ಮಾತಲ್ಲ,ಕೃತಿ ಮುಖ್ಯ
ಮುಕ್ಕಣ್ಣ ಕರಿಗಾರ
ಮಾತನಾಡುವವರು ಕೆಲಸ ಮಾಡುವುದಿಲ್ಲ !
ಕೆಲಸ ಮಾಡುವವರು ಮಾತನಾಡುವುದಿಲ್ಲ.
ಇದನರಿಯದೆ ಸೊರಗುತ್ತಿದೆ
ಸರಕಾರಿ ಆಡಳಿತ ಯಂತ್ರ.
ಸೊಗಸಾಗಿ ಮಾತನಾಡಬಹುದು
ಉನ್ನತಾಧಿಕಾರಿಗಳ ಒಲವು ಪಡೆಯಬಹುದು
ಮಾತುಗಳಿಂದ,ಬಗೆಬಗೆಯ ಹಾವಭಾವಗಳ ಪ್ರದರ್ಶಿಸಿ.
ಸಾಧಿಸಿದಂತಾಯಿತೆ ಜನಹಿತ ಮಾತಿನಿಂದ ?
ಮಾತನಾಡುವವರಲ್ಲ
ಜನಹಿತಕೆ ದುಡಿಯವವರು ಬೇಕು
ಮಾತು,ಭಾಷಣ,ಪ್ರೆಸೆಂಟೇಶನ್ ಗಳೆಂಬ
ತೆವಲುಗಳ ಬಿಟ್ಟು ಇರಬೇಕು ಜನರ ನಡುವೆ.
ಜನರ ಬಳಿ ಹೋಗದೆ
ಜನರ ಅವಶ್ಯಕತೆಗಳನ್ನರಿಯದೆ
ಕುಳಿತು ಪಂಚತಾರಾ ಹೋಟೆಲ್ ಗಳಲ್ಲಿ
ಹಳ್ಳಿಗಳುದ್ಧಾರದ ಯೋಜನೆಗಳ ರೂಪಿಸಿದರೆ
ಉದ್ಧಾರವಾಗಬಹುದೆ ಹಳ್ಳಿಗಳು ?
ಎ.ಸಿ ರೂಮುಗಳಲ್ಲಿ ಕುಳಿತು
ಯೋಜನೆಗಳ ರೂಪಿಸುವವರಿಗೆ
ಅರ್ಥವಾಗಬಹುದೆ ರೈತರ ಕಷ್ಟ ?
ಕಂಪ್ಯೂಟರ್,ಮೊಬೈಲ್,ಇಂಟರ್ ನೆಟ್,ಗೂಗಲ್ ಸರ್ಚ್ ಗಳ ಮಂದಿಗೆ
ಕೇಳಿಸುತ್ತದೆಯೆ ನೊಂದವರ ನಿಟ್ಟುಸಿರು ?
ಮಾತಲ್ಲ,ಕೃತಿಮುಖ್ಯವಾಗಲಿ
ಕಂಪ್ಯೂಟರ್,ಲ್ಯಾಪ್ ಟಾಪ್ ಗಳ ಇಟ್ಟುಕೊಂಡು
ನೆಟ್ಟಿನಲ್ಲಿ ಕಣ್ಣುನೆಟ್ಟು
ಅಳೆಯಲಾಗದು ಜನಸಮುದಾಯದ ಸಂಕಷ್ಟ.
ಮಾತಲ್ಲ,ಮೌನವಾಗಿ ಆಲಿಸಿ
ಜನರ ಮಾತುಗಳನ್ನು
ಜನರ ನಡುವೆ ಇದ್ದು
ಜನರ ಅಗತ್ಯವನ್ನರಿತು ರೂಪಿಸಬೇಕಲ್ಲದೆ
ಜನತೋದ್ಧಾರದ ಕಾರ್ಯಕ್ರಮಗಳನ್ನು
ಮಾತಿನಲ್ಲಿ ಕಟ್ಟಬಾರದು ಮಹಲುಗಳ
ಪಂಚತಾರಾ ಹೋಟೆಲ್ ಗಳಲ್ಲಿ ರೂಪಿಸಬಾರದು
ಜನತೋದ್ಧಾರದ ಕಾರ್ಯಕ್ರಮಗಳನ್ನು.

15.02.2022