ಕವಿದ ಕತ್ತಲೆಯಲ್ಲಿ ಬೆಳಕಿನ ಭರವಸೆ ನೀಡುವ ಕೃತಿ ‘ ವಚನ ಜ್ಯೋತಿ’ – ಮುಕ್ಕಣ್ಣ ಕರಿಗಾರ

.           ವಿಮರ್ಶೆ

ಕವಿದ ಕತ್ತಲೆಯಲ್ಲಿ ಬೆಳಕಿನ ಭರವಸೆ ನೀಡುವ ಕೃತಿ ‘ ವಚನ ಜ್ಯೋತಿ’

ಮುಕ್ಕಣ್ಣ ಕರಿಗಾರ

ಬಸವಪೂರ್ವ ಯುಗದಿಂದಲೂ ಪ್ರವಹಿಸುತ್ತಿದ್ದ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಾಕಾರ ‘ ವಚನ ಸಾಹಿತ್ಯ’ ವು ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಶರಣಚಳುವಳಿಯ ಕಾಲದಲ್ಲಿ ಸಮಾಜೋಧಾರ್ಮಿಕ ಸುಧಾರಣೆಯ ಅಸ್ತ್ರವಾಗಿ,ಮಲಿನ ಮನಸ್ಸುಗಳ ಶಸ್ತ್ರಚಿಕಿತ್ಸೆಯ ಸಾಧನವಾಗಿ ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ತನ್ನದೆ ಆದ ವಿಶಿಷ್ಟತೆಯಿಂದ ಲೋಕಮಾನ್ಯತೆ ಪಡೆದ ,ಕನ್ನಡ ನೆಲದ ಸತ್ತ್ವ- ಸಂಸ್ಕೃತಿಗಳನ್ನು ಬಿಂಬಿಸುವ ಸಾಹಿತ್ಯ.ಬಸವಣ್ಣನವರ ಕಾಲದಲ್ಲಿ ಏಳುನೂರಾಎಪ್ಪತ್ತಕ್ಕೂ ಹೆಚ್ಚು ಜನ ಶರಣರು ಅವರವರ ಇಷ್ಟದೇವತೆಯ ಅಂಕಿತಗಳಲ್ಲಿ ವಚನಗಳನ್ನು ರಚಿಸಿದ್ದಾರೆ.ಬಸವಣ್ಣನವರ ಸ್ಫೂರ್ತಿಸೆಲೆಯಲ್ಲಿ ಅರಳಿದ ಬಸವೋತ್ತರಯುಗದ ಅನೇಕ ಶರಣರು,ಮಠಾಧೀಶರುಗಳು ವಚನಗಳನ್ನು ಬರೆದಿದ್ದಾರೆ.ವಚನ ಸಾಹಿತ್ಯವು ಸಾಹಿತ್ಯದ ಒಂದು ಪ್ರಾಕಾರವಾಗಿ,ಒಂದು ಪರಂಪರೆಯಾಗಿ ಮುಂದುವರೆಯುತ್ತ ಬಂದಿದ್ದು ಆಧುನಿಕ ಕಾಲದಲ್ಲಿಯೂ ವಚನಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ಸಾಕಷ್ಟು ಜನ ಕವಿಗಳು ‘ಆಧುನಿಕ ವಚನಗಳ’ ನ್ನು ಬರೆದಿದ್ದಾರೆ,ಬರೆಯುತ್ತಲೂ ಇದ್ದಾರೆ.ಆಧುನಿಕ ಕಾಲಘಟ್ಟದಲ್ಲಿ ವಚನಸಾಹಿತ್ಯಕ್ಕೆ ಗಟ್ಟಿ ಕೊಡುಗೆ ನೀಡಿದವರು ಜಚನಿ ಮತ್ತು ಹಿಂದಿನ ಅವಿಭಜಿತ ರಾಯಚೂರು ಜಿಲ್ಲೆಯ ಹೆಸರಾಂತ ಸಾಹಿತಿಗಳಾಗಿದ್ದ ಸಿದ್ಧಯ್ಯಪುರಾಣಿಕರು.ಸಾಕಷ್ಟು ಸಂಖ್ಯೆಯಲ್ಲಿ ಆಧುನಿಕ ವಚನಗಳ ಸಂಕಲನಗಳು ಪ್ರಕಟಗೊಂಡಿವೆಯಾದರೂ ಅವುಗಳಲ್ಲಿ ಸಾಹಿತ್ಯಕ ಸತ್ತ್ವ ಕಡಿಮೆ; ವಚನಸಾಹಿತ್ಯಚಳುವಳಿಯ ಉದ್ದೇಶವನ್ನೇ ಮರೆತ ಸ್ವಗತ ಮಾದರಿಯ ಸಾಹಿತ್ಯ ಕೃತಿಗಳಾಗಿವೆ.ಈ ಕೊರತೆಯ ನಡುವೆಯೂ ಅಲ್ಲೊಂದು ಇಲ್ಲೊಂದು ಸತ್ತ್ವಯುತ ಆಧುನಿಕ ವಚನಗಳ ಸಂಕಲನಗಳ ಕೃತಿಗಳು ಪ್ರಕಟವಾಗುತ್ತಿರುವುದು ಸಮಾಧಾನದ ಸಂಗತಿ.ಅಂತಹ ಸತ್ತ್ವಯುತ ಆಧುನಿಕ ವಚನಸಂಕಲನಗಳಲ್ಲಿ ಒಂದಾಗಿದೆ ರಘುನಾಥರೆಡ್ಡಿ ಮನ್ಸಲಾಪುರ ಅವರ ” ವಚನಜ್ಯೋತಿ” ಎನ್ನುವ ನೂರೊಂದು ಆಧುನಿಕ ವಚನಗಳ ಸಂಕಲನ.

