ಚಿಂತನೆ : ಸುಪ್ರೀಂ ಕೋರ್ಟಿನ ‘ ಸಮುದಾಯ ಅಡುಗೆಮನೆ’ ಯ ಸಲಹೆ ಮತ್ತು ಬಸವಣ್ಣನವರ ‘ ದಾಸೋಹ’ ಪರಿಕಲ್ಪನೆ – ಮುಕ್ಕಣ್ಣ ಕರಿಗಾರ

:ಚಿಂತನೆ:

ಸುಪ್ರೀಂ ಕೋರ್ಟಿನ ‘ ಸಮುದಾಯ ಅಡುಗೆಮನೆ’ ಯ ಸಲಹೆ ಮತ್ತು ಬಸವಣ್ಣನವರ ‘ ದಾಸೋಹ’ ಪರಿಕಲ್ಪನೆ

               ಮುಕ್ಕಣ್ಣ ಕರಿಗಾರ

ಮೊನ್ನೆ ಸುಪ್ರೀಂಕೋರ್ಟ್ ಹಸಿವಿನಿಂದ ಸತ್ತವರ ಬಗೆಗಿನ ಮಾಹಿತಿ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹಸಿವಿನಿಂದ ಸಾಯುತ್ತಿರುವವರ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ‘ ಸಮುದಾಯ ಅಡುಗೆಮನೆ'(Community Kitchen ) ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮವಹಿಸಲು ನಿರ್ದೇಶನ ನೀಡಿದೆ.ಸರಕಾರಿ ದಾಖಲೆಗಳಂತೆ ಹಸಿವಿನಿಂದ ಸತ್ತವರು ಇರಲಿಕ್ಕಿಲ್ಲ ! ಆದರೆ ಹಸಿವಿನಿಂದ ಬಳಲುತ್ತಿರುವವರು,ಹಸಿವಿನಿಂದ ಸಾಯುತ್ತಿರುವವರು ನಮ್ಮ ನಡುವೆ ಇದ್ದಾರೆ ಎನ್ನುವುದು ವಾಸ್ತವ.ನಮ್ಮ ಸಂವಿಧಾನವು ಘನತೆಯಿಂದ ಬದುಕುವ ಹಕ್ಕನ್ನು ಭಾರತೀಯರೆಲ್ಲರಿಗೂ ನೀಡಿದೆಯಾದರೂ ಭಿಕ್ಷೆಬೇಡಿ,ತಲೆತಗ್ಗಿಸಿ,ದೈನ್ಯದಿಂದ ಬದುಕುವವರ ಸಂಖ್ಯೆ ಸಾಕಷ್ಟಿದೆ ಎನ್ನುವುದು ಅಭಿವೃದ್ಧಿಯ ಪಥದಲ್ಲಿ ನಾಗಾಲೋಟದಲ್ಲಿ ಓಡುತ್ತಿರುವ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ.ದೇಶದ ನೂರಾಮುವ್ವತ್ತುಕೋಟಿ ಜನಸಂಖ್ಯೆಯಲ್ಲಿ ನೂರಾನಲವತ್ತೆರಡು ಜನ ಶತಕೋಟ್ಯಾಧಿಪತಿಗಳಿದ್ದಾರೆ.ಅವರ ಸಂಪತ್ತು ‘ ನಾಯಿಯ ಮುಕುಳಿಯಲ್ಲಿ ಇಟ್ಟ ಜೇನಿನಂತೆ’! ಇಲ್ಲವೆ ಬಸವಣ್ಣನವರ ಮಾತಿನಂತೆ ‘ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದ ಪಾಪಿಯ ಧನ’ ಅದು.ಈ ಶತಕೋಟ್ಯಾಧಿಪತಿಗಳು ಈ ನೆಲದ ಸಂಪನ್ಮೂಲಗಳನ್ನು ಬಳಸಿಕೊಂಡೇ ಶ್ರೀಮಂತರಾದವರು.ಆದರೂ ದೇಶವಾಸಿಗಳಾದ ಬಡವರು ಮತ್ತು ನಿರ್ಗತಿಕರಿಗೆ ಏನನ್ನಾದರೂ ಮಾಡಬೇಕು ಎನ್ನುವ ದೊಡ್ಡಮನಸ್ಸು ಇಲ್ಲದ ಹುಸಿ ಬಡಾಯಿಯ ‘ ದೊಡ್ಡವರು’. 6% CSR Fund ಎಂದು ಸಮಾಜೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸುವುದೇ ಘನಕಾರ್ಯ ಎಂಬಂತೆ ಬೀಗುತ್ತಾರೆ ಅವರುಗಳು.

