ಹೋಳಿಹಬ್ಬದ ಆಚರಣೆ — ಕಥೆ,ಹಿನ್ನೆಲೆ : ಮುಕ್ಕಣ್ಣ ಕರಿಗಾರ

‘ ಪ್ರಜಾವಾಣಿ ‘ ದಿನಪತ್ರಿಕೆಯ ಯಾದಗಿರಿ ಜಿಲ್ಲಾವರದಿಗಾರರಾದ ಪ್ರವೀಣಕುಮಾರ ಅವರು ‘ ಹೋಳಿ ಆಚರಣೆಯ ಹಿನ್ನೆಲೆ ವಿವರಿಸುವಂತೆ’ ಕೇಳಿದ್ದಾರೆ.ಪ್ರವೀಣಕುಮಾರ ಅವರು ಭಾರತೀಯ ಸಂಸ್ಕೃತಿಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಪ್ರಗತಿಪರ ನಿಲುವಿನ ವರದಿಗಾರರಾಗಿದ್ದು ಆಗಾಗ ತಮ್ಮ ಸಂದೇಹ- ಸಮಸ್ಯೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.ಪ್ರವೀಣಕುಮಾರ ಅವರು ಈ ಹಿಂದೆಯೂ ಹಲವು ಬಾರಿ ನನ್ನಲ್ಲಿ ಕೆಲವು ವಿಷಯಗಳನ್ನು ಕೇಳಿದ್ದನ್ನು ಪ್ರಸ್ತಾಪಿಸಿ ಅವರ ಕುತೂಹಲ ತಣಿಸಲು ಉತ್ತರಿಸಿದ್ದನ್ನು ನನ್ನ‌ ಓದುಗರೊಂದಿಗೆ ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದೆ.ಪ್ರವೀಣಕುಮಾರ ಅವರ ಕುತೂಹಲದ ಕಾರಣದಿಂದ ನನ್ನ ಓದುಗ ಮಿತ್ರರೊಂದಿಗೆ ಇತಿಹಾಸ,ಸಂಸ್ಕೃತಿ,ಪುರಾಣ,ಸಂಪ್ರದಾಯ,ವೈಚಾರಿಕತೆಗಳ ಬಗ್ಗೆ ನನ್ನ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ.ಇಂದು ಹೋಳಿಹುಣ್ಣಿಮೆ ಆಚರಣೆಯ ಹಿನ್ನೆಲೆಯ ಕುರಿತು ವಿವರಿಸುವೆ.

ಹೋಳಿಹುಣ್ಣಿಮೆಯು ಭಾರತದಾದ್ಯಂತ ಆಚರಿಸಲ್ಪಡುವ ವಿಶಿಷ್ಟಹಬ್ಬ.ಕಾಮದಹನದ ಮರುದಿನ ಬಣ್ಣ ಅಥವಾ ಓಕುಳಿಯನ್ನು ಎರಚಿಕೊಳ್ಳುತ್ತ ಮಕ್ಕಳು,ಯುವಕರು ಸಂಭ್ರಮಿಸುತ್ತಾರೆ.ಮಾಘಮಾಸದ ಹುಣ್ಣಿಮೆಯನ್ನು ಹೋಳಿಹುಣ್ಣಿಮೆಯನ್ನಾಗಿ ಆಚರಿಸಿ ಕಾಮನನ್ನು ಪೂಜಿಸಿ ಆ ರಾತ್ರಿ ಕಾಮನನ್ನು ದಹಿಸಲಾಗುತ್ತದೆ.ಫಾಲ್ಗುಣ ಮಾಸದ ಆರಂಭದ ದಿನ ಬಣ್ಣವನ್ನೆರಚಿ ಬದುಕಿಗೆ ರಂಗು ತುಂಬಿಕೊಳ್ಳಲಾಗುತ್ತದೆ.