ಪತ್ರಕರ್ತರಾಗಿಯೇ ಹೆಸರಾಗಿರುವ ರಘುನಾಥರೆಡ್ಡಿ ಮನ್ಸಲಾಪುರ ಅವರು ತಮ್ಮ ಮೊನಚು ಬರಹಗಳಿಂದ ಹೆಸರಾದವರು.ಮೂಲತಃ ಕವಿ- ಸಾಹಿತಿ ಆಗಿರುವ ರಘುನಾಥರೆಡ್ಡಿ ಮನ್ಸಲಾಪುರ ಅವರು ಬಾಲ್ಯದಿಂದಲೇ ಸಾಹಿತ್ಯಕೃಷಿಗೆ ತೊಡಗಿದರೂ ಸಾಹಿತಿಯಾಗಿ ಬೆಳಕಿಗೆ ಬರಲಿಲ್ಲ,ನಮ್ಮ ಸಾಹಿತ್ಯಕ್ಷೇತ್ರದ ‘ ಗೆದ್ದ ಎತ್ತಿನ ಬಾಲ ಹಿಡಿಯುವ’ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವವರು,ಪತ್ರಿಕೆಗಳ ಮೂಲಕ ಬೆಳಕಿಗೆ ಬಂದವರೇ ದೊಡ್ಡಸಾಹಿತಿಗಳು ಎಂಬ ಹುಂಬನಂಬಿಕೆಗೆ ಬಲಿಯಾದ ಸಾಹಿತಿ-ವಿಮರ್ಶಕರುಗಳ ವಲಯದಿಂದ ಗುರುತಿಸಲ್ಪಡಲಿಲ್ಲವಾದ್ದರಿಂದ.ಪತ್ರಿಕಾ ರಂಗದಲ್ಲಿದ್ದೂ ಪತ್ರಿಕೆಗಳ ಮೂಲಕ ತಮ್ಮ ಸಾಹಿತ್ಯಪ್ರಚಾರಕ್ಕೆ ವೇದಿಕೆ ಒಂದನ್ನು ಕಲ್ಪಿಸಿಕೊಳ್ಳದೆ ನಿರ್ಲಿಪ್ತತೆ ಮೆರೆದದ್ದು ರಘುನಾಥರೆಡ್ಡಿಯವರ ವಿಶೇಷತೆ.ತಾವಾಯಿತು,ತಮ್ಮ ಕೆಲಸವಾಯಿತು ಎಂಬಂತೆ ಹೆಸರು,ಪ್ರಚಾರ ಬಯಸದೆ ಇದ್ದ ರಘುನಾಥರೆಡ್ಡಿಮನ್ಸಲಾಪುರ ಅವರ ತತ್ತ್ವಾಧಾರಿತಬದುಕಿನ ಸಾಹಿತ್ಯ ಸತ್ತ್ವವನ್ನು ಬಲ್ಲ ರಾಯಚೂರಿನ ಸಾಹಿತ್ಯಪ್ರೇಮಿ ಒಬ್ಬರು ಧನಸಹಾಯ ಮಾಡಿ ‘ವಚನಜ್ಯೋತಿ’ ಎನ್ನುವ ಆಧುನಿಕ ವಚನಗಳ ಸಂಕಲನವನ್ನುಪ್ರಕಟಿಸಿದ್ದಾರೆ.ರಘುನಾಥರೆಡ್ಡಿಯವರ ಸಾಹಿತ್ಯ ಸಮೃದ್ಧವಾಗಿಯೇ ಇದೆ ಆದರೆ ಅದು ಪ್ರಕಟಗೊಂಡಿಲ್ಲ,ಓದುಗರ ಗಮನಕ್ಕೆ ಬಂದಿಲ್ಲ.