ಈ ನೂರಾನಲವತ್ತೆರಡು ಜನ ಶತಕೋಟ್ಯಾಧಿಪತಿಗಳು ಮನಸ್ಸು ಮಾಡಿದರೆ ಭಾರತದ ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸುವುದು ಸುಲಭದ ಕಾರ್ಯ.ನೂರಾನಲವತ್ತೆರಡು ಜನ ಶತಕೋಟ್ಯಾಧಿಪತಿಗಳು ಸೇರಿದಂತೆ ಭಾರತದಲ್ಲಿ ಒಂದು ಸಾವಿರ ಜನ ಅತಿ ಶ್ರೀಮಂತರಿದ್ದಾರೆ.ಇವರೆಲ್ಲರು ಕಾರ್ಪೋರೇಟ್ ಸೊಶಿಯಲ್ ರೆಸ್ಪಾನಿಸಿಬಿಲಿಟಿ ಎನ್ನುವ ಕಾಟಾಚಾರದ ಸಮಾಜೋಪಯೋಗಿ ನಿಧಿ ನೀಡುವ ಬದಲು ಈ ದೇಶದ ಬಡವರ ಸಂಪತ್ತು ಮತ್ತು ಅವಕಾಶಗಳನ್ನು‌ಕಸಿದುಕೊಂಡೇ ತಾವು ಶ್ರೀಮಂತರಾಗಿದ್ದೇವೆ ಎನ್ನುವ ಆತ್ಮಸಾಕ್ಷಿಗೆ ಅನುಗುಣವಾಗಿ ಬಡವರ ಉದ್ಧಾರದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ದೇಶದಿಂದ ಬಡತನ ಮೂಲೋತ್ಪಾಟನೆ ಮಾಡಬಹುದು.