ಶಿವಮಹಾಪುರಾಣ,ಸ್ಕಂದ ಮಹಾಪುರಾಣ,ಲಿಂಗಪುರಾಣ,ವಾಯುಪುರಾಣಗಳು ಸೇರಿದಂತೆ ಅನೇಕ ಪುರಾಣಗಳಲ್ಲಿ ಕಾಮದಹನ ಪ್ರಸಂಗದ ಉಲ್ಲೆಖವಿದ್ದುದುರಿಂದ ಹೋಳಿಹುಣ್ಣಿಮೆಯು ಕ್ರಿಸ್ತಶಕ ಪೂರ್ವದಿಂದಲೂ ಆಚರಿಸಲ್ಪಡುತ್ತಿರುವ ಸಡಗರದ ಹಬ್ಬ.ಈಗೀಗ ನಾಗರಿಕತೆಯ ಭರಾಟೆಗೆ ಸಿಕ್ಕು ಭಾರತೀಯ ಹಬ್ಬ ಉತ್ಸವ ಆಚರಣೆಗಳು ಅವುಗಳ ಅರ್ಥ ಮಹತ್ವ ಕಳೆದುಕೊಂಡು ಕೆಲವು ಜನರ ಆಚರಣೆಯ ಹಬ್ಬಗಳು ಮಾತ್ರವಾಗಿ ಆಚರಿಸಲ್ಪಡುತ್ತಿವೆ.ಭಾರತದ ಸಂಸ್ಕೃತಿ,ಜನಜೀವನವನ್ನು ಅಧ್ಯಯನ ಮಾಡಲು ನಮ್ಮ ಹಬ್ಬ ಉತ್ಸವಗಳು ನೆರವಾಗುತ್ತಿವೆ,ಜನಪದರ ಜೀವನ ವಿಧಾನದ ಮೇಲೆ ಬೆಳಕು ಚೆಲ್ಲುತ್ತವೆ.

ದಕ್ಷನು ತನ್ನನ್ನು ಗೌರವಿಸದ ಶಿವನನ್ನು ಅವಮಾನ ಮಾಡಲೆಂದೇ ಯಜ್ಞೇಶ್ವರನಾದ ಶಿವನಿಗೆ ಪ್ರತಿಯಾಗಿ ವಿಷ್ಣುವನ್ನು ಯಜ್ಞೇಶ್ವರನನ್ನಾಗಿ ನಿಯಮಿಸಿ ಮಹಾಯಜ್ಞ ಒಂದನ್ನು ಕೈಗೊಳ್ಳುತ್ತಾನೆ.ತಂದೆ ಯಜ್ಞ ಮಾಡುತ್ತಿರುವ ಸಂಗತಿಯನ್ನು ಕೇಳಿ ತನಗೆ ಉದ್ದೇಶಪೂರ್ವಕವಾಗಿಯೇ ಆಹ್ವಾನ ನೀಡಿಲ್ಲ ಎನ್ನುವುದನ್ನು ಗ್ರಹಿಸದೆ,ಪತಿಯ ಹಿತವಚನಗಳನ್ನು ಕೇಳದೆ ದಕ್ಷಸುತೆ,ಶಿವನ ಪತ್ನಿ ಸತಿಯು ಯಜ್ಞವನ್ನು ನೋಡುವ ಕುತೂಹಲದಿಂದ ತಂದೆಯ ಮನೆಗೈತಂದು ಅಲ್ಲಿ ಅನಾದರಣೆಗೆ ಗುರಿಯಾಗಿ ತನ್ನ ಪತಿಶಿವನ ನಿಂದನೆಯನ್ನು ಕೇಳಿ ಯಜ್ಞಭೂಮಿಯಲ್ಲಿ ಯೋಗಾಗ್ನಿಯಿಂದ ಆತ್ಮಾರ್ಪಣೆ ಮಾಡಿಕೊಳ್ಳುವಳು.ಸತಿಯ ಆತ್ಮಾರ್ಪಣೆಯ ಸುದ್ದಿ ಕೇಳಿ ಶಿವನು ಕೋಪಾವೇಶದಿಂದ ಕನಲಿ,ಕೆಂಡವಾಗಿ ರುದ್ರಾವತಾರ ತಾಳಿ ತನ್ನ ಜಟೆಯನ್ನು ಕೈಲಾಸದ ಬಂಡೆಗೆ ಅಪ್ಪಳಿಸುವನು.ಆ ಜಟೆಯಿಂದ ವೀರಭದ್ರನು ಉದಿಸಿ’ ಏನಪ್ಪಣೆ’ ಎಂದು ಕೇಳುವನು.’ ದಕ್ಷಯಜ್ಞಧ್ವಂಸ ಮಾಡಿ ಬಾ’ ಎಂದು ಅಪ್ಪಣೆಯನ್ನಿತ್ತ ಶಿವ.ಶಿವನ ಆಣತಿಯಂತೆ ದಶದಿಕ್ಕುಗಳು ನಡುಗುವಂತೆ,ಭೂಮಿಯು ಕಂಪಿಸಿ ಕಳವಳಿಸುವಂತೆ ರುದ್ರಾವೇಶದಿಂದ ಆರ್ಭಟಿಸುತ್ತ ಬಂದ ವೀರಭದ್ರನು ದಕ್ಷಯಜ್ಞದಲ್ಲಿ ಪಾಲ್ಗೊಂಡಿದ್ದು ಬ್ರಹ್ಮ- ವಿಷ್ಣು ಇಂದ್ರಾದ್ರಿಗಳನ್ನೆಲ್ಲ ಹೊಡೆದು,ಓಡಿಸಿ ದಕ್ಷನ ಪರಿವಾರವನ್ನೆಲ್ಲ ಸಂಹರಿಸಿ ದಕ್ಷನನ್ನು ಹಿಡಿದೆಳೆತಂದು ಅವನ ಶಿರವನ್ನು ಹರಿದು ಯಜ್ಞಕುಂಡದಲ್ಲಿ ಸುಟ್ಟುರುಹಿ ಸಂತೃಪ್ತನಾಗುವನು.ದಕ್ಷನ ಹೆಂಡತಿಯ ಪ್ರಾರ್ಥನೆಗೆ ಕರಗಿ,ಶಿವನ ಆಣತಿಯಂತೆ ಕುರಿತಲೆಯನ್ನಿಟ್ಟು ದಕ್ಷನನ್ನು ಬದುಕಿಸಿ ಶಿವಸರ್ವೋತ್ತಮ ಲೀಲೆ ಮೆರೆದ ವೀರಭದ್ರ.

ತನ್ನ ಸತಿಯ ಆತ್ಮಾಹುತಿಯ ಸೇಡು ತೀರಿದರೂ ಹೆಂಡತಿಯ ಅಗಲಿಕೆಯಿಂದ ಮನನೊಂದ ಶಿವನು ವೈರಾಗ್ಯಭಾವವನ್ನು ಹೊಂದಿ ಹಿಮಾಲಯಕ್ಕೆ ತೆರಳಿ ತನ್ನ ಸಹಜಾನಂದದ ಘೋರ ತಪಸ್ಸಿನಲ್ಲಿ ತಲ್ಲೀನನಾಗುವನು.ಈ ಕಾಲಕ್ಕಾಗಲೆ ತಾರಕಾಸುರನೆಂಬ ರಾಕ್ಷಸನು ಹುಟ್ಟಿ ದೇವತೆಗಳಿಗೆ ಎಲ್ಲಿಲ್ಲದ ತೊಂದರೆ ಕೊಡುವನು.ಇಂದ್ರನ ಅಮರಾತಿಯು ಸೇರಿದಂತೆ ದೇವತೆಗಳ ಪಟ್ಟಣಗಳಿಗೆ ಮುತ್ತಿಗೆ ಹಾಕಿ ಅವರುಗಳನ್ನು ಹೊರಹಾಕಿ ತಾನೇ ಇಂದ್ರಾದಿ ದೇವತೆಗಳ ಪಟ್ಟ ಅಲಂಕರಿಸಿ,ಆಳ ತೊಡಗುವನು.ಸೋತು ಸೊರಗಿದ ದೇವತೆಗಳು ಬ್ರಹ್ಮನ ಮೊರೆಹೋಗುವರು.ತಾರಕಾಸುರನು ಶಿವಪುತ್ರನಿಂದ ಮಾತ್ರ ಸಾಯುವ ವರಪಡೆದ ಸಂಗತಿಯನ್ನು ಅರಿತಿದ್ದ ಬ್ರಹನು ದೇವತೆಗಳಿಗೆ ‘ ಹಿಮಾಲಯದಲ್ಲಿ ತಪೋನಿರತನಾಗಿರುವ ಶಿವನ ತಪೋಭಂಗ ಮಾಡಿ ಅವನನ್ನು ಹಿಮಾಲಯನ ಪುತ್ರಿಯನ್ನು ಮದುವೆಯಾಗುವಂತೆ ಮಾಡಿ ಶಿವನಿಂದ ಪುತ್ರಸಂತಾನ ಆಗುವಂತೆ ಮಾಡಬೇಕು.