ವಿಮರ್ಶೆ : ಓದುಗರ ತಾಳ್ಮೆ ಪರೀಕ್ಷಿಸುವ ಬಸವರಾಜ ಕೋಡಗುಂಟಿ ಅವರ ‘ ಮಹಾಪ್ರಾಣ’ ತೊರೆದ ಸಾಹಸ ! – ಮುಕ್ಕಣ್ಣ ಕರಿಗಾರ

ಓದುಗರ ತಾಳ್ಮೆ ಪರೀಕ್ಷಿಸುವ ಬಸವರಾಜ ಕೋಡಗುಂಟಿ ಅವರ ‘ ಮಹಾಪ್ರಾಣ’ ತೊರೆದ ಸಾಹಸ !

            ಮುಕ್ಕಣ್ಣ ಕರಿಗಾರ

‘ ಕನ್ನಡ ಪುಸ್ತಕ ಸಂಸ್ಕೃತಿ ಬೆಳೆಸುವ ಬಗೆ’ ಎನ್ನುವ ಲೇಖನದಲ್ಲಿ ಹಿಂದೊಮ್ಮೆ ನಾನು ಮಸ್ಕಿಯ ಭಂಡಾರ ಪ್ರಕಾಶನದ ಹಲವು ಹತ್ತು ವೈವಿಧ್ಯಮಯ ಪುಸ್ತಕ ಪ್ರಕಟಣೆಯ ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದಿದ್ದೆ.ಕಲ್ಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಆ ಪ್ರಕಾಶನ ಸಂಸ್ಥೆಯಿಂದ ಐದುಸಾವಿರಕ್ಕೂ ಹೆಚ್ಚಿನ ಬೆಲೆಯ ಪುಸ್ತಕಗಳನ್ನು ಖರೀದಿಸಿದ ಬಗ್ಗೆಯೂ ಪ್ರಸ್ತಾಪಿಸಿದ್ದೆ.ನನ್ನ ಲೇಖನವನ್ನು ಓದಿದ ಮಿತ್ರರೊಬ್ಬರು ಮೊನ್ನೆ ಭಂಡಾರ ಪ್ರಕಾಶನದ ಒಂದು ಪುಸ್ತಕ ಕಳುಹಿಸಿ– ‘ ದಯವಿಟ್ಟು ತಾಳ್ಮೆಯಿಂದ ಓದಿಸರ್,ನಿಮ್ಮ ಹೆಮ್ಮೆಯ ಪ್ರಕಾಶಕರ ಪುಸ್ತಕ’ ಎಂದು ಬಸವರಾಜ ಕೋಡಗುಂಟಿ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ ಹಯ್ದರಾಬಾದ ಕರ್ನಾಟಕ ಸಾಲು : ಸಂಪುಟ — ೫ ” ಶಾಸನ” ಎನ್ನುವ ಪುಸ್ತಕ ಕಳಿಸಿದ್ದರು.ಶಾಸ‌ಗಳ ಕುರಿತಾದ ಪುಸ್ತಕ ಅದಾದ್ದರಿಂದ ನನ್ನ ಕುತೂಹಲ ಕೆರಳಿತು.