‘ ವಚನ ಜ್ಯೋತಿ’ ಎನ್ನುವ ಈ ಆಧುನಿಕ ವಚನಗಳ ಸಂಕಲನವು ವಿಸ್ತಾರ- ವೈವಿಧ್ಯಮಯ ವಿಷಯ-ವಸ್ತುವನ್ನು ಒಳಗೊಂಡ ವಚನಸಾಹಿತ್ಯದ ಪ್ರಭಾವದಲ್ಲಿ ಮೂಡಿಬಂದ ಸಮಾಜೋದ್ಧಾರಬದ್ಧತೆಯ ಆಧುನಿಕ ಯುಗದ ಕವಿಯೊಬ್ಬರ ವಚನಕೃತಿ.ಮನ್ಸಲಾಪುರ ಮತ್ತು ಸುತ್ತಮುತ್ತಣ ಹತ್ತಾರು ಗ್ರಾಮಗಳ ಆರಾಧ್ಯದೈವವಾಗಿರುವ ಶಿವ ಸಿದ್ಧಲಿಂಗೇಶ್ವರನನ್ನು ತಮ್ಮ ಆರಾಧ್ಯದೈವವನ್ನಾಗಿರಿಸಿಕೊಂಡು ಆ ಸಿದ್ಧಲಿಂಗೇಶ್ವರನೇ ತಮಗೆ ಸರ್ವಸ್ವ ಎನ್ನುವ ಸಮರ್ಪಣಾಭಾವದಲ್ಲಿ’ ಶ್ರೀಗುರುಸಿದ್ಧಲಿಂಗೇಶ್ವರ’ ಎನ್ನುವ ಅಂಕಿತದಲ್ಲಿ ರಘುನಾಥರೆಡ್ಡಿಯವರು ಆಧುನಿಕ ವಚನಗಳನ್ನು ರಚಿಸಿದ್ದಾರೆ.ಲೋಕದ ಜನರು ತನ್ನ ವಚನಗಳನ್ನು ಕೇಳಲಿ ಬಿಡಲಿ,ತನ್ನ ಆರಾಧ್ಯದೈವ ಸಿದ್ಧಲಿಂಗೇಶ್ವರ ತನ್ನ ವಚನವನ್ನು ಆಲಿಸುತ್ತಾನೆ ಎನ್ನುವ ದೈವದಕಿವಿಯೊಪ್ಪುವ ರೀತಿಯಲ್ಲಿ ಬರೆದಿದ್ದಾರೆ ಇಲ್ಲಿಯ ವಚನಗಳನ್ನು.ತಾವು ಕಂಡುಂಡ ಸಮಾಜದ ರೀತಿ- ರಿವಾಜುಗಳ ಅಸಲಿಯತ್ತನ್ನು ಬಯಲಿಗೆಳೆಯುತ್ತಲೆ ಸಮಸಮಾಜ ನಿರ್ಮಾಣ,ಸರ್ವೋಯ ಸಮಾಜ ನಿರ್ಮಾಣದ ಕನಸುಗಳ ಬೀಜಗಳನ್ನು ಬಿತ್ತಿದ್ದಾರೆ ‘ ವಚನಜ್ಯೋತಿ’ ಯಲ್ಲಿ.ಲೋಕದ ಡಂಭಾಚಾರವನ್ನು ಕೆಡೆನುಡಿಯುವ ಮೊದಲ ವಚನವೇ ಓದುಗರ ಗಮನಸೆಳೆಯುತ್ತದೆ.ಲೋಕದ ಡಾಂಭಿಕತೆ, ಜಾತಿ,ಧರ್ಮಗಳ ಹುಸಿ ಪ್ರತಿಷ್ಠೆ,ಉಳ್ಳವರ ಒಡ್ಡೋಲಗಕ್ಕಿರುವ ಅಡ್ಡಹಾದಿಗಳು,ಮೂಢನಂಬಿಕೆ,ಮುಗ್ಧರ ಅಸಹಾಯಕತೆಗಳು,ಅಧಿಕಾರಸ್ಥರ ಹುಚ್ಚು -ಉನ್ಮತ್ತತೆಗಳು ಮತ್ತು ಲೌಕಿಕ ಬದುಕಿನಾಚೆಯ ಪರಮಾರ್ಥದಲ್ಲಿರುವ ಶಾಂತಿ-ಸುಖವೇ ನಿಜಪುರುಷಾರ್ಥ ಎನ್ನುವ ಭಾವ ನೂರೊಂದು ವಚನಗಳ ವಸ್ತು,ಸಾರ.

