ಕಲ್ಯಾಣ ಕಾವ್ಯ : ಮೂರ್ಕಣ್ಣ ಬಸವ – ಮುಕ್ಕಣ್ಣ ಕರಿಗಾರ

ಮೂರ್ಕಣ್ಣ ಬಸವ

ಮುಕ್ಕಣ್ಣ ಕರಿಗಾರ

ಈ ಬಸವ
ಶಿವ ವಿಶ್ವೇಶ್ವರನ ವಾಹನ
ಕಣ್ಣುಗುಡ್ಡೆಗಳು ಮೂರು ಉಳ್ಳವನಾದ್ದರಿಂದ
ಮೂರ್ಕಣ್ಣ ಬಸವನೀತ.
ಎಳೆಕರುವಾಗಿದ್ದಾಗ ತಾಯಿಯನ್ನು ಕಳೆದುಕೊಂಡು
ವಿಶ್ವೇಶ್ವರನ ಸನ್ನಿಧಿಯನ್ನರಸಿ
ಕೈಲಾಸ ಕ್ಷೇತ್ರಕ್ಕೆ ಬಂದವನು
ಮಹಾಶೈವ ಧರ್ಮಪೀಠದ ವಿಶೇಷಗಳಲ್ಲಿ
ಒಂದಾದವನು.
ನನ್ನ ಧ್ವನಿ ಕೇಳಿದೊಡನೆ
ಓಡೋಡಿ ಬರುತ್ತಾನೆ
ಕಾರು ಬಂದೊಡನೆ ಮಲಗಿದ್ದರೆ
ಎದ್ದು ನಿಂತು ಗೌರವಿಸುತ್ತಾನೆ !
ನಾನು ಪೀಠಾಧ್ಯಕ್ಷ ಎಂದು
ಹೇಳಿಕೊಟ್ಟವರಾರೊ ಈ ಬಸವನಿಗೆ !
ಶಿವ ದುರ್ಗಾದೇವಿಯರ ಸನ್ನಿಧಿಯಲ್ಲಿ
ಇದ್ದಾಗ ನಾನು
ದೇವಸ್ಥಾನದ ಎದುರು ಬಂದು ನಿಲ್ಲುತ್ತಾನೆ
ಮನೆಯಲ್ಲಿದ್ದಾಗ ಹೊರಬಂದು ಕಾಯುತ್ತಾನೆ
ಬಾಳೆಹಣ್ಣುಪ್ರಿಯ ಈ ಬಸವ
ಕೊಟ್ಟವರೆಲ್ಲರ ಬಾಳೆಹಣ್ಣು,ಆಹಾರ ತಿನ್ನುವುದಿಲ್ಲ
ವಿಶ್ವೇಶ್ವರನ ಸೇವೆಯೊಂದೇ ಸಾಕು ನನಗೆ
ಲೋಕದ ಹಂಗೇಕೆ ಎನ್ವ ಭಾವವೊ!
ಬಸವನಿಗೆ ಬಾಳೆ ಹಣ್ಣು ತಿನ್ನಿಸಲು
ಮುಗಿಬೀಳುತ್ತಾರೆ ಜನ
‘ ಬಸವ ಬಾಳೆ ಹಣ್ಣು ತಿಂದರೆ
ಆಗುತ್ತದೆ ತಮ್ಮ ಕಾರ್ಯಸಿದ್ಧಿ’
ಎನ್ನುವ ನಂಬಿಕೆಯಲ್ಲಿ.
ಕೆಲವರ ಬಾಳೆಹಣ್ಣು ತಿನ್ನದೆ
ನಿರಾಕರಿಸುತ್ತಾನೆ ಈ ಬಸವ
ಏಕೋ,ಏನೋ.
ಕೆಲವರು ಮಠಕ್ಕೆ ದರ್ಶನಕ್ಕೆ ಬಂದಾಗ
ಕೈಗೆ ಸಿಗದೆ ಓಡಿಹೋಗುತ್ತಾನೆ
ಇವರ ಸಹವಾಸ ಬೇಡವೆಂಬಂತೆ
ಮತ್ತೆ ಕೆಲವರು ಬಂದಾಗ
ಓಡೋಡಿ ಬರುತ್ತಾನೆ
ಇವರು ತನಗೆ ಆತ್ಮೀಯರೋ ಎಂಬಂತೆ
ಮೂಕಪ್ರಾಣಿಯಾದರೂ ಈ ನಮ್ಮ ಬಸವ
ಅರ್ಥಮಾಡಿಕೊಂಡಿದ್ದಾನೆ ಮಾತು ಬರುವ
ಮನುಷ್ಯರ ಕಪಟ,ವಂಚನೆಗಳನ್ನು.
ದುರುಗುಟ್ಟಿ ನೋಡಿ
ಹೆದರಿಸುತ್ತಾನೆ ಕೆಲವರನ್ನು
ಬಾಲ ಬಡಿಯುತ್ತ
ಕೆಲವರ ಬಳಿ ಬರುತ್ತಾನೆ
ಯಾರದೆ ಹೊಲ ಗದ್ದೆಗಳಲ್ಲಿ ಹೋದರೂ
ಒಡ್ಡಿನ ಮೇವು ತಿನ್ನುವನಲ್ಲದೆ
ಬೆಳೆ ತಿಂದು ಹಾಳು ಮಾಡಲಾರ
ಶಿವ ದುರ್ಗಾದೇವಿಯರ ಹಬ್ಬ- ಉತ್ಸವಗಳಂದು
ಮಲಗುತ್ತಾನೆ ದೇವಸ್ಥಾನದ ಮುಂದೆಯೇ.
ನಾನು ಮಲಗಿದ್ದಾಗ ಕೂಗಿ ಕರೆದು
ಕೇಳುತ್ತಾನೆ ಬಾಳೆಹಣ್ಣು ತಿನ್ನಿಸು ಎಂದು
ಧ್ಯಾನ- ಪೂಜೆಯಲ್ಲಿರೆ ನಾನು
ಸುಮ್ಮನೆ ಕಣ್ಮುಚ್ಚಿ ನಿಲ್ಲುತ್ತಾನೆ
ಧ್ಯಾನಿಸುವಂತೆ ತಾನೂ.
ಗೂಳಿ ಮಾತ್ರವಲ್ಲ ನಮಗೀ ಬಸವ
ಶಿವ ವಿಶ್ವೇಶ್ವರನ ಸಂದೇಶ ಸಾರುವ
ಶಿವಸಂದೇಶ ವಾಹಕ
ಒಮ್ಮೊಮ್ಮೆ ಹೇಳುತ್ತಾನೆ
ನಮಗರಿಯದ ಸಂಗತಿಗಳನ್ನು
ಸೂಚಿಸುತ್ತಾನೆ ನಾವು ಮಾಡಬೇಕಾದ ಕಾರ್ಯಗಳನ್ನು
ಮನಸ್ಸು ಬಂದಂತೆ ನಡೆಯುವ ಈ ಬಸವ
ವರ್ತಿಸುವುದು ತನ್ನಿಚ್ಛೆಯೊ,ಶಿವನಿಚ್ಛೆಯೊ
ಬಲ್ಲವರಾರು ?

16.03.2022