ಅಶೋಕನ ಶಿಲಾಶಾಸನವನ್ನೇ ಮುಖಪುಟವಾಗುಳ್ಳ ಪುಸ್ತಕದ ಮುನ್ನುಡಿ ಬೆನ್ನುಡಿಗಳನ್ನು ಓದದೆ ನಾನು ಈ ಹಿಂದೆ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ನೇರವಾಗಿ ಹದಿನೇಳು ಲೇಖನಗಳುಳ್ಳ ಆ ಪುಸ್ತಕದಲ್ಲಿನ ‘ ಮಲಿಯಾಬಾದ ಶಾಸನ ( ಕರ್ನಾಟಕದಲ್ಲಿ ಕಾಪಾಲಿಕರು) ಎನ್ನುವ ಕಲವೀರ ಮನ್ವಾಚಾರ ಅವರ ಲೇಖನ ಓದತೊಡಗಿದೆ.ಲೇಖಕರು ತುಂಬ ಶ್ರಮವಹಿಸಿ ವಿಷಯ ಸಂಗ್ರಹಿಸಿ, ಪ್ರಬುದ್ಧವಾಗಿ ಮಂಡಿಸಿದ್ದಾರೆ.ಆದರೆ ಅದನ್ನು ಓದುವುದು ಮಹಾಸಂಕಟ ಕಾರ್ಯ ! ನಾನು ಬಹುಶಃ ಮುದ್ರಣದೋಷದಿಂದ ಹೀಗಾಗಿರಬೇಕು ಎಂದುಕೊಂಡು ಸಮಾಧಾನದಿಂದ ಓದತೊಡಗಿದರೂ ನನ್ನ ಸಹನೆಯ ಕಟ್ಟೆ ಒಡೆಯತೊಡಗಿತು ! ಹದಿನೈದು ಪುಟಗಳ ಆ ಲೇಖನ ಓದುವ ವೇಳೆಗೆ ನಾನು ನಿಜಕ್ಕೂ ಮುಕ್ಕಣ್ಣನೇ ಆಗಿದ್ದೆ.ಪುಸ್ತಕಗಳನ್ನು ಏಕಾಗ್ರತೆಯಿಂದ ಘಂಟೆಗಳಗಟ್ಟಲೆ ನಿರಂತರವಾಗಿ ಓದುವ ನಾನು ಈ ಲೇಖನ ಓದುವಷ್ಟರಲ್ಲಿ ತಾಳ್ಮೆ ಕಳೆದುಕೊಂಡೆ.ನಂತರ ಇತರ ಲೇಖನಗಳ ಆಯ್ದ ಭಾಗಗಳನ್ನು ಕಣ್ಣಾಡಿಸಿದೆ.ಅಲ್ಲೂ ಇದೇ ಕಥೆ.ಯಾರಿರಬಹುದು ಈ ಮಹಾನುಭಾವರು ಎಂದು ಅರ್ಪಣೆಯ ಪುಟದಿಂದ ಪುಸ್ತಕದತ್ತ ಕಣ್ಣಾಡಿಸತೊಡಗಿದೆ.’ ಬರತ ವರುಶಕೆ ಅಕ್ಕರವ ಮೊದಲಿಗೆ ತಂದ ಹಯ್ದರಾಬಾದ ಕರ್ನಾಟಕದಾಗ ಈ ಮೊದಲ ಅಕ್ಕರಗಳನ್ನು ಕೊರೆಸಿದ ಅಸೋಕನಿಗೆ ಉಡಿ ತುಂಬ್ತೀವಿ*** ದೇವಾನಂ ಪಿಯಸ ಅಸೋಕಸ ” ಎಂದಿದ್ದ ಅರ್ಪಣೆಯ ಪುಟ ಸಂಪಾದಕರ ವೈಶಿಷ್ಟ್ಯವನ್ನು ಎತ್ತಿತೋರಿಸಿತು.