ಮನುಷ್ಯತ್ವವನ್ನು ಎತ್ತಿಹಿಡಿಯುವ ರಘುನಾಥರೆಡ್ಡಿ ಮನ್ಸಲಾಪುರ ಅವರು ಎಚ್ ಐ ವಿ ಸೋಂಕಿತರ ಬಗ್ಗೆಯೂ ವಿಶೇಷ ಕರುಣೆ- ಕಕ್ಕುಲಾತಿಗಳನ್ನು ತೋರಿಸಿ,ಅವರನ್ನೂ ಎಲ್ಲರಂತೆ ಮನುಷ್ಯರನ್ನಾಗಿ ಕಾಣಬೇಕು ಎನ್ನುತ್ತಾರೆ ಎನ್ನುವುದು ಮಹತ್ವದ ಸಂಗತಿ;

ಎಚ್ ಐ ವಿ ಸೋಂಕಿತರು,ಏಡ್ಸ್ ಪೀಡಿತರು ಎಂದು
ಎಲ್ಲರೂ ದೂರ ತಳ್ಳುವರಯ್ಯಾ
ಮೈ ಕೈ ಸೋಕಿದರೆ ತಮಗೆಲ್ಲಿ ಸೋಂಕು ಬರುವುದೋ
ಎಂಬ ಭಯದಿಂದ ಬದುಕುವ ಆಸೆಗೆ ತಣ್ಣೀರೆರಚುವರಯ್ಯಾ
ಇಂಥ ಮತಿಗೇಡಿಗಳ ಈ ಕೃತ್ಯವ ಸಹಿಸಲಾರ
ನಮ್ಮ ಶ್ರೀಗುರು ಸಿದ್ಧಲಿಂಗೇಶ್ವರಾ.

