ಕಲ್ಯಾಣ ಕಾವ್ಯ-ಫೆಬ್ರವರಿ 13,2022 : ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ

ಫೆಬ್ರವರಿ 13,2022

ಮುಕ್ಕಣ್ಣ ಕರಿಗಾರ

ತುಂಬಿದವು ಇಂದಿಗೆ ಸರಕಾರಿ ಸೇವೆಯಲ್ಲಿ
ವರ್ಷಗಳು ಇಪ್ಪತ್ತೈದು
ಸರಕಾರಿ ಅಧಿಕಾರಿಯಾಗಿ ಪೂರೈಸಿದೆ
ಕಾಲುಶತಮಾನ !
ತೊಂಬತ್ತೇಳರ ಫೆಬ್ರವರಿ ಹದಿಮೂರರಂದು
ಮಟಮಟ ಮಧ್ಯಾಹ್ನ
ರಾಹು ಮುಹೂರ್ತದಲ್ಲಿ
ಸೇರಿದ್ದೆ ಸರಕಾರಿ ಸೇವೆಗೆ !
ಬಹುಮಹಡಿ ಕಟ್ಟಡದ ಅಧಿಕಾರಿಗಳು
ಪಿಳಿಪಿಳಿ ಕಣ್ಣುಬಿಟ್ಟುನೋಡಿದ್ದರಂದು
‘ ನಾಳೆ ಬಂದರಾಗದೆ?
ದಿನ ಸರಿಯಿಲ್ಲ ಇಂದು’
ಹಿತವಚನಗಳ ಧಿಕ್ಕರಿಸಿ ಕರ್ತವ್ಯಕ್ಕೆ
ಹಾಜರಾಗಿದ್ದೆ ಅಂದು

ತಾಯಿ ದುರ್ಗಾದೇವಿಯ ಅನುಗ್ರಹ
ಗುರುದೇವ ಕುಮಾರಸ್ವಾಮಿಗಳ ಆಶೀರ್ವಾದ
ಹೆತ್ತವರ ಹರಕೆಗಳು
ಸ್ನೇಹಿತರು,ಹಿತೈಷಿಗಳ ಶುಭಹಾರೈಕೆಗಳಷ್ಟೇ
ಬಂಡವಾಳವಾಗುಳ್ಳ ನಾನು ಆಯ್ಕೆಯಾಗಿದ್ದೆ
ಪತ್ರಾಂಕಿತ ಅಧಿಕಾರಿಯಾಗಿ ಕೆ ಪಿ ಎಸ್ ಸಿಯ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ.

ಆಯ್ಕೆಗೆ ಇದ್ದರೂ ಹಲವು ಅವಕಾಶ
ಜನಪರ ಇಲಾಖೆ ಎಂದು
ಆಯ್ದುಕೊಂಡಿದ್ದೆ
ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ ಇಲಾಖೆಯನ್ನು.
ಜೀವನದಲ್ಲಿ ನಾವು ಬಯಸಿದ್ದೆಲ್ಲ ಸಿಗುವುದಿಲ್ಲ
ಎನ್ನುವುದನ್ನು ಕಲಿಸಿತು ಇಲಾಖೆ
ಬುದ್ಧಿವಂತಿಕೆ,ದಕ್ಷತೆ,ಪ್ರಾಮಾಣಿಕತೆಗಳು
ಇದ್ದರಷ್ಟೇ ಸಾಲದು ಸರಕಾರಿ ಸೇವೆಯಲ್ಲಿ
ಉನ್ನತಿ ಸಾಧಿಸಲು ಎಂದೂ ಅರ್ಥವಾಯಿತು
ವರ್ಷಗಳು ಇಪ್ಪತ್ತೈದು ಪೂರೈಸಿದರೂ
ಎಲ್ಲರಂತೆ ಕಟ್ಟಲಿಲ್ಲ ಅರಮನೆ,ಭವ್ಯಸೌಧಗಳ
ಇಡಲಿಲ್ಲ ಕೋಟಿ ಕೋಟಿ ಬ್ಯಾಂಕ್ ಬ್ಯಾಲೆನ್ಸ್.
ಸಂತೋಷದ ಸಂಗತಿ ಎಂದರೆ
ಎಲ್ಲರಂತೆ ಮಲಗಲು ನಿದ್ರೆ ಮಾತ್ರೆ ನುಂಗುವುದಿಲ್ಲ
ರಕ್ತದೊತ್ತಡ,ಮಧುಮೇಹ ರೋಗಗಳು ಕಾಡುತ್ತಿಲ್ಲ
ಉಂಡಿದ್ದು ಜೀರ್ಣವಾಗುತ್ತದೆ
ರಾತ್ರಿ ಮಲಗಿದೊಡನೆ ನಿದ್ದೆ ಬರುತ್ತದೆ
ಆಸ್ಪತ್ರೆ ,ವೈದ್ಯರುಗಳು ಅಂತ ಹೋಗಿದ್ದು
ಒಂದೆರಡು ಸಾರೆ ಮಾತ್ರ.