ಮುನ್ನೋದಿನ ‘ ಹಯ್ದರಾಬಾದ ಕರ್ನಾಟಕ ಸರಣಿ’ ಯಲ್ಲಿ ಸಂಪಾದಕ ( ಅವರು ಕಟ್ಟುಗ ಎಂದಿದ್ದಾರೆ) ಯ ಅವರ ಮಾತುಗಳನ್ನು ಓದಿದಾಗಲೇ ನನಗೆ ಅರ್ಥವಾದದ್ದು ಇದು ಮುದ್ರಣದೋಷವಲ್ಲ; ಮುದ್ದಾಂ ಸಾಹಸ ಎಂದು! ಮುನ್ನೋದಿನ ಕೊನೆಯ ಸಾಲುಗಳಲ್ಲಿ ಅವರು ಹೇಳಿದ್ದಾರೆ ” ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ ಎಂಬುದು ಮೊದಲಿನಿಂದಲೂ ವೈಯಾಕರಣಿಗಳ ಅಬಿಮತ.ಅದನ್ನು ಬರವಣಿಗೆಯಲ್ಲಿ ಜಾರಿಗೆ ತರುವ ಪ್ರಯತ್ನವನ್ನು ನಾನು ಕಳೆದ ದಶಕಕ್ಕೂ ಹೆಚ್ಚು ಕಾಲದಿಂದ ಮಾಡಿಕೊಂಡು ಬಂದಿದ್ದೇನೆ.ಈ ಹಯ್ದರಾಬಾದ ಕರ್ನಾಟಕ ಸರಣಿಯಲ್ಲಿಯೂ ಅದನ್ನು ಅಳವಡಿಸಿದ್ದೇನೆ.ಇದಕ್ಕೆ ಮುಕ್ಯವಾದ ಕಾರಣ ಹೀಗಿವೆ,ಕನ್ನಡದ ಸಹಜ ಲಿಪಿಯ ಬಳಕೆ ಪರಿಚಯ ಕನ್ನಡದ ವಿವಿದ ವಲಯದ ಓದುಗರಿಗೆ ಪರಿಚಯವಾಗಲಿ ಮತ್ತು ಇದರ ಮೇಲೆ ಚರ್ಚೆ ಆಗಲಿ ಎಂಬ ಆಶಯದಿಂದ.ಇದು ಬಾಶೆಗೆ ಸಂಬಂದಿಸಿದ ಬಹುದೊಡ್ಡ ಪ್ರಯೋಗ.ಇದನ್ನು ಓದುಗರು ಚರ್ಚೆಗೆ ತೆಗೆದುಕೊಳ್ಳಲಿ.ಮುಂದೆ ಇದು ಸರಿ ಎನಿಸಿದರೆ ಸಮಾಜ ಇದನ್ನು ಅಳವಡಿಸಿಕೊಳ್ಳಬಹುದು.ಈ ಸಂಪುಟಗಳಲ್ಲಿನ ಲಿಪಿಯ ಈ ಬದಲಾವಣೆ ಸಂಪೂರ್ಣವಾಗಿ ಸಂಪಾದಕರದು,ಮತ್ತು ಲೇಕಕರಿಗೆ ಈ ವಿಶಯವನ್ನು ಮನದಟ್ಟು ಮಾಡಿ ಹೀಗೆ ಬದಲಿಸಿದೆ .” ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ ಅವುಗಳನ್ನೇಕೆ ಬಳಸಿ ಸ್ವಂತಿಕೆ ಕಳೆದುಕೊಳ್ಳಬೇಕು ಎನ್ನುವ ಬಸವರಾಜ ಕೋಡಗುಂಟಿ ಅವರ ಕನ್ನಡಾಭಿಮಾನ,ಸ್ವಂತಿಕೆಯೇನೋ ಅಭಿನಂದನಾರ್ಹ.ಆದರೆ ನಾನು ಉದ್ಧರಿಸಿದ ಅವರ ಈ ಕೆಲವೇ ವಾಕ್ಯಗಳನ್ನು ಓದುವಷ್ಟರಲ್ಲೇ ಓದುಗರಿಗೆ ‘ ಇದು ನಮ್ಮ ಕನ್ನಡವೆ?’ ಎನ್ನುವ ಭಾವನೆ ಬರುತ್ತದೆಯಲ್ಲವೆ ?

ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಷಿ ಅವರು ಶುದ್ಧಕನ್ನಡದ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಉಂಟಾದ ಪರ ವಿರೋಧಗಳ ತರಂಗ- ಕಂಪನಗಳನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ.ಮಹೇಶ ಜೋಷಿಯವರ ಅಭಿಪ್ರಾಯಕ್ಕೆ ವ್ಯಕ್ತಪಡಿಸಿದ ವಿರೋಧದಲ್ಲಿ ಕೆಲಮಟ್ಟಿನ ಸತ್ಯ ಇದೆಯಾದರೂ ಅದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಆಧುನಿಕ ಯುಗದ ಅಭಿರುಚಿಗೆ ತಕ್ಕುದಲ್ಲ.ಜೋಷಿಯವರನ್ನು ವಿರೋಧಿಸಲೇಬೇಕು ಎನ್ನುವ ಉದ್ದೇಶದಿಂದಲೇ ಕೆಲವರು ಬರೆದಿದ್ದರು.ನಾನು ಹುಟ್ಟಿ,ಬೆಳೆದು ಓದಿದ್ದು ಗ್ರಾಮೀಣ ಪ್ರದೇಶದ ಸರಕಾರಿ ಕನ್ನಡ ಶಾಲೆಗಳಲ್ಲಿ.ನಮ್ಮೂರು ಗಬ್ಬೂರು.ಇಂದಿನ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪಂಚಾಯತಿ ಕೇಂದ್ರವಾಗಿರುವ ದೊಡ್ಡಗ್ರಾಮ ನಮ್ಮ ಊರು.ನಾನು 1973 ರಲ್ಲಿ ಪ್ರಾಥಮಿಕ ಶಾಲೆಗೆ ಸೇರಿದ್ದು.ಆಗ ಶೈಕ್ಷಣಿಕ ಪರಿಸ್ಥಿತಿ ಹೇಗಿರಬಹುದು ? ಊಹಿಸಿಕೊಳ್ಳಿ.ಸರಿಯಾದ ಕಟ್ಟಡಗಳಿಲ್ಲ,ಕೊಠಡಿಗಳಿಲ್ಲ,ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇರಲಿಲ್ಲ.ಆದರೂ ನಮಗೆ ಕಲಿಸಿದ ಶಿಕ್ಷಕರೆಲ್ಲ ಆಯಾ ವಿಷಯಗಳಲ್ಲಿ ನುರಿತವರು,ಪರಿಣತರುಗಳೇ ಆಗಿದ್ದರು.ಕನ್ನಡದ ವ್ಯಾಕರಣವನ್ನು ಚೆನ್ನಾಗಿ ಕಲಿಸಿದ್ದರು.ಅಲ್ಪಪ್ರಾಣ,ಮಹಾಪ್ರಾಣ,ಸಂಧಿ- ಸಮಾಸ,ಛಂದಸ್ಸು- ಅಲಂಕಾರಗಳನ್ನೆಲ್ಲ ಕಲಿತಿದ್ದ ನಮಗೆ ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ ಎನ್ನುವ ವಿಷಯ ಆಗ ಹೊಳೆದಿರಲೇ ಇಲ್ಲ ! ನಮಗೆ ಕಲಿಸಿದ ಶಿಕ್ಷಕರಿಗೂ ಅದರ ಅಗತ್ಯ ಕಾಣಿಸಿರಲಿಲ್ಲ.