ಇದು ರಘುನಾಥರೆಡ್ಡಿ ಅವರ ಮಹತ್ವದ ವಚನ ಮಾತ್ರವಲ್ಲ; ಆಧುನಿಕ ವಚನಗಳಲ್ಲೆಲ್ಲ ಮಹತ್ವದ ವಚನವೆಂಬುದು ಇದರ ವಿಶೇಷತೆ.ಬಸವಾದಿ ಪ್ರಮಥರ ಹೃದಯ ವೈಶಾಲ್ಯವೇ ಇಲ್ಲಿ ಒಡಮೂಡಿ ವಚನಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟಿದೆ.ಎಚ್ ಐ ವಿ ಪೀಡಿತರು ಬಾಧಿಸುವ ಸೋಂಕಿಗಿಂತ ಸಮಾಜದ ನಿಕೃಷ್ಟನೋಟಕ್ಕೆ ಗುರಿಯಾಗಿಯೇ ಸಾಯುತ್ತಾರೆ ಎನ್ನುವ ಸಾಮಾಜಿಕ ಸೂಕ್ಷ್ಮ ಒಂದನ್ನು ಇಲ್ಲಿ ಎತ್ತಿತೋರಿಸಿದ್ದಾರೆ ವಚನಕಾರ.’ ಬದುಕುವ ಆಸೆಗೆ ತಣ್ಣೀರೆರಚುವರಯ್ಯಾ’ ಎನ್ನುವ ಮೂಲಕ ಏಡ್ಸ್ ಪೀಡಿತರು ಸಮಾಜದ ಕೆಟ್ಟ ಕಣ್ಣುಗಳಿಗೆ ಗುರಿಯಾಗಿ,ಬಹಿಷ್ಕೃತರಂತೆ ಬದುಕುವ ಮೂಲಕ ತಮ್ಮ ಬದುಕುವ ಕನಸುಗಳನ್ನು ಕಮರಿಸಿಕೊಳ್ಳುತ್ತಾರೆ.ಎಚ್ ಐ ವಿ ಪೀಡಿತರಿಗೆ ಸಮಾಜದ ಸಾಂತ್ವನ,ಪ್ರೀತಿಯ ಅಗತ್ಯ ಇದೆ ಎನ್ನುವುದನ್ನು ಒತ್ತಿ ಹೇಳುವ ಈ ವಚನ ಆಧುನಿಕ ವಚನ ಸಾಹಿತ್ಯ ಸಂದರ್ಭದಲ್ಲೊಂದು ವಿಶಿಷ್ಟನೋಟದಿಂದ ಗಮನಸೆಳೆಯುತ್ತದೆ.

ಯುಗ ಯುಗಗಳುರುಳಿದರೂ
ಯಾಗ,ಹೋಮ- ಹವನಗಳ ಆಚರಣೆ ನಿಂತಿಲ್ಲವಯ್ಯಾ,
ಶಿಕ್ಷಣ ಮಟ್ಟ ಹೆಚ್ಚಿದರೂ ನಾಗರಿಕತೆ ವಿಕಾಸವಾದರೂ
ಮೌಢ್ಯ- ಜಾಢ್ಯದ ಜಿಡ್ಡು ಪ್ರಸರಣಗೊಳ್ಳುತ್ತಿಹವಯ್ಯಾ
ದೈವ- ದೇವರ ಹೆಸರಿನಲಿ ನಿರಂತರ ಪ್ರಾಣಿಗಳ ಪ್ರಾಣ ಹರಣ
ನಡೆದಿಹುದಯ್ಯಾ
ಮಾಂಸಾಹಾರ ಜನ್ಮಸಿದ್ಧ ಹಕ್ಕು ಎನ್ನುತ್ತಿಹರಯ್ಯಾ
ಸಾತ್ವಿಕ ಆಹಾರ,ತಾತ್ವಿಕ ವಿಚಾರ ಜೀರ್ಣವಾಗದೆ ?
ಹೇಳಾ ಶ್ರೀಗುರು ಸಿದ್ಧಲಿಂಗೇಶ್ವರಾ.

ಯುಗಯುಗಗಳುರುಳಿದರೂ ಬದಲಾದ ಮೌಢ್ಯ- ಅಂಧಾನುಕರಣೆಗಳ ಮೇಲೆ ಬೆಳಕು ಚೆಲ್ಲುವ ಈ ವಚನವು ‘ ಮಾಂಸಾಹಾರವನ್ನು ಬೆಂಬಲಿಸುವ ವಿಕೃತ ಮನಸ್ಸುಗಳ ತಿನ್ನುವ ಚಪಲವನ್ನು ವಿಡಂಬಿಸುವ ವಚನವಾಗಿದ್ದು ಚರ್ಚೆಗೊಳಪಡಬೇಕಿದೆ,ಸಮಾಜಕ್ಕೆ ವಿಷಯ ಮನವರಿಕೆಯಾಬೇಕಿದೆ.

