ಮಾನ್ವಿ:ಮಾರ್ಚ್ 6ಕ್ಕೆ ರಾಜ್ಯ ಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಸಮಾರಂಭ-ಡಾ.ಯಂಕನಗೌಡ ಪಾಟೀಲ್ ಬೊಮ್ಮನ್ಹಾಳ

ಮಾನ್ವಿ ಮಾ.2: ‘ಮಾನ್ವಿ ಪಟ್ಟಣದಲ್ಲಿ ಮಾರ್ಚ್6 ಭಾನುವಾರದಂದು ರಾಜ್ಯ ಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಾರ್ಥನಾ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಯಂಕನಗೌಡ ಪಾಟೀಲ್ ಬೊಮ್ಮನ್ಹಾಳ ಹೇಳಿದರು. ಬುಧವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾರ್ಚ್ 6ರಂದು ಬೆಳಿಗ್ಗೆ 10ಗಂಟೆಗೆ ಮಾನ್ವಿ ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನು ನಾಡಿನ ಖ್ಯಾತ ಕಥೆಗಾರರು ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ಅಮರೇಶ ನುಗಡೋಣಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಆರೀಫ್ ರಾಜಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಮಾನ್ವಿಯ ನಿವೃತ್ತ ಸರ್ಕಾರಿ ಅಭಿಯೋಜಕರು ಹಾಗೂ ವಕೀಲರಾದ ಎಂ.ಎ. ಪಾಟೀಲ್ ಅವರು ಭಾಗವಹಿಸುವರು’ ಎಂದರು.

‘ಕಾರ್ಯಕ್ರಮದಲ್ಲಿ ಕಾವ್ಯ ವಿಭಾಗದ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿರುವ ‘ಗಾಂಧಿ ನೇಯ್ದಿಟ್ಟ ಬಟ್ಟೆ’ ಕವನ ಸಂಕಲನದ ಕರ್ತೃ ಹುಬ್ಬಳ್ಳಿಯ ಕವಿ ರಾಯಸಾಬ ಎನ್.ದರ್ಗಾದವರ ಅವರಿಗೆ ರೂ10ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಕಥಾ ವಿಭಾಗದ ಮೊದಲ ಬಹುಮಾನವನ್ನು ಹಂಚಿಕೊಂಡಿರುವ ‘ ಕಲ್ಲು ಹೂವಿನ ನೆರಳು’ ಕಥಾ ಸಂಕಲನದ ಕಥೆಗಾರ ಅನಿಲ್ ಗುನ್ನಾಪೂರ ಹಾಗೂ ‘ಧಣೇರ ಭಾವಿ’ ಕಥಾ ಸಂಕಲನದ ಕಥೆಗಾರ ಶರಣಬಸವ ಕೆ.ಗುಡದಿನ್ನಿ ಅವರಿಗೆ ತಲಾ ರೂ5ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು’ ಎಂದು ತಿಳಿಸಿದರು.
‘ಪ್ರಾರ್ಥನಾ ದತ್ತಿ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ಸಾಹಿತ್ಯ ಪುರಸ್ಕಾರಕ್ಕಾಗಿ 2020 ಹಾಗೂ 2021ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನ ಹಾಗೂ ಕವನ ಸಂಕಲನಗಳನ್ನು ಪುರಸ್ಕಾರಕ್ಕಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಕೃತಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯದ ವಿವಿಧೆಡೆಯಿಂದ 50ಕ್ಕೂ ಅಧಿಕ ಕಥೆಗಾರರು ಹಾಗೂ ಕವಿಗಳು ತಮ್ಮ ಕೃತಿಗಳನ್ನು ಕಳುಹಿಸಿದ್ದರು. ಅತ್ಯುತ್ತಮ ಕವನ ಸಂಕಲನದ ಆಯ್ಕೆಗಾಗಿ ನಾಡಿನ ಹಿರಿಯ ಕವಯತ್ರಿ ಲಲಿತಾ ಸಿದ್ದಬಸವಯ್ಯ ಹಾಗೂ ಅತ್ಯುತ್ತಮ ಕಥಾ ಸಂಕಲನದ ಆಯ್ಕೆಗೆ ಡಾ.ಅಮರೇಶ ನುಗಡೋಣಿ ಅವರು ತೀರ್ಪುಗಾರರಾಗಿದ್ದರು. ನಮ್ಮ ಸಂಸ್ಥೆವತಿಯಿಂದ ರಾಜ್ಯ ಮಟ್ಟದ ಸಾಹಿತ್ಯ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಿದಾಗ ರಾಜ್ಯದ ಎಲ್ಲಾ ಭಾಗಗಳಿಂದ ಸಾಹಿತಿಗಳು ತಮ್ಮ ಅಮೂಲ್ಯವಾದ ಕೃತಿಗಳನ್ನು ಕಳುಹಿಸುವ ಮೂಲಕ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಜಿಲ್ಲೆಯ ಸಾಹಿತಿಗಳು ಹಾಗೂ ಸಂಘಟಕರು ಕೂಡ ನಮ್ಮ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆ ಖುಷಿ ತಂದಿದೆ ’ ಎಂದು ಡಾ.ಯಂಂಕನಗೌಡ ಪಾಟೀಲ್ ಹೇಳಿದರು.
‘ ಮುಂಬರುವ ದಿನಗಳಲ್ಲಿ ಪ್ರಾರ್ಥನ ದತ್ತಿ ಸಂಸ್ಥೆವತಿಯಿಂದ ಮಾನ್ವಿ ತಾಲ್ಲೂಕಿನಲ್ಲಿ ಅನೇಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸಂಸ್ಥೆಯ ವತಿಯಿಂದ ಶಿಕ್ಷಣ ಹಾಗೂ ಆರೋಗ್ಯದ ಮಹತ್ವದ ಕುರಿತು ಜನಜಾಗೃತಿ ಮೂಡಿಸಲಾಗುವುದು. ಸೇವಾ ಮನೋಭಾವ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ’ ಎಂದು ಅವರು ತಿಳಿಸಿದರು.
‘ಮಾರ್ಚ್ 6ರಂದು ಮಾನ್ವಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಾಹಿತಿಗಳು, ಬುದ್ದಿಜೀವಿಗಳು, ಸಾಹಿತ್ಯಾಭಿಮಾನಿಗಳು, ಸಂಘ ಸಂಸ್ಥೆಗಳ ಮುಖಂಡರು, ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು’ ಎಂದು ಡಾ.ಯಂಕನಗೌಡ ಪಾಟೀಲ್ ಮನವಿ ಮಾಡಿದರು. ಸಂಚಾಲಕ ಬಸವರಾಜ ಭೋಗಾವತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ ಪಾಟೀಲ್, ಕಸಾಪ ಜಿಲ್ಲಾ ವಿಶೇಷ ಆಹ್ವಾನಿತರಾದ ಈರಣ್ಣ ಮರ್ಲಟ್ಟಿ, ಆರ್.ಸತ್ಯನಾರಾಯಣ ಮುಷ್ಟೂರು ವಕೀಲರು, ಹನುಮೇಶ ಕವಿತಾಳ ವಕೀಲರು, ಲಕ್ಷ್ಮೀಕಾಂತ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಇದ್ದರು.