ಶಿವಚಿಂತನೆ : ಅಭಿಷೇಕಪ್ರಿಯ ಶಿವ – ಮುಕ್ಕಣ್ಣ ಕರಿಗಾರ

ಅಭಿಷೇಕಪ್ರಿಯ ಶಿವ

ಮುಕ್ಕಣ್ಣ ಕರಿಗಾರ

ಶಿವನನ್ನು ‘ ಅಭಿಷೇಕಪ್ರಿಯ’ ಎನ್ನುತ್ತಾರೆ.ನಮ್ಮ ಪುರಾಣಗಳ ಒಬ್ಬೊಬ್ಬ ದೇವರು ಒಂದೊಂದನ್ನು ಇಷ್ಟಪಡುತ್ತಾರೆ.ವಿಷ್ಣುವು ‘ಅಲಂಕಾರಪ್ರಿಯ’ ನಾದರೆ ಸೂರ್ಯನು ‘ ನಮಸ್ಕಾರಪ್ರಿಯ’ನು.ಗಣಪತಿಯು ‘ಮೋದಕಪ್ರಿಯ’ಮತ್ತು ‘ ಗರಿಕೆಪ್ರಿಯ’.ಹೀಗೆ ಎಲ್ಲಾ ದೇವರುಗಳಿಗೆ ಒಂದೊಂದು ಇಷ್ಟದ ಆಹಾರ,ಸೇವೆಗಳು ಇಷ್ಟವೆಂದು ನಿಯಮಿಸಿದ್ದಾರೆ ನಮ್ಮ ಹಿರಿಯರು.ದೇವತೆಗಳ ಪೂಜೆ,ಇಷ್ಟದ ಸಂಗತಿಗಳ ಹಿನ್ನೆಲೆಯಲ್ಲಿ ಆ ದೇವತೆಯ ತತ್ತ್ವಸೂಕ್ಷ್ಮವು ಅಡಗಿರುತ್ತದೆ.

ಶಿವನು ಅಭಿಷೇಕಪ್ರಿಯನಾದ್ದರಿಂದ ಶಿವಭಕ್ತರು ಶಿವನಿಗೆ ಅಭಿಷೇಕ ಪೂಜೆ- ಸೇವೆಗಳನ್ನು ಸಲ್ಲಿಸುತ್ತಾರೆ.ಜಲಾಭಿಷೇಕ,ಕ್ಷೀರಾಭಿಷೇಕ,ಪಂಚಾಮೃತಾಭಿಷೇಕ,ಎಳೆನೀರಿನ ಅಭಿಷೇಕಗಳ ಜೊತೆಗೆ ರುದ್ರಮಂತ್ರಗಳಿಂದ ಅಭಿಷೇಕ ಮಾಡುವ ‘ ರುದ್ರಾಭಿಷೇಕ’ ವೂ ಚಿರಪರಿಚಿತ ಶಿವಭಕ್ತರುಗಳಿಗೆ.ಆದರೆ ಎಲ್ಲ ಅಭಿಷೇಕಗಳಿಗಿಂತ ಶಿವನಿಗೆ ಜಲಾಭಿಷೇಕವೇ ಹೆಚ್ಚುಪ್ರಿಯ! ಉಳ್ಳವರು ನೂರೆಂಟು ನಮೂನೆಯ ಅಭಿಷೇಕ ಮಾಡಬಹುದಾದರೂ ಜನಸಾಮಾನ್ಯರು ನೀರಿನಿಂದ ಅಭಿಷೇಕ ಮಾಡಬಹುದು.ಜನಸಾಮಾನ್ಯರ ಪೂಜೆ,ಸೇವೆಗಳೇ ಜಗದೀಶ್ವರ ಶಿವನಿಗೆ ಬಹುಪ್ರಿಯವಾದ್ದರಿಂದ ಶಿವನು ತನ್ನ ಪೂಜಾಪದ್ಧತಿಯನ್ನು ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ನಿಯಮಿಸಿದ್ದಾನೆ.ಶಿವಪೂಜೆಯಲ್ಲಿ ಬಳಸುವ ವಸ್ತುಗಳೆಲ್ಲವೂ ನಿಸರ್ಗದಲ್ಲಿ ಸುಲಭವಾಗಿ ಸಿಗುವಂತಹ,ಯಾವುದೇ ಖರ್ಚನ್ನು ಅಪೇಕ್ಷಿಸದ ವಸ್ತುಗಳು.