧರ್ಮದ ಜೀವಾಳವನ್ನೆ ಅರ್ಥ ಮಾಡಿಕೊಳ್ಳದ ಮತ್ತು ಮನುಷ್ಯತ್ವದ ಮಂತ್ರ ಜಪಿಸದ ಸಮಬಾಳು ಸಮಪಾಲು ಎಂದು ಇನ್ನೊಬ್ಬರ ನೋವಿಗೆ ಸ್ಪಂದಿಸದ ವಿಷ ತುಂಬಿಕೊಂಡ ಮನಸ್ಸುಗಳಿಗೆ ಆಧ್ಯಾತ್ಮದ ಅರಿವು ಮೂಡಿಸುವವರು ಯಾರು?? ಅಲ್ಲವೇ.ಸಮವಸ್ತ್ರದ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಗೌರವಿಸೋಣ ಆದರೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವದಷ್ಟೇ ಅಲ್ಲ ಅದೇ ಉದ್ದೇಶ ಇಟ್ಟುಕೊಂಡು ರಾಜಮನೆತನಗಳು ಕೂಡ ಆಳಿದ ದೇಶ ನಮ್ಮದು ಆದರೆ ಅದೆಲ್ಲ ಮುಗಿದ ಬಳಿಕ ಕರಗ,ಅಲಾಬು,ಉರುಸ್, ಹೀಗೆ ಹಲವು ಹಬ್ಬಗಳಲ್ಲಿ ಈ ಮೊದಲು ಇದ್ದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಜ್ಯೋತಿಯನ್ನ ನಂದಿಸ ಹೊರಟವರ ಕಿವಿ ಹಿಂಡುವವರು ಯಾರು??

ಅವರ ಹತ್ತಿರ ಏನೂ ಖರೀದಿಸಬೇಡಿ,ಆ ಧರ್ಮದವರಿಗೆ ಮನೆ ಬಾಡಿಗೆ ಕೊಡಬೇಡಿ,ಅಯ್ಯೋ ಸಾಯ್ಲಿಬಿಡಿ ಅನ್ನುವ ಹಿಂದೂ ಮತ್ತು ಮುಸ್ಲಿಂರ ಅಘೋಷಿತ ಫತ್ವಾಗಳು ಹೊರಡತೊಡಗಿದ ಮೇಲೆ ಹಮ್ ಸಬ್ ಏಕ್ ಹೇ,ಭಾರತ ಮಾತಾಕಿ ಜೈ,ವಿವಿಧತೆಯಲ್ಲಿ ಏಕತೆಯ ದೇಶ ನಮ್ಮದು ಅನ್ನುವ ಹೆಮ್ಮೆಯ ಮಾತುಗಳಿಗೆ ಕೊಳ್ಳಿ ಇಡುತ್ತಿರುವ ಜಾತಿವಾದಿಗಳ ನಡೆ ನಿಜಕ್ಕೂ ಒಂದಷ್ಟು ನೋವು ಮತ್ತು ವಿಷಾದವನ್ನ ಮಾನವೀಯತೆಗೆ ಮಿಡಿಯುವ ಹೃದಯಗಳಲ್ಲಿ ನಿಧಾನಕ್ಕೆ ಹರಡತೊಗಿದೆ.ದೆಹಲಿಯ ಜಮಾತ್ ನಿಂದಲೇ ಕೋವಿಡ್ ಹರಡಿತು ಅಂತ ಬೊಬ್ಬೆ ಇಟ್ಟ ಮಾಧ್ಯಮಗಳು,ಜಗದ ಆಗು ಹೋಗುಗಳನ್ನೇ ಅರಿಯದೇ ಹಿಜಾಬ್ ಧರಿಸಿ ತರಗತಿಗೆ ಹೊರಟ ಮುಗ್ದ ಹುಡುಗಿಯನ್ನ ಅಟ್ಟಿಸಿಕೊಂಡು ಹೋದ ವರದಿಗಾರ,ಟೀಚರ್ ಒಬ್ಬರು ಬುರ್ಕಾ ತೆಗೆಯುವದನ್ನು ತನ್ನ ಅಕ್ಕ ಅಥವಾ ತಂಗಿ ಬಟ್ಟೆ ಬದಲಿಸುವಾಗ ನಾಚಿಕೆ ಬಿಟ್ಟು ಕ್ಯಾಮೆರಾ ಹಿಡಿದವರಂತೆ ಮಾನವೀಯತೆ ಮರೆತು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತ ನಿಂತ ಕ್ಯಾಮೆರಾ ಮೆನ್ ಮತ್ತು ಕಡ್ಡಿ ಓಯ್ದು ಗುಡ್ಡ ಮಾಡಲು ಹೊರಟ ಟಿ ಆರ್ ಪಿ ಯ ಬೆನ್ನು ಬಿದ್ದ ಯಾಂಕರ್ ಗಳ ಕೂಗಾಟಕ್ಕೆ ಕಡಿವಾಣ ಹಾಕುವವರು ಯಾರು?? ವಿವಿಧತೆಯಲ್ಲಿ ಏಕತೆಯ ದೇಶವನ್ನು ಕೋಮು ದಳ್ಳುರಿ ಹಬ್ಬಿಸಿ ಯಾರದೋ ಮನೆಯ ಮಕ್ಕಳನ್ನು ಬಲಿಕೊಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟ ಬಿಳಿಬೆಕ್ಕುಗಳ ಕೊರಳಿಗೆ ಗಂಟೆ ಕಟ್ಟುವವರು ಯಾರು?? ನಾನು ಹಿಂದೂ ನಾನು ಮುಸ್ಲಿಂ ನಮ್ಮದು ಆ ಪಕ್ಷ ನಿಮ್ಮದು ಈ ಪಕ್ಷ ಅಂತ ಮನಸ್ತಾಪ ಮಾಡಿಕೊಳ್ಳುತ್ತ ಪರಸ್ಪರ ಹಲ್ಲು ಮಸೆಯುತ್ತ ಕಲ್ಲೆಸೆದು ರಕ್ತ ಹರಿಸುತ್ತಿರುವ ಯುವಜನತೆಯನ್ನ ಸರಿ ದಾರಿಗೆ ತರುವವರು ಯಾರು?? ಸದ್ಯಕ್ಕೆ ಸಂಭವಾಮಿ ಯುಗೇ ಯುಗೇ ಅನ್ನುತ್ತ ಕಾಯುವದಷ್ಟೇ ನಮ್ಮ ಕೆಲಸವಾದರೆ ಇತ್ತ ಕಾಶ್ಮೀರ ಫೈಲ್ಸ,ದಲಿತ ಪೈಲ್ಸ,ನಾನೇಕೆ ಗಾಂಧಿಯನ್ನ ಕೊಂದೆ ಅನ್ನುವಂತ ಜಾತಿ ಸಂಘರ್ಷ ಬಿತ್ತುವ ಸಿನೆಮಾಗಳನ್ನ ಬ್ಯಾನ್ ಮಾಡುವವರು ಯಾರು??
ದೇವರೊಬ್ಬನೇ ನಾಮ ಹಲವು ಅನ್ನುವದನ್ನೇ ನಂಬಿದ ಹಿರಿಯ ಜೀವಗಳ ಮನಸಿಗೆ ಆಗುತ್ತಿರುವ ಆಘಾತಕ್ಕೆ ಹೊಣೆ ಯಾರು?? ಪ್ರತ್ಯೇಕ ಕಾಶ್ಮೀರ ಅಂತ ಬಂದೂಕು ಹೆಗಲಿಗೆ ಏರಿಸಿಕೊಂಡವರಾಗಲಿ,ಅಥವಾ ಹಿಂದೂ ಸಾಮ್ರಾಜ್ಯ ಅಂತ ಕತ್ತಿ ಎತ್ತಿಕೊಂಡವರಾಗಲಿ ಇಲ್ಲ ಮನುಕುಲಂ ವಂದೇ ವಲಂ ಎಂದು ಜಪಿಸದ ಯಾವುದೇ ಜೀವವಾಗಲಿ ಇಲ್ಲಿಯವರೆಗೆ ಎಂದೂ ಸುಖವಾಗಿ ಉಳಿದಿಲ್ಲ ಅನ್ನುವದು ನಿಮಗೆ ನೆನಪಿರಲಿ ಜಗತ್ತನ್ನೆ ಗೆಲ್ಲುವ ಕನಸು ಕಂಡ ಎಷ್ಟೋ ರಾಜರು ಜೀವ ಬಿಟ್ಟಿದ್ದಾರೆ,ಸಾಮ್ರಾಜ್ಯ ವಿಸ್ತರಣೆಯ ಕನಸು ಕಂಡು ಯುದ್ಧಕ್ಕೆ ಇಳಿದವರು ಕೊನೆಯ ಕ್ಷಣಕ್ಕೆ ವೈರಾಗಿಗಳಾಗಿದ್ದಾರೆ.