ಹಸಿವಿನ ಸಮಸ್ಯೆ ನಮ್ಮಲ್ಲಿನ್ನೂ‌ ಇದೆ ಎನ್ನುವುದೇ ಪ್ರಜಾಪ್ರಭುತ್ವ ಭಾರತಕ್ಕೆ ಕಳಂಕ.ಈ ಕಳಂಕವನ್ನು ತೊಡೆದುಹಾಕುವುದು ಪ್ರಜ್ಞಾವಂತರೆಲ್ಲರ ಕರ್ತವ್ಯ.ಸುಪ್ರೀಂಕೋರ್ಟ್ ಈ ಕಾರ್ಯ ಕೇಂದ್ರ ಸರ್ಕಾರದ ಆದ್ಯತೆಯ ಕಾರ್ಯವಾಗಬೇಕು ಎಂದರೆ ಕೇಂದ್ರ ಸರಕಾರವು ಈ ಹೊಣೆಯನ್ನು ರಾಜ್ಯಸರಕಾರಗಳ ಹೆಗಲಿಗೆ ಹೊರಿಸಿತು.ಹಸಿದವರ ಹೊಟ್ಟೆಗಳಿಗೆ ಅನ್ನ ನೀಡುವ ಪುಣ್ಯಕಾರ್ಯಕ್ಕಿಂತ ಘನಕಾರ್ಯ ಬೇರೆ ಯಾವುದೂ ಇಲ್ಲ.ಆದರೆ ಹೊಟ್ಟೆ ತುಂಬಿದವರಿಗೆ,ತಿಂದದ್ದನ್ನು ಜೀರ್ಣಿಸಿಕೊಳ್ಳಲು ಮಾತ್ರೆ ಸೇವಿಸುವವರಿಗೆ ಹಸಿದ ಒಡಲುಗಳ ಸಂಕಟ ಅರ್ಥವಾಗುವುದಿಲ್ಲ.ಕೇಂದ್ರ ಮತ್ತು ರಾಜ್ಯಗಳು ತಮ್ಮ ಬಜೆಟಿನಲ್ಲಿ ಕನಿಷ್ಟ ಒಂದಿಷ್ಟನ್ನಾದರೂ ಹಸಿವಿನಿಂದ ಬಳಲುತ್ತಿರುವವರೆಗೆ ಮೀಸಲಿರಿಸಬೇಕು.ಸುಪ್ರೀಂಕೋರ್ಟ್ ನಿರ್ದೇಶನ ನೀಡುವವರೆಗೆ ಕಾಯಬೇಕಿರಲಿಲ್ಲ.ಮುಖ್ಯನ್ಯಾಯಾಧೀಶರ ನೇತೃತ್ವದಲ್ಲಿನ ಸುಪ್ರೀಂಕೋರ್ಟ್ ಪೀಠವು ಸರಿಯಾಗಿಯೇ ಗಮನಿಸಿದಂತೆ ಚುನಾವಣಾ ಸಂದರ್ಭದಲ್ಲಿ ‘ ಹಸಿವುಮುಕ್ತ,ಬಡತನ ಮುಕ್ತ ಮತ್ತು ಗುಡಿಸಲು ಮುಕ್ತ’ ಸಮಾಜ ನಿರ್ಮಾಣದ ಘೋಷಣೆ ಮಾಡುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಆ ಘೋಷಣೆಗಳನ್ನು ಈಡೇರಿಸುವತ್ತ ಆಸಕ್ತಿವಹಿಸುವುದಿಲ್ಲ.ಸರಕಾರ ಮಾತ್ರವಲ್ಲ ಉಳ್ಳವರು,ಉದ್ಯಮಿಗಳು ಕೂಡ ಕೈಜೋಡಿಸಬೇಕಿದೆ ಹಸಿವುಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ.ಸುಪ್ರೀಂಕೋರ್ಟ್ ಗ್ರಾಮೀಣ ಪ್ರದೇಶಗಳಲ್ಲಿ ‘ ಸಮುದಾಯ ಅಡುಗೆಮನೆ'( Community kitchen ) ಗಳನ್ನು ಪ್ರಾರಂಭಿಸುವ ಮೂಲಕ ಹಸಿವಿನಿಂದ ಬಳಲಿ,ಸಾಯುವವರಿಗೆ ಅನ್ನ ನೀಡಬೇಕು ಎಂದು ತಾಕೀತು ಮಾಡಿದೆ.ಸಮುದಾಯ ಅಡುಗೆ ಮನೆ ಸ್ಥಾಪನೆಯು ಸಾಮಾನ್ಯ ಮತ್ತು ಸಾರ್ವತ್ರಿಕ ಕಾರ್ಯಕ್ರಮವಾದಾಗ ಅದನ್ನು ದುರ್ಬಳಕೆ ಮಾಡಿಕೊಳ್ಳುವವರೂ ಇರುವುದರಿಂದ ಅಗತ್ಯ ಮತ್ತು ಅನಿವಾರ್ಯತೆಗಳನ್ನು ಆಧರಿಸಿಯಾದರೂ ‘ ಸಮುದಾಯ ಅಡುಗೆಮನೆ’ ಗಳ ನಿರ್ಮಾಣದತ್ತ ಕಾರ್ಯಪ್ರವೃತ್ತರಾಗಬಹುದು.ಊರ ಪುಂಡಪೋಕರಿಗಳು,ಉಪದ್ರವಜೀವಿಗಳ ಆಶ್ರಯತಾಣಗಳಾಗದಂತೆ ನಿಜವಾಗಿ ಹಸಿವಿನಿಂದ ಬಳಲುವವರ ಹೊಟ್ಟೆತುಂಬಿಸುವ ಆಶ್ರಯತಾಣಗಳಾಗಬೇಕು ಸಮುದಾಯ ಅಡುಗೆ ಮನೆಗಳು.

