ಕಾವ್ಯಲೋಕ: ದೀಪಕ್ ಶಿಂಧೆ ಅವರ ಕವನ ‘ ಹೀಗೊಂದು ಮನವಿ’

ಹೀಗೊಂದು ಮನವಿ

ದೀಪಕ್ ಶಿಂಧೆ

ನನ್ನ ಕೋರಿಕೆ ಇಷ್ಟೇ
ನನ್ನ ಮನೆಯವರಿಗೆ
ನಾನಿಲ್ಲದ ದಿನ, ಉಸಿರು ನಿಂತ ಕ್ಷಣ,
ನನ್ನ ಕಣ್ಣು ಮುಚ್ಚಿಸಬೇಡಿ!!!

ನಾನು ಯಾರಿಗೆ ಕಾಯುತ್ತೇನೋ
ಅವರ ನಿರೀಕ್ಷೆಯಲ್ಲಿ
ನನ್ನ ಕಣ್ಣುಗಳು ತೆರೆದೇ ಇರಲಿ ಬಿಡಿ

ಸಿದಿಗೆ ಸಜ್ಜಾಯಿತು
ಎಂದು ಬಿಗಿದು ಕಟ್ಟಬೇಡಿ
ಸಂಬಂಧಗಳ ಸಂಕೋಲೆಯಲ್ಲಿ
ಬಿಗಿಯಲ್ಪಟ್ಟವನಿಗೆ
ಮತ್ತಷ್ಟು ನೋವು ಕೊಡಬೇಡಿ…

ಹೀಗೆ ಸುತ್ತ ಕುಳಿತು
ಬಿಕ್ಕಿ ಅಳುವಾಗ
ನನ್ನೆದೆಗೆ ಬಡಿಯಬೇಡಿ
ನೊಂದ ಹೃದಯವಿದು
ನೆನಪಿರಲಿ
ಸ್ವಲ್ಪ ದೂರದಲ್ಲೇ ಇದ್ದುಬಿಡಿ!!!

ಜೀವವಿಲ್ಲದ ದೇಹಕ್ಕೆ
ಹೂವು ಹಾರಗಳ ತಂದು
ಸಿಂಗಾರ ಮಾಡಬೇಡಿ…
ಇದ್ದಾಗ ಬಂಗಾರದ ಬದುಕು
ಕಸಿದವರ ಎದುರು
ನಾನು ಚೆನ್ನಾಗಿಯೇ ಇದ್ದೇನೆಂದು
ಸುಮ್ಮನೆ ತೋರಿಸಬೇಡಿ…

ಉಸಿರು ನಿಂತಿದೆ ಎಂದು
ಚಿತೆಗೆ ಇಳಿಸಿದ ಬಳಿಕ ಒಮ್ಮೆಗೆ ದಿಢೀರನೆ
ಬೆಂಕಿ ಹಾಕಬೇಡಿ!!! ಕಡ್ಡಿಯೊಂದನು ಕೊರೆದು
ಅಲ್ಲಿಯೇ ಬಿಟ್ಟು ಬಿಡಿ
ಬದುಕಿದ್ದಾಗಲೂ ಬೆಂದ ಜೀವವಿದು
ಮತ್ತೆ ಬೆಂಕಿಗೆ ತಳ್ಳಬೇಡಿ..

ಪಿಂಡ ಇಡುವ ಕಾಲಕ್ಕೂ
ಮೃಷ್ಠಾನ್ನ ಭೋಜನವ ಕಾಗೆಗಳಿಗೆ ಇಡಬೇಡಿ!!
ನನ್ನ ಹಸಿದ ಹೊಟ್ಟೆ ತುಂಬಿಸುವ
ಯೋಚನೆಯ ದಯವಿಟ್ಟು ಬಿಟ್ಟು ಬಿಡಿ..

ಈ ಪಾಪಿ ಜಗದಲ್ಲಿ
ಹಿಡಿ ಪ್ರೀತಿಗೆ ಹಪ-ಹಪಿಸಿದ
ಈ ಹೃದಯದ ಹಸಿವು ನೀಗಿಲ್ಲ
ಎನ್ನುವ ಸತ್ಯ…
ಸಾಧ್ಯವಾದರೆ ಈ ಜಗಕ್ಕೆಲ್ಲ ಸಾರಿಬಿಡಿ!!!

ಇಷ್ಟಾದರೂ ನನ್ನ ಅಂತ್ಯಕ್ರಿಯೆಗೆ ಬರದವರ
ನೆನೆದು,ಬೈದು ಶಪಿಸಬೇಡಿ!!!
ಅನಿವಾರ್ಯತೆಗಳು ಇರಬಹುದು ಅವರಿಗೆ
ಹೇಗಾದರೂ ಮಾಡಿ……
ನಾನಿಲ್ಲ ಅನ್ನುವ ಸತ್ಯವನ್ನಷ್ಟೇ ತಿಳಿಸಿಬಿಡಿ.

ಸಾಧ್ಯವಾದರೆ ಅತ್ತುಬಿಡಲಿ
ಖುಷಿ ಇದ್ದರೆ ನಕ್ಕು ಬಿಡಲಿ
ಈ ಜಗದ ಝಂಜಾಟದಿಂದ
ನನಗೆ ಮುಕ್ತಿ ಸಿಗದಿದ್ದರೂ ಪರವಾಗಿಲ್ಲ…

ನಿಮಗೊಂದು ಕಳ-ಕಳಿಯ ಮನವಿಯಷ್ಟೇ….
ಅವರ ಇಷ್ಟದಂತೆ
ಅವರನ್ನು ಇರಲು ಬಿಡಿ..
ಅವರಿಷ್ಟದಂತೆ ಅವರನ್ನು ಇರಲು ಬಿಡಿ.

ದೀಪಕ್ ಶಿಂಧೆ, ಪತ್ರಕರ್ತ, ಅಥಣಿ
ಮೊ:9482766018