ಶಿವನಿಂದ ಹುಟ್ಟಿದ ಆರುದಿನಗಳ ಬಾಲಕ ತಾರಕಾಸುರನನ್ನು ವಧಿಸುತ್ತಾನೆ’ ಎಂದು ಪರಿಹಾರ ಉಪದೇಶಿಸುವನು.ದೇವತೆಗಳು ಚಿಂತೆಗೀಡಾದರು.ತಪೋನಿರತನಾಗಿರುವ ಶಿವನ ತಪೋಭಂಗ ಮಾಡುವುದೆಂದರೇನು? ದುಸ್ಸಾಧ್ಯಕಾರ್ಯವದು.ಹೇಳಿ ಕೇಳಿ ಶಿವನು ತನ್ನ ಹೃದಯದಲ್ಲಿ ರುದ್ರನನ್ನು ಅಡಗಿಸಿಕೊಂಡವನು.ರುದ್ರಾವೇಶದಿಂದ ಕೋಪಗೊಂಡರೆ ಶಿವನನ್ನು ಸಮಾಧಾನ ಪಡಿಸುವವರು ಯಾರು ? ಆದರೆ ಹಾಗೆಂದು ಕೈ ಚೆಲ್ಲಿ ಕುಳಿತರೆ ತಾರಕನ ವಧೆಯಾಗದು,ತಾವು ಕಳೆದುಕೊಂಡ ಅಧಿಕಾರ ಲಭಿಸದು.

ತಮ್ಮ ತಮ್ಮಲ್ಲಿಯೇ ಮಂತ್ರಾಲೋಚನೆ ಮಾಡಿದ ದೇವತೆಗಳು ಈ ಕಾರ್ಯಕ್ಕೆ ಮನ್ಮಥನು ಮಾತ್ರ ಸಮರ್ಥನೆಂದರಿತು ಮನ್ಮಥನ ಬಳಿಸಾರಿ ಅವನನ್ನು ಹುರಿದುಂಬಿಸುವರು.ಶಿವನ ತಪೋಭಂಗಕಾರ್ಯ ತನ್ನಿಂದಾಗದು ಎಂದು ಮನ್ಮಥನು ಪರಿಪರಿಯಾಗಿ ಅಂಗಲಾಚಿದರೂ ಹಠ ಬಿಡದ ದೇವತೆಗಳು ದೇವಕಾರ್ಯಸಾಧನೆಗು ಮಿಗಿಲಾದ ಶ್ರೇಯಸ್ಸು ಯಾವುದೂ ಇಲ್ಲ,ಅಲ್ಲದೆ ಇಂದ್ರನ ಮಿತ್ರತ್ವದ ಭಾಗ್ಯಕ್ಕಿಂತ ಮಿಗಿಲಾದ ಸೌಭಾಗ್ಯ ಯಾವುದಿರುವುದು?’ ಎಂದೆಲ್ಲ ಹುರಿದುಂಬಿಸಿ ಮನ್ಮಥನನ್ನು ಶಿವತಪೋಭಂಗದ ಕಾರ್ಯಕ್ಕೆ ಕಳುಹಿಸುವರು.

‌ ಯೋಗಾಗ್ನಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡಿದ್ದ ಸತಿಯು ಬ್ರಹ್ಮನ ಪ್ರಾರ್ಥನೆಯಂತೆ ಹಿಮವಂತನ ಮಗಳಾಗಿ ಹುಟ್ಟುವಳು.ಶಿವಪ್ರೇರಣೆ,ದೇವತಾಕಾರ್ಯಲೀಲೆಯಂತೆ ಶಿವನೇ ತನಗೆ ಗಂಡನಾಗಬೇಕೆಂದು ಶಿವನ ಪೂಜೆ- ಆರಾಧನೆಗೆ ತೊಡಗುವಳು.ಇದೇ ಸಮಯದಲ್ಲಿ ಶಿವನು ಹಿಮಾಲಯದಲ್ಲಿ ತಪೋನಿರತನಾಗಿರುವ ಸಂಗತಿಯನ್ನರಿತು ಸಖಿಯರೊಂದಿಗೆ ಶಿವನ ಸೇವೆಗೆ ತೊಡಗುವಳು.ಶಿವನು ಕಣ್ತೆರೆಯದೆ ತಪೋನಿರತನಾಗಿರುತ್ತಾನೆ.

