ದೇಶದಲ್ಲಿ ಅಧಿವೇಶನಗಳು ಯುವಕರಿಂದ ತುಂಬಬೇಕು – ಶರಣಪ್ಪಗೌಡ ನಕ್ಕುಂದಿ
ಮಾನ್ವಿ ಮಾ.2: ‘ದೇಶ ಕಟ್ಟುವುದಕ್ಕಾಗಿ ಯುವ ಜನತೆ ಮುಂದೆ ಬಂದು ರಾಜಕೀಯ ಕ್ಷೇತ್ರದಲ್ಲಿ ವಿಧಾನಸಭೆ, ಲೋಕಲಸಭೆ ಸದಸ್ಯರಾಗಿ ದೇಶದ ಆಡಳಿತ ಚುಕ್ಕಾಣಿ ಹಿಡಿದು ರಾಷ್ಟ್ರ ಮುನ್ನಡೆಸಬೇಕು. ಆಗ ನಮ್ಮ ದೇಶಕ್ಕೆ ನಿಜವಾದ ಅಭಿವೃದ್ಧಿ ಹಾದಿ ಸಾಗುತ್ತದೆ. ಯುವ ಶಕ್ತಿ ದೇಶದ ಆಸ್ತಿ, ಈ ಆಸ್ತಿ ಯಾವುದಕ್ಕೂ ಮಾರಾಟವಾಗಬಾರದು, ಆಸೆ ಆಮಿಷೆಗಳಿಗೆ ಒಳಗಾಗಬಾರದು. ದೇಶದ ಸಂಸತ್ತಿನಲ್ಲಿ ಆಗುಹೊಗುಗಳ ಬಗ್ಗೆ ಆಗುವ ಚರ್ಚೆಗಳು ಇವತ್ತಿನ ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಅಪರೂಪದ ಕಾರ್ಯಕ್ರಮ ಇದು’ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ ಹೇಳಿದರು.
ಭಾರತ ಸರಕಾರ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ರಾಯಚೂರು, ಶ್ರೀಮತಿ ಆರ್ . ಸುಭದ್ರಮ್ಮ ವಿಠೋಬ ಶೆಟ್ಟಿ ಪದವಿ ಮಹಾವಿದ್ಯಾಲಯ ಮಾನ್ವಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ವಂದೇ ಮಾತರಂ ಯುವ ಸಂಘ(ರಿ) ಮದ್ಲಾಪುರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕೊಪ್ಪರ ಮಾತನಾಡುತ್ತಾ ‘ನಮ್ಮ ಭಾರತದ ಸಂವಿಧಾನ ಅತ್ಯಂತ ಸ್ಪಷ್ಟವಾಗಿ, ನಿಖರವಾಗಿ, ಸಮಾನತೆಯ ಪರಿಶುದ್ಧತೆಯಿಂದ ಕೂಡಿದೆ. ಆದರೆ ಆ ಸ್ಥಾನಕ್ಕೆ ಬರುವ ವ್ಯಕ್ತಿಗಳಿಗೆ ಅರ್ಹತೆ ಇದೆಯೇ ಎಂಬುದೇ ಇವತ್ತಿನ ಪ್ರಶ್ನೆ, ಆ ಕಾರಣಕ್ಕಾಗಿ ಮುಂದಿನ ದಿನಮಾನಗಳಲ್ಲಿ ನವತರುಣರು ದೇಶದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ನಾನು ಮತ್ತು ದೇಶ ಗಾಢವಾಗಿ ನಂಬಿರುತ್ತೇವೆ. ಕಾಲೇಜು ಮಟ್ಟದಲ್ಲಿ ಇದರ ಅವಶ್ಯಕತೆ ಇದೆ. ಯುವ ಶಕ್ತಿ ದೇಶದ ಅಭಿವೃದ್ಧಿಕಡೆಗೆ ಮುತುವರ್ಜಿವಹಿಸಿ ಅಲೋಚಿಸಿ ಭಾಗಿಯಾಗಬೇಕು. ಶಾಲಾ-ಕಾಲೇಜು ಹಂತದಲ್ಲಿ ಇದರ ಬಗ್ಗೆ ತುಂಬಾ ಗಂಭೀರವಾದ ತರಬೇತಿ ಮಾಡಿ ಯುವಕರನ್ನು ತಯಾರಿ ಮಾಡುವುದು ಅವಶ್ಯಕತೆ ಇದೆ. ದೇಶದ ಆಡಳಿತ ಕೊಟ್ಟೋಗಿದೆ ಎಂದು ಮಾತಾಡುವುದು ತಪ್ಪಿಸಬೇಕಿದೆ” ಎಂದರು.
ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಜಿ.ಎಸ್. ಹಿರೇಮಠ ಮಾತನಾಡಿ, ನಮ್ಮ ಸಂಸ್ಥೆ ಯುವಕರಿಗೆ ಜ್ಞಾನ ಉಣಿಸುವ ಕಾರ್ಯದಲ್ಲಿ ಸೇವೆ ಮಾಡುತ್ತಾ ದೇಶದ ಕಾಳಜಿ, ಯುವಕರ ಭಾಗಿತ್ವ, ಅಭಿವೃದ್ಧಿ ಕಡೆಗೆ ಕೊಂಡೊಯ್ಯುವ ಕಾರ್ಯಕ್ರಮಗಳನ್ನು ಮಾಡುತ್ತಾ ಮುಂದಿನ ಸಮಾಜದ ಸಿದ್ದತೆಗೆ ಯುವಕರನ್ನು ಬಳಸುವ ದೃಷ್ಟಿಯಿಂದ ಸಂಸತ್ತು ಅಧಿವೇಶನಗಳಂತಹ ಜ್ಞಾನ ಅನುಭವ ಕೊಡಲು ಈ ಕಾರ್ಯಕ್ರಮಗಳು ಅಗತ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಪಿ ರವಿಕುಮಾರ್ ಪಾಟೀಲ ಮಾತನಾಡಿ, ‘ರಾಜಕೀಯ ಎಂಬುದು ಸಾಮಾನ್ಯರಿಗೆ ನಿಲುಕುವಂತದ್ದು ಅಲ್ಲಾ ಇದು ಹಣ, ಅಂತಸ್ತು, ಮನೆತನ, ಜಾತಿಯತೆ,ಪಕ್ಷ, ಜನಾಂಗ ಇವುಗಳಿಂದ ಬಲವಾಗಿದ್ದವರ ಪಾಲು ಆಗುತ್ತಿದೆ ಇವತ್ತಿನ ಅಡಳಿತ ಇದರ ಬದಲಾವಣೆಗಾಗಿ ನಾವು ನೀವು ಘಟ್ಟಿ ಬುನಾದಿ ಹಾಕುತ್ತ ನಿಲ್ಲೋಣ ಈ ವ್ಯವಸ್ಥೆ ಅಳೆದು ಅಭಿವೃದ್ಧಿಯತ್ತಾ ನಮ್ಮ ದೇಶ ಸಾಗಿಸೋಣ” ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತಾಯಪ್ಪ ಬಿ ಹೊಸೂರ ಮಾತನಾಡಿ, ‘ಇವತ್ತಿನ ರಾಜಕೀಯ ಪರಿಸ್ಥಿತಿಗೆ ಯುವ ಜನತೆ ಎದೆ ಕೊಟ್ಟು ನಿಂತು ಅಂಬೇಡ್ಕರ್ ಅವರ ಮಾರ್ಗದಲ್ಲಿ ಶಿಕ್ಷಣ, ಸಂಘಟನೆ ಹೋರಾಟ ಎಂಬ ಧ್ಯೇಯದಂತೆ ಮುನ್ನುಗ್ಗಬೇಕು, ವಿದ್ಯಾವಂತರಿಗೆ ಆಡಳಿತ ದೊರಕಬೇಕು, ಸಮರ್ಥರು ಹೊಲಸು ಇದೆ ಎಂದು ಕುಳಿತರೆ, ಅಸಮರ್ಥರು ಉನ್ನತ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುತ್ತಾರೆ. ಏಳಿ, ಎದ್ದೇಳಿ ದೇಶದ ಚಿತ್ರಣ ಬದಲಿಸೋಣ” ಎಂದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ರಶಿದಾ ಬೇಗಂ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಲ್ಲಿಂ ಸಾಬ್, ಸಮಾಜ ಸೇವಕ ಅರವಿಂದ ಬಾಸುತ್ಕಾರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಬೀಸಾಬ್ ವಕೀಲರು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪ್ರಕಾಶಯ್ಯ ನಂದಿ, ಬಸವರಾಜ್ ಗಸ್ತಿ, ವೀರೇಶ ಸಿಂಧನೂರು, ವಂದೇ ಮಾತರಂ ಸಂಘದ ಅಧ್ಯಕ್ಷ ಡಾ.ಮಹಿಬೂಬ್ ಮದ್ಲಾಪುರ, ಕಾಲೇಜಿನ ಪ್ರಾಚಾರ್ಯರಾದ ಈರಣ್ಣ ಮರ್ಲಟ್ಟಿ, ಉಪನ್ಯಾಸಕ ಬಸವರಾಜ್ ಲಿಂಗಾರೆಡ್ಡಿ ಇದ್ದರು.
ಸ್ವಾಗತವನ್ನು ಉಪನ್ಯಾಸಕ ಆಂಜನೇಯ ನಸಲಾಪುರ, ಪ್ರಾರ್ಥನೆ ಕು.ಶಾಂತ ಬಲ್ಲಟಗಿ, ವಂದನಾರ್ಪಣೆ ಶ್ರೀಕಾಂತ್ ಮಾಡಿದರು. ಎಸ್.ಆರ್.ಎಸ್.ವಿ ಮತ್ತು ವೆಂಕಟೇಶ್ವರ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಯುವಕರು ಇದ್ದರು.