ತರುಣ ಭಕ್ತ ಮತ್ತು ಪರಮಾತ್ಮ
ಮುಕ್ಕಣ್ಣ ಕರಿಗಾರ
ಏರುಜವ್ವನದ ತರುಣನೊಬ್ಬ
ಪರಮಾತ್ಮನ ಪಥದಿ ನಡೆದಿದ್ದ
ನಂಬಿಕೆ,ಪರಂಪರೆ,ಓದು,ಸತ್ಪುರುಷರ
ಸಂಗಗಳಿಂದ ತಿಳಿದಿದ್ದ ಪರಮಾತ್ಮನು
“ಸರ್ವಶಕ್ತ”,”ಸರ್ವಜ್ಞ”,”ಸರ್ವಾಂತರ್ಯಾಮಿ”
ತಾನಿರುವ ಊರು,ಸಮಾಜ,ದೇಶ- ಜಗತ್ತುಗಳಲ್ಲಿ
ಕಂಡು ಕೇಳುತ್ತಿದ್ದ ವರ್ತಮಾನಗಳ ಬಗ್ಗೆ
ಉದ್ವಿಗ್ನಗೊಳ್ಳುತ್ತಿದ್ದ
ಏಕಿಂತು ಅಸಮಾನತೆ ?
ಕಚ್ಚಾಡುತ್ತಿಹರೇಕೆ ಮನುಷ್ಯರು
ನನ್ನಧರ್ಮ ಶ್ರೇಷ್ಠ,ನಿನ್ನ ಧರ್ಮ ಕನಿಷ್ಟ ಎಂದು ?
ಕುಬೇರರೊಂದು ಕಡೆ,ನಿರ್ಗತಿಕರು ಮತ್ತೊಂದು ಕಡೆ
ತಿಂದದ್ದನ್ನು ಜೀರ್ಣಿಸಿಕೊಳ್ಳಲು ಮಾತ್ರೆ ನುಂಗುವವರು ಒಂದುಕಡೆ
ತುತ್ತು ಅನ್ನಕ್ಕೂ ಗತಿ ಇಲ್ಲದವರು ಮತ್ತೊಂದು ಕಡೆ
ಮೇಲು – ಕೀಳು,
ಬಡವ- ಶ್ರೀಮಂತ
ಪಟ್ಟಭದ್ರರು- ಅವಕಾಶವಂಚಿತರು
ಈ ಎಲ್ಲ ವೈರುಧ್ಯಗಳೇಕೆ ಪರಮಾತ್ಮ
ನೀನು ಸೃಷ್ಟಿಸಿದ ಪ್ರಪಂಚದಲ್ಲಿ ?
ಎಂದು ದಿನವೂ ಕೇಳುತ್ತಿದ್ದ
ಭಗವಂತನ ಸನ್ನಿಧಿಯಲ್ಲಿ.
ತರುಣ ಭಕ್ತನ ಪ್ರಾಮಾಣಿಕ ಮೊರೆ
ಸರ್ವರೇಳ್ಗೆಯ ಭಾವನೆಗಳಿಗೆ
ಮೆಚ್ಚಿದ ಪರಮಾತ್ಮನು ಒಂದು ದಿನ ಉತ್ತರಿಸಿದ ;
‘ ನಿನ್ನ ಪ್ರಶ್ನೆಗಳೆಲ್ಲವೂ ಸಹಜ;
ಕೇಳುತ್ತಲೇ ಬಂದಿದ್ದಾರೆ ನಿನ್ನಂತೆ ಹಿಂದೆ ನನ್ನ ಭಕ್ತರು
ಉತ್ತರಿಸುವೆ ನಿನಗೂ ಇಂದು
ನನಗೆ ಕಣ್ಣುಗಳಿಲ್ಲ– ನೋಡಲಾರೆ
ಒಳಿತು- ಕೆಡುಕುಗಳೆಂದು ವಿಂಗಡಿಸಿ
ನನಗೆ ಕಿವಿಗಳಿಲ್ಲ — ಕೇಳಲಾರೆ
ಸ್ತುತಿ- ನಿಂದೆಗಳ
ನನಗೆ ಮೂಗು ಇಲ್ಲ — ಆಘ್ರಾಣಿಸಲಾರೆ
ಷಡ್ರಸೋಪೇತ ಭಕ್ಷ್ಯ ಭೋಜ್ಯಗಳ ನೈವೇದ್ಯವನು.
ನನಗೆ ಹೊಟ್ಟೆ ಇಲ್ಲ — ಉಣ್ಣಲಾರೆ
ಕಿಚ್ಚು ಮತ್ಸರ,ದ್ವೇಷ – ಅಸೂಯೆಗಳು ಅರ್ಥವಾಗವು ನನಗೆ’.
ಪರಮಾತ್ಮನ ಮಾತುಗಳ ಕೇಳುತ್ತ
ತರುಣ ಭಕ್ತನ ಮೈ ಬೆವರತೊಡಗಿತು.
ಕೊನೆಗೆ ಪರಮಾತ್ಮ ಹೇಳಿದ್ದು ;
‘ ಅಂಗಾಗಗಳಿಲ್ಲದ ನನಗೆ ಇರುವುದು
ಹೃದಯ ಮಾತ್ರ !
ಪ್ರೀತಿಸುತ್ತೇನೆ ಎಲ್ಲರನ್ನೂ
ಒಳ್ಳೆಯವರು,ಕೆಟ್ಟವರು
ಆಸ್ತಿಕರು– ನಾಸ್ತಿಕರು
ಧರ್ಮಿಗಳು,ಅಧರ್ಮಿಗಳು
ಭಕ್ತರು – ಭವಿಗಳು
ಯೋಗಿಗಳು– ರೋಗಿಗಳು
ಎಲ್ಲರೂ ಒಂದೇ ನನಗೆ
ಪ್ರೀತಿಸುತ್ತೇನೆ ಎಲ್ಲರನ್ನು.
ಅಂಗಾಂಗ ಉಳ್ಳ ನೀವು ಮನುಷ್ಯರು
ಕಲ್ಪಿಸಿಕೊಂಡ ಕೃತ್ರಿಮ ತರತಮಗಳು
ಮತ– ಧರ್ಮಗಳ ಭೇದ
ಸೃಷ್ಟಿಸಿಕೊಂಡ ಧರ್ಮಗ್ರಂಥಗಳು
ಶಾಸ್ತ್ರ- ಪುರಾಣ,ತರ್ಕ- ಕಟ್ಟಳೆಗಳು
ಅಂಗಗಳು ಇಲ್ಲದ ಸರ್ವಾತ್ಮನಾದ
ನನ್ನನು ಬಾಧಿಸವು,ಬಂಧಿಸವು ‘.
‘ ಶರಣು ಪ್ರಭುವೆ,ಪರಮೇಶ್ವರ ‘
ದೈನ್ಯನಾಗಿ, ವಿನೀತಭಾವದಿ ನಮಸ್ಕರಿಸಿದ
ತರುಣ ಭಕ್ತ.

11.02.2022