ಕರ್ನಾಟಕ ಹೈಕೋರ್ಟ್ ಹಿಜಾಬ್ ವಿವಾದವನ್ನು ಪರಿಹರಿಸಿದೆ ‘ ಹಿಜಾಬ್ ಇಸ್ಲಾಂ ಧರ್ಮದ ಅತ್ಯಾವಶ್ಯಕ ಧಾರ್ಮಿಕ ಆಚರಣೆಯಲ್ಲ’ ಮತ್ತು ಶಾಲೆಗಳು ನಿಗದಿಪಡಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸಬೇಕು’ ಎಂದು ತೀರ್ಪು ನೀಡುವ ಮೂಲಕ.ತನ್ನ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಹಿಜಾಬ್ ವಿವಾದದ ಹಿಂದೆ ‘ ಕಾಣದ ಕೈಗಳು’ ಕೆಲಸ ಮಾಡಿವೆ ಎಂದೂ ಸ್ಪಷ್ಟವಾಗಿ ಹೇಳಿದೆ.ಇಸ್ಲಾಂ ಧರ್ಮದ ಹೆಸರಿನಲ್ಲಿ ಹೆಚ್ಚುತ್ತಿರುವ ಮತೀಯವಾದ ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕನ್ನು ಕಮರದಂತೆ ನೋಡಿಕೊಳ್ಳಬೇಕಾದದ್ದು ಮುಸ್ಲಿಂ ಸಮುದಾಯದ ಜವಾಬ್ದಾರಿ.ಸಂವಿಧಾನದ ಅನುಚ್ಛೇದಗಳು,ತತ್ತ್ವ- ಆಶಯಗಳಿಗೆ ಅನುಗುಣವಾಗಿಯೇ ಹೈಕೋರ್ಟ್ ವಿಸ್ತೃತಪೀಠ ತೀರ್ಪು ನೀಡಿದೆ.ಕೆಲವು ಮುಸ್ಲಿಂ ಮುಖಂಡರು ಇದನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಬಹುದು; ಆದರೆ ಗೆಲ್ಲುವ ಖಾತ್ರಿ ಇಲ್ಲ ಎನ್ನುವುದನ್ನು ಮನಗಾಣಬೇಕು.ನಮ್ಮ ಪ್ರಬುದ್ಧ ಸಂವಿಧಾನವು ಏಳು ದಶಕಗಳಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಂವಿಧಾನದ ಆಶಯದಂತೆಯೇ ಭಾರತದ ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಾರ್ಯನಿರ್ವಹಿಸುತ್ತ ಬಂದಿದ್ದರೂ ಕೆಲವರು ಸಂವಿಧಾನಕ್ಕಿಂತ ತಮ್ಮ ತಮ್ಮ ಧರ್ಮವೇ ಶ್ರೇಷ್ಠ ಎನ್ನುವ ತೆವಲಿಗೆ ಅಂಟಿಕೊಂಡಿದ್ದಾರೆ.ಯಾವುದೇ ಧರ್ಮ ಇರಲಿ, ಅದು ವೈಯಕ್ತಿಕ ಜೀವನದಲ್ಲಿ ಮಾತ್ರ;ಆದರೆ ಸಾರ್ವಜನಿಕ ಬದುಕಿನಲ್ಲಿ ಸಂವಿಧಾನದ ಆಶಯದಂತೆ ನಡೆದುಕೊಳ್ಳ ಬೇಕಾದುದು,ಸಂವಿಧಾನದ ಘನತೆಯನ್ನು ಎತ್ತಿಹಿಡಿಯ ಬೇಕಾದದ್ದು ಭಾರತೀಯರೆಲ್ಲರ ಕರ್ತವ್ಯ.