ಜಲವಾಗಲಿ,ಬಿಲ್ವಪತ್ರೆಯಾಗಲಿ ಅಥವಾ ತುಂಬಿ ಹೂವುಗಳಾಗಲಿ ಯಾವುದೇ ಹೆಚ್ಚಿನ ಖರ್ಚನ್ನು ಉಂಟುಮಾಡುವುದಿಲ್ಲ.ಸ್ವಲ್ಪ ಪರಿಶ್ರಮದಿಂದ ಭಕ್ತರುಗಳೇ ಅವುಗಳನ್ನು ಸಂಪಾದಿಸಿ ಶಿವನ‌ಪೂಜೆ ಮಾಡಬಹುದು.ಸ್ಮಶಾನವಾಸಿಯಾದ ಶಿವನು ಮೈತುಂಬ ಭಸ್ಮಬಳಿದುಕೊಳ್ಳುವ ಕುರುಹಾಗಿ ಭಕ್ತರು ಹಣೆ,ಮೈಗೆ ವಿಭೂತಿ ಲೇಪಿಸಿಕೊಳ್ಳುತ್ತಾರೆ.ರುದ್ರಾಕ್ಷಿಮಾಲೆಯನ್ನು ಧರಿಸುವವರು ಕೆಲವರುಂಟು.ಇಷ್ಟು ಬಿಟ್ಟರೆ ಶಿವನ ಪೂಜೆಗೆ ಅಂತಹ ವಿಶೇಷ ಭಕ್ಷ್ಯ ಭೋಜ್ಯಗಳಾಗಲಿ,ಹೆಚ್ಚಿನ ಖರ್ಚನ್ನುಂಟು ಮಾಡುವ ಸೇವೆಗಳಾಗಲಿ ಬೇಕಿಲ್ಲ.ಜನಪದರ ದೇವರು ಆಗಿರುವ ಶಿವನು ಜನಸಾಮಾನ್ಯರಿಗೆ ಎಟುಕುವಂತಹ ಪೂಜಾಪದ್ಧತಿಯನ್ನೇ ಒಪ್ಪಿದ್ದಾನೆ.

ಶಿವನು ಅಭಿಷೇಕಪ್ರಿಯನಾದ್ದರಿಂದ ಶಿವದೇವಾಲಯಗಳಲ್ಲಿ ನಿತ್ಯನೈಮಿತ್ತಿಕ ಪೂಜಾಸಂದರ್ಭಗಳಲ್ಲಿ ಅಭಿಷೇಕಪೂಜೆಯನ್ನು ಕೈಗೊಳ್ಳಲಾಗುತ್ತದೆ.ಅಲ್ಲದೆ ಶಿವಲಿಂಗದ ಮೇಲೆ ಹನಿಹನಿ ನೀರು ತೊಟ್ಟಿಕ್ಕುವ ಜಲಕುಂಭದ ಏರ್ಪಾಟು ಇರುತ್ತದೆ .ಶಿವನು ತನ್ನ ಜಟೆಯಲ್ಲಿ ಗಂಗೆಯನ್ನು ಮುಡಿದು ‘ ಗಂಗಾಧರ’ ಎಂದು ಬಿರುದುಗೊಂಡಿದ್ದಾನೆ.ಲೌಕಿಕಭಾಷೆಯಲ್ಲಿ ‘ ತೊಡೆಯಲ್ಲೊಬ್ಬಳು ಸಾಲದೆಂದು ತಲೆಯಲ್ಲಿ ಒಬ್ಬಳನ್ನು ಇಟ್ಟುಕೊಂಡ’ ರಸಿಕತನವನ್ನು ಶಿವನಿಗೆ ಆರೋಪಿಸಬಹುದಾದರೂ ತೊಡೆಯ ಮೇಲಿರುವ ಪಾರ್ವತಿಯು ಪ್ರಕೃತಿಯ ಸಂಕೇತವಾದರೆ ತಲೆಯಲ್ಲಿರುವ ಗಂಗೆ ಜಲತತ್ತ್ವದ ಸಂಕೇತ.ಭೂತನಾಥನೂ ಪ್ರಕೃತಿಪತಿಯೂ ಆಗಿರುವ ಪುರುಷ ಇಲ್ಲವೆ ಪರಮೇಶ್ವರ ಶಿವನು ಗಂಗೆ- ಪಾರ್ವತಿಯರೆಂಬ ಪತ್ನಿದ್ವಯರ ಲೀಲೆಯ ಮೂಲಕ ಜಗತ್ತಿನ ಲೀಲೆಯನ್ನೆಸಗುತ್ತಿದ್ದಾನೆ.

