. ಇಷ್ಟ- ಅನಿಷ್ಟಗಳನ್ನು ಸಮನಾಗಿ ಸ್ವೀಕರಿಸಬೇಕು ಎನ್ನುವ ಸಂದೇಶ ನೀಡುವ ಹಬ್ಬ ಯುಗಾದಿ
ಮುಕ್ಕಣ್ಣ ಕರಿಗಾರ
‘ ಯುಗಯುಗಾದಿ ಕಳೆದರೂ ಮರಳಿ ಬರುತಿದೆ ಯುಗಾದಿ’ ಎಂದು ವರಕವಿ ಬೇಂದ್ರೆ ಅವರು ಹಾಡಿದಂತೆ ಮತ್ತೆ ಬಂದಿದೆ ಶುಭಕೃತ್ ಸಂವತ್ಸರದ ಯುಗಾದಿ.ಯುಗಾದಿ ಭಾರತೀಯರೆಲ್ಲರಿಗೂ ಸಡಗರ ಸಂಭ್ರಮಗಳ ಹಬ್ಬ.ಭಾರತೀಯರ ಹೊಸವರ್ಷ ಎನ್ನುವುದು ಯುಗಾದಿಯ ಅಗ್ಗಳಿಕೆ.ಪ್ರಕೃತಿಯಲ್ಲಿ ಹೊಸತನವು ನಳನಳಿಸುತ್ತಿರುವುದರಿಂದ ನಿಜವಾದ ಅರ್ಥದಲ್ಲಿಯೂ ಯುಗಾದಿಯು ಹೊಸವರ್ಷವೆ.ಬೇವು- ಮಾವು,ಆಲ- ಅರಳೆಗಳಂತಹ ನೂರಾರು ಬಗೆಯ ಮರಗಳು ಚಿಗುರಿ ಮಘಮಘಿಸುವ,ವಸಂತನಾಗಮನದ ಕಾಲ ಯುಗಾದಿ.ಬರಿಯ ಮಾವು ಮಾತ್ರವಲ್ಲ ಬೇವಿನ ಹೂವುಗಳ ನರುಗಂಪನ್ನು ಆಸ್ವಾದಿಸಬಹುದಾದ ಹಬ್ಬ ಯುಗಾದಿ.ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಬೇವಿನ ಹೂವುಗಳಿಂದ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವ ವಿಶಿಷ್ಟಸುಗಂಧವು ಹೊರಸೂಸುವುದನ್ನು ಆಘ್ರಾಣಿಸಬಹುದು.
ಸೃಷ್ಟಿಕರ್ತ ಬ್ರಹ್ಮನು ಕಲಿಯುಗದ ಸೃಷ್ಟಿಯನ್ನು ಆರಂಭಿಸಿದ ದಿನವಾದ್ದರಿಂದ ಇದು ಯುಗಾದಿ.ಕಲಿಯುಗದ ಆರಂಭದ ದಿನವೇ ಯುಗಾದಿ.ರೈತರು ಸುಗ್ಗಿಯನ್ನು ಮುಗಿಸಿ ಹೊಸ ಮಳೆಗಾಗಿ ಕಾಯುತ್ತಿರುವ ಹಬ್ಬ.ಯುಗಾದಿಯಂದು ನಾಲ್ಕುಹನಿ ಮಳೆ ಬಂದರೆ ರೈತರಿಗೆ ಎಲ್ಲಿಲ್ಲದ ಸಂತೋಷ.ಹೊಸವರ್ಷ ಯುಗಾದಿಯಂದು ಹೊಸಮಳೆ ಬಂದರೆ ಆ ವರ್ಷ ಮಳೆ ಬೆಳೆ ಸಮೃದ್ಧಿಯಾಗಿರುತ್ತದೆ ಎನ್ನುವುದು ರೈತರ ನಂಬಿಕೆ.ಯುಗಾದಿಯಂದು ಕೃಷಿಕಾಯಕ ಪ್ರಾರಂಭಿಸುವ ರೈತರು ಆ ದಿನ ಸೂರ್ಯೋದಯವಾದೊಡನೆ ತಮ್ಮ ಹೊಲಗಳಲ್ಲಿ ನಾಲ್ಕುಸಾಲು ಕುಂಟೆ,ಮಡಕೆ ಹೊಡೆಯುವ ಮೂಲಕ ಕೃಷಿಕಾರ್ಯವನ್ನಾರಂಭಿಸುತ್ತಾರೆ.ವ್ಯಾಪಾರಿಗಳು ದೀಪಾವಳಿ ಹಬ್ಬದಂದು ಹೊಸ ಲೆಕ್ಕದ ಪುಸ್ತಕ ತೆರೆಯುವಂತೆ ಮಣ್ಣಿನ ಮಕ್ಕಳಾದ ರೈತರು ಯುಗಾದಿಯಂದು ಕೃಷಿಯನ್ನು ಪ್ರಾರಂಭಿಸಿ ತಮ್ಮ ಕೃಷಿಕಾಯಕ ಪ್ರಾರಂಭಿಸುತ್ತಾರೆ.
ಯುಗಾದಿಯಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ- ಅರ್ಚನೆಗಳು ನಡೆಯುತ್ತವೆ.ಶ್ರೀಶೈಲದ ಮಲ್ಲಿಕಾರ್ಜುನ ಶಿವನ ರಥೋತ್ಸವವೂ ಯುಗಾದಿಯಂದೇ.ನಮ್ಮ ಮಹಾಶೈವ ಧರ್ಮಪೀಠದ ಸ್ಥಾಪನೆಯೂ ಯುಗಾದಿಯಂದೇ ಆಗಿದ್ದು ಪ್ರತಿವರ್ಷ ಯುಗಾದಿಯಂದು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ‘ ಯುಗಾದಿ ಉತ್ಸವ’ ವನ್ನು ಆಚರಿಸಲಾಗುತ್ತದೆ.
ಜನರು ಮನೆಗಳಲ್ಲಿ ಹೋಳಿಗೆ- ಕಡಬುಗಳಂತಹ ಸಿಹಿ ಅಡುಗೆಗಳನ್ನು ಮಾಡಿ ಯುಗಾದಿಯನ್ನು ಆಚರಿಸುತ್ತಾರೆ.ಮನೆಮನೆಗಳಲ್ಲಿ ಬೇವು ಎನ್ನುವ ವಿಶಿಷ್ಟಬಗೆಯ ಸಿಹಿಪಾನೀಯವನ್ನು ಮಾಡಲಾಗುತ್ತದೆ.ಬೇವಿನಲ್ಲಿ ಮಾವು ಮತ್ತು ಬೇವಿನ ಚಿಗುರು,ಹೂವುಗಳನ್ನು ಹಾಕಲಾಗಿರುತ್ತದೆ.ಕಾಲಕ್ಕನುಸರಿಸಿ ಪ್ರಕೃತಿಯಲ್ಲಿ ಬೆಳೆದ ಬಗೆಬಗೆಯ ಹಣ್ಣು,ಮಿಡಿಕಾಯಿಗಳನ್ನು ಸೇರಿಸಿ ಮಾಡುವ ಬೇವನ್ನು ಸವಿಯುವುದೇ ಆನಂದ.ಬೇವು ಮತ್ತು ಮಾವುಗಳ ಮಿಶ್ರಣದ ಪಾನೀಯವಾದ ಬೇವು ಬದುಕಿನಲ್ಲಿ ಬಂದೊದಗುವ ಕಷ್ಟ- ಸುಖ,ಇಷ್ಟ- ಅನಿಷ್ಟಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎನ್ನುವ ಸಂದೇಶ ನೀಡುತ್ತದೆ.ಭಾರತೀಯರ ಹೊಸವರ್ಷದಂದೇ ಬೇವು ಮಾವುಗಳ ಮಿಶ್ರಣದ ಈ ಪಾನೀಯ ನೀಡುವ ಸಂದೇಶವು ವಿಶಿಷ್ಟವಾದುದು ಮತ್ತು ಮಹತ್ವವಾದುದು.ಹೊಸವರ್ಷದಲ್ಲಿ ಎಲ್ಲವೂ ಒಳ್ಳೆಯದೆ ಆಗಲಿ ಎಂದು ಬಯಸುವುದು ಸಹಜ.ಆದರೆ ಬದುಕು ನಾವು ಅಂದುಕೊಂಡಂತೆ ನಡೆಯುವುದಿಲ್ಲವಲ್ಲ ! ಪೂರ್ವನಿರ್ಧಾರಿತವಾದ ಬಾಳಿನಲ್ಲಿ ಯಾವಾಗ ಏನು ಬರಬೇಕೊ ಅದು ಬಂದೇ ಬರುತ್ತದೆ.ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.ಬಾರದೆ ಇರುವುದನ್ನು ತಂದುಕೊಡುವುದು ಯಾರಿಂದಲೂ ಸಾಧ್ಯವಿಲ್ಲ.ಆದ್ದರಿಂದ ಬರುವ ಒಳಿತು ಕೆಡುಕುಗಳೆರಡನ್ನೂ ಸಮಾಧಾನದಿಂದ,ಸಮಚಿತ್ತದಿಂದ ಸ್ವೀಕರಿಸಬೇಕು ಎನ್ನುತ್ತದೆ ಯುಗಾದಿಯ ಬೇವು.