ಶುದ್ಧ ಉಚ್ಛರಣೆಗೆ ವಿಶೇಷ ಪ್ರಾಶಸ್ತ್ಯವಿತ್ತು. ಅಕಾರ ಹಕಾರಗಳ ವ್ಯತ್ಯಾಸ ನಮಗೆ ಚೆನ್ನಾಗಿ ತಿಳಿದಿತ್ತು.ಮಹಾಪ್ರಾಣವಿಲ್ಲದ ಅಲ್ಪಪ್ರಾಣಗಳ ಬಳಕೆ ಕರ್ಕಶವಾಗುತ್ತದೆ,ಅಸಂಬದ್ಧವೆನಿಸುತ್ತದೆ ಎನ್ನುವುದು ವಿದ್ಯಾರ್ಥಿದೆಸೆಯಲ್ಲೇ ನಮ್ಮ ಅನುಭವಕ್ಕೆ ಬಂದಿತ್ತು.ಪ್ರಾಥಮಿಕ ಶಾಲೆಯಿಂದ ಪದವಿ ತರಗತಿಗಳವರೆಗೆ ನಾನು ಶುದ್ಧಕನ್ನಡಕ್ಕೇ ಪ್ರಾಶಸ್ತ್ಯ ನೀಡಿದ್ದೆ.ಶುದ್ಧಕನ್ನಡ ಮೈಸೂರು,ಶಿವಮೊಗ್ಗ,ಧಾರವಾಡಗಳಂತಹ ಜಿಲ್ಲೆಗಳವರಿಗೆ ಮಾತ್ರ ಇರಲಿ ಎಂದು ವಾದಿಸುವವರು ಗ್ರಾಮೀಣಪ್ರದೇಶದ ಸರಕಾರಿ ಕನ್ನಡ ಶಾಲೆಯಲ್ಲಿಯೇ ಕಲಿತು ನಾನು ಕೆ ಎ ಎಸ್ ಅಧಿಕಾರಿಯಾಗಿದ್ದೇನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ನಾನು ಪ್ರಾಥಮಿಕ ಶಾಲೆಯಿಂದ ಪಿಯುಸಿಯವರೆಗೆ ನಮ್ಮೂರು ಗಬ್ಬೂರಿನಲ್ಲೇ ಓದಿದ್ದೇನೆ.ಮೈಸೂರಿನ ಯಾವ ಕನ್ನಡ ಪಂಡಿತರೂ ನನಗೆ ಸಮಾನರಾಗದ ಕನ್ನಡ ಭಾಷಾ ಪಾಂಡಿತ್ಯವೂ ನನಗಿದೆ.ಇದು ಸಾಧ್ಯವಾದದ್ದು ಸಮನ್ವಯ ಸಂಸ್ಕೃತಿಯ ಶಿಕ್ಷಣದಿಂದ.ಆಗ ಕನ್ನಡವು ತಾಯಿ ಭಾಷೆ ಆದರೆ ಸಂಸ್ಕೃತವು ಅಜ್ಜಿ ಭಾಷೆ ಎಂದು ತಿಳಿದಿತ್ತು ನಮಗೆ.ಸಂಸ್ಕೃತವನ್ನು ದ್ವೇಷಿಸದೆ ಕನ್ನಡವನ್ನು ಹೇಗೆ ಬೆಳೆಸಬಹುದು ಎಂಬುದನ್ನು ಕಲಿತುಕೊಂಡೆವು.ಸಂಸ್ಕೃತವು ಭಾರತೀಯ ಭಾಷೆಗಳ ತಾಯಿಭಾಷೆ ಎನ್ನುವ ಅಭಿಪ್ರಾಯದಲ್ಲಿ ಈಗ ಭಿನ್ನಮತ ಇರಬಹುದು.ವಿದ್ಯಾರ್ಥಿಗಳಾಗಿದ್ದಾಗ ನಮಗೆ ಸಂಸ್ಕೃತದ ಬಗ್ಗೆ ದ್ವೇಷವಾಗಲಿ ಅದು ನಮ್ಮದಲ್ಲದ ಭಾಷೆ ಎನ್ನುವ ಭಾವನೆಯಾಗಲಿ ಇರಲಿಲ್ಲ.ಕನ್ನಡದ ಶುದ್ಧ ಬರವಣಿಗೆ ಮತ್ತು ಮಾತಿಗೆ ಸಂಸ್ಕೃತ ಪೂರಕ ಎ‌ನ್ನುವ ಭಾವನೆ ಇತ್ತು ನಮಗೆ.