ಕರ್ನಾಟಕದ ಉದ್ದಗಲ ದರ್ಶನ ಮಾಡಿಸಿದರು
ಬದಲಾಗಲಿಲ್ಲ ನಾನು ಎಲ್ಲಿಯೇ ಹೋದರೂ !
ಜನಸಾಮಾನ್ಯರ ಒಡನಾಡ,ಬಾಂಧವ್ಯ ಬಿಡಲಿಲ್ಲ
ಘನಮಾನ್ಯರುಗಳ ಮನೆಬಾಗಿಲು ಕಾಯಲಿಲ್ಲ.

ಪ್ರಶ್ನೆ ಮಾಡುವ ಸ್ವಭಾವ
ಹುಟ್ಟಿನಿಂದ ಬಂದ ಸ್ವಾಭಿಮಾನ
ಇಟ್ಟುಕೊಂಡು ಕಷ್ಟಪಟ್ಟದ್ದಾಯಿತು
ನೆಟ್ಟಗಿನ ನಾಳೆಗಳು ಬಂದಾವು ಎಂಬ ನಿರೀಕ್ಷೆಯಲ್ಲೇ
ಪೂರೈಸಿದೆ ಇಪ್ಪತ್ನಾಲ್ಕು ವರ್ಷಗಳು
‘ಜೀ ಹುಜೂರ್ ‘ಎನ್ನದ ಕಾರಣಕ್ಕೆ
ಮತ್ತೆ ಹೊಂದಿಕೊಂಡು ಹೋಗದ ಮೂರ್ಖತನಕ್ಕೆ
ತೆತ್ತಾಯಿತು ಸಾಕಷ್ಟು ಬೆಲೆ.
ಈಗ ಎರಡು ಹೆಣ್ಣುಮಕ್ಕಳ ತಂದೆ
ಎಂಬ ಕಾರಣಕ್ಕೆ
ಅನ್ನ ಕಸಿದುಕೊಳ್ಳಲು ಹೇಸದ ನಿರ್ದಯಿಗಳ
ಕಲ್ಲುಮನಸ್ಸುಗಳಿಗೆ
ಹೆದರಿ ಮೆತ್ತಗಾಗಿದ್ದೇನೆ
ನನ್ನ ಹಠಮಾರಿತನ ಎಳೆ ಕಂದಮ್ಮಗಳ
ಭವಿಷ್ಯ ಕಸಿಯದಿರಲಿ ಎಂದು.
ಈಗೀಗ ಅನ್ನಿಸುತ್ತಿದೆ
ವ್ಯರ್ಥ ಹಾಳಾದವು ಇಪ್ಪತ್ತೈದು ವರ್ಷಗಳು
ಇದ್ದರೆ ಸರಕಾರಿ ಸೇವೆಯಿಂದ ಹೊರಗೆ
ಸಾಧಿಸಬಹುದಿತ್ತು ಏನೆಲ್ಲ
ಮಂಡಿಊರುವಂತೆ ಮಾಡಬಹುದಿತ್ತು ಉನ್ಮತ್ತರನು.
ಆದರೇನು ಹೊತ್ತಾಯಿತು ಮಾಳಕ್ಕೆ ಮಣ್ಣು
ಕೋಣದಂತೆ.
ಜನಸಾಮಾನ್ಯರ ಅಧಿಕಾರಿ ನಾನೆಂಬ
ಖುಷಿ ಒಂದಿದೆ.
ನರೆಗಾ ಕೂಲಿಕಾರರು ಮರೆತಿಲ್ಲ ಇಂದಿಗೂ ನನ್ನನ್ನು
ಹಳ್ಳಿಗಳ ಜನಸಾಮಾನ್ಯರು
ನೆನೆಯುತ್ತಿರುತ್ತಾರೆ
ಕೆಲಸ ಮಾಡಿದ ಸ್ಥಳಗಳಲ್ಲಿ ಮೂಡಿಸಿದ್ದೇನೆ
ನನ್ನದೇ ಛಾಪು.
ಯಾರು ಒಪ್ಪಲಿ,ಒಪ್ಪದೇ ಇರಲಿ
‘ನನಗೆ ಪರ್ಯಾಯರಿಲ್ಲ’ ಎಂಬಂತೆ
ಕಾರ್ಯನಿರ್ವಹಿಸಿದ ಶ್ರೇಯಸ್ಸು ನನ್ನದು.
ಘನಮಾನ್ಯರ ಬೂಟುಗಳ ಒರೆಸಿ
ದೊಡ್ಡವರಾದವರ ನಡುವೆಯೇ
ಜನಸಾಮಾನ್ಯರ ಹಿತಕಾಯ್ದು
ಭಿನ್ನನಾಗಿ ಇತರರಿಗಿಂತ
ಕಾಯ್ದುಕೊಂಡಿದ್ದೇನೆ ನನ್ನತನ.
ಸಾಕಲ್ಲವೆ ಈ ಸಂತೃಪ್ತಿ ?

ಮುಕ್ಕಣ್ಣ ಕರಿಗಾರ

13.02.2022