‌ಬಡವರು,ರೈತರಿಗೆ ಸಾಲ ನೀಡಲು ಸತಾಯಿಸುವ,ನೂರೆಂಟು ಸಬೂಬುಗಳನ್ನು ಹೇಳಿ ತಿರಸ್ಕರಿಸುವ ಬ್ಯಾಂಕುಗಳ ‘ ದಿವಾಳಿ‌ಮನಃಸ್ಥಿತಿ’ ಯನ್ನು ವಿಡಂಬಿಸುವ ವಚನ ;

ಬಡಪಾಯಿ ರೈತರು ಸಾವಿರ ಸಾಲ ಕೇಳಿದರೆ
ನೂರೆಂಟು ಸಾರಿ ಬ್ಯಾಂಕಿಗೆ ಅಡ್ಡಾಡಿಸಿ ಕೊಡುವ ಬ್ಯಾಂಕುಗಳು
ವಿಜಯಮಲ್ಯ ಉದ್ಯಮಿ,ಕೋಟ್ಯಾಧೀಶನೆಂದು ಭ್ರಮಿಸಿ
ಕೋಟಿ ಕೋಟಿ ಸಾಲಕೊಟ್ಟು ಕೆಟ್ಟುಹೋಗಿಹವು ನೋಡಾ
ರೈತರು ಸಾಲ ಪಾವತಿಸದಿರೆ ಆಸ್ತಿಹರಾಜಿಗೆ ಮುಂದಾಗುವ
ಬ್ಯಾಂಕ್,ನ್ಯಾಯಾಲಯ,ಸರಕಾರಗಳು
ಮಲ್ಯನ ಮೀಸೆಯ ಕೂಡ ಅಲುಗಾಡಿಸದೆ
ವಿಲಿವಿಲಿ ಒದ್ದಾಡುತಿಹವಯ್ಯಾ
ರೈತರ ಶಾಪ ತಟ್ಟದೇ ಬಿಟ್ಟೀತೆ ಹೇಳಾ
ಶ್ರೀಗುರು ಸಿದ್ಧಲಿಂಗೇಶ್ವರಾ.

ವಿಜಯ ಮಲ್ಯನಂತಹ ಉದ್ಯಮಿಗಳು ಬ್ಯಾಂಕುಗಳಿಗೆ ಸಾವಿರಾರು ಕೋಟಿಗಳನ್ನು ವಂಚಿಸಿಯೂ ದಕ್ಕಿಸಿಕೊಳ್ಳುವ ಬಂಢತನ ಪ್ರದರ್ಶಿಸುತ್ತಿದ್ದಾರೆ.ಅವರನ್ನು ಏನೂ ಮಾಡಲಾಗದ ವ್ಯವಸ್ಥೆ ಮತ್ತು ನ್ಯಾಯಾಲಯಗಳು ಬಡರೈತರ ಆಸ್ತಿಮುಟ್ಟುಗೋಲು ಹಾಕಿಕೊಳ್ಳುವ ಬ್ಯಾಂಕುಗಳ ಧೂರ್ತತನವನ್ನು‌ ಪೊರೆಯುತ್ತಿರುವ ವಿಕೃತಿಯನ್ನು ಕಟುವಾಗಿಯೇ ಖಂಡಿಸಿದ ವಚನಕಾರ ‘ ರೈತರ ಶಾಪ ತಟ್ಟದೇ ಬಿಟ್ಟೀತೆ?’ ಎನ್ನುವ ಮಹತ್ವದ ಘೋಷಣೆ ಮಾಡುತ್ತಾರೆ.ರೈತರ ನೋವು,ನಿಟ್ಟುಸಿರುಗಳಿಗೆ ಲೋಕವೇಬಲಿಯಾಗಬೇಕಾದೀತು.ಅನ್ನದಾತರಿಗೆ ಮಾಡುವ ಅನ್ಯಾಯವನ್ನು ಪರಮಾತ್ಮನೂ ಸಹಿಸಲಾರ ಎನ್ನುವ ರೈತರಪ್ರೀತಿ ಈ ವಚನದ ವಸ್ತು,ವಿಶೇಷತೆ.