ಹಸಿವಿನ ಸಮಸ್ಯೆಯನ್ನು ಮನಗಂಡೇ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ‘ ದಾಸೋಹ’ ದ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದುದಲ್ಲದೆ ಅದನ್ನೊಂದು ಆಚರಣೆಯನ್ನಾಗಿಸಿದರು.ಬಸವಣ್ಣನವರ ಪೂರ್ವದಲ್ಲಿದ್ದ ಆದ್ಯವಚನಕಾರ ಜೇಡರ ದಾಸಿಮಯ್ಯನವರು ತಮ್ಮದೊಂದು ವಚನದಲ್ಲಿ’ ಒಡಲುಗೊಂಡವ ಹಸಿವ,ಒಡಲುಗೊಂಡವ ಹುಸಿವ ‘ ಎನ್ನುತ್ತ ಒಡಲನ್ನು ಕಾಡುವ ಹಸಿವೆಯ ಬಾಧೆ ಮತ್ತದರ ಶಮನಕ್ಕೆಮನುಷ್ಯ ಪಡಬಹುದಾದ ಪರಿಬವಣೆಗಳನ್ನು ವಿವರಿಸುತ್ತಾ ‘ ಶಿವನೆ ನಿನಗೆ ಒಡಲು ಇಲ್ಲವಾದ್ದರಿಂದ ಒಡಲುಳ್ಳ ಮನುಷ್ಯರ ಸಂಕಟ ಅರ್ಥವಾಗುವುದಿಲ್ಲ.ಆದ್ದರಿಂದ ‘ ನೀನೊಮ್ಮೆ ಒಡಲುಗೊಂಡು ನೋಡು’ ಎನ್ನುತ್ತಾರೆ.ಈ ಮಾತಿನಲ್ಲಿ ಜಗತ್ತಿನ ಅನ್ನದಾತನೆಂದು ಬಿರುದುಗೊಂಡಿರುವ ಶಿವನನ್ನು ಕೆಣಕುತ್ತಾರೆ ಜೇಡರ ದಾಸಿಮಯ್ಯನವರು ‘ ಒಡಲುಗೊಂಡವರೆಂಬ’ ಕಾರಣಕ್ಕೆ ಒಡಲಹೊರೆ ನೀಗಿಸಲು ದೈನ್ಯದಿಂದ ಭಿಕ್ಷೆ ಬೇಡುವವರನ್ನು ಕಂಡು.ಹಸಿವಿನಿಂದ ಬಳಲುತ್ತಿರುವವರು ಮತ್ತು ಭಿಕ್ಷಾಟನೆ ವೃತ್ತಿಯಾಗಿ ಉಳ್ಳವರನ್ನು ಶರಣರನ್ನಾಗಿಸಿದ ಬಸವಣ್ಣನವರು ಅವರಿಗೆ ಉಣ್ಣಲು ನೀಡುವುದು ಪುಣ್ಯದ ಕಾರ್ಯ ಎನ್ನುವ ಜನಾಭಿಪ್ರಾಯ ರೂಪಿಸಿ,ಅದು ಅನುಷ್ಠಾನಕ್ಕೆ ಬರುವಂತೆ ನೋಡಿಕೊಂಡರು.ಬಸವಣ್ಣನವರ ಮಹಾಮನೆಯಲ್ಲಿ ನಿತ್ಯ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಗಳಿಗೆ ಪ್ರಸಾದದ ವ್ಯವಸ್ಥೆ,ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.ಈ ಲಕ್ಷದ ಮೇಲಿನ ತೊಂಬತ್ತಾರು ಸಾವಿರ ಶಿವಗಣರು ಸಮಾಜದ ವಿವಿಧ ಸ್ತರಗಳಿಂದ ಬಂದಿದ್ದ,ಉಣಲು- ಉಡಲು ಇಲ್ಲದೆ ಒದ್ದಾಡುತ್ತಿದ್ದ ಜನರೇ ಆಗಿದ್ದರು ಎಂಬುದು ಗಮನಾರ್ಹವಾದುದು.ಬಸವಣ್ಣನವರು ಹಸಿದ ಒಡಲುಗಳಿಗೆ ಅನ್ನವನ್ನಿಕ್ಕುವುದು ಪುಣ್ಯದ ಕಾರ್ಯ ಎಂದು ಅದನ್ನು ‘ ದಾಸೋಹ’ ಎಂದು ಕರೆದರಲ್ಲದೆ ಸಮಾಜದ ಶ್ರೀಮಂತರು,ಪ್ರತಿಷ್ಠಿತರು ದಾಸೋಹವನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಿದರು,ಸ್ಫೂರ್ತಿ ನೀಡಿದರು.

