ಸಂವಿಧಾನದಲ್ಲಿ ಮನುಷ್ಯತ್ವ ಇದೆ,ಮನುಷ್ಯ ಧರ್ಮ ಇದೆ – ಮುಕ್ಕಣ್ಣ ಕರಿಗಾರ

‘ ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥ’ ಎನ್ನುವ ಮಾತನ್ನು ನಾನು ಆಗಾಗ ಹೇಳುತ್ತಿರುತ್ತೇನೆ.ಕೊಪ್ಪಳದ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಕವಿಗಳೂ ಸಹೃದಯರು ಆಗಿರುವ ಡಾ.ಮಹಾಂತೇಶ ಮಲ್ಲನಗೌಡರು ನಾನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷನಾಗಿಯೂ ಸಂವಿಧಾನವನ್ನು ಎತ್ತಿಹಿಡಿಯುತ್ತಿರುವುದಕ್ಕೆ ಪ್ರಶಂಸಿಸಿ, ಅಭಿಪ್ರಾಯಿಸಿದ್ದಾರೆ.ನಾನು ಮಾತ್ರವಲ್ಲ, ಯಾವುದೇ ಧರ್ಮದ ಯಾವುದೇ ಧಾರ್ಮಿಕ ಮುಖಂಡರು ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ನಡೆದುಕೊಳ್ಳಬೇಕು- ಭಾರತದ ಸಂವಿಧಾನವು ಎಲ್ಲರಿಗೂ ಅನ್ವಯವಾಗುತ್ತದೆ ಮತ್ತು ಭಾರತದ ಸಂವಿಧಾನದಂತೆಯೇ ನಮ್ಮ‌ಕೋರ್ಟ್ ಗಳು ಸಾಮಾನ್ಯರು,ಗಣ್ಯಾತಿಗಣ್ಯರು ಮತ್ತು ಧಾರ್ಮಿಕ ಮುಖಂಡರು ಎಂದು ಪ್ರತ್ಯೇಕಿಸಿ ನೋಡದೆ ಎಲ್ಲರನ್ನೂ ಸಮನಾಗಿ ಕಾಣುತ್ತಿವೆ ಹಾಗೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎನ್ನುವುದನ್ನು ಪ್ರತಿಪಾದಿಸುತ್ತಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು

ಭಾರತವು ಒಂದು ದೇಶವಾಗಿ ಸಾವಿರಾರು ವರ್ಷಗಳ ಅವಿಚ್ಛಿನ್ನ ಸಂಸ್ಕೃತಿ,ಪರಂಪರೆಗಳನ್ನು ಹೊಂದಿರಬಹುದು.ಆದರೆ ನಾವು ಬದುಕುತ್ತಿರುವುದು ವರ್ತಮಾನದಲ್ಲಿ.ಗತಕಾಲದ ವೈಭವ ಹೇಳಿಕೊಂಡು ಬದುಕಲಾಗದು.ಅಲ್ಲದೆ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯಾ ಹೋರಾಟದ ದಿನಗಳಿಂದಲೇ ನಮ್ಮಲ್ಲಿ’ ರಾಷ್ಟ್ರೀಯ ಪ್ರಜ್ಞೆ’ಯ ಉಗಮ ಮತ್ತು ವಿಕಾಸವಾದದ್ದು.ಅದಕ್ಕಿಂತ ಮುಂಚೆ ರಾಷ್ಟ್ರೀಯತೆಯ ಭಾವನೆ ಇರಲಿಲ್ಲ.