ಆರ್ಯ ದ್ರಾವಿಡ ಪ್ರತ್ಯೇಕತೆಯ ವಾದ ಬಲಗೊಂಡಬಳಿಕವಷ್ಟೇ ಸಂಸ್ಕೃತವು ನಮಗೆ ಭಿನ್ನ ಭಾಷೆಯಾಗಿ ಕಾಣತೊಡಗಿದ್ದು.ಆರ್ಯ ದ್ರಾವಿಡರ ಸಂಕಥನ ಏನೇ ಇರಲಿ ಭಾರತೀಯ ಧರ್ಮ ಮತ್ತು ಸಂಸ್ಕೃತಿಗಳು ಉಳಿದದ್ದು,ಬೆಳೆದದ್ದು ಸಂಸ್ಕೃತ ಭಾಷೆಯಿಂದ ಮತ್ತು ಹಿಂದೆ ಒಂದು ಕಾಲಕ್ಕೆ ಸಂಸ್ಕೃತ ಭಾಷೆಯಿಂದಾಗಿಯೇ ಭಾರತ ವಿಶ್ವಮಾನ್ಯತೆಯನ್ನು ಪಡೆದಿತ್ತು ಎನ್ನುವುದನ್ನು ಮರೆಯಲಾಗದು.ಇಂದು ಇಂಗ್ಲಿಷ್ ಪಡೆದಿರುವ ಸ್ಥಾನ ಮಾನವನ್ನು ಹಿಂದೊಮ್ಮೆ ಸಂಸ್ಕೃತ ಪಡೆದಿತ್ತು.ದೇಶಿಭಾಷೆಗಳಿಂದ ಸಂಸ್ಕೃತ ಮತ್ತು ಸಂಸ್ಕೃತ ಭಾಷೆಯಿಂದ ದೇಶೀಯ ಭಾಷೆಗಳು ಶ್ರೀಮಂತಗೊಂಡವು.ಸಂಸ್ಕೃತ ಮತ್ತು ದೇಶೀಯ ಭಾಷೆಗಳ ನಡುವೆ ಪರಸ್ಪರ ಸತ್ವವರ್ಧಕ ಸಂಬಂಧವಿತ್ತೇ ವಿನಃ ಸಂಘರ್ಷ ಇರಲಿಲ್ಲ.ಹಾಗೆಂದೇ ಶೂದ್ರರೇ ಆಗಿದ್ದ ವಾಲ್ಮೀಕಿ ,ವ್ಯಾಸ ಮತ್ತು ಕಾಳಿದಾಸರು ಸಂಸ್ಕೃತ ಸಾಹಿತ್ಯದ ಧ್ರುವ ನಕ್ಷತ್ರಗಳಾದರು.ಕನ್ನಡದ ಪಂಪ,ರನ್ನ ,ಜನ್ನ,ಪೊನ್ನ,ಕುಮಾರವ್ಯಾಸ ಮೊದಲಾದವರೆಲ್ಲ ಸಂಸ್ಕೃತದ ಸತ್ವದ ಬೇರಿನಲ್ಲಿ ಕನ್ನಡ ಮಾಧುರ್ಯದ ಕೃತಿರತ್ನಗಳೆಂಬ ಫಲಗಳನ್ನು ನೀಡಿದರು.ಡಿ ವಿ ಗುಂಡಪ್ಪ ಮತ್ತು ಕುವೆಂಪು ಈ ಯುಗದ ಸಂಸ್ಕೃತಭೂಯಿಷ್ಠಭಾಷೆಯ ಕನ್ನಡದ ಮೇರುಪ್ರತಿಭೆಗಳು.ಬಿ ಎಂ ಶ್ರೀ,ತೀನಂಶ್ರೀ ಮೊದಲಾದವರು ಸಂಸ್ಕೃತವನ್ನು ತೊರೆಯದೆ ಕನ್ನಡವನ್ನು ಕಟ್ಟುವ ಬಗೆಯನ್ನು ತೋರಿಕೊಟ್ಟರು.