ಶಿಕ್ಷಣ ಸಂಸ್ಥೆಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸ್ಥಾಪಿಸಲ್ಪಟ್ಟು ಶಿಕ್ಷಣ ನೀಡುತ್ತಿವೆ.ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಬಡವ-ಶ್ರೀಮಂತ,ಮೇಲು- ಕೀಳು,ಆ ಧರ್ಮ- ಈ ಧರ್ಮ ಎನ್ನುವ ಸಂಕುಚಿತ ಭಾವನೆ ಮತ್ತು ಪ್ರತ್ಯೇಕತಾಭಾವವು ಉಂಟಾಗದಿರಲಿ ಎನ್ನುವ ಕಾರಣದಿಂದ ಶಾಲೆಗಳಲ್ಲಿ ಸಮವಸ್ತ್ರ ನಿಗದಿಪಡಿಸಲಾಗಿದೆ.ಈ ಹಿಂದೆ ಮುಸ್ಲಿಂ ವಿದ್ಯಾರ್ಥಿಗಳು,ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಸಮವಸ್ತ್ರ ಧರಿಸುತ್ತಿದ್ದರು.ಸರಕಾರಿ ಶಾಲೆಗಳಲ್ಲಿ ಕೂಡ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸಮವಸ್ತ್ರ ನಿಗದಿಪಡಿಸಲಾಗಿತ್ತು ಅದನ್ನು ಪಾಲಿಸುವುದು ಕಡ್ಡಾಯವಾಗಿತ್ತು.ನಾನು ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಪಡೆದದ್ದು ನಮ್ಮೂರು ಗಬ್ಬೂರಿನ ಸರಕಾರಿ ಶಾಲೆಗಳಲ್ಲಿ.ನಮಗೆ ಪ್ರಾಥಮಿಕ ಶಾಲೆಯಲ್ಲಿ ಬಿಳಿ ಅಂಗಿಮತ್ತು ನೀಲಿಬಣ್ಣದ ಚಡ್ಡಿ ಸಮವಸ್ತ್ರವಾಗಿದ್ದರೆ ಹೈಸ್ಕೂಲಿನಲ್ಲಿ ಬಿಳಿ ಅಂಗಿ ಮತ್ತು ಖಾಕಿ ಪ್ಯಾಂಟ್ ಯುನಿಫಾರಂ ಆಗಿತ್ತು.ನಾವೆಲ್ಲ ಯುನಿಫಾರಂ ಅನ್ನು ಕಡ್ಡಾಯವಾಗಿ ಧರಿಸುತ್ತಿದ್ದೆವು. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಕೂಡ ನನ್ನ ಸಹಪಾಠಿಗಳಾಗಿದ್ದರು.ಅವರೆಲ್ಲರೂ ಶಾಲೆಯ ಸಮವಸ್ತ್ರವನ್ನೇ ಧರಿಸುತ್ತಿದ್ದರು.ಹಿಜಾಬ್ ಸಮಸ್ಯೆ ಆಗ ಇರಲಿಲ್ಲ,ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಆಗ ಹಿಜಾಬ್ ಧರಿಸುತ್ತಿರಲಿಲ್ಲ ಕೂಡ.ನಮ್ಮೂರ ಸುತ್ತಮುತ್ತಲಿನ ಗ್ರಾಮಗಳ ಶೈಕ್ಷಣಿಕ ವಾತಾವರಣವೂ ಕೂಡ ಹೀಗೆಯೇ ಇತ್ತು.ಶಾಲೆಗಳು ಸರ್ವರ ಹಿತಬಯಸುವ ,ಸಮಾನತೆಯ ಕೇಂದ್ರಗಳಾಗಿದ್ದವು.ಹಿಂದೆ ಇರದೆ ಇದ್ದ ಸಮಸ್ಯೆ ಒಂದು ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡು ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಆಸೆ- ಆಕಾಂಕ್ಷೆಗಳಿಗೆ ಮಾರಕವಾಗಿ ಪರಿಣಮಿಸಿದೆ.
ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನ ಆರುಜನ ವಿದ್ಯಾರ್ಥಿನಿಯರು ಹಿಜಾಬ್ ವಿಷಯವನ್ನು ವಿವಾದಿತ ವಿಷಯವನ್ನಾಗಿ ಮಾಡಿ ಹೈಕೋರ್ಟ್ ಮೆಟ್ಟಿಲೇರಿದ್ದರಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಹಿತಕ್ಕಿಂತ ಬೇರೆಯದ ಆದ ಅಜೆಂಡಾ ಇಟ್ಟುಕೊಂಡಿರುವುದು ಈಗ ಸ್ಪಷ್ಟವಾಗಿದೆ.ವಿದ್ಯಾರ್ಥಿಗಳ ಎಳೆಮನಸ್ಸುಗಳಲ್ಲಿ ಧಾರ್ಮಿಕ ಭಾವನೆಯನ್ನು ಪ್ರಚೋದಿಸಿ ಅವರನ್ನು ಧರ್ಮದ ದಾಳಗಳನ್ನಾಗಿ ಪರಿವರ್ತಿಸಿಕೊಳ್ಳಬಾರದು.ಮುಸ್ಲಿಂ ಸಮುದಾಯದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಷ್ಟಾಗಿ ಪ್ರೋತ್ಸಾಹ ಇರಲಿಲ್ಲ.ಇತ್ತೀಚೆಗೆ ಹೆಚ್ಚುತ್ತಿರುವ ಸಂವಿಧಾನ ಪ್ರಜ್ಞೆ,ಸಮಾನತೆಯ ಪ್ರಜ್ಞೆ ಮತ್ತು ಅವಕಾಶಗಳ ಸಮಾನತೆಯ ಕಾರಣದಿಂದ ಮುಸ್ಲಿಂ ಮಹಿಳೆಯರು ಶಿಕ್ಷಣ ಪಡೆದು ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದು ಸ್ವಾವಲಂಬಿಗಳಾಗುತ್ತಿದ್ದಾರೆ.ಇದನ್ನು ಸಹಿಸದ ಮತಾಂಧ ಮನಸ್ಸುಗಳು ಮುಸ್ಲಿಂ ಮಹಿಳೆಯರ ಬದುಕುವ ಸಂವಿಧಾನದತ್ತ ಹಕ್ಕುಗಳೊಂದಿಗೆ ಚೆಲ್ಲಾಟವಾಡುತ್ತಿವೆ.ಮುಸ್ಲಿಂ ಮಹಿಳೆಯರ ಪ್ರಗತಿ ಮತ್ತು ಸಮಾನತೆಯ ಹಕ್ಕನ್ನು ಒಪ್ಪದ ಸ್ಥಾಪಿತ ಹಿತಾಸಕ್ತಿಗಳೇ ಹಿಜಾಬ್ ವಿವಾದದ ಹಿಂದೆ ಇವೆ.
ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠದ ಮುಂದೆ ಈ ವಿವಾದ ಬಂದಾಗ ಇದು ಧಾರ್ಮಿಕ ಸೂಕ್ಷ್ಮ ಮತ್ತು ಸಾಂವಿಧಾನಿಕ ಮಹತ್ವದ ಪ್ರಶ್ನೆಗಳನ್ನು ಒಳಗೊಂಡ ವಿಷಯವಾಗಿದ್ದರಿಂದ ಅದನ್ನು ವಿಸ್ತೃತಪೀಠದಲ್ಲಿ ವಿಚಾರಿಸಲು ಹೈಕೋರ್ಟ್ ಮುಖ್ಯನ್ಯಾಯಾಧೀಶರನ್ನು ಕೋರಿದ್ದರು.ಹೈಕೋರ್ಟ್ ಮುಖ್ಯನ್ಯಾಯಾಧೀಶರಾದ ಋತುರಾಜ್ ಅವಸ್ಥಿ ಅವರ ನೇತೃತ್ವದ ಪೀಠವೇ ಹಿಜಾಬ್ ವಿಷಯವನ್ನು ಕೈಗೆತ್ತಿಕೊಂಡಿದೆ ಮತ್ತು ಈ ವಿಸ್ತೃತಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ,ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರುಗಳಲ್ಲದೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನ್ಯಾಯಮುರ್ತಿ ಜೈಬುನ್ನಿಸಾ ಮೊಯಿಯುದ್ದೀನ್ ಖಾಜಿ ಅವರೂ ಇದ್ದರು ಎನ್ನುವುದನ್ನು ಗಮನಿಸಬೇಕು.ತ್ರಿಸದಸ್ಯ ನ್ಯಾಯಪೀಠವು ಸರ್ವಾನುಮತದ ತೀರ್ಪು ನೀಡಿರುವಾಗ ಅದರಲ್ಲಿ ಸಂಶಯ ಕಾಣುವುದು ಏನಿದೆ ? ಸುಪ್ರೀಂಕೋರ್ಟಿಗೆ ಪ್ರಕರಣವನ್ನು ಕೊಂಡೊಯ್ಯವ ಸಾಂವಿಧಾನಿಕ ಹಕ್ಕು ಇದೆಯಾದರೂ ಇದರಲ್ಲಿ ಧಾರ್ಮಿಕ ಪ್ರತಿಷ್ಠೆಯೇ ಮುಖ್ಯವಾಗಿದೆಯೇ ಹೊರತು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಕಾಳಜಿ ಇಲ್ಲ.
ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಋತುರಾಜ್ಅವಸ್ಥಿ ಅವರ ನೇತೃತ್ವದ ನ್ಯಾಯಪೀಠವು ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುನ್ನು ನೀಡುವ ಭಾರತದ ಸಂವಿಧಾನದ ಅನುಚ್ಛೇದ 25 ರನ್ನು ಅರ್ಥೈಸಿ ಮತ್ತು ಕುರಾನಿನ ಆಧಾರದಲ್ಲಿ ತೀರ್ಪು ನೀಡಿದೆ.ಸುಪ್ರೀಂಕೋರ್ಟ್ ಪ್ರಮಾಣ ಎಂದು ಸ್ವೀಕರಿಸಿದ ಅಬ್ದುಲ್ಲಾ ಯೂಸೂಫ್ ಅಲಿ ಅವರು ಇಂಗಿಷಿಗೆ ಭಾಷಾಂತರ ಮಾಡಿದ ಕುರಾನಿನ ಪ್ರತಿಯನ್ನೇ ಇಟ್ಟುಕೊಂಡು ಆ ಪ್ರತಿಯಲ್ಲಿ ಹಿಜಾಬ್ ಪ್ರಸ್ತಾಪ ಇಲ್ಲದಿರುವುದನ್ನು ಮನಗಂಡೇ ‘ ಹಿಜಾಬ್ ಅತ್ಯವಶ್ಯಕ ಧಾರ್ಮಿಕ ಆಚರಣೆಯಲ್ಲ’ ಎಂದು ತೀರ್ಪು ನೀಡಲಾಗಿದೆ ಎನ್ನುವುದು ಗಮನಾರ್ಹ.ಕುರಾನಿನ ಬೇರೆ ಬೇರೆ ಪ್ರತಿಗಳಿರಬಹುದು.ಆದರೆ ಸುಪ್ರೀಂಕೋರ್ಟ್ ಪ್ರಮಾಣವೆಂದು ಸ್ವೀಕರಿಸಿದ ಕೃತಿಯೇ ಅಧಿಕೃತವಲ್ಲವೆ ? ಉಡುಪಿಯ ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸುವುದು ತಮ್ಮ ಮೂಲಭೂತ ಹಕ್ಕು ಎಂದು ವಾದಿಸುತ್ತಿದ್ದಾರೆಯೇ ಹೊರತು ರಾಜ್ಯದ ಇತರೆಡೆಗಳ ಮುಸ್ಲಿಂ ಸಮುದಾಯ ವಿದ್ಯಾರ್ಥಿನಿಯರು ಈ ಬಗ್ಗೆ ಆಸಕ್ತರಿಲ್ಲ ಎನ್ನುವುದನ್ನು ಗಮನಿಸಬೇಕು.ಆದ್ದರಿಂದ ಮುಸ್ಲಿಂ ಸಮುದಾಯದವರು ಧಾರ್ಮಿಕ ಮತಾಂಧತೆಯನ್ನು ಪ್ರಚೋದಿಸುವ ವ್ಯಕ್ತಿ,ಸಂಘಟನೆಗಳ ಮಾತುಗಳಿಗೆ ತಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಬಲಿಕೊಡದೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟಿನ ಆದೇಶವನ್ನು ಪಾಲಿಸಿ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗಳಿಗೆ ಕಳಿಸಬೇಕು.ಇಲ್ಲಿ ಯಾರು ಗೆದ್ದರು,ಯಾರು ಸೋತರು ಎನ್ನುವ ಪ್ರಶ್ನೆ ಮುಖ್ಯವಲ್ಲ; ಬದಲಿಗೆ ಸಾಮಾಜಿಕವಾಗಿ,ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗುವತ್ತ ಗಮನಹರಿಸುವುದು ಆದ್ಯತೆಯಾಗಬೇಕು.ಧರ್ಮಾಂಧತೆಯ ವಿಷಬೀಜ ಬಿತ್ತುವವರು ಮುಸ್ಲಿಂಸಮುದಾಯದ ನಿಜಹಿತೈಷಿಗಳಲ್ಲ ಎನ್ನುವುದು ಮುಸ್ಲಿಂ ಸಮುದಾಯ ಮನಗಾಣಬೇಕು.ರಾಜಕೀಯ ಕಾರಣಗಳಿಂದ ಮುಸ್ಲಿಂ ಸಮುದಾಯದಲ್ಲಿ ಅಪನಂಬಿಕೆ ಬಿತ್ತುವವರು ಕೂಡ ಹೈಕೋರ್ಟ್ ತೀರ್ಪಿನಂತೆ ಮುಸ್ಲಿಂ ವಿದ್ಯಾರ್ಥಿನಿಯರ ಭವಿಷ್ಯ ರೂಪಿಸುವತ್ತ ಗಮನಹರಿಸಬೇಕು.

16.03.2022