ಮುಸ್ಲಿಂ ವಿದ್ಯಾರ್ಥಿನಿಯರು ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ಹಾಜರಾಗಬೇಕು – ಮುಕ್ಕಣ್ಣ ಕರಿಗಾರ

ಮುಸ್ಲಿಂ ವಿದ್ಯಾರ್ಥಿನಿಯರು ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ಹಾಜರಾಗಬೇಕು

          ಮುಕ್ಕಣ್ಣ ಕರಿಗಾರ

ನಾಳೆ ಅಂದರೆ ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿವೆ.ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಪರೀಕ್ಷೆಗಳಿಗೆ ಹಾಜರಾಗಬೇಕು.ಹಿಜಾಬ್ ವಿಷಯಕ್ಕಿಂತ ತಮ್ಮ ಬದುಕನ್ನು ರೂಪಿಸುವ ಶಿಕ್ಷಣ ಮತ್ತು ಅದರ ಅಂಗವಾಗಿ ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳತ್ತ ಮುಸ್ಲಿಂ ವಿದ್ಯಾರ್ಥಿನಿಯರು ಗಮನಹರಿಸಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಶಿಕ್ಷಣ ಇಲಾಖೆಗಳು ಈಗಾಗಲೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ಹಾಜರಾಗಲು ಸಮವಸ್ತ್ರ ಕಡ್ಡಾಯ ಎಂದು ಘೋಷಿಸಿವೆ.ಅಲ್ಲದೆ ಹಿಜಾಬ್ ವಿಷಯದ ವಿರುದ್ಧ ಕರ್ನಾಟಕ ಹೈಕೋರ್ಟ್ ತೀರ್ಪುನೀಡಿದೆ.ಕರ್ನಾಟಕ ಹೈಕೋರ್ಟಿನ ತೀರ್ಪಿನ ವಿರುದ್ಧದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಕ್ಷಣದ ವಿಚಾರಣೆಗೆ ನಿರಾಕರಿಸಿದೆಯಲ್ಲದೆ ಪರೀಕ್ಷೆಗಳಂತಹ ವಿಷಯದಲ್ಲಿ ಭಾವನಾತ್ಮಕತೆ ಪ್ರದರ್ಶನ ಬೇಡ ಎಂದು ಸೂಚಿಸಿದೆ.ಈ ಎಲ್ಲ ಸಂಗತಿಗಳನ್ನು ವಿಚಾರಿಸಿ ಮುಸ್ಲಿಂ ವಿದ್ಯಾರ್ಥಿನಿಯರು ನಾಳೆಯಿಂದ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ಹಾಜರಾಗಬೇಕು.

ಪರೀಕ್ಷೆಗೆ ಹಾಜರಾಗದಿದ್ದರೆ ಮುಸ್ಲಿಂ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ತೊಂದರೆಯೊದಗಲಿದೆ.ಓದಿ ಏನನ್ನಾದರೂ ಸಾಧಿಸಬಹುದು.ಈ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ,ಉನ್ನತಿ ಸಾಧಿಸಲು ಶಿಕ್ಷಣ ಒಂದೇ ಸಾಧನ.ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಳ್ಳುವತ್ತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಲಕ್ಷ್ಯ ಇರಲಿ.

ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು,ಸಮುದಾಯದ ರಾಜಕಾರಣಿಗಳು,ನೇತಾರರುಗಳು ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವಂತೆ ಅವರಿಗೆ ಬುದ್ಧಿವಾದ ಹೇಳಬೇಕು,ಸ್ಫೂರ್ತಿ ನೀಡಬೇಕು.ಸಂವಿಧಾನದತ್ತ ಅವಕಾಶಗಳನ್ನು ಪಡೆದು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಬೇಕಾದರೆ ಅವರು ಪರೀಕ್ಷೆಗಳನ್ನು ಬರೆಯಲೇಬೇಕು.ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ವೈದ್ಯರು ಆಗುವವರು ಇರಬಹುದು,ಇಂಜನಿಯರ್ ಗಳು ಆಗುವವರು ಇರಬಹುದು,ವಿಜ್ಞಾನಿಗಳು ಆಗುವವರು ಇರಬಹುದು,ಐ ಎ ಎಸ್,ಕೆ ಎ ಸ್ ಅಧಿಕಾರಿಗಳು ಆಗುವ ಅದೃಷ್ಟವಂತರು ಹಾಗೂ ಪ್ರತಿಭಾವಂತರೂ ಇರಬಹುದು.ಕೆಲವರು ರಾಜಕೀಯ ಮುತ್ಸದ್ಧಿಗಳು ಆಗಬಹುದು ಭವಿಷ್ಯದಲ್ಲಿ.ಮುಸ್ಲಿಂ ವಿದ್ಯಾರ್ಥಿನಿಯರ ಭವಿಷ್ಯ ಮತ್ತು ಅವರು ಬದುಕು ಕಟ್ಟಿಕೊಳ್ಳಲು ಆಸರೆಯಾಗುವ ಶಿಕ್ಷಣ ಪಡೆಯುವತ್ತ ಮುಸ್ಲಿಂ ಸಮುದಾಯವು ಆದ್ಯತೆ ನೀಡಬೇಕು.ಮುಸ್ಲಿಂ ಸಮುದಾಯದ ಪೋಷಕರುಗಳು ಅವರಿವರ ಮಾತುಗಳಿಗೆ ಸೊಪ್ಪು ಹಾಕದೆ ತಮ್ಮ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಆಲೋಚಿಸಿ,ಅವರನ್ನು‌ ಪರೀಕ್ಷೆಗೆ ಕಳುಹಿಸಬೇಕು.ಹಳೆಯ ತಲೆಮಾರಿನ ಮುಸ್ಲಿಂ ಸಮುದಾಯದ ಮುಖಂಡರುಗಳು ತಮ್ಮ ಮನೋಸ್ಥಿತಿಯನ್ನು ಬದಲಿಸಿಕೊಂಡು ಸಮುದಾಯದ ವಿದ್ಯಾರ್ಥಿನಿಯರುಗಳನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಬರೆಯಲು ಪ್ರೇರಣೆ ನೀಡಬೇಕು.ಓದಿ ಏನನ್ನಾದರೂ ಸಾಧಿಸುವೆ ಎನ್ನುವ ಛಲ ಇಟ್ಟುಕೊಂಡು ಪರೀಕ್ಷೆಗಳನ್ನು ಎದುರಿಸಬೇಕು ಮುಸ್ಲಿಂ ವಿದ್ಯಾರ್ಥಿನಿಯರು.ಹಿಜಾಬ್ ಕಾರಣದಿಂದ ಪರೀಕ್ಷೆಗಳಿಗೆ ಹಾಜರಾಗುವುದನ್ನು ಬಿಟ್ಟರೆ ನಿಮಗೇ ನಷ್ಟ.ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಪಾಠ ಪ್ರವಚನಗಳು ಪರಿಣಾಮಕಾರಿಯಾಗಿ ನಡೆದಿಲ್ಲ.ಅಂತಹದ್ದರಲ್ಲಿ ಈಗ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ತಪ್ಪಿಸಿಕೊಂಡರೆ ಅದು ವಿದ್ಯಾರ್ಥಿನಿಯರಿಗೇ ಆಗುವ ನಷ್ಟ.ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಬದಿಗೊತ್ತುತ್ತದೆ ಇಲ್ಲವೆ ರದ್ದು ಪಡಿಸುತ್ತದೆ ಎನ್ನುವ ಭರವಸೆಯೂ ಇಲ್ಲ.ಹಾಗೊಮ್ಮೆ ವಿಚಾರಣೆಗೆ ಎತ್ತಿಕೊಂಡರೂ ಸುಪ್ರೀಂಕೋರ್ಟಿನಲ್ಲಿ ಹಿಜಾಬ್ ಪ್ರಕರಣವು ಇತ್ಯರ್ಥಗೊಳ್ಳು ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ.ಅಲ್ಲಿಯವರಿಗೆ ಹೆಣ್ಣುಮಕ್ಕಳ ಬದುಕು- ಭವಿಷ್ಯಗಳು ಮರಟಿಹೋಗದಂತೆ,ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಆಶೆ- ಆಕಾಂಕ್ಷೆಗಳು ಬತ್ತದಂತೆ ಮತ್ತು ಅವರ ಕನಸುಗಳು ಕಮರದಂತೆ ಆಸಕ್ತಿ ವಹಿಸಬೇಕಾದದ್ದು ಮುಸ್ಲಿಂ ಸಮುದಾಯದ ಪ್ರಜ್ಞಾವಂತರೆಲ್ಲರ ಜವಾಬ್ದಾರಿ.

ಮುಕ್ಕಣ್ಣ ಕರಿಗಾರ

27.03.2022