” ಇವನಾರವ, ಇವನಾರವ,ಇವನಾರವ?” ನೆಂದೆನಿಸದಿರಯ್ಯಾ,
” ಇವ ನಮ್ಮವ,ಇವ ನಮ್ಮವ,ಇವ ನಮ್ಮವ” ನೆಂದೆನಿಸಯ್ಯಾ.
ಕೂಡಲ ಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ

ಎಂದು ನುಡಿದು ಅನ್ನ,ಆಶ್ರಯಗಳನ್ನರಸಿ ಬಂದವರ ಕುಲ- ಗೋತ್ರಗಳನ್ನರಸದೆ ಅವರನ್ನು ಶಿವಶರಣರು,ಶಿವಗಣರು ,ಶಿವನ ಮನೆಯ ಮಕ್ಕಳೆಂದೇ ತಿಳಿದು ಉಣಲಿಕ್ಕಿ,ಉಪಚರಿಸಬೇಕು ಎನ್ನುವ ಸಂದೇಶ ಸಾರಿದರು.ಅನ್ನ ಮತ್ತು ಆಶ್ರಯವನ್ನರಸಿ ಬಂದವರಿಗೆ ನೆರವು ನೀಡದೆ,ನಡೆಯಾಚೆ ಎನ್ನುವವರು ಖಂಡಿಸದೆ ಬಿಡಲಿಲ್ಲ .

ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ ಪಾತ್ರಕ್ಕೆ ಸಲ್ಲದಯ್ಯಾ !
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ !
ನಮ್ಮ ಕೂಡಲ ಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ,ಕಂಡಯ್ಯಾ !

ಎನ್ನುವ ಮೂಲಕ ಬಸವಣ್ಣನವರು ಹಸಿದವರಿಗೆ ಉಣಲಿಕ್ಕದ,ದಾಸೋಹವ್ರತಿಗಳಲ್ಲದ ಶ್ರೀಮಂತರ ಸಂಪತ್ತು ಪಾಪಿಗಳ ಸಂಪತ್ತು,ಅದು ನಾಯಿಯ ಹಾಲಿನಂತೆ.ನಾಯಿಯ ಹಾಲನ್ನು ನಾಯಿಮರಿಗಳೇ ಕುಡಿಯಬೇಕಲ್ಲದೆ ಅದು ಶಿವನ ಪಂಚಾಮೃತ ಅಭಿಷೇಕಕ್ಕೆ ಸಲ್ಲದು.ತಮಗೆ ತಮ್ಮ ಮಕ್ಕಳು ಮೊಮ್ಮಕ್ಕಳುಗಳಿಗೆಂದು ಸಂಪತ್ತನ್ನು ಕೂಡಿಡುವ ಪ್ರವೃತ್ತಿಯ,ಸಂಗ್ರಹಬುದ್ಧಿಯ ಜನರನ್ನು ಪಾಪಿಗಳು ಎಂದು ಜರೆಯುತ್ತ ಅವರ ಸ್ವಾರ್ಥೋಪಭೋಗಿ ಸಂಪತ್ತು ನಾಯಿಯ ಹಾಲಿನಂತೆ ಸದುದ್ದೇಶ,ಸಮಾಜೋಪಯೋಗಿ ಕಾರ್ಯಕ್ಕೆ ಸಲ್ಲದು ಎನ್ನುವ ಬಸವಣ್ಣನವರು ಸಂಪತ್ತನ್ನು ಶಿವಶರಣರಾದ ಬಡವರಿಗೆ ಮತ್ತು ನಿರ್ಗತಿಕರಿಗೆ ವ್ಯಯಿಸಬೇಕು ಎನ್ನುತ್ತಾರೆ.

ತಮ್ಮ ಮಾನವೀಯತೆಯ ಮಾತು ಮತ್ತು ಉಪದೇಶಗಳನ್ನು ಕೇಳಿ ಸಂದೇಹಿಸುವವರು,ಹಿಂದೆಮುಂದೆ ನೋಡುವವರಿಗೆ ಬಸವಣ್ಣನವರು ಹೇಳುವ ಮಾತು ;

ಕಾಗೆಯೊಂದಗುಳ ಕಂಡರೆ ಕರೆಯದೆ ತನ್ನ ಬಳಗವನು ?
ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೆ
ತನ್ನ ಕುಲವೆಲ್ಲವ ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದರೆ ಕಾಗೆ ಕೋಳಿಯಿಂದ ಕರಕಷ್ಟ !
ಕೂಡಲ ಸಂಗಮದೇವಾ.

