ಕಲ್ಯಾಣ ಕಾವ್ಯ
ಮಡಿವಾಳ ಮಾಚಿದೇವರು
ಮುಕ್ಕಣ್ಣ ಕರಿಗಾರ
ಅಂತಿಂಥ ಮಡಿವಾಳನಲ್ಲ ಈತ
ಜಗವನ್ನೆ ಸ್ವಚ್ಛಗೊಳಿಸಬಂದ ಧೀಮಂತ !
ಕಲ್ಯಾಣದಲ್ಲಿ ಶರಣರ ಬಟ್ಟೆ ತೋಳೆದು ಶುಭ್ರಗೊಳಿಸುತ್ತ
ಲೋಕವನು ತಿಳಿಗೊಳಿಸುವ ಕನಸು ಕಂಡಾತ.
ಶುದ್ಧಿಯಿಂದ ಸಿದ್ಧಿ,ಶಿವನೊಲುಮೆ
ಎಂದು ನಂಬಿದ್ದ ಈತ
ತಾನು ಶುದ್ಧನಾಗುತ್ತ ಶರಣಸಮೂಹವನ್ನು
ಶುದ್ಧಿಗೊಳಿಸಿದ ಶುದ್ಧಾತ್ಮ.
ವೇಷಲಾಂಛನಧಾರಿಗಳ ಹಾದಿತಪ್ಪಿದ ನಡೆಯ
ಖಂಡಿಸುತ್ತ ಕೂಳಿನಾಸೆಗಾಗಿ ವೇಷಹಾಕುವರಿಗೆ ಸಲ್ಲದು ಮನ್ನಣೆ
ಎಂದು ಸಾರಿದ ದಿಟ್ಟ,ಗಟ್ಟಿಗ.
ಬರಿದೆ ಲಿಂಗಧರಿಸಿದರಾಗದು
ಇರಬೇಕು ಲಿಂಗದೊಳು ನಿಷ್ಠೆ
ಅನ್ಯದೈವಗಳಿಗೆರಗದ ಶಿವನಿಷ್ಠೆ
ಎನ್ನುತ್ತ ಲಿಂಗವಂತರಿಗೆ ಬುದ್ಧಿಹೇಳಿದ ಸಿದ್ಧಿಪುರುಷ.
ಏರಿಬಂದ ಬಿಜ್ಜಳನ ಆನೆಯನ್ನು
ಕೊಂದ ಧೀರ; ಕಲ್ಯಾಣ ಕ್ರಾಂತಿಯ ಬಳಿಕ
ಚೆನ್ನಬಸವಣ್ಣನವರ ನೇತೃತ್ವದ ಶರಣಗಣವನ್ನು
ರಕ್ಷಿಸುತ್ತ ನಡೆದ ದಂಡನಾಯಕ,ಗಂಡುಗಲಿ.
ಶರಣರು,ವಚನಗಳ ಕಟ್ಟುಗಳ
ಉಳವಿಗೆ ಮುಟ್ಟಿಸುವ ಕಾರ್ಯದಲ್ಲಿ
ಅಡ್ಡಬಂದ ಬಿಜ್ಜಳನ ಸೇನೆಯೊಂದಿಗೆ
ಹೋರಾಡಿ ಗೊಡಚಿಯಲ್ಲಿ ಕಾಯತೊರೆದ ಕಲಿ.
ಉಳಿಯಲು ವಚನಸಾಹಿತ್ಯ
ಬೆಳೆಯಲು ವಚನಧರ್ಮ,ಸಂಸ್ಕೃತಿ
ಬದ್ಧಕಂಕಣನಾಗಿ ಹೋರಾಡಿ ಗೆದ್ದ
ಮಡಿವಾಳ ಮಾಚಿದೇವರನು
ವೀರಭದ್ರನ ಅವತಾರವೆಂದು ಕೊಂಡಾಡಿ
ಪೂಜೆಗೈದರದು ಸಹಜ
ಹಾಗೆಯೇ ಇತ್ತು ಮಾಚಿದೇವನ
ರುದ್ರಗಾಂಭಿರ್ಯ ಶರಣವ್ಯಕ್ತಿತ್ವ.
ಕಲಿವೀರಭದ್ರನಂದು
ದಕ್ಷಯಜ್ಞವನು ಧ್ವಂಸಗೈದು
ಶಿವಪಾರಮ್ಯವನು ಎತ್ತಿಹಿಡಿದಂತೆ
ಬಿಜ್ಜಳನ ಸೇನೆಯನು ಸಂಹರಿಸಿ
ಶರಣರನ್ನು,ವಚನಗಳನ್ನು ರಕ್ಷಿಸಿದ
ಕಲಿದೇವರದೇವ ಮಾಚಯ್ಯನೆಂದರೆ
ವೀರಭದ್ರನೆ ! ಕಾಲ ರುದ್ರನೆ !

01.02.2022
ಅಡಿ ಟಿಪ್ಪಣಿ : ಇಂದಿನ ಮಡಿವಾಳ ಮಾಚಿದೇವರ ಜಯಂತಿಯ ನಿಮಿತ್ತವಾಗಿ ರಚಿಸಿದ ಕವನ.