ಸಂಸ್ಕೃತವನ್ನು ಧಿಕ್ಕರಿಸಿ ಆಂಡಯ್ಯ ‘ ಕಬ್ಬಿಗರ ಕಾವಂ’ ಎನ್ನುವ ಸಂಪೂರ್ಣಕನ್ನಡ ಪದಗಳುಳ್ಳ ಕಾವ್ಯವನ್ನು ರಚಿಸಿದನಾದರೂ ಅದು ಅವನೊಬ್ಬನ ಸಾಹಸ ಮಾತ್ರವಾಯಿತೇ ಹೊರತು ಇತರರು ತುಳಿಯುವ ಸರ್ವಮಾನ್ಯ ಪಥವಾಗಲಿಲ್ಲ ಎನ್ನುವುದನ್ನು ಸಂಸ್ಕೃತ ಹೊರತಾದ ಕನ್ನಡವನ್ನು ಕಲ್ಪಿಸಿಕೊಳ್ಳುವವರು,ಕಟ್ಟಬಯಸುವವರು ಅರ್ಥ ಮಾಡಿಕೊಳ್ಳಬೇಕು.ಬಸವರಾಜ ಕೋಡಗುಂಟಿ ಅವರ ಸಾಹಸವೇನೋ ಅಭಿನಂದನೀಯ.ಆದರೆ ಕನ್ನಡದಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿರುವ ಈ ದಿನಮಾನಗಳಲ್ಲಿ ಅವರ ಈ ಸಾಹಸ ಹೊರೆಯಾಗಿಯೇ ಕಾಣಿಸುತ್ತದೆ.ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ,ದೂರದರ್ಶನ,ಮೊಬೈಲ್ ಗಳ ಸೆಳೆತಕ್ಕೆ ಒಳಗಾದ ಮಂದಿಗೆ ಕನ್ನಡ ಪುಸ್ತಕಗಳನ್ನು ಓದಲು ಆಗದು.ಓದಿದರೂ ಸರಳ ಕನ್ನಡದ ಪುಸ್ತಕೀಯ ಭಾಷೆಯ ಲಿಪಿಯಲ್ಲಿದ್ದರೆ ಮಾತ್ರ ಓದುತ್ತಾರೆ.ಮಹಾಪ್ರಾಣ ತ್ಯಾಗಮಾಡಿದ ಬಸವರಾಜ ಕೋಡಗುಂಟಿ ಅವರ ಸಾಹಸದ ಪುಸ್ತಕ ಮಾಲೆಗಳನ್ನು ಈ ಧಾವಂತದ ಯುಗದಲ್ಲಿ ಓದುವವರ ಸಂಖ್ಯೆ ತೀರ ಕಡಿಮೆ ಎಂದು ಹೇಳದೆ ವಿಧಿ ಇಲ್ಲ.ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕರಾಗಿರುವ ಅವರು ಮತ್ತು ಅವರ ಸಮಾನ ಮನಸ್ಕ ಗೆಳೆಯರು,ಶಿಷ್ಯರಿಗೆ ಈ ಪ್ರಯೋಗ ಇಷ್ಟವೆನ್ನಿಸಿರಬಹುದಾದರೂ ಬಹುಸಂಖ್ಯಾತ ಕನ್ನಡ ಓದುಗರಿಗೆ ಆಪ್ಯಾಯವೆನ್ನಿಸದು.ಕನ್ನಡದ ಬಗ್ಗೆ ಅಭಿಮಾನ ಮೂಡುವ ಬದಲು ‘ ಕನ್ನಡವನ್ನು ಇಷ್ಟು ಕೆಟ್ಟದ್ದಾಗಿ ಬಳಸಬಹುದೆ ?’ ಎನ್ನುವ ಅಭಿಪ್ರಾಯವೇ ಮೂಡುತ್ತದೆ.’