‘ ಇವರು ನಮ್ಮವರು ಸಾರ್….!
ಮುಕ್ಕಣ್ಣ ಕರಿಗಾರ
ನಡೆದಿತ್ತು ಒಂದು ಜಿಲ್ಲೆಯಲ್ಲಿ
ಮಂತ್ರಿಗಳ ಪ್ರಗತಿ ಪರಿಶೀಲನಾ ಸಭೆ
ಎಲ್ಲ ಜಿಲ್ಲೆಗಳಿಗೊಬ್ಬರು ‘ ಉಸ್ತುವಾರಿ ಮಂತ್ರಿ’ ಗಳಿರುವಂತೆ
ಈ ಸಚಿವರು ಆ ಜಿಲ್ಲೆಯ ಉಸ್ತವಾರಿ ಮಂತ್ರಿಗಳು.
ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು
ಭಾಗವಹಿಸಿ,ಪ್ರಗತಿಯ ವರದಿಗಳನ್ನು
ಒಪ್ಪಿಸುತ್ತಿದ್ದರು ಮಂತ್ರಿ ಮಹೋದಯರಿಗೆ
ಒಬ್ಬ ಅಧಿಕಾರಿ
ಸಾಧಿಸಿರಲಿಲ್ಲ ಪ್ರಗತಿ
ಇರದಿದ್ದರೂ ಏನೂ ಅಡೆ ತಡೆ
ಪ್ರಗತಿ ಸಾಧಿಸಲು
ಆ ಅಧಿಕಾರಿಯಲ್ಲಿರಲಿಲ್ಲ ಕಾರ್ಯದಕ್ಷತೆ
ಉತ್ತರಿಸಲು ಆಗುತ್ತಿರಲಿಲ್ಲ
ತಡವರಿಸುತ್ತಿದ್ದರು
ಜಿಲ್ಲೆಯಲ್ಲಿ ಅವರೊಬ್ಬ ಅದಕ್ಷ ಅಧಿಕಾರಿ
ಅಂತ ಹೆಸರಾದವರು ಬೇರೆ.
ಮಂತ್ರಿಗಳು ರೌದ್ರಾವತಾರ ತಾಳಿ
ಮೈ ಬೆವರಿಳಿಸತೊಡಗಿದರು
ಆ ಅಧಿಕಾರಿಯನ್ನು ಬೈಯುತ್ತ.
ವೇದಿಕೆಯ ಮೇಲೆ
ಮಂತ್ರಿಗಳ ಹಿಂದಿನ ಸೀಟಿನಲ್ಲಿ ಕುಳಿತಿದ್ದ
ಮಂತ್ರಿಗಳ ಪಿ ಎ ಎದ್ದು ಬಂದು
ಮಂತ್ರಿಗಳ ಕಿವಿಯಲ್ಲಿ ಊದಿದ
‘ ಇವರು ನಮ್ಮವರು ಸಾರ್….!’
‘ಮೊದಲೆ ಯಾಕಯ್ಯ ಹೇಳಲಿಲ್ಲ
ವ್ಯರ್ಥವಾಗಿ ನಮ್ಮ ಅಧಿಕಾರಿ ಒಬ್ಬರಿಗೆ
ಬಯ್ಯಿಸಿದಿ ಅಲ್ಲ,
ತಲೆ ನೆಟ್ಟಗಿದೆಯಾ ನಿನಗೆ ?’
ಸಿಟ್ಟುಮಾಡಿಕೊಂಡರು
ಮಂತ್ರಿಗಳು ಪಿಎಯ ಮೇಲೆ
ಮಂತ್ರಿಗಳು ಮತ್ತು ಪಿ ಎ ಈ ಇಬ್ಬರ ಸಂಭಾಷಣೆ
ವೇದಿಕೆಯಲ್ಲಿ ಕುಳಿತಿದ್ದವರಿಗೆ ಕೇಳಿಸಿತು
ಮಂತ್ರಿಗಳು ಮುಂದುವರೆಸಿದರು
‘ ಗುಡ್,ಈ ಅಧಿಕಾರಿ ಉತ್ತಮವಾಗಿ
ಕೆಲಸ ಮಾಡುತ್ತಾರಂತೆ.
ಮನೆಯಲ್ಲಿ ಏನೋ ಸಮಸ್ಯೆ ಆಗಿ
ಸ್ವಲ್ಪ ಉದ್ವಿಗ್ನತೆಯಲ್ಲಿದ್ದಾರೆ.