ವೇದದಲ್ಲಿ ರಾಷ್ಟ್ರದ ಕಲ್ಪನೆ ಇದೆ ಎಂದು ಕೆಲವರು ವಾದಿಸಬಹುದು; ಆದರೆ ವೇದದ ರಾಷ್ಟ್ರದ ಕಲ್ಪನೆ ಒಂದೆಡೆ ವಾಸಿಸುತ್ತಿರುವ ಜನಪದಗಳು ಮತ್ತು ಜನಾಂಗಗಳಿಗೆ ಮಾತ್ರ ಸೀಮಿತವಾಗಿತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ಋಗ್ವೇದದಲ್ಲಿ ಬರುವ ದಶಮಹಾ ಜನಪದಗಳು,ಇಂದ್ರನು ವೃತ್ರ ಸೇರಿದಂತೆ ಅಸುರರ ವಿರುದ್ಧ ಯುದ್ಧ ಸಾರುವುದು,ರಕ್ಕಸರ ಪುರಗಳನ್ನು ಧ್ವಂಸ ಮಾಡುವುದು ಇವೆಲ್ಲವೂ ಪ್ರತಿ ಜನಾಂಗವು ವಾಸಿಸುತ್ತಿದ್ದ ಭೂಪ್ರದೇಶವೇ ಒಂದು ರಾಷ್ಟ್ರ ಎಂದು ಪರಿಗಣಿಸಲ್ಪಟ್ಟಿತ್ತು ಎನ್ನುವುದಕ್ಕೆ ನಿದರ್ಶನ.ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂಗಳಂತೆಯೇ ಅಸಂಖ್ಯಾತ ಮುಸ್ಲಿಮರು ಹೋರಾಡಿ,ಪ್ರಾಣ ತೆತ್ತಿದ್ದಾರೆ ಎನ್ನುವುದನ್ನು ಮರೆಯಬಾರದು.’ಸರ್ವಧರ್ಮ ಸಮನ್ವಯ’ ವೇದದಲ್ಲಿಯೇ ಪ್ರತಿಪಾದಿಸಲ್ಪಟ್ಟ ಮೌಲ್ಯವಾಗಿದ್ದರಿಂದ ಭಾರತದಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಭಾರತೀಯರು ಎಂದೇ ನೋಡಬೇಕು.

ಡಾ.ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿಯೂ ಸಂವಿಧಾನದ ರಚನೆಯಲ್ಲಿ ರಾಗ ದ್ವೇಷ ಮುಕ್ತಭಾವನೆಯಿಂದ,ಭಾರತೀಯರೆಲ್ಲರನ್ನು ಲಕ್ಷ್ಯದಲ್ಲಿಟ್ಟುಕೊಂಡು ಸಂವಿಧಾನ ಬರೆದಿದ್ದಾರೆ.ನಮ್ಮ ಸಂವಿಧಾನವು ಭಾರತೀಯರೆಲ್ಲರನ್ನು ಸಮಾನವಾಗಿ ಕಾಣುತ್ತದೆ.ಸಂವಿಧಾನದ ಪೀಠಿಕೆಯು ” ಭಾರತದ ಪ್ರಜೆಗಳಾದ ನಾವು” ಎನ್ನುವ ಪದಗಳಿಂದಲೇ ಪ್ರಾರಂಭವಾಗುತ್ತದೆ.ಭಾರತೀಯ ಪ್ರಜೆಗಳಾದ ನಾವೆಲ್ಲರೂ ನಮ್ಮ ಸಂವಿಧಾನವನ್ನು ಒಪ್ಪಿಕೊಂಡು,ಸಂವಿಧಾನಕ್ಕೆ ಸಮರ್ಪಿಸಿಕೊಂಡಿದ್ದೇವೆ.” ಭಾರತದ ಪ್ರಜೆಗಳಾದ ನಾವು” ಎಂದರೆ ಈ ದೇಶವಾಸಿಗಳಾದ ಸಮಸ್ತಜನತೆ.ಈ ಸಮಸ್ತರಲ್ಲಿ ಜನಸಾಮಾನ್ಯರು ಬರುತ್ತಾರೆ,ಗಣ್ಯಾತಿಗಣ್ಯರೂ ಬರುತ್ತಾರೆ; ನಾಸ್ತಿಕರು ಬರುತ್ತಾರೆ,ಧಾರ್ಮಿಕ ಮುಖಂಡರೂ ಸೇರುತ್ತಾರೆ.

