
ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ, ಮುಂದೆ
ಶಾಸಕರಾಗ್ತಾರಾ ಬಸನಗೌಡ ಬಾದರ್ಲಿ?
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ಮೂಲಕ ಗಮನ ಸೆಳೆದಿದ್ದ ಸಿಂಧನೂರಿನ ಯುವ ಮುಖಂಡ ಬಸನಗೌಡ ಬಾದರ್ಲಿ ಈಗ ಮತ್ತೆ ತಮ್ಮ ಸಾಮರ್ಥ್ಯ ಹಾಗೂ ಪ್ರಭಾವವನ್ನು ಸಾಬೀತುಪಡಿಸಿದಂತಾಗಿದೆ. ಕೆಲ ದಿನಗಳ ಹಿಂದೆ ಸಿಂಧನೂರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ವಿಚಾರವಾಗಿ ಇನ್ನೊಂದು ಕಾಂಗ್ರೆಸ್ ಬಣ ಬಸನಗೌಡ ಬಾದರ್ಲಿ ವಿರುದ್ಧ ಹೈಕಮಾಂಡಿಗೆ ದೂರು ಸಲ್ಲಿಕೆಯಾದ ಬಗ್ಗೆ ವರದಿಗಳು ಪ್ರಕಟವಾಗಿದ್ದವು.
ಇಂತಹ ಬೆಳವಣಿಗೆ ನಂತರವೂ ಬಸನಗೌಡ ಬಾದರ್ಲಿ ಮಹತ್ವದ ಸ್ಥಾನಗಳಲ್ಲೊಂದಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ಹಿರಿ ತಲೆಗಳು ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಈ ರಾಜಕಾರಣವೇ ಹೀಗೆ… ಯುವಕರು, ಯುವ ನಾಯಕತ್ವ ಎಂದೆಲ್ಲಾ ಭಾಷಣ ಮಾಡುವ ಹಿರಿಯರು ರಾಜಕಾರಣದಲ್ಲಿ ಯುವಕರಾದವರನ್ನು ಅಷ್ಟ ಬೇಗ ಮುಂಚೂಣಿಗೆ ಬರಲು ಬಿಡುವುದಿಲ್ಲ. ರಾಜಕೀಯ ಪ್ರವೇಶಿಸಿದ ಯುವಕರು ಅಧಿಕಾರ, ಸ್ಥಾನಮಾನ ಪಡೆಯಲು ಪಡಬೇಕಾದ ಕಷ್ಟ ಅದು ಅವರಿಗೇ ಗೊತ್ತು. ದುಡ್ಡು, ಜಾತಿ ಬಲ, ಕೌಟುಂಬಿಕ ಹಿನ್ನೆಲೆ ಎಷ್ಟೇ ಚೆನ್ನಾಗಿದ್ದರೂ ಕೂಡ ಅಧಿಕಾರ, ರಾಜಕೀಯ ಸ್ಥಾನಮಾನಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಸಿಗಲು ಪಕ್ಕದಲ್ಲಿ, ಎದುರಿಗೆ ಇರುವ ಕೆಲವು ಹಿರಿಯರು ಬಿಡುವುದೂ ಇಲ್ಲ. ಇಲ್ಲಿ ಹಿರಿಯರಾದವರಿಗೆ ಭವಿಷ್ಯದ ರಾಜಕೀಯ ಅಸ್ತಿತ್ವ ಮುಖ್ಯವಾಗಿರುತ್ತದೆ. ಕಿರಿಯರನ್ನು ಬೆಳೆಸುವ ಮೂಲಕ ತಮ್ಮ ಚಾಣಾಕ್ಷತೆಯಿಂದ ರಾಜಕಾರಣ, ಅಧಿಕಾರ ಉಳಿಸಿಕೊಳ್ಳುವ ಬಗ್ಗೆ ಹಿರಿಯರಲ್ಲಿ ಅಸಮರ್ಥತೆ, ಅಭದ್ರತೆ, ಆತಂಕ ಇರುತ್ತವೆ.
ಹಿರಿಯರ ತಪ್ಪು ರಾಜಕೀಯ ನಿರ್ಧಾರಗಳು ಒಮ್ಮೊಮ್ಮೆ ಏನೆಲ್ಲಾ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ.
ರಾಯಚೂರು ಜಿಲ್ಲಾ ರಾಜಕಾರಣ ಕೂಡ ಇದಕ್ಕೆ ಹೊರತಾಗಿಲ್ಲ. ನಮ್ಮ ಜಿಲ್ಲೆಯಲ್ಲಿ ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತಿ ಟಿಕೆಟ್ ವಂಚಿತ ಯುವ ನಾಯಕರು ಅದನ್ನೇ ಸವಾಲಾಗಿ ಸ್ವೀಕರಿಸಿ, ನಂತರದ ವರ್ಷಗಳಲ್ಲಿ ಉನ್ನತ ಅಧಿಕಾರ, ರಾಜಕೀಯ ಸ್ಥಾನಮಾನ ಪಡೆದ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಈಗ ಬಸನಗೌಡ ಬಾದರ್ಲಿ ವಿಚಾರವೂ ಕೂಡ ಅದೇ ರೀತಿಯಲ್ಲಿ ನಡೆಯುತ್ತಿರುವಂತೆ ಕಾಣುತ್ತಿದೆ. ಬಸನಗೌಡ ಬಾದರ್ಲಿ ರಾಜಕೀಯವಾಗಿ ಪ್ರತಿಭಾವಂತ, ಸಮರ್ಥ, ಉತ್ತಮ ಸಂಘಟಕ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸ್ಪಷ್ಟವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸಿಂಧನೂರು ಕಾಂಗ್ರೆಸ್ ಟಿಕೆಟ್ ಗಾಗಿ ಬಸನಗೌಡ ಬಾದರ್ಲಿ ಪ್ರಯತ್ನಿಸ್ತಾರಾ? ಆಗ ನಡೆಯಬಹುದಾದ ಟಿಕೆಟ್ ಹಗ್ಗ ಜಗ್ಗಾಟದಲ್ಲಿ ಅವರು ಯಶ ಕಾಣ್ತಾರಾ? ಶಾಸಕರಾಗಿ ಆಯ್ಕೆಯಾಗ್ತಾರಾ?… ಕಾದು ನೋಡಬೇಕು.
*ಬಸವರಾಜ ಭೋಗಾವತಿ