ಮಾನ್ವಿ ತಾ.ಪಂ ತ್ರೈಮಾಸಿಕ ಕೆಡಿಪಿ ಸಭೆ
ಕುಡಿಯುವ ನೀರು ಸಮರ್ಪಕ ಪೂರೈಕೆ: ಮುಂಜಾಗ್ರತೆಗೆ ಶಾಸಕ ಬಸನಗೌಡ ದದ್ದಲ ಸೂಚನೆ
ಮಾನ್ವಿ ಜ.28:
‘ಮುಂಬರುವ ಬೇಸಿಗೆಯಲ್ಲಿ ಕುರ್ಡಿ ಹೋಬಳಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶುಕ್ರವಾರ ಮಾನ್ವಿ ತಾಲ್ಲೂಕಿನ ರಾಜಲಬಂಡಾ ಗ್ರಾಮದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಪಂಚಾಯಿತಿಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ‘ ಕುರ್ಡಿ ಭಾಗದ ದಶಕಗಳ ಬೇಡಿಕೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಿಂದ 8 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರಕಲಿದೆ. ಈ ಯೋಜನೆಯ ಕಾಮಗಾರಿ ಈಗ ಪೂರ್ಣಗೊಂಡಿದೆ. ಫೆ.14ರ ಒಳಗೆ ಯೋಜನೆ ಉದ್ಘಾಟನೆಗೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು. ಗೋರ್ಕಲ್ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಕುರ್ಡಿ ಹಾಗೂ ರಾಜಲಬಂಡಾ ಗ್ರಾಮಗಳಲ್ಲಿ ಬಿಸಿಎಂ ವಿದ್ಯಾರ್ಥಿಗಳ ವಸತಿ ನಿಲಯ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲು ಸೂಚನೆ ನೀಡಿದ ಅವರು, ಅನುಪಾಲನಾ ವರದಿಯಲ್ಲಿ ಅಸಮರ್ಪಕವಾಗಿ ಮಾಹಿತಿ ಸಲ್ಲಿಸಿದ ಬಿಸಿಎಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತುಂಗಭದ್ರಾ ನದಿಪಾತ್ರದಲ್ಲಿ ಸ್ಥಳಾಂತರಗೊಂಡ ಜೂಕೂರು, ಕಾತರಕಿ, ದದ್ದಲ, ಹರನಳ್ಳಿಯ ಹಳೇ ಗ್ರಾಮಗಳಲ್ಲಿ ಮಿನಿ ಅಂಗನವಾಡಿಗಳ ಮಂಜೂರಾತಿಗಾಗಿ ಪ್ರಸ್ತಾವ ಸಲ್ಲಿಸಲು ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಭದ್ರಾದೇವಿ ಅವರಿಗೆ ಸೂಚನೆ ನೀಡಿದರು. ಸ್ಥಳಾಂತರಗೊಂಡ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳ ದುರುಪಯೋಗದ ಬಗ್ಗೆ ಮಾಹಿತಿ ಇದೆ. ಬಳಕೆಯಲ್ಲಿರುವ ವಿದ್ಯುತ್ ಪರಿವರ್ತಕಗಳ ಕುರಿತು ಕುರಿತು ವರದಿ ನೀಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ‘ಕೋವಿಡ್ ನಿಯಂತ್ರಣಕ್ಕಾಗಿ ಎರಡನೇ ಹಂತದ ಲಸಿಕೆ ಅಭಿಯಾನ ಚುರುಕುಗೊಳಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಉಪ ಕೇಂದ್ರಗಳಲ್ಲಿ ನಿರಂತರವಾಗಿ ಅಧಿಕಾರಿಗಳು ಸಭೆ ನಡೆಸಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಮಾನ್ವಿ ಪಟ್ಟಣದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಹಾಗೂ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಕಲ್ಪಿಸಿ ಬಡವರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಬೇಕು’ ಎಂದು ಅವರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಅವರಿಗೆ ಸೂಚಿಸಿದರು. ಶಿಕ್ಷಣ ಇಲಾಖೆ, ಕಂದಾಯ, ಕೃಷಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆಲ್ಲಾ ವರ್ಗೀಸ್, ಕೆಡಿಪಿ ಸದಸ್ಯರಾದ ಈಶಪ್ಪ ಬೈಲ್ ಮರ್ಚೇಡ್, ಶಿವನಗೌಡ ಬೊಮ್ಮನಾಳ, ವೆಂಕಟೇಶ ಯಾದವ್ ನೀರಮಾನ್ವಿ, ಸದ್ದಾಮ್ ಹುಸೇನಿ ಉಮಳಿಹೊಸೂರು ಹಾಗೂ ವೆಂಕಟೇಶನಾಯಕ ಆಲ್ದಾಳ, ಮುಖಂಡ ಸೋಮಶೇಖರಗೌಡ ಹರನಳ್ಳಿ ಇದ್ದರು.