ಶಿವನು ಅಭಿಷೇಕಪ್ರಿಯನೇಕಾದ ಎನ್ನುವುದನ್ನು ವಿವರಿಸಲು ಪುರಾಣಗಳು ಒಂದು ಕಥೆಯನ್ನು ನಿರೂಪಿಸುತ್ತವೆ.ಸಮುದ್ರಮಥನದ ಸಂದರ್ಭದಲ್ಲಿ ಮೊದಲು ಉಂಟಾದ ಹಾಲಾಹಲ ವಿಷವು ಲೋಕವನ್ನು ಸುಡುತ್ತಬರಲು ಬೆದರಿದ ದೇವತೆಗಳು ಬ್ರಹ್ಮ- ವಿಷ್ಣುಗಳ ಮುಂದಾಳತ್ವದಲ್ಲಿ ಕೈಲಾಸಕ್ಕೈತಂದು ಕಾಲಕೂಟವಿಷದ ಪ್ರತಿಕೂಲ ಪರಿಸ್ಥಿತಿಯಿಂದ ಲೋಕವನ್ನು ಪಾರು ಮಾಡಲು ಪ್ರಾರ್ಥಿಸುತ್ತಾರೆ.ಲೋಕಕಲ್ಯಾಣದ ಕಾರಣದಿಂದ ಶಿವನು ಕಾಲಕೂಟವಿಷವನ್ನು ಶಂಖದಲ್ಲಿ ಹಿಡಿದು ಗಟಗಟನೆ ಕುಡಿಯುತ್ತಾನೆ ! ಮೂರುಲೋಕಗಳನ್ನೆ ಸುಡುತ್ತಿದ್ದ ಹಾಲಾಹಲ ವಿಷವದು ! ಕಣ್ಮುಚ್ಚಿ ಕುಡಿದ ಬೋಳೇಶಂಕರ ಶಿವ.ವಿಷವು ಶಿವನ ಶರೀರದಲ್ಲಿ ಪ್ರವೇಶಿಸದಂತೆ ಪಾರ್ವತಿಯು ಶಿವನ ಗಂಟಲನ್ನು ಒತ್ತಿ ಹಿಡಿಯುವಳು.ಕಾಲಕೂಟ ವಿಷ ಸೇವನೆಯ ಪರಿಣಾಮ ಶಿವನ ಗಂಟಲು ಸುಟ್ಟು ‘ ನೀಲಕಂಠ’ ನಾದ.ಜಗತ್ತಿನ ಕಲ್ಯಾಣಕ್ಕೋಸ್ಕರ ವಿಷವನ್ನೇ ಕುಡಿದವನಾದ್ದರಿಂದ ಅವನನ್ನು ‘ ಶ್ರೀಕಂಠ’ ಎನ್ನುತ್ತಾರೆ.ನಂಜುಂಡ,ವಿಷಕಂಠ,ಶಿತಿಕಂಠ ಎನ್ನುವ ಹೆಸರುಗಳು ಶಿವನ ಲೋಕಕಲ್ಯಾಣ ಗುಣವನ್ನು ಸಾರುತ್ತವೆ.ಗಂಟಲಲ್ಲಿ ನಿಂತ ವಿಷದ ಕಾವು ತಲೆಯವರೆಗೆ ಏರಿ ಶಿವನು ವಿಷದ ಕಾವಿನ ತೀವ್ರತೆಯಿಂದ ಬಳಲುವನು.ತಲೆಗೇರಿದ ಕಾವು ಕಡಿಮೆಯಾಗಲು ಚಂದ್ರನನ್ನು ಧರಿಸಿ ಚಂದ್ರಶೇಖರನಾಗುವನು.ಆಗಲೂ ಕಾಲಕೂಟವಿಷದ ತೀವ್ರತೆ ಕಡಿಮೆಯಾಗದಿರಲು ಗಂಗೆಯನ್ನು ಜಟೆಯಲ್ಲಿಟ್ಟುಕೊಳ್ಳುವನು.ಗಂಗಾಪ್ರವಾಹದಿಂದ ಶಿವನ ತಲೆತಣ್ಣಗಾಗುವುದು,ಹಾಲಾಹಲವಿಷದ ಕಾವು ಅಡಗುವುದು.

