ಕಲ್ಯಾಣ ಕಾವ್ಯ
ನನ್ನ ಕವನಗಳು ಅರ್ಥವಾಗುವುದಿಲ್ಲ ಕೆಲವರಿಗೆ !
ಮುಕ್ಕಣ್ಣ ಕರಿಗಾರ
ನನ್ನ ಕವನಗಳು ಅರ್ಥವಾಗುವುದಿಲ್ಲ ಕೆಲವರಿಗೆ
ಅದರಲ್ಲೂ ಕೆಲವು ಜನ ಕವಿ,ವಿಮರ್ಶಕರುಗಳಿಗೆ
ಅರ್ಥವಾಗುವುದೇ ಇಲ್ಲ ನನ್ನ ಕವನಗಳು !
ನನ್ನ ಕವಿತೆ
ನನ್ನಂತೆಯೇ ಸರಳ,ನಿರಾಂಡಬರ
ಹೊರಗೆ ,ವೇದಿಕೆಗಳಲ್ಲಿ ಅರ್ಥವಾಗದ
ಕವನಗಳ ವಾಚಿಸಿ,
ರಂಜನೆಯ ಹೊಸ ಪದಪುಂಜಗಳ ಸೃಷ್ಟಿಸಿ
ಆ ಸಿದ್ಧಾಂತ,ಈ ತತ್ತ್ವಗಳೆಂಬ
ಘೋಷಣೆಯ ಭಾಷಣಪ್ರಿಯರಿಗೆ
ಅರ್ಥವಾಗುವುದಿಲ್ಲ
ಜನಸಾಮಾನ್ಯರನ್ನು ಲಕ್ಷ್ಯದಲ್ಲಿರಿಸಿಕೊಂಡು
ಮೂಡುತ್ತಿರುವ ನನ್ನ ಕಾವ್ಯ.
ಕವಿತೆ ಎಂದರೆ
ಹಾಗಿರಬೇಕು,ಹೀಗಿರಬೇಕು ಎನ್ನುವವರು
ಬದುಕಲರಿಯದೆ ಬರೆಯುತ್ತಾರೆ
ನೆಟ್ಟಗಿಟ್ಟುಕೊಳ್ಳದೆ ಸ್ವಂತ ಬದುಕನ್ನು
ಕೊಚ್ಚುತ್ತಾರೆ ಆದರ್ಶ
ಅರ್ಥವಾಗದ ಶಬ್ದ,ರೂಪಕ,ಪ್ರತಿಮೆಗಳ ಬಳಸಿ.
ಮುಚ್ಚಿಟ್ಟುಕೊಂಡು ಬದುಕುವ ಮಂದಿ
ಬಚ್ಚಿಟ್ಟಕೊಂಡ ವ್ಯಕ್ತಿತ್ವದಿಂದ
ಬರೆದು ಕವಿತೆ ದೊಡ್ಡವರಾದರೇನು ಪ್ರಯೋಜನ ?
ಈ ಇಂಥ ದೊಡ್ಡವರಿಗೆ ಅರ್ಥವಾಗುವುದಿಲ್ಲ
ನನ್ನ ಕವನ,ಕಾವ್ಯ.
ಜನಸಾಮಾನ್ಯರ ಬಾಳ ಭರವಸೆಯಾಗುವ
ಬೆಳಕು ನನ್ನ ಕವನ
ಪದವಿ -ಪ್ರಶಸ್ತಿ,ಪೀಠ- ಗದ್ದುಗೆಗಳ
ಆಸೆಯಲ್ಲಿ ಮೂಡುವುದಿಲ್ಲ ನನ್ನ ಕಾವ್ಯ
ಕಾವ್ಯದಿಂದಲೂ ಮಾಡಬಹುದು ಜನಸೇವೆ
ಎನ್ವ ಹಂಬಲದ ಜನತಾಜಗದೀಶ್ವರ
ಲಕ್ಷ್ಯದ ಕಾವ್ಯ ನನ್ನದು.
ಬೇಕಿಲ್ಲ ನನಗೆ ಛಂದಸ್ಸು,ಅಲಂಕಾರ,ಲಕ್ಷಣಗಳು
ಮುಟ್ಟಿದರಷ್ಟೇ ಸಾಕು ಜನಸಾಮಾನ್ಯರ
ಮನೆ- ಮನಗಳ
ಜನಸಾಮಾನ್ಯರ ಮನೆಯ ಬೆಳಕು
ಆಗುವ ನನ್ನ ಕಾವ್ಯ
ಜನಬದ್ಧತೆಯ ಕಾವ್ಯ.
ಉದ್ಧಾಮಕವಿಗಳು,ಮಹಾನ್ ವಿಮರ್ಶಕರು
ಓದಲೆಂದು,ವಿಮರ್ಶಿಸಲೆಂದು
ಬರೆಯುವುದಿಲ್ಲ ನಾನು ಕವಿತೆ
ಜನಸಾಮಾನ್ಯರ ಧ್ವನಿಯಾಗಲು
ಬರೆಯುತ್ತೇನೆ
ಜನಸಾಮಾನ್ಯರೆ ನನ್ನ ಕಾವ್ಯದ ವಸ್ತು,ಪ್ರಪಂಚ
ಜನಸಾಮಾನ್ಯರ ಕಲ್ಯಾಣವೇ
ನನ್ನ ಕಾವ್ಯದ ಆಶಯ.
ತೆರೆದಪುಸ್ತದಂತಿಹ ನನ್ನ ಬದುಕು
ಸರಳನುಡಿಕಾವ್ಯದ ಆಶಯ ಇಷ್ಟೆ
ಜನಸಾಮಾನ್ಯರಿಗೆ ಆಸರೆ ಆಗುವುದು
ಕವಿತೆಯಿಂದ ಜನಹಿತ ಸಾಧಿಸುವುದಕ್ಕೂ
ಮಿಗಿಲು ಮತ್ತಾವ ಭಾಗ್ಯವಿದೆ ?
ಪದವಿ ಪ್ರಶಸ್ತಿ,ಪೀಠ- ಗದ್ದುಗೆಗಳೆ
ಜೀವನದ ಸಾರ್ಥಕತೆ ಎನ್ನುವ
ಉದ್ಧಾಮ ಕವಿಗಳ ಕಾವ್ಯ
ಬಿದ್ದುಹೋಗುತ್ತದೆ ಕಾಲನಪರೀಕ್ಷೆಯನ್ನು ಎದುರಿಸದೆ
ನಾಡಜನಪದರ ಉದ್ಧಾರಬದ್ಧತೆಯ
ನನ್ನ ಕಾವ್ಯ ಎದ್ದುನಿಲ್ಲುತ್ತದೆ ಕಾಲಾತೀತವಾಗಿ
ಕವಿಗಳ ಮುಲಾಜು,ವಿಮರ್ಶಕರ ಹಂಗಿಲ್ಲದೆ !

13.02.2022