ಮತ,ಧರ್ಮಗಳ ನಂಬಿಕೆ,ನಿಷ್ಠೆಗಳು ವೈಯಕ್ತಿಕ ಬದುಕಿನಲ್ಲಿ,ಮನೆಗಳಲ್ಲಿ ಆಚರಿಸಬಹುದಾದ ವಿಷಯಗಳು.ಆದರೆ ಸಾರ್ವಜನಿಕ ಬದುಕಿನಲ್ಲಿ ಈ ದೇಶವಾಸಿಗಳೆಲ್ಲರೂ ಅವರು ಯಾವುದೇ ಜಾತಿ,ಜನಾಂಗ,ಧರ್ಮಗಳಿಗೆ ಸೇರಿದವರಾಗಿರಲಿ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಬೇಕು.ನಮ್ಮ ನ್ಯಾಯಾಲಯಗಳು ಧಾರ್ಮಿಕ ವಿಷಯಗಳಲ್ಲಿ ಆಯಾ ಧರ್ಮಗಳ ಧಾರ್ಮಿಕ ಗ್ರಂಥಗಳನ್ನು ಪರಾಮರ್ಶಿಸಿದರೂ ಅಂತಿಮವಾಗಿ ಸಂವಿಧಾನದ ಅನುಚ್ಛೇದಗಳಂತೆ ತೀರ್ಪು ನೀಡುತ್ತವೆ.ಸ್ವಾತಂತ್ರ್ಯ,ಸಮಾನತೆ,ಸಹಿಷ್ಣುತೆ,ಉನ್ನತಿಯ ಸಮಾನ ಅವಕಾಶಗಳಂತಹ ಮಾನವೀಯ ಮೌಲ್ಯಗಳು ನಮ್ಮ ಸಂವಿಧಾನವು ಕೊಡಮಾಡಿದ ಉದಾತ್ತ ಮೌಲ್ಯಗಳು.ಧರ್ಮ ಒಂದು ತನ್ನ ಅನುಯಾಯಿಗಳ ಹಿತಬಯಸಿ,ಅದಕ್ಕೆ ಪೂರಕವಾದ ನೀತಿ- ನಿರ್ಬಂಧಗಳನ್ನು ವಿಧಿಸಬಹುದು ತನ್ನ ಧಾರ್ಮಿಕ ಗ್ರಂಥಗಳಲ್ಲಿ.ಆ ಧರ್ಮದ ಅನುಯಾಯಿಗಳಿಗೆ ಆ ನೀತಿ- ನಿರ್ಬಂಧಗಳು ಅನ್ವಯಿಸುತ್ತವೆಯೇ ಹೊರತು ಇತರರಿಗೆ ಅಲ್ಲ.ಒಂದು ಧರ್ಮದಲ್ಲಿ ಮೌಲ್ಯವಾಗಿ ಕಂಡದ್ದು ಇನ್ನೊಂದು ಧರ್ಮದಲ್ಲಿ ಅಪಮೌಲ್ಯವಾಗಿರಬಹುದು.ಆದರೆ ಸಂವಿಧಾನದ ವಿಷಯ ಹಾಗಲ್ಲ.ಸಂವಿಧಾನವು ಎಲ್ಲರಿಗೂ ಅನ್ವಯವಾಗುತ್ತದೆ,ಎಲ್ಲರ ಕಲ್ಯಾಣವನ್ನು ಬಯಸುತ್ತದೆ.ಸಮಾಜ,ರಾಷ್ಟ್ರದ ಹಿತಕ್ಕೆ ಧಕ್ಕೆ ತಾರದಂತೆ ವ್ಯಕ್ತಿಗಳು ಉನ್ನತಿಯನ್ನು ಹೊಂದುವ ವ್ಯಕ್ತಿಸ್ವಾತಂತ್ರ್ಯವನ್ನು ನೀಡಿದೆ ನಮ್ಮ ಸಂವಿಧಾನ.ಈ ದೇಶವಾಸಿಗಳು ತಮ್ಮ ನಂಬಿಕೆಯ ಮತ,ಧರ್ಮಗಳನ್ನು ಅನುಸರಿಸುವ ಧಾರ್ಮಿಕ ಸ್ವಾತಂತ್ರ್ಯವನ್ನು ಸಹ ನೀಡಿದೆ.

