ಕಲ್ಯಾಣ ಕಾವ್ಯ : ಗುರುವಾಗಬಂದವನಲ್ಲ ನಾನು ! – ಮುಕ್ಕಣ್ಣ ಕರಿಗಾರ

ಗುರುವಾಗಬಂದವನಲ್ಲ ನಾನು !

ಮುಕ್ಕಣ್ಣ ಕರಿಗಾರ

ಗುರುವಾಗಬಂದವನಲ್ಲ ನಾನು,ಲೋಕ
ಗುರು ಶಿವನನ್ನು ಎಲ್ಲರ ಎದೆಪೀಠಗಳಲ್ಲಿ
ಸ್ಥಾಪಿಸಬಂದವನು.
ಗುರುವೇನು,ಅರಿವೇನು,ಮರವೆ ಏನು
ಎಲ್ಲ ಅವನದೆ,ಶಿವನದೇ ಲೀಲೆ !

ಗುರುವೆಂದು ಗುರುತಿಸಿಕೊಂಡು ಫಲವೇನು ಶಿವನಾಗದೆ ?
ಗುರುವೆಂಬುದೇನು ಸಂತೆಯ ಸರಕೆ
ಕೊಂಡು ಉಂಡು ಅನುಭವಿಸಲು ?
ಮಾತುಸತ್ತಮೌನ ಗುರುವೆಂಬುದು
ಮಾತಿಲ್ಲದ ನಿಶ್ಯಬ್ದ ಬಯಲಲ್ಲಿ
ಮೂಡುವನು ಗುರು,ವರಗುರು ಪರಗುರು,ಪರಮಗುರು.

ಪರಶಿವನ ಸಾನ್ನಿಧ್ಯಸುಖವನನುಭವಿಸದೆ ಎಂತು
ಗುರುವಾಗಬಲ್ಲ? ಶಿವಾನಂದವನುಣ್ಣದೆ ಆಗಬಲ್ಲನೆಂತು ಹಿರಿಯ?
ಗುರುವೆಂಬುದು ಭ್ರಾಂತಿ,ಶಿಷ್ಯನೆಂಬುದು ಮರುಳು
ಪೂರ್ಣವೆಂಬುದೇ ಸತ್ಯ
ಅಪೂರ್ಣಭಾವವದು ಮಿಥ್ಯೆ.

ಗುರುವು ತಾನೆ,ಶಿಷ್ಯನೂ ತಾನೆ !
ಎಲ್ಲ ತನ್ನೊಳಗೆ.ಹೊರಗಣಗುರು ಪಥ ತೋರಬಲ್ಲನಷ್ಟೆ.ನಡೆವರಾರು?
ಗುರುವೊ,ಶಿಷ್ಯನೊ? ನಡೆದು ಗುರಿಮುಟ್ಟುವ ಹೆಬ್ಬಯಕೆಯೊಂದು ತನ್ನಲ್ಲಿಲ್ಲದಿರೆ ಎಂಥ ಸಮರ್ಥಗುರು ಮಾಡಬಲ್ಲನೇನು ?

ಗುರುವಿನಗುರು ಪರಮಗುರು ಶಿವ
ಕರುಣವಿಟ್ಟು ನೋಡದ ಹೊರತು
ಉದಿಸದು ಆತ್ಮಭಾವ,ಮೂಡದು ಶಿವಭಕ್ತಿ
ಎದೆಯು ಶಿವನಪೀಠವಾದವನೆ ಗುರು,ಮುಕ್ತ.

ಎಲ್ಲರೆದೆಗಳಲ್ಲಿ ಶಿವಪೀಠ ಸ್ಥಾಪಿಸುವ ಬಯಕೆ
ಅದಕ್ಕೆಂದೇ ಕಟ್ಟಿಹೆನು ಶ್ರೀಕ್ಷೇತ್ರ ಕೈಲಾಸವನು
ವಿಶ್ವನಿಯಾಮಕ ಶಿವನು ತನ್ನಭೇದ್ಯಶಕ್ತಿಯಿಂದೊಡಗೂಡಿ
ನಟಿಸಿದ ವಿಶ್ವಲೀಲೆಯೇ ಮೂರ್ತಿವೆತ್ತ ವಿಶ್ವೇಶ್ವರ- ವಿಶ್ವೇಶ್ವರಿಯರು.
ಶಿವದುರ್ಗೆಯರೆಂಬುದು ಹೆಸರಷ್ಟೆ
ನಿರಾಕಾರವು ಆಕಾರದಳೆದು ನಟಿಸಿದ
ಲೀಲೆ ! ವಿಶ್ವಲೀಲೆ ! ವಿಶ್ವೇಶ್ವರ ವಿಶ್ವೇಶ್ವರಿಯರ
ಶಿವ ದುರ್ಗಾಲೀಲೆ !

ಎಲ್ಲ ದ್ವಂದ್ವಗಳಳಿವವು ಇಲ್ಲಿ
ಎಲ್ಲ ಭೇದಗಳಡಗುವವು ಇಲ್ಲಿ
ಎಲ್ಲವೂ ಇಲ್ಲವಾಗುವುದು ಇಲ್ಲಿ
ಎಲ್ಲದರ ಮೂಲವೂ ಇಲ್ಲಿಯೇ
ಉಮೆಯೊಲ್ಲಭ ಈ ವಿಶ್ವೇಶ್ವರನ ಸನ್ನಿಧಿಯಲ್ಲಿ.

ಮುಕ್ಕಣ್ಣ ಕರಿಗಾರ

07.02.2022