ಇಳಿ ಸಂಜೆಯ ಹೊತ್ತಿನಲ್ಲಿ ನಮ್ಮದಲ್ಲದ ಊರಿನಲ್ಲಿ ಹಳೆಯ ಗೆಳೆಯನ ಜೊತೆಗೆ: ದೀಪಕ್ ಶಿಂಧೆ

ಮೊನ್ನೆ ವೈಯುಕ್ತಿಕ ಕೆಲಸದ ನಿಮಿತ್ಯ ದೂರದ ಬೆಂಗಳೂರಿಗೆ ಹೋಗಿದ್ದೆ. ಕಸ್ತೂರಬಾ ರಸ್ತೆಯಲ್ಲಿ ಬಾಲ್ಯದ ಗೆಳೆಯ ಅಜೀತ ಅಚಾನಕ್ಕಾಗಿ ಎದುರಿಗೆ ಸಿಕ್ಕಿದ್ದ ಫಾರಿನ್ ರಿಟರ್ನ ಆದ್ರೂ ಯಾಕೊ ಅವನು ಸುಖವಾಗಿ ಇಲ್ಲ ಅನ್ನೋದು ಮುಖದಲ್ಲೆ ಕಾಣಸ್ತಾ ಇತ್ತು.ಬಹಳ ವರ್ಷಗಳ ಬಳಿಕವೂ ನನ್ನ ಗುರ್ತು ಹಿಡಿದವನೆ ಬಾ ಇಲ್ಲೆ ಹೋಟೆಲಲ್ಲಿ ಟೀ ಕುಡಿಯೋಣ ಅಂತ ಕೈ ಹಿಡಿದು ಕರೆದಾಗ ಬೇಡ ಅನ್ನುವ ಮನಸ್ಸಾಗಲಿಲ್ಲ.ಹ್ಯಾಗಿದಿಯಾ ಗೆಳೆಯಾ ಅಂದೆ.ನನಗೇನೂ ಕಮ್ಮಿ ಇಲ್ಲಾ ಬಾಸೂ….ತಿಂಗಳ ಕೊನೆಗೆ ಕೈಗೆ ಬರೋ ಸಂಬಳ… ರೂಮ್ ಬಾಡಿಗೆ ಕಟ್ಟಿದ್ರೆ ಆಯ್ತು ಮೆಸ್ ಹುಡುಗ ಊಟ ತಂದು ಕೊಡ್ತಾನೆ,ಬೇರೆ ಏನಾದ್ರೂ ಬೇಕು ಅನ್ನಿಸಿದ್ರೆ ಜೋಮ್ಯಾಟೋ,ಸ್ವಿಗ್ಗೀ, ಅಮೆಜಾನ್, ಪ್ಲಿಪ್ ಕಾರ್ಟ ಇದೆಯಲ್ಲ ಮನೆಬಾಗಿಲಿಗೆ ತರಿಸಿಕೊಂಡು ತಿನ್ನೋಕೆ ಉಡೋಕೆ ತೊಡೋಕೆ ಇನ್ನೂ ಆಫಿಸಿಗೆ ಹೋಗೋಕೆ ಓಲಾ ಬುಕ್ ಮಾಡಿದ್ರೆ ಆಯ್ತು…ತಿಂಗಳಿಗೆ ಇಷ್ಟು ಅಂತ ಕಟ್ಟಿದ್ರೆ ಯಾವದಾದ್ರೂ ಎಜೆನ್ಸಿಯಿಂದ ಪಿಕ್ ಯಾಂಡ್ ಡ್ರಾಪ್ ಸಿಗುತ್ತೆ

ಮದ್ವೆ ಆಗದೆ ಇರೋದೇ ಒಳ್ಳೆದಾಯ್ತು….ಮಕ್ಕಳು ಮರೀ ಅವರ ಎಜುಕೇಶನ್ , ಅವರ ಮದುವೆ ಅಂತ ಎಷ್ಟೆಲ್ಲ ಕಷ್ಟ ಪಡಬೇಕಿತ್ತು ಗೊತ್ತಾ??? ಒಂಟಿಯಾಗಿ ಉಳಿದಿದ್ದೇ ಬೆಟರ್ ಅನ್ನಸ್ತಾ ಇದೆ. ಇಂಡಿಪೆಂಡೆಂಟ್ ಲೈಪ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡತಾ ಇದೀನಿ….ಹೆವಿ ಡ್ರಿಂಕ್ ಮಾಡಿದ್ರೆ ಕೇಳೋರಿಲ್ಲ , ಊಟಾ ಮಾಡದೆ ಇದ್ರೆ ಮಾಡು ಅಂತ ಒತ್ತಾಯಾ ಮಾಡೋರು ಇಲ್ಲ…..ಹೀಗೆ ಹತ್ತು ವರ್ಷದ ಹಿಂದೆ ಮದುವೆಯಾಗದೆ ಉಳಿದಿದ್ದ ಅಜೀತ ಹೇಳಿದ್ದ ಮಾತುಗಳನ್ನೇ ಅವನಿಗೆ ನೆನಪು ಮಾಡಿದೆ ಅಷ್ಟೇ…ಕಣ್ಣಂಚಿನಲ್ಲಿ ನೀರು ತುಂಬಿಕೊ‌ಂಡು ಮುಖದಲ್ಲಿ ಯಾವ ಭಾವಗಳೂ ಇಲ್ಲದೆ ಮಾತಿಗೆ ಇಳಿದಿದ್ದ.