ಭಾರತದ ಸಂವಿಧಾನವು ನಮ್ಮ ರಾಷ್ಟ್ರವನ್ನು ‘ ಜಾತ್ಯಾತೀತ ರಾಷ್ಟ್ರ’ ( secular state)ಎಂದು ಮಾನ್ಯ ಮಾಡಿದೆಯೇ ಹೊರತು ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮ ಎಂದು ಪರಿಗಣಿಸಿಲ್ಲ.’ಅಖಂಡತೆಯಲ್ಲಿ ಏಕತೆ’ಯು ನಮ್ಮ ರಾಷ್ಟ್ರೀಯತೆಯ ಲಕ್ಷಣವಾಗಿದ್ದರಿಂದ ನಮ್ಮ ಸಂವಿಧಾನವು ಅದನ್ನು ಎತ್ತಿಹಿಡಿದಿದೆ.ಹಿಂದೂಗಳು ವೇದ,ಉಪನಿಷತ್ತುಗಳು,ಪುರಾಣಗಳು,ಭಗವದ್ಗೀತೆ,ಸ್ಮೃತಿಗಳನ್ನು ತಮ್ಮ ಧಾರ್ಮಿಕ ಗ್ರಂಥಗಳೆಂದು ಪರಿಗಣಿಸಬಹುದು.ಮುಸ್ಲಿಮರು ಕುರಾನ್ ತಮ್ಮ ಧಾರ್ಮಿಕ ಗ್ರಂಥವೆಂದು,ಷರಿಯಾ ತಮ್ಮ ಕಾನೂನು ಎಂದು ಒಪ್ಪಿ,ಮತಧರ್ಮದ ಆಚರಣೆಯಲ್ಲಿ‌ಪಾಲಿಸಬಹುದು.ಕ್ರಿಶ್ಚಿಯನ್ನರು ಬೈಬಲ್ ನ ಆಣತಿ ಪಾಲಿಸಬಹುದು,ಸಿಖ್ಖರು ಗ್ರಂಥಸಾಹೇಬದ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬಹುದು.ಆ ಧಾರ್ಮಿಕ ಸ್ವಾತಂತ್ರ್ಯ ಅವರಿಗೆ ಇದೆ.ಆದರೆ ಇದು ಸಾಮಾಜಿಕ ಇಲ್ಲವೆ ವೈಯಕ್ತಿಕ ಬದುಕುಗಳಿಗೆ ಮಾತ್ರ ಸೀಮಿತವಾಗಿರುತ್ತದೆ,ಸಾರ್ವಜನಿಕ ಬದುಕಿನಲ್ಲಿ ಅವುಗಳನ್ನು ಅನ್ವಯಿಸಲಾಗದು.ಸಾರ್ವಜನಿಕ ಜೀವನದಲ್ಲಿ ಸಂವಿಧಾನವೇ ಪರಮಾದರ್ಶ ಮತ್ತು ಪ್ರಮಾಣ.ಹಿಂದೂಗಳಿಗೆ ಸೂರ್ಯನಮಸ್ಕಾರವು ಶ್ರೇಷ್ಠ ಎನ್ನಿಸಬಹುದು ಆದರೆ ಅದನ್ನೇ ರಾಷ್ಟ್ರೀಯ ಆದರ್ಶ ಎನ್ನಲಾಗದು.ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಅವರದೆ ಆದ ನಂಬಿಕೆ,ಆದರ್ಶ,ಆಚರಣೆಗಳಿವೆ.ನಮ್ಮ ನಂಬಿಕೆ ಇನ್ನೊಬ್ಬರ ನಂಬಿಕೆಗಳ ಮೇಲಿನ ಆಕ್ರಮಣವಾಗಬಾರದು ಎನ್ನುವ ವಿವೇಕ ಎಲ್ಲರಲ್ಲೂ ಇರಬೇಕು.