ಭಾರತವು ಜಾತ್ಯಾತೀತ ರಾಷ್ಟ್ರ ನಿಜ; ಆದರೆ ಇಲ್ಲಿ ಎಲ್ಲವೂ ನಡೆಯುತ್ತಿರುವುದು ಜಾತಿಯ ಆಧಾರದ ಮೇಲೆಯೇ ! ಓಟ್ ಬ್ಯಾಂಕ್ ರಾಜಕಾರಣವು ಜಾತಿಗಳನ್ನು ಪೊರೆಯುತ್ತಾ ಸಾಮಾಜಿಕ ಸಂಬಂಧಗಳಿಗೆ ಹುಳಿಹಿಂಡುತ್ತಾ ಸಾಗಿದ ಬಗೆಯನ್ನು ವಿಡಂಬಿಸುವ ವಚನ ;

ಜಾತ್ಯಾತೀತ ರಾಷ್ಟ್ರ ಎಂಬರು
ನಡೆಯುತಿಹುದು ಮಾತ್ರ ಜಾತಿ ಆಧಾರಿತ ರಾಜಕೀಯವಯ್ಯಾ
ಜಾತಿಗೊಂದು ಮಠ- ಪೀಠಗಳ ಸ್ಥಾಪಿಸಿಹರಯ್ಯಾ
ಬರೀ ಮಾತಲ್ಲಿ ಜಾತಿ ನಿರ್ಮೂಲನೆ ಮಾಡುತಿಹರು
ಜಾತಿ ವ್ಯವಸ್ಥೆ ಬೇಡ, ಮೀಸಲಾತಿಯಿರಲಿ ಎನ್ನುವರಯ್ಯಾ
ಬಸವಾದಿ ಶರಣರ ಜಾತಿರಹಿತ ಸಮಾಜ ನಿರ್ಮಾಣದ
ಕನಸು ನನಸಾಗುವುದು ಜಟಿಲ ನೋಡಾ,
ಶ್ರೀಗುರು ಸಿದ್ಧಲಿಂಗೇಶ್ವರಾ

ಸ್ವಸ್ಥಸಮಾಜ ನಿರ್ಮಾಣಕ್ಕೆ ಜಾತಿನಿರ್ನಾಮದ ಅಗತ್ಯವನ್ನು ಒತ್ತಿಹೇಳುವ ಈ ವಚನ ಅವಕಾಶಗಳಿಗಾಗಿ ಹಪಹಪಿಸುವವರಿಂದಲೇ ಜಾತಿವ್ಯವಸ್ಥೆ ಮುಂದುವರೆಯುತ್ತಿದೆ ಎನ್ನುವ ಕಟುವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದೆ.

ಸರಕಾರದ ಅಭಿವೃದ್ಧಿ ಯೋಜನೆಗಳು ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳದೆ ಸಾರ್ವಜನಿಕ ಸಂಪತ್ತು ವ್ಯರ್ಥ ಪೋಲಾಗುತ್ತಿರುವುದು ನಿತ್ಯ ಕಂಡು ಕೇಳುವ ಸಂಗತಿ.ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ,ಅಧಿಕಾರಿಗಳ ಭ್ರಷ್ಟತೆ ಮತ್ತು ಗುತ್ತಿಗೆದಾರರ ಧನದಾಹದಿಂದ ಕುಡಿಯುವ ನೀರಿನಂತಹ ನಿತ್ಯೋಪಯೋಗಿ ಯೋಜನೆಗಳೂ ಸಹ ವಿಫಲವಾಗಿವೆ,ನಿರುಪಯುಕ್ತವಾಗಿವೆ ಎನ್ನುವ ಸಾಮಾಜಿಕ ವಾಸ್ತವವನ್ನು ಕಣ್ಣೆದೆರಿಡುವ ವಚನ ;

ಕುಡಿಯುವ ನೀರಿಗಾಗಿ ಸರಕಾರದ
ಕೋಟಿ ಕೋಟಿ ಹಣ ವ್ಯಯವಾಗುತ್ತಲೇ ಇಹುದು
ಜನರ ನೀರಿನ ದಾಹ ಮಾತ್ರ ಇಂಗುತ್ತಿಲ್ಲವಯ್ಯಾ
ವರ್ಷವೂ ನೀರು ಪೂರೈಕೆ ಕಾಮಗಾರಿಗಳು ನಡೆಯುತ್ತಲೇ ಇಹವು
ಪೈಪ್ ಗಳಲಿ ಬರೀ ಹಣವೇ ಸುರಿಯುತ್ತಿಹುದು,
ನಲ್ಲಿಗಳಲ್ಲಿ ನೀರು ಹರಿಯುತ್ತಿಲ್ಲ
ನೀರ ದಾಹ ತಣಿಸಲು ಭಗೀರಥನೇ ಜನಿಸಿ ಬರಬೇಕೆ ?
ಶ್ರೀಗುರು ಸಿದ್ಧಲಿಂಗೇಶ್ವರಾ.