ಹೌದು ದೋಸ್ತ ಅವಾಗ ಅದೆ ಸರಿ ಅನ್ನಿಸ್ತು ಆದ್ರೆ ಈಗೀಗ ತುಂಬಾ ದೊಡ್ಡ ತಪ್ಪು ಮಾಡಿದೆ ಅನ್ನಸ್ತಿದೆ ಯಾಕೋ ಅಶಕ್ತಿ ಕಾಡ್ತಾ ಇದೆ.ಕೈಯ್ಯಿ,ಕಾಲು,ತಲೆ ಯಾವುದು ಓಡ್ತಾ ಇಲ್ಲ.ದುಡ್ಡಿಗೆ ಏನೂ ಬರ ಇಲ್ಲ ಸಣ್ಣ ಕೆಮ್ಮು ಶೀತ ಜ್ವರ ಇದ್ರೂ ಪೋನ್ ಮಾಡಿದ್ರೆ ಅಪೋಲೋದವ್ರು ಮನೆಗೆ ಔಷಧಿ ತಂದು ಕೊಡ್ತಾರೆ.ಪೇಪರು,ಹಾಲು ತರಕಾರಿ ಎಲ್ಲ ಮನೆ ಬಾಗಿಲಿಗೆ ಬಂದು ಬೀಳುತ್ತೆ.ಬೀದಿಲಿ ಯಾರದೋ ಗಾಡಿ ಹಾಯ್ದು ಕುಂಟುತ್ತ ನರಳತ್ತಿದ್ದ ನಾಯಿನಾ ಆರು ವರ್ಷದ ಹಿಂದೆ ಟ್ರೀಟ್ ಮಾಡಿ ಮನೆಗೆ ತಂದು ಸಾಕಿದಿನಿ ತುಂಬಾ ನೀಯತ್ತಾಗಿದೆ ಬೇರೆ ಯಾರೂ ಬರೋ ಹಾಗಿಲ್ಲ ನಾನು ಮತ್ತು ಸಾಕಿರೋ ನಾಯಿ ಬಿಟ್ರೆ ಮನೇಲಿ ಬೇರೆ ಯಾರೂ ಇಲ್ಲ.ಯು ನೋ ಲೈಫ್ ಇಜ್ ವೇರಿ ಫನ್ನಿ ಪಬ್ಬು,ಕ್ಲಬ್ಬು ಲೇಟ್ ನೈಟ್ ಪಾರ್ಟಿ,ಫಾರಿನ್ ಟೂರು ಎಲ್ಲಾ ಎಂಜಾಯ್ ಮಾಡಿದಿನಿ.ಕೊಲಿಗ್ಸ ಕೂಡ ಆಗಾಗ ಬರ್ತಾ ಇದ್ರೂ ಈಗ ಬರಲ್ಲ ರಿಟೈರ್ಮೆಂಟ್ ಆದ್ಮೇಲೆ ಎಲ್ಲಾ ತುಂಬಾ ಬದಲಾಗ್ಬಿಟ್ರು.ಅವರಿಗೆನಪ್ಪಾ ಹೆಂಡತಿ ಮಕ್ಕಳು…ಮೊಮ್ಮಕ್ಕಳು ಎಲ್ಲಾ ಇದ್ದಾರೆ.ಮೊನ್ನೆ ಪಾರ್ಕಲ್ಲಿ ರವಿ ಸಿಕ್ಕಿದ್ದ ಮೊಮ್ಮಗನ್ನ ಕೈ ಹಿಡಿದು ಕರ್ಕೊಂಡ ಬರ್ತಿದ್ದ ಮಗು ತುಂಬಾ ಮುದ್ದಾಗಿದೆ‌.
