ಮಾನ್ವಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಮಹಿಳೆಯರ ಸೇವೆ, ಸಾಧನೆ ಶ್ಲಾಘನೀಯ-ವಕೀಲೆ ವಿಜಯಲಕ್ಷ್ಮೀ ಎಂ.ಹೊಸಮನಿ
ಮಾನ್ವಿ ಮಾ.9:‘ ಪ್ರಸ್ತುತ ದಿನಗಳಲ್ಲಿ ಮಹಿಳೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಉತ್ತಮ ಸೇವೆ, ಸಾಧನೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ವಕೀಲೆ ವಿಜಯಲಕ್ಷ್ಮೀ ಎಂ.ಹೊಸಮನಿ ಹೇಳಿದರು. ಬುಧವಾರ ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ವಿಜಯಪುರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ,ಭಾರತ ಸೇವಾದಳ, ನೆಹರು ಯುವ ಕೇಂದ್ರ, ರಾಯಚೂರು ಹಾಗು ವಂದೇ ಮಾತರಂ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಮಹಿಳೆಯರು ಸರ್ಕಾರದ ಯೋಜನೆಗಳು ಹಾಗೂ ಕಾನೂನು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು, ತರಕಾರಿ ಮತ್ತು ಧಾನ್ಯ ಬಳಸಿ ಬಿಡಿಸಬಹುದಾದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕುಷ್ಟಗಿ ಶರಣಪ್ಪ ವಡಿಗೇರಿ ಕಲಾ ತಂಡದಿಂದ ಜಾನಪದ ಸಾಹಿತ್ಯ ಗಾಯನ ಪ್ರದರ್ಶನ ನಡೆಯಿತು.
ತಹಶೀಲ್ದಾರ್ ಚಂದ್ರಕಾಂತ, ಪುರಸಭೆ ಅಧ್ಯಕ್ಷೆ ರಶೀದಾ ಬೇಗಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಭದ್ರದೇವಿ, ಸಹಾಯಕ ಯೋಜನಾಧಿಕಾರಿ ಮಹೇಶ ನಾಯಕ, ವಂದೇ ಮಾತರಂ ಯುವಕ ಸಂಘದ ಅಧ್ಯಕ್ಷ ಮಹಿಬೂಬ್ ಮದ್ಲಾಪೂರ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಅಧಿಕಾರಿ ಸಿ.ಕೆ.ಸುರೇಶ, ವೈದ್ಯೆ ಡಾ.ರೋಹಿಣಿ ಮಾನ್ವಿಕರ್, ಸ್ತ್ರೀಶಕ್ತಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಮಾನಮ್ಮ ಜಾಗೀರಪನ್ನೂರು ಮತ್ತಿತರರು ಇದ್ದರು.