ಮಾನ್ಪಿ: ಪದವಿ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ಎಐಡಿಎಸ್ಒ ವಿರೋಧ

ಮಾನ್ವಿ ಫೆ28: ಪದವಿ ಪರೀಕ್ಷಾ ಶುಲ್ಕ ಹೆಚ್ಚಳ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಪ್ರಾಂಶುಪಾಲ ಡಾ.ಸುರೇಶ ಶರಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿಶ್ವವಿದ್ಯಾಲಯವು ಪದವಿ ಪರೀಕ್ಷಾ ಶುಲ್ಕವನ್ನು ರೂ1,450ರಿಂದ ರೂ.1,950ಕ್ಕೆ ಹೆಚ್ಚಿಸಿರುವುದು ಖಂಡನೀಯ. ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ, ಅಕಾಲಿಕ ಮಳೆಯಿಂದ ಬೆಳೆ ಹಾನಿಯಿಂದಾಗಿ ವಿದ್ಯಾರ್ಥಿಗಳ ಪಾಲಕರು ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕಾಲೇಜು ಪ್ರವೇಶ ಶುಲ್ಕ, ಬಸ್ ಪಾಸ್ ಶುಲ್ಕ ಭರಿಸಲು ಸಾಧ್ಯವಾಗದೆ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ಪರೀಕ್ಷಾ ಶುಲ್ಕವನ್ನು ರೂ500ಕ್ಕೆ ಹೆಚ್ಚಿಸಿರುವುದು ಹೊರೆಯಾಗಲಿದೆ. ಕಾರಣ ಕೂಡಲೇ ಪರೀಕ್ಷಾ ಶುಲ್ಕ ಹೆಚ್ಚಳದ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು. ಎಐಡಿಎಸ್‌ಒ ಸಂಘಟನೆಯ ತಾಲ್ಲೂಕು ಸಂಚಾಲಕ ಸೈಯದ್ ಜೈದ್, ವಿದ್ಯಾರ್ಥಿಗಳಾದ ಮೌಲಾ, ಶ್ಯಾಮ್, ಸೊಹೆಲ್, ರಕ್ಷಿತಾ, ಸುರಯ್ಯಾ, ಯಶೋಧ, ಸೋನು ಮತ್ತಿತರರು ಇದ್ದರು.