ಯಾಕೋ ಗೊತ್ತಿಲ್ಲ ದೀಪಕ ಒಂಟಿತನ ಕಾಡಿದಾಗೆಲ್ಲ ಕೇಳ್ತಾ ಇದ್ದ ಮಹ್ಮದರಪಿ,ಲತಾ ಮಂಗೇಶ್ಕರ್,ಆರ್ ಡಿ ಬರ್ಮನ್ ಹಾಡುಗಳೆಲ್ಲ ಈಗೀಗ ಬೋರ್ ಅನ್ನಸ್ತಿದೆ.ನನಗೆ ವಯಸ್ಸಾಯ್ತು ಅನ್ನೊದಕ್ಕಿಂತ ಬದುಕಲ್ಲಿ ತುಂಬಾ ಕಳಕೊಂಡ್ ಬಿಟ್ಟೆ ಅಂತ ಈಗ ಗೊತ್ತಾಗ್ತಾ ಇದೆ. ಮೊದಲು ಮದುವೆ ಆದ ಗೆಳೆಯರ ತಾಪತ್ರಯ ಅವರು ಬದುಕು ಕಟ್ಟೋದಕ್ಕೆ ಹೆಣಗಾಡೋದನ್ನ ನೋಡಿ ಅನ್ ಮ್ಯಾರೀಡ್ ಆಗಿರೋ ನಾನೇ ವೇರಿ ಹ್ಯಾಪಿ ಅನ್ನಸ್ತಾ ಇತ್ತು.ದುಡ್ಡು ಕೊಟ್ರೆ ದೇಹಕ್ಕೆ ಕಂಪನಿ ಸಿಗ್ತಾ ಇತ್ತು, ಇಮೇಜ್ ಸೆಲೆಕ್ಟ ಮಾಡಿದ್ರೆ ನಾನು ಇದ್ದಲ್ಲಿಗೆ ಕಾಲ ಗರ್ಲ ಬರ್ತಾ ಇದ್ರು..ಆದ್ರೆ ಈಗ ಯಾರೂ ನನ್ನ ಕಡೆಗೆ ತಿರುಗಿ ಕೂಡ ನೋಡಲ್ಲ.ಎಲ್ಲದಕ್ಕೂ ಡಬಲ್ ರೇಟ್ ಹೇಳ್ತಾರೆ
ಹದಿನೈದು ದಿನಕ್ಕೊಮ್ಮೆ ಹೇರಡೈ ಮಾಡ್ತಿನಿ,ಹಲ್ಲಿನ ಸೆಟ್ ಕೂಡ ಹಾಕ್ಸಿದಿನಿ,ಐರನ್ ಇಲ್ಲದ ಬಟ್ಟೆ ಯಾವತ್ತೂ ತೊಟ್ಟೋನೆ ಅಲ್ಲ ಆದ್ರೂ ನನ್ನೋರು ಅಂತ ನನಗೆ ಯಾರೂ ಇಲ್ಲ ದೀಪಕ್…

ಬಿಸಿ ರಕ್ತ ಇದ್ದಾಗ ಅಪ್ಪ ಅಮ್ಮನ ಮಾತು ಕೇಳದೆ ಅಕ್ಕ ತಂಗೀರ ಬಗ್ಗೆ ಕಾಳಜೀನು ಮಾಡದೆ ನನಗೋಸ್ಕರ ಊರು ಬಿಟ್ಟು ಬಂದೋನು ಅಲ್ವಾ ನಾನು.ಅಮ್ಮ ತೀರಿ ಹೋದಾಗ ಫಾರೆನ್ ಹೋಗ್ತಾ ಇದ್ದೋನು ಮತ್ತೆ ಅವಕಾಶಗಳು ಸಿಗಲ್ಲ ಅಂತ ಪ್ಲೈಟ್ ಹತ್ತಿದ್ದೆ ಅಪ್ಪ ತೀರಿ ಹೋದಾಗ ಫಾರೆನ್ ಕಂಪನಿಲಿ ರಜೆ ಸಿಗಲ್ಲ ಅಂತ ಓವರ್ ಟೈಮ್ ಕೆಲಸಾ ಮಾಡ್ತಾ ಆನ್ ಲೈನಲ್ಲೆ ಎಲ್ಲಾ ವಿಧಿ ವಿಧಾನ ಪೂರೈಸಿದ್ದೆ.ಈಗ ಅಕ್ಕ ಅಣ್ಣಾ ಅವರಾಯ್ತು ಅವರ ಮಕ್ಕಳು ಮರಿ ಆಯ್ತು ಅಂತ ಹಾಯಾಗಿದ್ದಾರೆ ಅವರ ಕಷ್ಟಕ್ಕೆ ನಾನು ಆಗಲಿಲ್ಲ ನನ್ನ ಕಷ್ಟಕ್ಕೆ ಅವರು ಆಗ್ತಾರೆ ಅನ್ನೊ ನಂಬಿಕೆನೂ ಉಳದಿಲ್ಲ.