ಅದ್ಯಯನ’, ಬಾರತ ,ಪಂತ,ಶಯ್ವ,ಕಾಳಾಮುಕರು,ಸಂಬಂದಿಸಿದ,ಶಾಕೆ,ಪ್ರಮುಕ,ವ್ಯಾಕ್ಯಾನ,ಶಯಿವ,ಶಿಕಾಮಣಿ,ಮಾದವರು,ಬೊಜನ,ಕ್ರುತಿಗಳು,ಬೂತಶರ್ಮ — ಹೀಗೆ ಮಹಾಪ್ರಾಣದ ಹಂಗು ತೊರೆದ ಕನ್ನಡಾಭಿಮಾನದ ಪದಗಳು ಓದುಗರಲ್ಲಿ ಗೊಂದಲ ಹುಟ್ಟಿಸುತ್ತವೆ,ಭಾಷಾಅಶುದ್ಧಿಯ ಬಗ್ಗೆ ಹೇವರಿಕೆ ಹುಟ್ಟಿಸುತ್ತವೆ. ಕೋಡಗುಂಟಿಯವರು ಸಂಸ್ಕೃತದ ಮಹಾಪ್ರಾಣಗಳನ್ನು ಮಾತ್ರ ಬಿಟ್ಟಿದ್ದಾರೆಯೇ ಹೊರತು ಸಂಸ್ಕೃತದ ಪದಗಳನ್ನು ಬಿಟ್ಟಿಲ್ಲ.ವ್ಯಾಕ್ಯಾನ ಅಲ್ಪಪ್ರಾಣದ ಪದವಾಗಿದ್ದರೂ ವ್ಯಾಖ್ಯಾನ ಕನ್ನಡದ ಪದವಲ್ಲ.ಬೂತಶರ್ಮ ಹೆಸರಿನಲ್ಲಿ ‘ ಭೂತ’ ವನ್ನು ಬಿಟ್ಟರೂ ಶರ್ಮನನ್ನು ಬಿಡಲಾಗಿಲ್ಲ,ಬಿಡಲಾಗುವುದೂ ಇಲ್ಲ.ವ್ಯಕ್ತಿಗಳ,ಸ್ಥಳಗಳ ಹೆಸರಿನ ಮಹಾಪ್ರಾಣ ತೆಗೆದರೆ ಅರ್ಥ ಅಸ್ಪಷ್ಟ.ಬಸವರಾಜ ಕೋಡಗುಂಟಿ ಅವರ ಮುನ್ನುಡಿಯ ಮಾತುಗಳಲ್ಲೇ ಸಾಕಷ್ಟು ಸಂಸ್ಕೃತಮೂಲದ ಪದಗಳಿವೆ.ಏನು ಸಾಧಿಸಿದಂತೆ ಆಯಿತು ಮಹಾಪ್ರಾಣವನ್ನು ಬಿಟ್ಟು ?

ಜನಪದರ ಬಳಕೆಯ ಕನ್ನಡ,ಗ್ರಾಮೀಣ ಕನ್ನಡವು ಸಹಜ ಸುಂದರವಾಗಿರಲಿ.ಆದರೆ ಅಕ್ಷರ ರೂಪಕ್ಕಿಳಿದ ಕನ್ನಡ ಸೊಗಸು,ಸೌಂದರ್ಯಗಳಿಂದ,ಸತ್ವಮೈವೆತ್ತಿಕೊಂಡು ನಳನಳಿಸುತ್ತಿರಲಿ.’ ಕಳೆ’ ಎಂದರೆ ಪ್ರಕಾಶವೂ ಆಗಬಹುದು,ಸಸಿಗೆ ಮಾರಕವಾಗಬಹುದಾದ ಕಸವೂ ಆಗಬಹುದು; ಹಾಗೆಯೇ ಕಳೆದುಕೊಳ್ಳುವುದು ಕೂಡ ಆಗಬಹುದು.ಭಾಷೆಯಲ್ಲಿ ಮಾಡುವ ಪ್ರಯೋಗಗಳು ಭಾಷೆಯನ್ನು ಕಂಗೊಳಿಸಿ ‘ ಕಳೆಕಟ್ಟು’ ವಂತೆ ಮಾಡಬೇಕೇ ಹೊರತು ಅಪಭ್ರಂಶ ಎನ್ನುವ ಭಾವನೆಯನ್ನುಂಟು ಮಾಡುವ ಕಸ,ಹುಲ್ಲಿನ ‘ ಕಳೆ’ ಆಗಬಾರದು.ಅಷ್ಟಕ್ಕೂ ಇತಿಹಾಸ,ಸಂಶೋಧನೆಗಳಂತಹ ಕೆಲವೇ ಜನ ಓದುಗರಿರುವ ವಿಷಯಗಳ ಪುಸ್ತಕ ಪ್ರಕಟಣೆಗಳಲ್ಲಿ ಬಸವರಾಜ ಕೋಡಗುಂಟಿ ಅವರ ಸಾಹಸ ಅಪೇಕ್ಷಣೀಯವಲ್ಲ.

ಮುಕ್ಕಣ್ಣ ಕರಿಗಾರ

‌ 30.01.2022