ದೇವತೆಗಳಿಂದ ಹುರಿದುಂಬಿಸಲ್ಪಟ್ಟ ಮನ್ಮಥನು ತನ್ನ ಸ್ನೇಹಿತ ವಸಂತನೊಂದಿಗೆ ಹಿಮಾಲಯಕ್ಕೆ ಬರುವನು.ಶಿವನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿ ಯೋಗಸಮಾಧಿಯೊಳಿದ್ದ ಶಿವನನ್ನು ಕಾಣುವರು.ವಸಂತನು ತನ್ನ ಬಾಣ ಬಿಡುವನು.ಅಕಾಲದಲ್ಲಿ ಹಿಮಾಲಯದಲ್ಲಿ ಗಿಡ ಮರ ಬಳ್ಳಿಗಳರಳಿ ಪುಷ್ಪಗಳು ಹುಟ್ಟಿ ದಿವ್ಯಸುಗಂಧ ಒಂದು ಪಸರಿಸುವುದು.ಹಿಮಾಲಯದಲ್ಲಿ ತಪೋನಿರತರಾಗಿದ್ದ ಋಷಿಗಳಿಗೆ ಈ ಅಕಾಲ ವಸಂತೋದಯವು ವಿಸ್ಮಯವನ್ನುಂಟು ಮಾಡುವುದು.ಉಮೆಯು ಶಿವನ ಸೇವೆಗೆಂದು ತನ್ನ ಸಖಿಯರೊಡನೆ ಬರುವಳು.ಇದೇ ಸಮಯವೆಂದರಿತ ಮನ್ಮಥನು ತನ್ನ ಬಾಣಪ್ರಯೋಗಿಸುವನು.ಶಿವನು ಕ್ಷಣಕಾಲ ಬಹಿರ್ಮುಖನಾಗುವನು.ಅಕಾಲದಲ್ಲಿ ಉಂಟಾಗಿದ್ದ ಪ್ರಕೃತಿವೈಭವವನ್ನು ಕಂಡು ವಿಸ್ಮಿತನಾಗುವನು.ತನ್ನೆದುರು ನಾಚಿ ನಿಂತಿದ್ದ ಉಮೆಯ ಸೌಂದರ್ಯವನ್ನು ಕಂಡು ಮನಸೋತು ಅವಳಲ್ಲಿ ಅನುರಕ್ತನಾಗುವನು.ಅವಳ ಅಂಗಾಂಗದ ಚೆಲುವನ್ನು ಬಣ್ಣಿಸತೊಡಗುವನು.ಕ್ಷಣಹೊತ್ತಿನ ಬಳಿಕ ಎಚ್ಚೆತ್ತುಕೊಂಡು ‘ ಏನಿದು ನನಗೆಂಥ ಮೋಹಕವಿಯಿತು? ಯಾರು ನನ್ನ ತಪೋಭಂಗ ಮಾಡಿದವರು? ಎಂದು ದೃಷ್ಟಿಹರಿಸುವನು.ಸ್ವಲ್ಪ ದೂರದಲ್ಲಿ ಮನ್ಮಥನು ಬಿಲ್ಲನ್ನು ಹೂಡಿ ನಿಂತದ್ದು ಕಾಣುವನು .ಸಿಟ್ಟಿನಿಂದ ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡ ಶಿವನು ಮನ್ಮಥನನ್ನು ಕುರಿತು ‘ ದುರಾತ್ಮ,ಇದು ನಿನ್ನ ಹುಡುಗಾಟಿಕೆಯೊ? ಎನ್ನುತ್ತ ತನ್ನ ಮೂರನೇ ಕಣ್ಣನ್ನು ತೆರೆಯುವನು.