ಈಗ ನಾನು ಇವತ್ತೊ ನಾಳೆನೊ ಬಿದ್ದೋಗೊ ಮರ ಅಂತ ನನಗೂ ಗೊತ್ತು ಆದ್ರೆ ನನ್ನವರು ಅಂತ ಈಗ ಯಾರೂ ಇಲ್ಲ…. ನೆನಪಿದೆಯಾ
ಐವತ್ತೈದಕ್ಕೆ ಹೆಂಡತಿಯನ್ನ ಕಳಕೊಂಡು ವರ್ಷ ತುಂಬೋದರಲ್ಲಿ ಮತ್ತೊಂದು ಮದುವೆಯಾದ ಗಣೀತದ ಮೇಷ್ಟ್ರ ಬಗ್ಗೆ ಆಡಿಕೊಂಡು ನಕ್ಕಿದ್ನಲ್ಲಾ ಈಗ ಅವರು ಮಾಡಿದ್ದೆ ಸರಿ ಅನ್ನಸ್ತಿದೆ.ಮದುವೆ ಅನ್ನೋದು ದೇಹಕಲ್ಲ ಜೀವಕ್ಕೆ ಅನ್ನೋದು ಅರ್ಥಾ ಆಗೋ ವೇಳೆಗೆ ಯಾಕೋ ಜೀವನಾನೆ ಸೋತು ಬಿಟ್ಟೆ ಅನ್ನಸ್ತಾ ಇದೆ. ಮನುಷ್ಯನಿಗೆ ನಿಜವಾಗಿಯೂ
ಬೇಕಾಗಿರೋದು ಹಾಸಿಗೆಯಲ್ಲಿ ಹೊರಳಾಡೋಕೆ ಅಥವಾ ಮೈ ಸುಖಕ್ಕೆ ನರಳಾಡೊಕೆ ಕಂಪೆನಿಯಲ್ಲ…ಸಂಗಾತಿ ಅಂತ ಬೇಕಾಗಿರುವದು ರಾತ್ರಿ ಮೈ ಬೆವೆತಾಗ ಕಾಳಜಿ ಮಾಡೊಕೆ ಮತ್ತು ಅಪರಾತ್ರಿ ಎದ್ದು ಕನ್ನಡಕಕ್ಕೆ ತಡಕಾಡುವಾಗ ನೀರ್ ಬೇಕಿತ್ತಾ ಅಂತ ಕೇಳೊದಿಕ್ಕೆ, ವಾಶ್ ರೂಮಿಗೆ ಹೊರಟಾಗ ಜೊತೆಗೆ ಬಂದು ಕೈ ಹಿಡಿದು ನಡೆಸೋಕೆ ಬೇಕಾಗಿರೋದು ಮತ್ತೊಂದು ಗುಲಗಂಜಿಯಂತ ಜೀವ ಅನ್ನಿಸ್ತಾ ಇದೆ.

