ಗಬ್ಬೂರು: ಮಹಾಶೈವ ಧರ್ಮಪೀಠದ ವಿಶ್ವೇಶ್ವರನ ಸನ್ನಿಧಿಯಲ್ಲಿಂದು ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಪ್ರದಾನ

.             ವಿಶ್ವೇಶ್ವರನ ಸನ್ನಿಧಿಯಲ್ಲಿಂದು ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಪ್ರದಾನ

ಮುಕ್ಕಣ್ಣ ಕರಿಗಾರ

ಶುಭಕೃತ್ ಸಂವತ್ಸರದ ಪ್ರಾರಂಭದ ಯುಗಾದಿಯ ದಿನವಾದ ಇಂದು ನಮ್ಮ ಮಹಾಶೈವ ಧರ್ಮಪೀಠದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿರುವ ಸಾಧಕರುಗಳಿಗೆ ” ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಯನ್ನು ನೀಡಲಾಯಿತು.ಮಹಾಶೈವ ಧರ್ಮಪೀಠದ ಕ್ಷೇತ್ರನಾಥ ಶ್ರೀ ವಿಶ್ವೇಶ್ವರನ ಸನ್ನಿಧಿಯಲ್ಲಿ ಸಾಧಕರುಗಳನ್ನು ಸನ್ಮಾನಿಸಿದ್ದು ವಿಶೇಷ.

ಮಹಾಶೈವ ಧರ್ಮಪೀಠವನ್ನು ಯುಗಾದಿಯಂದು ಸ್ಥಾಪಿಸಿದ್ದರ ಕುರುಹಾಗಿ ಪ್ರತಿವರ್ಷ ಯುಗಾದಿಯಂದು ” ಯುಗಾದಿ ಉತ್ಸವ” ವನ್ನು ಆಚರಿಸುತ್ತಿದ್ದು ಅದರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರುಗಳಿಗೆ ” ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ” ನೀಡಿ,ಸತ್ಕರಿಸಲಾಗುತ್ತದೆ.ಮಹಾಶೈವ ಧರ್ಮಪೀಠವು ‘ ಶಿವ ಸಪ್ತಾಕ್ಷರಿ ಮಠ’ ವಾಗಿದ್ದರಿಂದ ಯುಗಾದಿಯಂದು ಏಳು ಜನ ಸಾಧಕರುಗಳನ್ನು ಸನ್ಮಾನಿಸಲಾಗುತ್ತದೆ.” ಓಂ ನಮಃ ಶಿವಾಯ ಓಂ” ಎನ್ನುವುದು ಶಿವಶಕ್ತ್ಯಾತ್ಮಕವಾದ ಮಹಾಶೈವ ಮೂಲಮಂತ್ರ,ಸಪ್ತಾಕ್ಷರಿ ಮಂತ್ರವಾಗಿದ್ದು ಇದು ಎರಡು ಪ್ರಣವಗಳುಳ್ಳ ಮಂತ್ರ.ಸಪ್ತಾಕ್ಷರಿಯ ಮೊದಲ ಪ್ರಣವವು ಶಿವನ ಪ್ರತೀಕವಾದರೆ ಅಂತ್ಯ ಪ್ರಣವವು ಶಕ್ತಿಯ ಪ್ರತೀಕ.ವಿಷ್ಣುವು ಇದೇ ಮಂತ್ರದಿಂದ ಶಿವನನ್ನು ಕುರಿತು ತಪಸ್ಸು ಮಾಡಿ ರಾಕ್ಷಸರನ್ನು ಕೊಲ್ಲಲು ಸುದರ್ಶನಾಸ್ತ್ರವನ್ನು ಪಡೆದನು.

ಮಹಾಶೈವ ಮಠದ ಎಲ್ಲ ಉತ್ಸವ,ಕಾರ್ಯ,ಕಾರ್ಯಕ್ರಮಗಳು ಯುಗಾದಿಯಿಂದಲೇ ಪ್ರಾರಂಭವಾಗುತ್ತಿರುವುದರಿಂದ ಧರ್ಮಪೀಠದ ಮೊದಲ ಉತ್ಸವದಂದು ಶಿವಾನುಗ್ರಹಪೂರ್ವಕವಾಗಿ ‘ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಯನ್ನು ನೀಡಲಾಗುತ್ತದೆ.ಶಿವ ವಿಶ್ವೇಶ್ವರನ ಅನುಗ್ರಹವನ್ನೇ ಕರುಣಿಸುವ ಪ್ರಶಸ್ತಿ ಇದಾದ್ದರಿಂದ ಇದಕ್ಕೊಂದು ವಿಶೇಷತೆ ಇದೆ.ಈ ಪ್ರಶಸ್ತಿಯನ್ನು ಪಡೆದವರು ಶಿವ ವಿಶ್ವೇಶ್ವರನ ಅನುಗ್ರಹದಿಂದ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದುತ್ತಾರೆ,ಅವರ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹೊಸ ವರ್ಷದ ಪ್ರಾರಂಭದಂದೇ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಪುರಸ್ಕೃತರ ಬಾಳಿನಲ್ಲಿ ಹೊಸಸ್ಫೂರ್ತಿ,ಹೊಸ ಚೈತನ್ಯವು ಒದಗಿಬರಲಿದೆ.ಮಹಾಶೈವ ಧರ್ಮಪೀಠಕ್ಕೆ ಭೇಟಿ ನೀಡುವವರಿಗೆ ವಿಶ್ವೇಶ್ವರಾನುಗ್ರಹ ಪ್ರಶಸ್ತಿ ವಿಶೇಷವನ್ನಿತ್ತು ಸತ್ಕರಿಸುತ್ತಿದ್ದು ಯುಗಾದಿಯಂದು ಅದು ಮೊದಲಾಗುತ್ತದೆ.

ಹಿರಿಯ ಪತ್ರಕರ್ತರಾದ ರಘುನಾಥರೆಡ್ಡಿ ಮನ್ಸಲಾಪುರ,ಸಾಹಿತಿ ಸಿದ್ಧನಗೌಡ ಮಾಲಿಪಾಟೀಲ್,- ಸಾಹಿತಿ – ಸಂಘಟಕ ಬಸವರಾಜ ಸಿನ್ನೂರು,ಸಾಹಿತಿ- ಪತ್ರಕರ್ತ ಬಸವರಾಜ ಭೋಗಾವತಿ ,ಪ್ರಾಂಶುಪಾಲ ಈರಣ್ಣ ಮರ್ಲಟ್ಟಿ ,ಗ್ರಾಮೀಣ ಜನತೆಗೆ ವಿಶಿಷ್ಟ ಸೇವೆ ಸಲ್ಲಿಸಿದ ಪಿಡಿಒಗಳಾದ ಭೀಮರಾಯ ಬಿರಾದರ,ರಘುನಂದನ್ ಪೂಜಾರಿ ಅವರುಗಳಿಗೆ ಇಂದು ” ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ” ನೀಡಿ,ಸತ್ಕರಿಸಲಾಯಿತು.

ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾಗಿರುವ ಡಾ. ಎನ್ ಹೆಚ್ ಪೂಜಾರ್ ಅವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.