ಇರಲಿ ಕುಳಿತುಕೊಳ್ಳಿ
ಏನಾದರೂ ಸಮಸ್ಯೆ ಇದ್ದರೆ
ನನ್ನ ಗಮನಕ್ಕೆ ತನ್ನಿ !’
ವೇದಿಕೆಯ ಮೇಲಿದ್ದ ಅಧಿಕಾರಿಗಳು
ಸಭೆಯಲ್ಲಿ ಕುಳಿತಿದ್ದ ಅಧಿಕಾರಿಗಳು
ಆಶ್ಚರ್ಯಗೊಂಡರು ಮಂತ್ರಿಗಳ ಸರ್ಟಿಫಿಕೇಟ್ ಕೇಳಿ
ಎಲ್ಲರಿಗೂ ಚಿರಪರಿಚಿತ ಅಧಿಕಾರಿ ಅವರು
ಅವರ ಕಾರ್ಯದಕ್ಷತೆ ಗೊತ್ತಿದ್ದುದೆ ಎಲ್ಲರಿಗೆ
ಆದರೂ ಗಿಟ್ಟಿಸಿಕೊಂಡರು
ಮಂತ್ರಿಗಳಿಂದ ಶಹಾಭಾಶ್ ಗಿರಿ .
ಮಂತ್ರಿಗಳ ಸಿಟ್ಟು ಬೇರೆ ಅಧಿಕಾರಿಗಳ
ಮೇಲೆ ತಿರುಗಿತು ಎನ್ನಿ.
ಮಂತ್ರಿಗಳು ಸಾರ್ವಜನಿಕ ಸೇವಕರು
ಅಧಿಕಾರಿಯೂ ಸಾರ್ವಜನಿಕ ಸೇವಕ
ಇಬ್ಬರೂ ಸಂಬಳ ಸವಲತ್ತುಗಳ
ಪಡೆಯುತ್ತಿರುವುದು
ಜನರ ತೆರಿಗೆಯ ಹಣದಲ್ಲಿ.
ಎಲ್ಲ ಜನಸಮುದಾಯಗಳ ಮತ ಪಡೆದು
ಆರಿಸಿ ಬಂದು ಮಂತ್ರಿಗಳಾಗಿದ್ದರು ಅವರು
ಸಂವಿಧಾನದ ಜಾತ್ಯಾತೀತಮೌಲ್ಯಗಳನ್ನು
ಎತ್ತಿಹಿಡಿಯಬೇಕಿದ್ದ ಮಂತ್ರಿಗಳು
ತುಂಬಿದ ಸಭೆಯಲ್ಲಿ
ಮೆರೆದರು ತಮ್ಮ ಜಾತಿ ಪ್ರೀತಿ !
ಇದು ಎಲ್ಲೋ ಒಂದಲ್ಲಿ
ನಡೆದ ಘಟನೆ ಮಾತ್ರವಲ್ಲ ;
ನಿತ್ಯ ಕಂಡುಕೇಳುತ್ತಿರುವ ವಿದ್ಯಮಾನ !
ಎಲ್ಲಿಗೆ ಬಂತು ನೋಡಿ ನಮ್ಮ ದೇಶ ಭಾರತ !
ಇಲ್ಲಿ,ಈ ದೇಶ ಭಾರತದಲ್ಲಿ
ಎಲ್ಲವೂ ತತ್ತ್ವ ಮೌಲ್ಯಗಳನ್ನು ಆಧರಿಸಿದೆ
ಎಂದರೆ ಅದು ತಪ್ಪು
ಜಾತಿಯ ಪ್ರೀತಿಯೇ ಮಹಾಮೌಲ್ಯ
ಸ್ವಜನ ಪಕ್ಷಪಾತವೆ ಮಹಾತತ್ತ್ವ
ನಮ್ಮಲ್ಲಿ ಬಹಳಷ್ಟು ಜನರಿಗೆ
ಜಾತ್ಯತೀತತೆ ಎಂದರೆ
ತಮ್ಮ ಜಾತಿಯ ಜನರ ಉದ್ಧಾರವೆ.
ಜಾತಿಯ ಹಿತದ ಮುಂದೆ
ದೇಶದ ಹಿತವೂ ಮುಖ್ಯವಲ್ಲ
ಎಂದು ತಿಳಿದ ಬಹಳಷ್ಟು ಜನರಿದ್ದಾರೆ
ಅಂಥವರಲ್ಲಿ ಈ ಮಂತ್ರಿಗಳೂ ಒಬ್ಬರು !

17.02.2022