ತನ್ನ ತಲೆಯ ಕಾವನ್ನು ಕಡಿಮೆ ಮಾಡಿದ ಜಲದಿಂದ ತನಗೆ ಅಭಿಷೇಕ ಮಾಡಿದರೆ ಶಿವನು ಪ್ರಸನ್ನನಾಗುವನು.ಶಿವನು ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಪ್ರಕಟಗೊಂಡಿದ್ದರೂ ಅವುಗಳಲ್ಲಿ ಕಾಶಿಯೇ ತನಗೆ ಅತ್ಯಂತಪ್ರಿಯವಾದ ಕ್ಷೇತ್ರ ಎನ್ನಲು ಕಾರಣ ಕಾಶಿಯಲ್ಲಿ ದೇವಗಂಗೆಯು ಪ್ರವಹಿಸುತ್ತಿರುವುದು.ತನಗೆಪ್ರಿಯಳಾದ ಗಂಗೆಯು ಹರಿಯುವ ಕ್ಷೇತ್ರ ಅದಾದ್ದರಿಂದ ಶಿವನು ಆ ಕ್ಷೇತ್ರವನ್ನು ತನ್ನಪ್ರಿಯಕ್ಷೇತ್ರ ಎಂದು ಕರೆದ.ಭಕ್ತರು ಜಲಾಭಿಷೇಕದಿಂದ ತನ್ನನ್ನು ಪೂಜಿಸಿದರೆ ಬೇಗನೆ ಪ್ರಸನ್ನನಾಗುತ್ತಾನೆ ಶಿವ.ಕೆಲವರು ವಿಶೇಷ ಸಂದರ್ಭಗಳಲ್ಲಿ ಅದರಲ್ಲೂ ಶಿವರಾತ್ರಿಯ ದಿನದಂದು ಕಾಶಿಯ ಗಂಗಾಜಲವನ್ನು ತಂದು ಶಿವನಿಗೆ ಅಭಿಷೇಕ ಸೇವೆ ಸಲ್ಲಿಸುತ್ತಾರೆ.ಈಗ ಬಹುತೇಕ ರಾಜ್ಯ ಸರ್ಕಾರಗಳು ಅವುಗಳ ನಿಯಂತ್ರಣದಲ್ಲಿರುವ ಧಾರ್ಮಿಕ ದತ್ತಿ ಇಲಾಖೆಗಳ ದೇವಸ್ಥಾನಗಳಿಗೆ ಶಿವರಾತ್ರಿಯ ಅಭಿಷೇಕಪೂಜೆಗೆಂದು ಗಂಗಾಜಲವನ್ನು ಪೂರೈಸುತ್ತಿವೆ.ಗಂಗಾಜಲವು ಸಿಗದೆ ಇದ್ದರೂ ಚಿಂತೆಯಿಲ್ಲ ಯಾವುದೇ ನದಿಯ ನೀರು ಇಲ್ಲವೆ ಬಾವಿ,ಕೆರೆಗಳ ನೀರಿನಿಂದಲೂ ಶಿವನಿಗೆ ಅಭಿಷೇಕ ಪೂಜೆ ಸಲ್ಲಿಸಬಹುದು.ಎಲ್ಲ ನೀರೂ ಗಂಗೆಯೆ ಅಲ್ಲವೆ ?

