ಮಾವಿನ ಮರ ಮತ್ತು ಮನುಷ್ಯರು
ಮುಕ್ಕಣ್ಣ ಕರಿಗಾರ
ದೊಡ್ಡ ಮಾವಿನ ಮರ ಒಂದು
ಬೆಳೆದು ನಿಂತಿತ್ತು ದಾರಿಯ ನಡುವೆ
ಮೈತುಂಬ ಹಣ್ಣುಗಳ ತುಂಬಿಕೊಂಡು
ದಟ್ಟ ಹಸಿರ ಎಲೆಗಳು
ಮೊಗ್ಗುಗಳ ಮಘಮಘಿಸುವ ವಾಸನೆ
ಪಸರಿಸಿತ್ತು ಮೈಲುದೂರ.
ಉರಿಬೇಸಿಗೆಯ ಮಧ್ಯಾಹ್ನ
ಒಬ್ಬ ಬಂದ
ನಡೆದು ದಣಿವು,ಆಯಾಸಗೊಂಡಿದ್ದ
ಮರದಡಿ ಬಂದು
ಹೊಟ್ಟೆತುಂಬ ರಸಭರಿತ ಮಾವಿನಹಣ್ಣುಗಳ ತಿಂದು
ನಿದ್ದೆಗೈದ ಸುಖವಾಗಿ ತುಸುಹೊತ್ತು
ಮತ್ತೆ ನಡೆದ
‘ ಎಂಥ ಮಾವಿನ ಮರ ‘ ಎಂದು ಉದ್ಗರಿಸುತ್ತ
ಸ್ವಲ್ಪ ಹೊತ್ತಿನ ಬಳಿಕ
ಆ ದಾರಿಯಲ್ಲಿ ಮತ್ತೊಬ್ಬ ಬಂದ
ಅವನಿಗೂ ಹಸಿವು- ದಣಿವು.
ಮಾವಿನಮರದಡಿ ಕುಳಿತು
ಹೊಟ್ಟೆತುಂಬುವಷ್ಟು ಹಣ್ಣುಗಳ ತಿಂದು
ವಿಶ್ರಮಿಸಿದ ಕೆಲಹೊತ್ತು
ಅವನೂ ನಡೆದ
ಹೋಗುವಾಗ ಉದ್ಗರಿಸಿದ
‘ ಆಮ್,ಬಹುತ್ ಅಚ್ಛಾ ಆಮ್ ‘
ಅವನು ಹೋದಬಳಿಕ
ಮತ್ತೊಬ್ಬ ಬಂದ ಅದೇ ದಾರಿಯಲ್ಲಿ
ಮೊದಲ ಇಬ್ಬರಂತೆ ಇವನಿಗೂ
ಹಸಿವಿನ ಬಾಧೆ,ದಣಿವು
ಮಾವಿನಮರದಡಿ ಬಂದು
ಹಣ್ಣುಗಳ ತಿಂದು ,ನಿದ್ದೆಹೋದ ಸ್ವಲ್ಪಹೊತ್ತು.
ಅವನೂ ನಡೆದ
ಹೋಗುವಾಗ ಉದ್ಗರಿಸಿದ
Sweet Mangos
What a big tree !
ತಮ್ಮ ಗುರಿಮುಟ್ಟಲು ನಡೆದಿದ್ದ
ಮೂವರು ಪ್ರಯಾಣಿಕರು
ಹಿಂದು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಾಗಿದ್ದರು
ಮೂವರು ಸವಿದರು ರಸಭರಿತ
ಮಾವಿನ ಹಣ್ಣುಗಳ ಸವಿಯನ್ನು
ಮೂವರು ಸುಖನಿದ್ದೆಗೈದು
ಪಯಣದ ದಣಿವಾರಿಸಿಕೊಂಡರು
ತಮಗೆ ಹಣ್ಣು,ಆಶ್ರಯಗಳನ್ನಿತ್ತ ಮರಕ್ಕೆ
ಇಟ್ಟರು ಮೂವರು ತಮ್ಮದೆ ಹೆಸರು
ತಮ್ಮ ಮತ- ಧರ್ಮಗಳ ನಂಬಿಕೆಯ ಹೆಸರು.
ಮಾವಿನ ಮರ
ಕೇಳಲಿಲ್ಲ ಮೂವರನ್ನು ‘ ನೀವು ಯಾರು?
ಇಲ್ಲಿಗೇಕೆ ಬಂದಿರಿ ಎಂದು.
ಮೂವರಿಗೂ ಹಣ್ಣುಗಳು ಮತ್ತು ನೆರಳು
ನೀಡಿತ್ತು
ಮರವೂ ಒಂದೇ
ಆ ಮರದ ಹಣ್ಣುಗಳು
ಹಣ್ಣುಗಳ ರಸ,ರುಚಿಯೂ ಒಂದೇ!
ಮೂವರ ಹಸಿವು,ದಣಿವುಗಳಡಗಿದ್ದವು ಆ ಮರದಡಿ
ತಮಗೆ ಆಸರೆಯಾದ ಒಂದೇ ಮರ
ಮತ್ತು ಆ ಮರದ ಹಣ್ಣುಗಳನ್ನು ಮೂವರು ಕರೆದದ್ದು
ಬೇರೆಬೇರೆ ಹೆಸರುಗಳಿಂದ !
ಯಾರು ಹೇಗೆ ಕರೆದರೂ
ಬದಲಾಗಲಿಲ್ಲ ಮಾವಿನ ಹಣ್ಣುಗಳ ರುಚಿ
ಉಡುಗೆ ತೊಡುಗೆಗಳ ನೋಡದೆ
ಮರವು ನೀಡಿತ್ತು ನೆರಳು ಮೂವರಿಗೂ.
ಮಾವಿನ ಮರವು
ಹಿಗ್ಗಲಿಲ್ಲ ಹಿಂದುವು ಬಳಿ ಬಂದಾಗ
ಕುಗ್ಗಲಿಲ್ಲ ಮುಸ್ಲಿಂ ಬಳಿ ಬಂದಾಗ
ಆತಂಕಗೊಳ್ಳಲಿಲ್ಲ ಕ್ರಿಶ್ಚಿಯನ್ ಬಳಿ ಬಂದಾಗ
ಮರವಾಗಿದ್ದ ಅದು
ಮನುಷ್ಯರಿಗೆ ಪ್ರೀತಿಯಿಂದ ನೀಡಿತ್ತು
ಹಣ್ಣು, ಆಶ್ರಯ.
ಮರಕ್ಕೆ ಭಾಷೆ ಇಲ್ಲ,ಪ್ರೀತಿಸುತ್ತದೆ ಎಲ್ಲರನ್ನು
ಮನುಷ್ಯರಿಗೆ ಭಾಷೆ ಇದೆ,ದ್ವೇಷಿಸುತ್ತಾರೆ
ಒಬ್ಬರು ಮತ್ತೊಬ್ಬರನ್ನು.
ಹಣ್ಣು, ನೆರಳು ಕೊಡುವುದರಲ್ಲೇ ಕಾಣುತ್ತದೆ
ಮಾವಿನ ಮರ ತನ್ನ ಸಾರ್ಥಕತೆ
ಮನುಷ್ಯರು ಗುರುತಿಸುತ್ತಾರೆ
‘ ನನ್ನವರು’ ಮತ್ತು ‘ ನನ್ನವರು ಅಲ್ಲದವರು ‘ ಎಂದು !

12.02.2022