ನೋಡ ನೋಡುತ್ತಿದ್ದಂತೆಯೇ ಶಿವನ ಮೂರನೇ ಕಣ್ಣಿನಿಂದ ಹೊರಟ ಅಗ್ನಿಯು ಮನ್ಮಥನನ್ನು ಸುಟ್ಟುಬೂದಿ ಮಾಡಿತು.ಮನ್ಮಥನು ಶಿವನ ಹಣೆಗಣ್ಣಬೆಂಕಿಗೆ ಸುಟ್ಟು ಬೂದಿಯಾದದ್ದನ್ನು ಕಂಡು ದೇವತೆಗಳು ಹೆದರಿ ಓಡಿಹೋಗುವರು.ಭಯ ವಿಹ್ವಲಳಾಗುತ್ತಾಳೆ ಉಮೆ.ಪತಿಯ ದುರ್ಗತಿಯನ್ನು ತಿಳಿದು ಓಡೋಡಿ ಬಂದ ರತಿಯು ಮನ್ಮಥನ ಬೂದಿಬಳಿ ಕುಳಿತು ರೋದಿಸುವಳು,ಆಕ್ರಂದನ ಗೈಯುವಳು.ಶಿವನ ಬಳಿ ಸಾರಿ ಅತ್ತುಕರೆದು,ತನ್ನ ಪತಿಯನ್ನು ಬದುಕಿಸಿಕೊಡುವಂತೆ ಅಂಗಲಾಚುವಳು,ಆರ್ತಳಾಗಿ ಪ್ರಾರ್ಥಿಸುವಳು.ರತಿಯ ಆರ್ತಪ್ರಾರ್ಥನೆಗೆ ಕರಗಿದ ಶಿವನು ‘ ನಿನ್ನ ಗಂಡನ ಬೂದಿಯನ್ನು ತೆಗೆದುಕೊಂಡು ಮನೆಯಲ್ಲಿ ಕಾದಿಟ್ಟುಕೊಂಡಿರು.ಮುಂದೆ ಕಾಲಾಂತರದಲ್ಲಿ ಈ ಬೂದಿಯಿಂದ ಪುನರ್ ಜನಿಸುತ್ತಾನೆ ಮನ್ಮಥ’ ಎಂದು ಸಮಾಧಾನ ಪಡಿಸುವನು.’ ಅಲ್ಲಿಯವರೆಗೆ ಗಂಡನಿಲ್ಲದೆ ನಾನು ಹೇಗೆ ಜೀವಿಸಲಿ, ಪ್ರಭು ಪರಮೇಶ್ವರ? ನನಗಾರು ದಿಕ್ಕು? ನನ್ನನ್ನಾರು ಪೊರೆದು ಸಲಹುತ್ತಾರೆ?ಕಾಮನನ್ನಗಲಿ ಅರೆಕ್ಷಣವೂ ಜೀವಿಸಲಾರೆ ನಾನು’ ಎಂದು ಗೋಗರೆಯುವಳು ರತಿ.ಶಿವನು ಅವಳ ಮೊರೆಗೆ ಕರಗಿ ‘ ಇಂದಿನಿಂದ ನಿನ್ನ ಪತಿ ಅನಂಗನಾಗಿ ಎಲ್ಲ ಜೀವಿಗಳ ಎದೆಯಲ್ಲಿ ಹುಟ್ಟುವನು.ಕಾಮನೊಂದಿಗೆ ನೀನು ಜೀವಿಗಳಲ್ಲಡಗಿಕೊಂಡು ಸುಖಿಸು’ ಎಂದು ವರವೀಯುವನು.ಸಮಾಧಾನಗೊಂಡ ರತಿಯು ತನ್ನ ಪತಿಯ ಬೂದಿಯನ್ನು ಹೊತ್ತು ತರುವಳು.ಮತ್ತೆ ಮನ್ಮಥನು ಎದ್ದು ಬರುವನೆಂಬ ನಿರೀಕ್ಷೆಯಲ್ಲಿ ಕಾಯತೊಡಗಿದಳು.

