ಕಲ್ಯಾಣ ಕಾವ್ಯ : ನಮ್ಮೂರ ಸಿದ್ಧಾರ್ಥ – ಮುಕ್ಕಣ್ಣ ಕರಿಗಾರ

ನಮ್ಮೂರ ಸಿದ್ಧಾರ್ಥ

ಮುಕ್ಕಣ್ಣ ಕರಿಗಾರ

ಇದ್ದ ನಮ್ಮೂರಲ್ಲೊಬ್ಬ ಸಿದ್ಧಾರ್ಥ !
ಬುದ್ಧನನ್ನು ಓದಿ ಮತ್ತೊಬ್ಬ
ಬುದ್ಧನಾಗಬೇಕೆಂದು ಕನಸುಕಂಡಿದ್ದ

ಗೆಳೆಯ ಬೇರೆ ನಮಗೆ
ತಮಾಷೆ ಮಾಡುತ್ತಿದ್ದೆವು
ಸಿದ್ಧಾರ್ಥನಂತೆ ಬರೆದಿಲ್ಲ ನಿನ್ನ ಜಾತಕ
ಬರುವುದಿಲ್ಲ ಜ್ಯೋತಿಷಿ ಪುರೋಹಿತರು
ನಿನ್ನ ಭವಿಷ್ಯ ಹೇಳಲು
ಮೇಲಾಗಿ ನಿನಗಿಲ್ಲ ರಾಜ್ಯ ಸಾಮ್ರಾಜ್ಯ
ತೊರೆದು ಹೋಗಲು
ಬದುಕು ನಮ್ಮಂತೆ,ಎಲ್ಲರಂತೆ !

ಭಾವುಕ ಜೀವಿ ನಮ್ಮ ಸಿದ್ಧಾರ್ಥ
ನಡೆಯುವ ಅನ್ಯಾಯಗಳ ಕಂಡು
ಕುದಿಯುತ್ತಿದ್ದ,ತಳಮಳಿಸುತ್ತಿದ್ದ
ಆದರೇನು ಮಾಡುವುದು
ಬದುಕಲೇಬೇಕಿತ್ತು ನಾವು ಹೊಂದಿಕೊಂಡು

ಬುದ್ಧನಾದ ಸಿದ್ಧಾರ್ಥನ ಕಾಲ ಬೇರೆಯದೆ ಆಗಿತ್ತು !
ನಮ್ಮ ಸಿದ್ಧಾರ್ಥನ ಕಾಲವೋ
ಈಗಿನದು !
ವಾಸ್ತವವನ್ನರಿಯದೆ
ಒಂದು ಮಧ್ಯರಾತ್ರಿ ಎದ್ದು ಹೋದ
ಮನೆ ಮಡದಿ ಮಗನನ್ನು ತೊರೆದು!

ನಾವರಿಯೆವು
ಯಾವ ಬೋಧಿವೃಕ್ಷದಡಿ ಕುಳಿತನೋ
ತಪಸ್ಸಿಗೆ
ಆಯಿತೋ ಇಲ್ಲವೋ ಜ್ಞಾನೋದಯ
ಹೆಂಡತಿ ಮಕ್ಕಳ ಪಾಡಂತೂ
ಕಣ್ಣೀರಲ್ಲಿ ಕೈತೊಳೆವಂತಾಯ್ತು.

ಕೊನೆಗೊಂದು ದಿನ ಬಂದ ಸಿದ್ಧಾರ್ಥ
ನಮ್ಮೂರಿಗೆ
ಆದರೆ ಬುದ್ಧನಾಗಿ ಬರಲಿಲ್ಲ
ಹೆಣವಾಗಿ ಬಂದ !

ಅಂಬ್ಯುಲೆನ್ಸಿನಲ್ಲಿ ಹೆಣತಂದವರು
ಹೇಳಿದರು ಏನು ಏನೋ ಕಥೆ ಪುರಾಣ
ಪೋಸ್ಟ್ ಮಾರ್ಟಮ್ ಮಾಡಿದ್ದ ಬಾಡಿ
ನಮ್ಮ ಡಾಕ್ಟರ್ ಹೇಳಿದ್ದು
‘ ಕೊಲೆ ಮಾಡಿದ್ದಾರೆ!’

ಎಲ್ಲೋ ಅನ್ಯಾಯದ ವಿರುದ್ಧ
ಮಾಡಿದ್ದನಂತೆ ಗಲಾಟೆ ಉಳ್ಳವರ ವಿರುದ್ಧ
ಎತ್ತಿಕಟ್ಟಿದ್ದನಂತೆ ಜನರನ್ನು ಧಣಿಗಳ ವಿರುದ್ಧ
ಊರುಕೊಳ್ಳೆ ಹೊಡೆದು ದೊಡ್ಡವರಾದವರ
ವಿರುದ್ಧ ತೊಡೆ ತಟ್ಟಿದ್ದನಂತೆ
ದೊಡ್ಡವರಿಗೆ ಲೆಕ್ಕಕ್ಕೆ ಇಲ್ಲದ
ಸಣ್ಣಜನರೊಡಗೂಡಿ.

ಜ್ಞಾನೋದಯದ ಬೆಳಕಿನಲ್ಲಿ
ಜಗತ್ತನ್ನೇ ಬೆಳಗುವೆ
ಎಂದು ಹೊರಟಿದ್ದ ನಮ್ಮೂರ ಸಿದ್ಧಾರ್ಥ
ಬೆಳಕಾಗಲಿಲ್ಲ ತನ್ನ ಹೆಂಡತಿ ಮಕ್ಕಳಿಗೆ.
ಮತ್ತೆ ಕೇಳಿದೆವು
ಯಾರ ಹಿತಕ್ಕೆ ಹೋರಾಟಕ್ಕಿಳಿದಿದ್ದನೋ
ನಮ್ಮ ಸಿದ್ಧಾರ್ಥ
ಆ ಊರ ಜನರೆಲ್ಲ ಈಗ ಮತ್ತೆ
ಖುಷಿಯಾಗಿ ಇದ್ದಾರಂತೆ ಊರ ದೊಡ್ಡವರೊಂದಿಗೆ !

ಮುಕ್ಕಣ್ಣ ಕರಿಗಾರ

01.02.20221