ಪುರಾಣಿಕರು ಜನಸಾಮಾನ್ಯರಲ್ಲಿ ಶಿವಭಕ್ತಿಯನ್ನುಂಟು ಮಾಡಲು,ಶಿವನ ಲೋಕಕಾರುಣ್ಯಗುಣ ಮಹಿಮೆಯನ್ನು ಸಾರಲು ಶಿವನು ಹಾಲಾಹಲ ವಿಷಕುಡಿದ ಪ್ರಸಂಗವನ್ನು ನಿರೂಪಿಸಿದ್ದಾರೆ.ಆದರೆ ಯೋಗ ಮತ್ತು ಆಧ್ಯಾತ್ಮಿಕವಾಗಿ ಇದಕ್ಕೆ ಬೇರೆಯದೆ ಆದ ಅರ್ಥ ಮತ್ತು ಮಹತ್ವ ಇದೆ.ಶಿವನು ಯೋಗೀಶ್ವರ.ಅವನು ಸದಾ ತನ್ನಸಹಜಾನಂದದ ಯೋಗದಲ್ಲಿ ಮಗ್ನನಾಗಿರುತ್ತಾನೆ.ದೀರ್ಘಕಾಲದ ಯೋಗಾನುಷ್ಠಾನದ ಕಾರಣದಿಂದ ಶಿವನ ಶಿರವು ಕುದಿದು,ಕಂಪಿಸುತ್ತದೆ.ಮೂಲಾಧಾರಚಕ್ರದಲ್ಲಿ ಊರ್ಧ್ವಮುಖಿ ಸರ್ಪಾಕಾರದ ಕುಂಡಲಿನೀ ಶಕ್ತಿಯ ರೂಪದಲ್ಲಿರುವ ದೇವಿ ಪಾರ್ವತಿಯು ಯೋಗಿಯ ಯೋಗಸಾಧನೆಯ ಬಲದಿಂದ ಒಂದೊಂದೇ ಚಕ್ರಗಳನ್ನು ದಾಟುತ್ತ ಷಟ್ಚಕ್ರಗಳನ್ನು ದಾಟಿ ಏಳನೆಯದು ಮತ್ತು ಕೊನೆಯ ಚಕ್ರವಾದ ಸಹಸ್ರಾರ ಚಕ್ರವನ್ನು ತಲುಪುತ್ತಾಳೆ.ಸಹಸ್ರಾರ ಚಕ್ರವು ಶಿವನ ಆವಾಸ.ಯೋಗಸಾಮರ್ಥ್ಯದ ಬಲದಿಂದ ಯೋಗಿಯು ಕುಂಡಲಿನಿ ಶಕ್ತಿಯನ್ನು ಜಾಗ್ರತಗೊಳಿಸಿಕೊಂಡು ಹಂತಹಂತವಾಗಿ ಮೇಲೇರುತ್ತ ಆರುಚಕ್ರಗಳನ್ನು ದಾಟಿ ಸಹಸ್ರಾರವನ್ನು ತಲುಪಿಸುತ್ತಾನೆ ಸರ್ಪಶಕ್ತಿಯನ್ನು.ಶಿವ ಶಕ್ತಿಯರ ಸಂಗಮಸ್ಥಳವೇ ಸಹಸ್ರಾರ ಚಕ್ರ.ಕುಂಡಲಿನಿ ಶಕ್ತಿಯು ಸಹಸ್ರಾರ ಚಕ್ರವನ್ನು ಪ್ರವೇಶಿಸಲು ದೇಹದಲ್ಲಿ ವಿಪರೀತ ಉಷ್ಣತೆ ಉಂಟಾಗುತ್ತದೆ ನದಿಯ ನೀರು ಸಮುದ್ರವನ್ನು ಸೇರುವ ಸಂಗಮಸ್ಥಳದಲ್ಲಿ ನದಿನೀರು ಮತ್ತು ಸಮುದ್ರದ ನೀರಿನ ನಡುವೆ ಘರ್ಷಣೆ ಏರ್ಪಟ್ಟು ನೊರೆಹೊರಹೊಮ್ಮುವಂತೆ.ಯೋಗಿಯ ಶರೀರವನ್ನು ತಂಪಾಗಿರಿಸಲು ಸಹಸ್ರಾರದ ಮೇಲ್ತುದಿಯಿಂದ ಸುಷುಮ್ನಾ ನಾಡಿಯು ಮಧುವನ್ನು ತೊಟ್ಟಿಕ್ಕುತ್ತದೆ.ಆ ಮಧುವೇ ಅಮೃತ.