ಯುಗಾದಿಯ ಅಂಗವಾಗಿ ಮನೆ ಮಠಗಳನ್ನು ತೊಳೆದು,ಸುಣ್ಣ ಬಣ್ಣಗಳಿಂದ ಸಿಂಗರಿಸಲಾಗುತ್ತದೆ.ಹಬ್ಬದಂದು ಮನೆ ಮಠಗಳನ್ನು ತಳಿರು- ತೋರಣಗಳಿಂದ ಅಲಂಕರಿಸಲಾಗುತ್ತದೆ.ಮನೆ ಮಂದಿಯೆಲ್ಲ ಹೊಸ ಉಡುಗೆ ತೊಡುಗೆಗಳನ್ನು ಧರಿಸುವ ಮೂಲಕ ಹೊಸತನವನ್ನು ಸಂಭ್ರಮಿಸುತ್ತಾರೆ.ಶುಭಕೃತ್ ಹೆಸರಿನ ಈ ಹೊಸ ಸಂವತ್ಸರವು ಭಾರತೀಯರಾದ ನಮ್ಮೆಲ್ಲರಲ್ಲಿ ಸದ್ಬುದ್ಧಿಯನ್ನು ಪ್ರೇರೇಪಿಸಲಿ.ಕೆಲವರ ಸ್ವಾರ್ಥ,ಅಸೂಯೆ ಮತ್ತು ಸಣ್ಣತನಗಳಿಂದ ಜನಸಾಮಾನ್ಯರ ನಡುವೆ ಬಿರುಕು,ಕಂದಕಗಳು ಏರ್ಪಟ್ಟಿವೆ.ಧರ್ಮದ ಹೆಸರಿನಲ್ಲಿ ಬಡವರ ಬದುಕುಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ದುರ್ಮತಿಗಳು.ಬಡವರು,ದುರ್ಬಲರು,ನಿರ್ಗತಿಕರು,ರೈತರು ಮತ್ತು ದಲಿತರಿಗೆ ಅವರ ಹೊಟ್ಟೆಹೊರೆಯುವುದೇ ಕಷ್ಟವಾಗಿರುವ ದಿನಗಳಲ್ಲಿ ಅವರ ಹೊಟ್ಟೆತುಂಬಿಸುವ ಕೆಲಸ ಮಾಡಬೇಕಾದವರು ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸಿ, ಖಾಲಿಹೊಟ್ಟೆಗಳಲ್ಲಿ ಆಕ್ರೋಶದ ಕಾವನ್ನು ಹೆಚ್ಚಿಸುತ್ತಿದ್ದಾರೆ.ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು ಸಂವಿಧಾನದ ಆಶಯದಂತೆ ನಡೆದುಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸಬೇಕಾದುದು ಅವರ ಕರ್ತವ್ಯ ಮತ್ತು ಸಾಂವಿಧಾನಿಕ ಬದ್ಧತೆ.ಶುಭಕೃತ್ ಸಂವತ್ಸರದಲ್ಲಿ ಪರಮಾತ್ಮನು ಎಲ್ಲರಲ್ಲಿ ಸದ್ಬುದ್ಧಿಯನ್ನು ಪ್ರೇರೇಪಿಸಲಿ.ಜನಸಾಮಾನ್ಯರಿಗೆ ಒಳಿತಾಗಲಿ.ಬಡವರ ಬದುಕುಗಳಲ್ಲಿ ಭರವಸೆ ಮೂಡಲಿ.ಆತಂಕಿತರ ಮುಖಗಳಲ್ಲಿ ಮಂದಹಾಸ ಮೂಡಲಿ.ಹೆಸರಿಗೆ ತಕ್ಕಹಾಗೆಯೇ ಶುಭಕೃತ್ ಸಂವತ್ಸರವು ಸರ್ವರಿಗೂ ಒಳಿತನ್ನು ಉಂಟು ಮಾಡಲಿ.ಮನುಕುಲಕ್ಕೆ ಮಂಗಳವಾಗಲಿ.ವಿಶ್ವದೆಲ್ಲೆಡೆ ಶಾಂತಿ ನೆಲೆಸಲಿ.ಭ್ರಾತೃತ್ವದ ಬಾಂಧವ್ಯವು ಚಿಗುರಿ ನಳನಳಿಸಲಿ.ಜಾತಿ,ಧರ್ಮಗಳ ಭಿನ್ನತೆಗಳ ನಡುವೆಯೇ ನಾವೆಲ್ಲರೂ ಒಂದೇ ದೇಶ ಭಾರತಕ್ಕೆ ಸೇರಿದವರು ಎನ್ನುವ ರಾಷ್ಟ್ರೀಯ ಪ್ರಜ್ಞೆಯು ಮೊಳೆತು ವರ್ಧಿಸಲಿ.

31.03.2022