ಮಾನ್ವಿ: ‘ ಏಪ್ರಿಲ್ ಫೂಲ್’ ಬದಲಿಗೆ ‘ ಏಪ್ರಿಲ್ ಕೂಲ್’ ದಿನಾಚರಣೆ

ಮಾನ್ವಿ ಏ.1:  ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಪರಿಸರ, ಪ್ರಾಣಿ ಹಾಗೂ ಪಕ್ಷಿಗಳ ಸಂರಕ್ಷಣೆ ಕುರಿತು ಜನಜಾಗೃತಿಗಾಗಿ ಏಪ್ರಿಲ್ ಫೂಲ್ ಬದಲಿಗೆ ಏಪ್ರಿಲ್ ಕೂಲ್ ದಿನಾಚರಣೆಗೆ ಮುಂದಾಗಿರುವ ವನಸಿರಿ ಫೌಂಡೇಶನ್ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಹೇಳಿದರು.

ಶುಕ್ರವಾರ ಪಟ್ಟಣದ ಪಂಪಾ ಉದ್ಯಾನದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಏಪ್ರಿಲ್ ಕೂಲ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ ಮನುಷ್ಯರಂತೆ ಎಲ್ಲಾ ಪ್ರಾಣಿ, ಪಕ್ಷಿಗಳು ಸಹ ಭೂಮಿಯ ಮೇಲೆ ಜೀವಿಸುವ ಸಮಾನ ಹಕ್ಕು ಹೊಂದಿವೆ. ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿಗಾಗಿ ಆಹಾರ, ನೀರಿನ ವ್ಯವಸ್ಥೆ ಮಾಡುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಎಲ್ಲೆಡೆ ಕುಡಿಯವ ನೀರಿನ ಅರವಟಿಗೆಗಳ ವ್ಯವಸ್ಥೆ ಕಲ್ಪಿಸುತ್ತಿರುವುದು ಉತ್ತಮ ಕಾರ್ಯ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವನಸಿರಿ ಫೌಂಡೇಶನ್ ವತಿ ಯಿಂದ ತಯಾರಿಸಲಾದ ಮಣ್ಣಿನ ಅರವಟಿಗೆ (ಮಡಕೆ) ಹಾಗೂ ಸಸಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

ತಾ.ಪಂ ಮಾಜಿ ಅಧ್ಯಕ್ಷ ರಾಜಾವಸಂತ ನಾಯಕ, ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ, ಪುರಸಭೆ ಸದಸ್ಯ ರೇವಣಸಿದ್ದಯ್ಯ, ಪುರಸಭೆಯ ಮುಖ್ಯಾಧಿಕಾರಿ ಗಂಗಾಧರ, ವನಸಿರಿ ಫೌಂಡೇಶನ್ ತಾಲ್ಲೂಕು ಅಧ್ಯಕ್ಷ ಶರಣಬಸವ ಭೋವಿ ಹಿರೆಕೊಟ್ನೇಕಲ್, ಪ್ರಧಾನ ಕಾರ್ಯದರ್ಶಿ ವೀರೇಶ ಪಿರುಮಾಳ್, ಉಪಾಧ್ಯಕ್ಷ ಬಸವರಾಜ ನಸಲಾಪುರ, ಇತರ ಪದಾಧಿಕಾರಿಗಳಾದ ರಾಘವೇಂದ್ರ ದಾನಿ ಹಾಗೂ ರಾಘವೇಂದ್ರ ಬದಿ, ಪಿ.ತಿಪ್ಪಣ್ಣ ಬಾಗಲವಾಡ, ರವಿಗೌಡ ಖರಾಬದಿನ್ನಿ, ಪಿ.ಪರಮೇಶ, ರಮೇಶಬಾಬು ಯಾಳಗಿ, ಸಲಾವುದ್ದೀನ್ ಗುತ್ತೇದಾರ, ಡಾ.ಶರಣಬಸವ, ಮಾರೆಪ್ಪ ದೊಡ್ಡ ಮನಿ, ಹನುಮಂತ ಜಾನೇಕಲ್ ಇದ್ದರು.