ಆ ಅಮೃತ ಸೇವನೆಯಿಂದ ಯೋಗಿಯು ತನ್ನ ಶರೀರದ ಅತಿ ಉಷ್ಣತೆಯನ್ನು ಕಳೆದುಕೊಳ್ಳುವನಲ್ಲದೆ ಜರಾಮರಣ ಮುಕ್ತನಾಗುವನು,ಇಚ್ಛಿಸಿದಷ್ಟು ವರ್ಷಗಳ ಕಾಲ ಬದುಕಬಲ್ಲನು.ಇದೇ ಪ್ರಕೃತಿ ಮತ್ತು ಅಮೃತ ತತ್ತ್ವ.ಪಾರ್ವತಿಯು ಪ್ರಕೃತಿ ತತ್ತ್ವದ ಪ್ರತೀಕವಾಗಿ ಕುಂಡಲಿನಿ ಶಕ್ತಿಯ ರೂಪದಲ್ಲಿದ್ದರೆ ದೇವಗಂಗೆಯು ಸುಷಮ್ನಾ ನಾಡಿಯ ರೂಪದಲ್ಲಿ ಅಮೃತತತ್ತ್ವದ ಪ್ರತೀಕವಾಗಿದ್ದಾಳೆ.ಕುಂಡಲಿನಿಶಕ್ತಿಯ ಪ್ರವಾಹದ ರಭಸದಿಂದುಂಟಾದ ಯೋಗೋಷ್ಣವು ಸುಷುಮ್ನಾ ನಾಡಿಯು ಹೊರಚೆಲ್ಲುವ ಅಮೃತದಿಂದ ತಣಿದು ಸಾಕ್ಷಾತ್ಕಾರವನ್ನುಂಟು ಮಾಡುತ್ತದೆ.ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಾಧನವಾಗುವ ಅಮೃತತತ್ತ್ವವೇ ಜಲತತ್ತ್ವ,ಗಂಗಾತತ್ತ್ವವಾಗಿದ್ದು ಆ ಗಂಗೆಯನ್ನು ಅಭಿಷೇಕಮಾಡುವುದರಿಂದ ಯೋಗಸಾಧನೆಯು ಪೂರ್ಣಗೊಳ್ಳುತ್ತದೆ,ಯೋಗಿಯು ಪರಮಾತ್ಮನ ಸಾಕ್ಷಾತ್ಕಾರವನ್ನನುಭವಿಸಿ ಪೂರ್ಣಯೋಗಿಯಾಗುತ್ತಾನೆ. ಈ ಕಾರಣದಿಂದ ಶಿವನಿಗೆ ಅಭಿಷೇಕವು ಪ್ರಿಯವಾದದ್ದು.ಶಿವನನ್ನು ಅಭಿಷೇಕದಿಂದ ಪೂಜಿಸುವುದು ಎಂದರೆ ಯೋಗದ ಪೂರ್ಣತೆಯತ್ತ ತುಡಿಯುವುದು ಎಂದೇ ಅರ್ಥ.ಯೋಗಮಾರ್ಗದ ಮೂಲಕ ತನ್ನೆಡೆ ಬರುವವರನ್ನು ಶಿವನು ಒಲಿದು ಉದ್ಧರಿಸುವುದರಿಂದ ಅಭಿಷೇಕಪೂಜೆಯ ಸಂಕೇತವನ್ನು ಕಲ್ಪಿಸಲಾಯಿತು.ಶಿವರಾತ್ರಿಯಂದು ಶಿವಲಿಂಗಕ್ಕೆ ನಿರಂತರ ಜಲಾಭಿಷೇಕ ಮಾಡುವವರಲ್ಲಿ ಯೋಗದ ತೀವ್ರತೆ,ಉಷ್ಣತೆ ಮತ್ತು ಕಂಪನಗಳುಂಟಾಗುತ್ತವೆ.ಭಕ್ತರು ಜಲಾಭಿಷೇಕದಿಂದ ಶಿವನನ್ನು ಸಂತೃಪ್ತಗೊಳಿಸಬಯಸಿದರೆ ಯೋಗಿಗಳು ಸಹಸ್ರಾರದಲ್ಲಿ ಕುಂಡಲಿನಿ ಶಕ್ತಿಯನ್ನು ಪ್ರವಹಿಸಿ,ಸುಷುಮ್ನಾ ನಾಡಿಯ ಅಮೃತವನ್ನು ಸೇವಿಸುವ ಯೋಗಸಾಧನೆಯಲ್ಲಿ ಮಗ್ನರಾಗಿರುತ್ತಾರೆ.

‌28.02.2022