ಕಲ್ಯಾಣ ಕಾವ್ಯ: ಹುತಾತ್ಮರ ದಿನದಂದು ಗಾಂಧೀಜಿಯವರನ್ನು ನೆನೆಯುತ್ತ…. – ಮುಕ್ಕಣ್ಣ ಕರಿಗಾರ

 

ಹುತಾತ್ಮರ ದಿನದಂದು ಗಾಂಧೀಜಿಯವರನ್ನು ನೆನೆಯುತ್ತ….

ಮುಕ್ಕಣ್ಣ ಕರಿಗಾರ

ಈ ತಾತ ಗಾಂಧಿ
ಅಪ್ರಸ್ತುತರಾಗರು ಎಂದಿಗು
ಯಾರೇ ಬಂದರೂ.

ಗಾಂಧಿ
ಒಬ್ಬ ವ್ಯಕ್ತಿ ಮಾತ್ರವಲ್ಲ;
ತಾಯಿ ಭಾರತಾಂಬೆಯ ಅಂತಃಸತ್ತ್ವದ
ಪ್ರಕಟರೂಪ,ವ್ಯಕ್ತಲೀಲೆ !

ತಾಯಿ ಭಾರತಿಯು ಗೆದ್ದು ವಿಶ್ವವಂದ್ಯಳಾಗಿ
ಮೆರೆಯುತ್ತಿರುವವರೆಗೂ
ವಿಶ್ವಭೂಪಟದಿ ಭಾರತಾಂಬೆಯ
ವಿಜಯಪತಾಕೆ ಹಾರುತ್ತಿರುವ ತನಕ
ಇರುತ್ತಾರೆ ಗಾಂಧಿ ಜೀವಂತವಾಗಿ
ಅಮರನೆನಪುಗಳಲ್ಲಿ ಮರುಹುಟ್ಟು
ಪಡೆಯುತ್ತ.

ಗಾಂಧಿಯವರನ್ನು ಒಪ್ಪದವರು
ತಪ್ಪಾಗಿ ತಿಳಿದುಕೊಂಡವರು
ಗಾಂಧಿ ನಮ್ಮವರಲ್ಲ ಎಂದು ಭಾವಿಸಿದವರು
ಹೀಗೆ ಎಲ್ಲರೂ ಒಮ್ಮಿಲ್ಲ ಒಮ್ಮೆ
ಬರಲೇಬೇಕು ಆಯಸ್ಕಾಂತೀಯ ವ್ಯಕ್ತಿತ್ವದ
ಈ ಮುತ್ತ್ಯಾನ ಬಳಿ !

ಗಾಂಧಿ ಬದುಕಿದ್ದು ಭಾರತವನ್ನು !
ಗಾಂಧಿ ನಂಬಿದ್ದು ಮನುಷ್ಯತ್ವವನ್ನು
ಗಾಂಧಿ ದೇವರನ್ನು ಕಂಡಿದ್ದು
ಜನಸಾಮಾನ್ಯರಲ್ಲಿ.
ಭಾರತಾಂಬೆಯ ಬಂಧಮೋಚನೆಗಾಗಿ
ಅವತರಿಸಿದ್ದ ಗಾಂಧಿ
ಕೊಟ್ಟದ್ದು ಸ್ವಾತಂತ್ರ್ಯವನ್ನಷ್ಟೇ ಅಲ್ಲ
ಹಂಗಿಲ್ಲದ,ಅಳುಕಿಲ್ಲದ
ಸರಳ ನಿರಾಡಂಬರ ಜೀವನಪಥವನ್ನು ತೆರೆದಿಟ್ಟರು.
ಸ್ವಾತಂತ್ರ್ಯ ಎನ್ನುವುದು
ಬ್ರಿಟಿಷರಿಂದ ಬಂಧಮುಕ್ತರಾಗುವುದು
ಅಷ್ಟೇ ಆಗಿರಲಿಲ್ಲ ಗಾಂಧೀಜಿಯವರಿಗೆ
ನಮ್ಮ ಒಳ ಹೊರಗುಗಳ ಸ್ವಚ್ಛಗೊಳಿಸಿಕೊಂಡು
ತಿಳಿಗೊಳಿಸಿಕೊಂಡು
ಕಳಚಿಕೊಂಡು ಆವರಿಸಿದ ಪೊರೆ,
ಕಳಚಿಟ್ಟು ಮುಖವಾಡಗಳ
ಕೇವಲ ಮನುಷ್ಯರಾಗಿ ಬದುಕುವ ಮತ್ತು
ಮನುಷ್ಯತ್ವವನ್ನು ಬಿಗಿದುಕಟ್ಟಿದ
ಎಲ್ಲ ಬಗೆಯ ಸಂಕೋಲೆಗಳಿಂದ
ಜನಸಾಮಾನ್ಯರನ್ನು,ದೇಶಬಾಂಧವರನ್ನು
ಹೊರತರುವುದೇ ನಿಜ ಸ್ವಾತಂತ್ರ್ಯ
ಎನ್ನಿಸಿತ್ತು ಗಾಂಧೀಜಿಯವರಿಗೆ.

ಗಾಂಧೀಜಿಯವರ ಕನಸುಗಳು
ಅರ್ಥವಾಗಲಿಲ್ಲ ಕೆಲವರಿಗೆ
ಸ್ವಧರ್ಮನಿಷ್ಠ ಹಿಂದುವಾಗಿಯೇ
ಮತಧರ್ಮಗಳ ಎಲ್ಲೆಯನ್ನು ಮೀರಿ
ಮಾನವರಾಗಬಯಸಿದ್ದ
ಮಹಾಮಾನವ,ಮಹಾತ್ಮನನ್ನು
ಒಪ್ಪದವರು
ತಪ್ಪಾಗಿ ತಿಳಿದುಕೊಂಡವರು
ಏನೆಲ್ಲಮಾಡಿದರೂ
ಕೊನೆಗೆ ಗೆದ್ದದ್ದು ಗಾಂಧೀಜಿಯವರೆ !
ಗಾಂಧಿ ಎಂಬ ಸೂರ್ಯನ ಸುತ್ತ
ನಮ್ಮದೇಶ ಭಾರತ ಮಾತ್ರವಲ್ಲ,
ವಿಶ್ವವನ್ನು ಹೊತ್ತ ಭೂಮಿಯೇ
ಹಾಕುತ್ತದೆ ಪ್ರದಕ್ಷಿಣೆ.

30.01.2022