ಒಬ್ಬರಿಗೆ ಧರ್ಮಮಾರ್ಗವೇ ಶ್ರೇಷ್ಠವೆನ್ನಿಸಿದರೆ ಇನ್ನೊಬ್ಬರಿಗೆ ಧರ್ಮದಿಂದ ಸುಖ ಇಲ್ಲ ಎನ್ನಿಸಬಹುದು.ಯೋಗ ಮತ್ತು ತ್ಯಾಗಗಳು ಕೆಲವರಿಗೆ ಆದರ್ಶವಾಗಿರಬಹುದು ಆದರೆ ಭೋಗಜೀವನವನ್ನು ಹೀಗಳೆಯಲಾಗದು.ಎಲ್ಲ ವೈರುಧ್ಯಗಳ ನಡುವೆಯೂ ನಾವೆಲ್ಲರೂ ಒಂದು ದೇಶ ಭಾರತಕ್ಕೆ ಸೇರಿದವರು ಎನ್ನುವ ಭಾವನೆ ಇರಬೇಕು.ಯುದ್ಧ ಮತ್ತಿತರ ಆಪತ್ತಿನ ಸಂದರ್ಭಗಳಲ್ಲಿ ನಾವೆಲ್ಲರೂ ನಮ್ಮ ಜಾತಿ,ಧರ್ಮಗಳ ಭೇದಗಳನ್ನು ಬದಿಗೊತ್ತಿ ಒಂದಾಗಿದ್ದೇವೆ.ರಾಷ್ಟ್ರದ ಸಾರ್ವಭೌಮತೆ ಮತ್ತು ಅಖಂಡತೆಯ ಪ್ರಶ್ನೆ ಬಂದಾಗ ಅವುಗಳನ್ನು ಎತ್ತಿಹಿಡಿಯಬೇಕಾದದ್ದು ಭಾರತೀಯರೆಲ್ಲರ ಕರ್ತವ್ಯ ಎಂದು ವಿಧಿಸಿದೆ ಸಂವಿಧಾನ.

ವಿವಿಧ ಮತ,ಧರ್ಮಗಳ ಆಚರಣೆಯಲ್ಲಿ ತರ ತಮಗಳಿರಬಹುದು ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಯ ಕಳಂಕ‌ ಇರುವಂತೆ.ಹಿಂದೂಗಳ ಮೇಲ್ವರ್ಗದ ಜನರ ಆಚರಣೆಯಲ್ಲಿ ಪಂಕ್ತಿಭೇದ,ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯಗಳಲ್ಲಿ ಭೇದ ಭಾವನೆ ಇದೆ.ಆದರೆ ಸಾಂವಿಧಾನಕವಾಗಿ ಅದಕ್ಕೆ ಅವಕಾಶವಿಲ್ಲ.ಬ್ರಾಹ್ಮಣರಿಗೆ ಇರುವ ಧಾರ್ಮಿಕ ಸ್ವಾತಂತ್ರ್ಯವೇ ದಲಿತರಿಗೂ ಇದೆ ಎನ್ನುವುದೇ ನಮ್ಮ ಸಂವಿಧಾನದ ವಿಶೇಷ.ವ್ಯಕ್ತಿಗಳಲ್ಲಿ ಧಾರ್ಮಿಕವೋ ಆಧ್ಯಾತ್ಮಿಕವೋ ಆದ ಕಾರಣದಿಂದ ಕೆಲವರು ವಿಶೇಷರು ಎಂದು ಗುರುತಿಸಿಕೊಂಡಿರಬಹುದು.ಈ ವಿಶೇಷತೆಗೆ ಯಾವುದೇ ಮಾನದಂಡ ಇಲ್ಲ ಎಂದೇ ನಮ್ಮ ಸಂವಿಧಾನವು ಯಾರನ್ನೂ ವಿಶೇಷ ವ್ಯಕ್ತಿಗಳು ಎಂದು ಪರಿಗಣಿಸಿಲ್ಲ.ಕೆಲವರು ದೈವಾಂಶ ಸಂಭೂತರು,ಅವತಾರಿಗಳು ಇರಬಹುದು ಆದರೆ ಸಂವಿಧಾನದ ಮುಂದೆ ಎಲ್ಲರೂ ಸಮಾನರು.