ಇಲ್ಲಿ ಎಲ್ಲವೂ ನಶ್ವರ ಅಂದ ಮೇಲೆ ನಮ್ಮ ನಡುವೆ ಅನ್ನ ಕೊಡುವ ರೈತ ಮತ್ತು ಜೀವ ಉಳಿಸುವ ವೈದ್ಯನ ಜಾತಿ ಯಾವುದು ಅನ್ನುವ ಪ್ರಶ್ನೆಯ ಅಗತ್ಯವಿದೆಯೆ?? ಅಂದ ಹಾಗೆ ಮತಯಾಚನೆ ಮಾಡುವಾಗ ವಟಾರದ ಎಲ್ಲ ಮನೆಗಳಿಗೂ ತೆರಳಿ ಹಿರಿಯರು ಕಿರಿಯರು ಎನ್ನದೆ ಕಾಲಿಗೆ ಬಿದ್ದು ಕೈ‌ ಮುಗಿದು ಹಲ್ಲುಕಿರಿಯುವ ರಾಜಕಾರಣಿಗಳು ಯಾರೂ ನಮಗೆ ಹಿಂದೂ ಅಥವಾ ಮುಸ್ಲಿಂ ವೋಟ್ ಬೇಡ ಅಂತ ಇಲ್ಲಿಯವರೆಗೂ ಹೇಳಿಲ್ಲ ಮತ್ತು ಹೇಳುವದೂ ಇಲ್ಲ ಅನ್ನುವದು ನೆನಪಿರಲಿ.ದೇಹಕ್ಕೆ ಸೇರಿದ ವಿಷವನ್ನ ತೆಗೆಯಬಹುದು ಆದರೆ ಮನಸ್ಸಿಗೆ ಸೇರಿದ ವಿಷ ತೆಗೆಯಲಾಗುವದಿಲ್ಲ.ಜಗತ್ತಿನ ಎಲ್ಲ ವಿಷಕಾರಿ ಜಂತುಗಳಿಗಿಂತ ಮನುಷ್ಯ ಅತ್ಯಂತ ವಿಷಕಾರಿ ಆದ್ದರಿಂದ ಮಾನವೀಯತೇ ಮತ್ತು ದಯೆಗಳಷ್ಟೇ ಆ ನಂಜಿಗೆ ಮದ್ದು ಆದ್ದರಿಂದ ಕೋಮು ದಳ್ಳುರಿ ಹಬ್ಬಿಸುವ,ಮತ್ತು ಪರಸ್ಪರ ಸಾಮರಸ್ಯ ಕದಡುವ ಪ್ರಚೋದನಕಾರಿ ಭಾಷಣ ಬಿಗಿಯುವ ವಿಷಜಂತುಗಳು ಯಾವುದೇ ಧರ್ಮ ಅಥವಾ ಜಾತಿಯವರಾಗಿರಲಿ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವ ಕೆಲಸವಾಗಲಿ ಅದಕ್ಕಾಗಿ ನ್ಯಾಯಕ್ಕಾಗಿ ನಿಷ್ಪಕ್ಷಪಾತ ಕೂಗೂ ನಮ್ಮದಾಗಿರಲಿ.ಯಾಕೆಂದರೆ ಹಸಿವು,ಮತ್ತು ಸಾವು ಎಂದೂ ಜಾತಿ ಮತ್ತು ಧರ್ಮವನ್ನು ನೋಡುವದಿಲ್ಲ ಅದು ಎಂದಿಗೂ ಎಲ್ಲರಲ್ಲಿಯೂ ಸಮಾನವಾಗಿಯೇ ಪ್ರವಹಿಸುತ್ತದೆ.ಆದ್ದರಿಂದ
ಬನ್ನಿ ಬದಲಾವಣೆ ಅನ್ನುವದು ನಮ್ಮಿಂದಲೇ ಆರಂಭವಾಗಲಿ ಏನಂತೀರಿ??

ದೀಪಕ್ ಶಿಂಧೆ
ಮೊ:9482766018