ಮಾನ್ವಿ ಕಸಾಪ: ‘ರವಿ’ಗೆ ರಾಜಯೋಗ

ಮಾನ್ವಿ ಕಸಾಪ: ‘ರವಿ’ಗೆ ರಾಜಯೋಗ
ಮಾನ್ವಿ ಜ.28: ನಮ್ಮೆಲ್ಲರ ಆಸೆಯಂತೆ ಸಹೋದರ, ಸ್ನೇಹಜೀವಿ, ಸರಳ ಸಜ್ಜನಿಕೆಯ ರವಿಕುಮಾರ ಪಾಟೀಲ್ ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ವಿ ತಾಲೂಕು ಘಟಕದ ನೂತನ ಅಧ್ಯಕ್ಷನಾಗಿ ನೇಮಕಗೊಂಡಿದ್ದಾನೆ. ಪ್ರತಿಭಾವಂತ, ಸಂಘಟನಾ ಚತುರ, ಕನ್ನಡಪರ ಕಳಕಳಿಯ ಈ ‘ರವಿ’ ಒಮ್ಮೆ ಕಸಾಪ ಅಧ್ಯಕ್ಷನಾಗಿ ಉದಯವಾಗಬೇಕು ಎಂಬುದು ಹಲವರ ಕನಸು ಕೂಡ ಆಗಿತ್ತು. ಈ ಹಿಂದೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಎರಡು ಬಾರಿ ರವಿಯ ಹೆಸರು ಕೇಳಿ ಬಂದಿತ್ತಾದರೂ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅದು ಕೈಗೂಡಿದೆ. ಈಗಾಗಲೇ ಮಾನ್ವಿ ತಾಲೂಕಿನ ವಕೀಲರ ಸಂಘದ ಕಾರ್ಯದರ್ಶಿಯಾಗಿ ಕ್ರಿಯಾಶೀಲತೆಯಿಂದ ಕೆಲಸ ಮಾಡಿ, ಎಲ್ಲರ ಮೆಚ್ಚುಗೆ ಗಳಿಸಿರುವ ರವಿಕುಮಾರ ಪಾಟೀಲ್, ಇತ್ತೀಚೆಗೆ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಸಂಘಟಿಸಿ ಗಮನ ಸೆಳೆದಿದ್ದಾನೆ. ವಕೀಲರ ಸಂಘದ ಇತಿಹಾಸದಲ್ಲಿಯೇ ‘ ವಕೀಲರ ದಿನಾಚರಣೆ’ ಕಾರ್ಯಕ್ರಮ ಇಷ್ಟೊಂದು ಸಂಭ್ರಮದಿಂದ ಆಯೋಜನೆ ಮಾಡಿರಲಿಲ್ಲ ಎಂದು ವಕೀಲ ಮಿತ್ರರೊಬ್ಬರು ಅಭಿಪ್ರಾಯಪಟ್ಟಿದ್ದರು. ಮಾನ್ವಿ ಪಟ್ಟಣದಲ್ಲಿ ಲಕ್ಷ್ಮೀ ರಂಗನಾಥ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಸಂಸ್ಥಾಪಕ ಅಧ್ಯಕ್ಷನಾಗಿ ಸಹಕಾರಿ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿರುವ ರವಿಕುಮಾರ ಪಾಟೀಲ್ ಗೆ ಸಾಮಾಜಿಕ ಕಳಕಳಿ ಕಾಲೇಜು ದಿನಗಳಿಂದಲೂ ಬಳುವಳಿಯಾಗಿ ಬಂದಿದೆ. ಎರಡು ದಶಕಗಳ ಹಿಂದೆ ಮಾನ್ವಿಯಲ್ಲಿ ಸಮಾನ ಮನಸ್ಕ ಗೆಳೆಯರ ಜೊತೆಗೂಡಿ ಕರ್ನಾಟಕ ಜನಸೇವಾ ಯುವ ವೇದಿಕೆ ಸ್ಥಾಪಿಸುವ ಮೂಲಕ ನಾಡು, ನುಡಿ ಹಾಗೂ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಮುನ್ನೆಲೆಗೆ ಬಂದ ‘ರವಿ’ಗೆ ಈಗ ಕಸಾಪ ತಾಲೂಕು ಘಟಕದಲ್ಲಿ ‘ರಾಜಯೋಗ’. ಖಂಡಿತವಾಗಿ ಈ ವ್ಯಕ್ತಿಯ ಸಾರಥ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿಯಲ್ಲಿ ಉತ್ತಮ ಚಟುವಟಿಕೆಗಳಿಗೆ ವೇದಿಕೆಯಾಗುತ್ತೆ ಎನ್ನುವ ಆತ್ಮ ವಿಶ್ವಾಸ ನನಗಿದೆ. ಇಂತಹ ಕ್ರಿಯಾಶೀಲ ವ್ಯಕ್ತಿಯನ್ನು ಆಯ್ಕೆ ಮಾಡಿರುವ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ್ ಅವರಿಗೂ ನಮ್ಮ ಗೆಳೆಯರ ಬಳಗದಿಂದ ಧನ್ಯವಾದಗಳು. ರವಿಕುಮಾರ ಪಾಟೀಲ್ ಗೂ ಅಭಿನಂದನೆಗಳು.
     -ಬಸವರಾಜ ಭೋಗಾವತಿ