ಬೂದಿಯಿಂದ ಮನ್ಮಥನು ಎದ್ದು ಬರುತ್ತಾನೆ ಎನ್ನುವ ನಿರೀಕ್ಷೆಯ ಸಂತೋಷವೇ ಬಣ್ಣವನ್ನೆರಚಿ ಸಂಭ್ರಮಿಸುವ ಆಟ.ಶಿವನ ಅಭಯವು ಸುಳ್ಳಾಗದು,ಬಂದೇ ಬರುತ್ತಾನೆ ಮನ್ಮಥನು ಜೀವ ತಳೆದು ಎನ್ನುವ ಹರ್ಷ,ಆನಂದಗಳ ಸಂಕೇತವೇ ಬಣ್ಣ ಎರಚಿ ಸಂಭ್ರಮಿಸುವುದು.ಮನ್ಮಥನ ಪುನರಾಗಮನಕ್ಕಾಗಿ ಸ್ವಾಗತಿಸುವುದೇ ಬಣ್ಣ ಎರಚಿ ಸಡಗರವನ್ನಾಚರಿಸುವುದು.ಶಿವನು ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟದಿನವು ಮಾಘಮಾಸದ ಹುಣ್ಣಿಮೆಯ ದಿನವಾಗಿತ್ತು.ಆದ್ದರಿಂದ ಅಂದು ಕಾಮನನ್ನು ದಹಿಸುವ ಮೂಲಕ ಮನ್ಮಥನನ್ನು ಸ್ಮರಿಸಲಾಗುತ್ತದೆ.ಶಿವನಿಂದ ಮನ್ಮಥನು ಸತ್ತರೂ ಅವನು ಲೋಕಕಲ್ಯಾಣಕ್ಕಾಗಿ ಬಲಿಯಾದನು ಎಂದು ಸ್ಮರಿಸಲಾಗುತ್ತದೆ.ಶಿವನಿಂದ ನಿಗ್ರಹಿಸಲ್ಪಟ್ಟ ಮನ್ಮಥನು ಶಿವನ ಅನುಗ್ರಹ ಪಡೆದು ಅನಂಗನಾಗಿ ಜೀವಿಗಳ ಎದೆಗಳಲ್ಲಿ ಹುಟ್ಟಿ ಕಾಮಾಪೇಕ್ಷೆಯ ಮೂಲಕ ಸಂತಾನೋತ್ಪತ್ತಿಗೆ ಕಾರಣನಾಗಿ ಸೃಷ್ಟಿಕಾರ್ಯಕ್ಕೆ ಸಹಕರಿಸಿದನು ಎನ್ನುವ ಕುರುಹೇ ಬಣ್ಣದಾಟದ ಸಂಭ್ರಮ.ಬಣ್ಣಗಳು ಜೀವನದ ಸಂತೋಷ,ಆನಂದದ ಸಂಕೇತ.ದುಃಖವನ್ನು ಮರೆತು ಆನಂದಿತರನ್ನಾಗಿ ಮಾಡುತ್ತದೆ ಬಣ್ಣ.ನೊಂದ ಜೀವಗಳಿಗೆ ಸೊಬಗಿನುಣಿಸಿನ ಸಾಂತ್ವನ ನೀಡುತ್ತದೆ ಬಣ್ಣ.ಶಿವಾನುಗ್ರಹದ ಭರವಸೆಯ ಸಂಕೇತವೇ ಹೋಳಿಹುಣ್ಣಿಮೆಯ ಬಣ್ಣ ಎರಚುವ ಆಚರಣೆ.ಸುಟ್ಟುಬೂದಿಯಾದರೂ ಮನ್ಮಥನು ಮತ್ತೆ ಎದ್ದುಬರುವ ಕ್ಷಣಗಳಿಗಾಗಿ ರತಿಯು ಅನಂತಕಾಲದವರೆಗೆ ಕಾಯುವಂತೆ ಜೀವನದಲ್ಲಿ ಉಂಟಾಗುವ ನೋವು,ನಿರಾಶೆಗಳ ಕಾರ್ಮೋಡಗಳಳಿದು ಭರವಸೆಯ ಬೆಳಕು ಮೂಡುವುದೆಂಬ ನಿರೀಕ್ಷೆಯ ಆಶಾಭಾವವೇ ಕಾಮದಹನದ ಮರುದಿನದ ಬಣ್ಣದಾಟದ ಸಂಕೇತ,ಸಂದೇಶ.

ಮುಕ್ಕಣ್ಣ ಕರಿಗಾರ

11.03.2022