ಸಂವಿಧಾನವು ಮನುಷ್ಯರ ಬದುಕಿನ ಕಲ್ಯಾಣವನ್ನು ಗುರಿಯಾಗಿಸಿಕೊಂಡಿದೆ ಮತ್ತು ವಾಸ್ತವಿಕ ನೆಲೆಯಲ್ಲಿ ಭಾರತೀಯರ ಪ್ರಗತಿ,ಅಭ್ಯುದಯಗಳನ್ನು ಸಾಧಿಸಬಯಸುತ್ತದೆ.ಧಾರ್ಮಿಕ ಮುಖಂಡ ಎಂದು ಭಕ್ತರ ಮೇಲೆ ಕೈಮಾಡಲು ಅವಕಾಶವಿಲ್ಲ.ಭಕ್ತರ ಬದುಕು ಉತ್ತಮವಾಗಲು ಧಾರ್ಮಿಕ ವ್ಯಕ್ತಿಗಳು ಪ್ರಯತ್ನಿಸಬಹುದೇ ಹೊರತು ಇದನ್ನು ಆಚರಿಸಲೇಬೇಕು ಎಂದು ಒತ್ತಾಯಪಡಿಸುವಂತಿಲ್ಲ.ಎಲ್ಲರೂ ಸಮಾನರು ಎಂದು ಸಂವಿಧಾನವು ಪ್ರತಿಪಾದಿಸಿದೆ.ಸತಿಪದ್ಧತಿ,ವರದಕ್ಷಿಣೆ,ಅಸ್ಪೃಶ್ಯತೆ,ಅಸಮಾನತೆಗಳಂತಹ ಸಾಮಾಜಿಕ ಅನಿಷ್ಟಗಳಿಗೆ ಸಂವಿಧಾನವು ಅವಕಾಶ ನೀಡಿಲ್ಲ ಮತ್ತು ಅವುಗಳ ಆಚರಣೆಯು ಶಿಕ್ಷಾರ್ಹ ಅಪರಾಧ ಎಂದು ಸಾರಿದೆ.ದೇಶವಾಸಿಗಳ ಬದುಕನ್ನು ಉತ್ತಮ ಪಡಿಸಲು ಬೇಕಾದ ಎಲ್ಲ ಹಕ್ಕು ಅವಕಾಶಗಳು ಸಂವಿಧಾನದಲ್ಲಿವೆ.ವ್ಯಕ್ತಿಪೂಜೆ,ಮೂಢನಂಬಿಕೆಗಳು ಜನಸಾಮಾನ್ಯರ ಬದುಕುವ ಹಕ್ಕುಗಳೊಂದಿಗೆ ಚೆಲ್ಲಾಟವಾಡುತ್ತಿರುವುದರಿಂದ ಸಂವಿಧಾನದಲ್ಲಿ ವ್ಯಕ್ತಿಗೌರವಕ್ಕೆ ಧಕ್ಕೆತರುವ ಎಲ್ಲವನ್ನೂ ನಿಷೇಧಿಸಲಾಗಿದೆ.ಸಂವಿಧಾನವು ಮನುಷ್ಯರನ್ನು ಮನುಷ್ಯರನ್ನಾಗಿ ಮಾತ್ರ ನೋಡುತ್ತದೆ ಮತ್ತು ಮನುಷ್ಯತ್ವದ ಮಾರ್ಗದ ಮೂಲಕವೇ ಭಾರತೀಯರ ಕಲ್ಯಾಣ ಸಾಧಿಸಬಯಸುತ್ತದೆ.ನಮ್ಮಸಂವಿಧಾನವು ” ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ” ಎನ್ನುವ ಬಸವಣ್ಣನವರ ಆದರ್ಶದ ವಾಸ್ತವಿಕ ಬದುಕಿಗೆ ಮಹತ್ವ ನೀಡಿತ್ತದೆಯೇ ಹೊರತು ಕಪೋಲಕಲ್ಪಿತ,ಅವಾಸ್ತವಿಕ,ಸಾರ್ವತ್ರಿಕವಲ್ಲದ,ಪ್ರಮಾಣೀಕರಿಸದ ಸಂಗತಿಗಳಿಗೆ ಬೆಲೆ ನೀಡದು ಎನ್ನುವುದು ಅದರ ವೈಶಿಷ್ಟ್ಯ.

ಮುಕ್ಕಣ್ಣ ಕರಿಗಾರ

‌ 16.03.2022