ನಸುಕಿನ ಐದಕ್ಕೆ ಎದ್ದು ವಾಕಿಂಗ ಹೊರಡುವ ವೇಳೆ ಬಿಸಿ ಬಿಸಿಯಾಗಿ ಹಬೆಯಾಡುವ ಕಾಫಿ ಮಾಡಿ ಕೊಡೋಕೆ,ಸ್ನಾನ ಮಾಡಿ ಕೊನೆಯ ಮಗ್ಗಿನ ನೀರು ಮೈ ಮೇಲೆ ಚೆಲ್ಲಿದಾಗ ಟವಲ್ ಕೊಡುಓದಕ್ಕೆ, ಹೊರಗಡೆ ಹೋಗ್ತಾ ಇದೀನಿ ಅಂತ ಗೇಟ್ ಎಳೆದಾಗ ಹುಷಾರು ಕಾಯ್ತಾ ಇರ್ತೀನಿ ಅಂತ ಕೈ ಬೀಸೋದಕ್ಕೆ,ಹಸಿವು ಅಂತ ಹೇಳುವ ಮೊದಲೇ ಡೈನಿಂಗ್ ಟೇಬಲ್ಲಿನ ಮೇಲೆ ಊಟ ರೆಡಿ ಇಡೋದಕ್ಕೆ,ಬಿಪಿ,ಶುಗರ್,ಮಾತ್ರೆ ತಗೊಂಡ್ರಾ ಅಂತ ನೆನಪು ಮಾಡೊಕೆ ಅಷ್ಟೇ ಯಾಕೆ ಮಕ್ಕಳು ಬಿಟ್ಟು ಹೋದ್ರೆ ಏನಾಯ್ತು ನಾನು ಜೊತೆಗಿದ್ದಿನಲ್ಲ ಅಂತ ಸಮಾಧಾನಿಸೋದಿಕ್ಕೆ ಖಂಡಿತ ಒಂದು ಜೀವ ನಮಗಾಗಿ ಮಿಡಿಯುವದಕ್ಕೆ ಬೇಕೇ ಬೇಕು.ಯಾಕಂದ್ರೆ ದುಡ್ಡಿನಿಂದ ಅಗತ್ಯ ಇರುವ ಎಲ್ಲಾ ವಸ್ತುಗಳನ್ನು ಖರೀದಿಸಿಬಿಡಬಹುದು ಆದರೆ ನಮ್ಮ ಬಗ್ಗೆ ಕಾಳಜಿ ಮಾಡುವ ಮತ್ತು ನಾವು ಬರುವವರೆಗೂ ಊಟಕ್ಕೆ ಕಾಯುವ,ಭಾನುವಾರ ಅಲ್ವಾ ಇವತ್ತಾದ್ರು ಕಣ್ಣ ತುಂಬ ನಿದ್ದೆ ಮಾಡಲಿ ಅಂತ ಬೆಳಿಗ್ಗೆ ಸದ್ದಾಗದಂತೆ ಬೆಡ್ ರೂಮಿನ ಬಾಗಿಲು ಎಳೆದುಕೊಳ್ಳುವ, ಎಲ್ಲೋ ಇಟ್ಟು ಮರೆತ ಕಾರು,ಬೈಕಿನ ಕೀ ಹುಡುಕಿ ಕೊಡುವ ಮತ್ತು ಕಂಪಿಸುವ ಕೈಗಳಲ್ಲಿ ಹೋಟೆಲ್ಲೊಂದರ ಟೇಬಲ್ಲಿಗೆ ಕುಳಿತು ಊಟ ಮಾಡುವಾಗ ಮತ್ತೆ ಶರ್ಟ ಮೇಲೆ ಚೆಲ್ಲಿಕೊಂಡ್ರಾ ಅಂತ ಟಿಶ್ಯೂ ಪೇಪರಿನಿಂದ ಒರೆಸೋದಿಕ್ಕೆ ಜೀವವೊಂದು ನಮಗಾಗಿ ಬೇಕು ಅಲ್ಲವಾ ದೀಪಕ್??? ಅಂದ ಹಾಗೆ ತಾಳಿ ಕಟ್ಟೀದಿವಿ ಅನ್ನೋ ಒಂದೇ ಒಂದು ಕಾರಣಕ್ಕೆ ಅವರು ನಮಗಾಗಿ ಏನೆಲ್ಲ ಮಾಡುವಾಗ ಕನಿಷ್ಠ ನಮ್ಮ ಒಂದಷ್ಟು ಕಾಳಜಿ,ಕನಿಕರ,ಪ್ರೀತಿ ಅವರಿಗೂ ನಾವು ಕೊಡಬೇಕು ಅಲ್ಲವಾ??? ನಾನು ಅವನ ಮಾತುಗಳನ್ನ ಕೇಳ್ತಾ ಇದ್ರೆ ವೇಟರ್ ಟೇಬಲ್ಲಿನ ಮೇಲೆ ತಂದಿಟ್ಟ ಕಾಫಿ ಆರಿ ಹೋಗಿ ತುಂಬ ಹೊತ್ತಾಗಿತ್ತು.
ದೂರದಲ್ಲಿ ಬೆಟ್ಟಗಳ ಆಚೆಗೆಲ್ಲೋ ಸೂರ್ಯ ಮುಳುಗತೊಡಗಿದ್ದ…

ದೀಪಕ್ ಶಿಂಧೆ
ಪತ್ರಕರ್ತ, ಅಥಣಿ
ಮೊ:9482766018