ಮಾನ್ವಿ ಫೆ.18: ಪಟ್ಟಣದ ಪ್ರಾರ್ಥನಾ ಟ್ರಸ್ಟ್ ವತಿಯಿಂದ ಕೊಡಮಾಡುವ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕೆ ಕಥಾ ವಿಭಾಗದಲ್ಲಿ ಯುವ ಕಥೆಗಾರ ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಹಾಗೂ ಶರಣಬಸವ ಕೆ.ಗುಡದಿನ್ನಿ ಅವರ ‘ಧಣೇರ ಬಾವಿ’ ಕಥಾ ಸಂಕಲನಗಳು ಕಥಾ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಹಾಗೂ ಕಾವ್ಯ ವಿಭಾಗದಲ್ಲಿ ರಾಯಸಾಬ ಎನ್. ದರ್ಗಾದವರ ಅವರ ‘ ಗಾಂಧಿ ನೇಯ್ದಿಟ್ಟ ಬಟ್ಟೆ’ ಕವನ ಸಂಕಲನ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಕಥಾ ಸಂಕಲನ ವಿಭಾಗದ ಪುರಸ್ಕಾರವನ್ನು ಹಂಚಿಕೊಂಡಿರುವ ಇಬ್ಬರು ಕಥೆಗಾರರಾದ ಅನಿಲ್ ಗುನ್ನಾಪೂರ ಹಾಗೂ ಶರಣಬಸವ ಕೆ. ಗುಡದಿನ್ನಿ ಅವರಿಗೆ ತಲಾ ರೂ.5ಸಾವಿರ ನಗದು, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ. ಕಾವ್ಯ ವಿಭಾಗದ ಪುರಸ್ಕಾರವನ್ನು ಪಡೆದಿರುವ ರಾಯಸಾಬ ಎನ್.ದರ್ಗಾದವರ ಅವರಿಗೆ ರೂ.10 ಸಾವಿರ ನಗದು, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಗುವುದು. ಕಥಾ ವಿಭಾಗಕ್ಕೆ ನಾಡಿನ ಹಿರಿಯ ಕಥೆಗಾರರಾದ ಡಾ.ಅಮರೇಶ ನುಗಡೋಣಿ ಹಾಗೂ ಕಾವ್ಯ ವಿಭಾಗಕ್ಕೆ ಹಿರಿಯ ಕವಯಿತ್ರಿ ಲಲಿತಾ ಸಿದ್ದಬಸವಯ್ಯ ಅವರು ತೀರ್ಪುಗಾರರಾಗಿದ್ದರು. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಮಾನ್ವಿ ಪಟ್ಟಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಪ್ರಾರ್ಥನಾ ಟ್ರಸ್ಟ್ ಅಧ್ಯಕ್ಷರಾದ ಡಾ.ಯಂಕನಗೌಡ ಬೊಮ್ಮನ್ಹಾಳ ಹಾಗೂ ಸಂಚಾಲಕ ಬಸವರಾಜ ಭೋಗಾವತಿ ತಿಳಿಸಿದ್ದಾರೆ.