ಪೈಪ್ಗಳಲ್ಲಿ ಸುರಿಯುತ್ತಿರುವ ಸಾರ್ವಜನಿಕರ ಹಣ ರಾಜಕಾರಣಿಗಳು,ಸರಕಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೇಬುಗಳನ್ನು ತುಂಬಿ ಚೆಲ್ಲಿಸುತ್ತಿದೆಯಾದರೂ ನಲ್ಲಿಗಳಲ್ಲಿ ನೀರು ಹರಿಯುತ್ತಿಲ್ಲ ಎನ್ನುವುದು ಜನರ ಹೆಸರಿನಲ್ಲಿ ,ಜನರ ಸಂಪತ್ತಿನೊಂದಿಗೆ ಚೆಲ್ಲಾಡುತ್ತಿರುವವರ ದಾಹವನ್ನು ಎತ್ತಿತೋರಿಸುತ್ತದೆ.

‌‌ ‌ಉದ್ಧರಿಸಿ,ಉದಾಹರಿಸಬಹುದಾದ ಸಾಕಷ್ಟು ವಚನಗಳುಳ್ಳ ಸತ್ತ್ವಯುತ ಆಧುನಿಕ ವಚನಗಳ ಸಂಕಲನ ‘ ವಚನ ಜ್ಯೋತಿ’ ಮೂಢನಂಬಿಕೆ- ಕಂದಾಚಾರಗಳನ್ನು ಖಂಡಿಸುತ್ತಲೇ ದೇವರ ಅಸ್ತಿತ್ವದ ಬಗ್ಗೆ ವಾದ ವಿವಾದಗಳನ್ನು ಮುಂದಿಡುವವರಿಗೆ ‘ ಅಂತರಂಗದ ಅರಿವೇ ದೇವರು’ಎನ್ನುವ ಸತ್ಯವನ್ನು ಸಾರುತ್ತ,ಶುದ್ಧ ವ್ಯಕ್ತಿತ್ವವೇ ಪ್ರಸಿದ್ಧಿಯ ಸಾಧನವಾಗಬೇಕಲ್ಲದೆ ಸಲ್ಲದು ಪ್ರಚಾರಪ್ರಿಯತೆ ಎನ್ನುವ ಕಿವಿಮಾತನ್ನು ಹೇಳುವ,ಸಮಾಜೋದ್ಧಾರ ಬದ್ಧತೆಯಲ್ಲಿ ಮೂಡಿದ ವಚನಗಳು ಹೇರಳವಾಗಿವೆ ಈ ಸಂಕಲನದಲ್ಲಿ.ಬಸವಣ್ಣನವರಿಂದ ಸ್ಫೂರ್ತಿ,ಪ್ರೇರಣೆಗಳನ್ನು ಪಡೆದಿರುವ ರಘುನಾಥರೆಡ್ಡಿ ಮನ್ಸಲಾಪುರ ಅವರು ಬಸವಣ್ಣನವರ ವ್ಯಕ್ತಿತ್ವವನ್ನು ಬಣ್ಣಿಸುವ ವಚನ ಒಂದನ್ನು ಬರೆದು ಕೃತಜ್ಞತೆಯನ್ನರ್ಪಿಸಿದ್ದಾರೆ.ಸಾಹಿತ್ಯವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ದಿನಗಳಲ್ಲಿ ಆರ್ಥಿಕವಾಗಿ ದುರ್ಬಲರಾದ ಪ್ರತಿಭಾಶ್ರೀಮಂತ ಕವಿಯೊಬ್ಬರ ಅರಳ್ದ ಎದೆಯ ಪ್ರತೀಕವಾಗಿ ಮೂಡಿ ಬಂದ ‘ ವಚನಜ್ಯೋತಿ’ ಯನ್ನು ಓದುವ ಮೂಲಕ,ಸಾಹಿತ್ಯಾಸಕ್ತರು ಕೃತಿಕಾರರನ್ನು ಬೆಂಬಲಿಸುವ ಅಗತ್ಯವಿದೆ.

ಮುಕ್ಕಣ್ಣ ಕರಿಗಾರ

‌ 06.04.2022