ಶಿವಭಕ್ತರೆನ್ನಿಸಿಕೊಂಡವರು ದಯಾರ್ದಹೃದಯಿಗಳು ಆಗಿರಬೇಕು.ಹಸಿದಿದ್ದೇನೆ ,ಅನ್ನ ನೀಡಿ ಎಂದು ಬರುವವರ ಬಗ್ಗೆ ತಾತ್ಸಾರ ಮಾಡದೆ ಅವರು ಸಾಕ್ಷಾತ್ ಶಿವಸ್ವರೂಪಿಗಳು ಎಂದು ತಿಳಿದು ಅವರಿಗೆ ಅನ್ನವನ್ನಿತ್ತು ಉಪಚರಿಸಬೇಕು ಎನ್ನುವ ಬಸವಣ್ಣನವರು ನಮಗಿಂತ ಕನಿಷ್ಟಜೀವಿಗಳು ಎನ್ನಿಸಿಕೊಂಡ ಕಾಗೆ ಕೋಳಿಗಳು ಒಂದಗುಳ ಅನ್ನ ಕಂಡರೆ ತಮ್ಮ ಬಳಗವನ್ನೆಲ್ಲ ಕರೆದು ತಿನ್ನುತ್ತವೆ ಎನ್ನುವ ಉದಾಹರಣೆಯ ಮೂಲಕ ಹಂಚಿಉಣ್ಣುವದು ಮನುಷ್ಯಧರ್ಮವಾಗಬೇಕು ಎನ್ನುತ್ತಾರೆ.ಬಸವಣ್ಣನವರ ಈ ವಚನವನ್ನು ನಮ್ಮದೇಶದ ಶ್ರೀಮಂತರುಗಳು ಅರ್ಥಮಾಡಿಕೊಂಡಿದ್ದರೆ ಬಡತನ ಎಂದೋ ನಿವಾರಣೆ ಆಗುತ್ತಿತ್ತು,ಹಸಿವಿನ ಸಮಸ್ಯೆಯೇ ಇರುತ್ತಿರಲಿಲ್ಲ.ಅನ್ನ ಮತ್ತು ಅವಕಾಶಗಳನ್ನು ಹಂಚಿಕೊಂಡು ತಿನ್ನುವ ಸಮಾಜ ಶಿವಸಮಾಜ ಇಲ್ಲವೇ ಸುಖೀಸಮಾಜವಾಗುತ್ತದೆ.ಅನ್ನ ಮತ್ತು ಅವಕಾಶಗಳನ್ನು ಕಸಿದು ತಿನ್ನುವ ಕೆಲವೇ ಜನರ ದುರಾಸೆಯಿಂದ ಸಮಾಜದ ದುರ್ಬಲರು ಪರಿತಪಿಸುವಂತೆ ಆಗುತ್ತದೆ.

ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡದೆ ಆ ವ್ರತ,ಈ ಹೋಮ,ಯಜ್ಞ- ಯಾಗಾದಿಗಳನ್ನು,ದೇವರ ಉತ್ಸವ- ಪೂಜೆಗಳನ್ನು ವೈಭವಯುತವಾಗಿ ಆಚರಿಸುವವರ ವರ್ತನೆಯನ್ನು ಬಸವಣ್ಣನವರು ಕೆಡೆನುಡಿಯುತ್ತಾರೆ ;

ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು ;
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ !
ಉಂಬ ಜಂಗಮ ಬಂದರೆ ನಡೆಯಂಬರು ;
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ !
ನಮ್ಮ ಕೂಡಲ ಸಂಗನ ಶರಣರ ಕಂಡುದಾಸೀನವ ಮಾಡಿದರೆ
ಕಲ್ಲ ತಾಗಿದ ಮಿಟ್ಟಿಯಂತಪ್ಪರಯ್ಯಾ.

ಇದು ನಮ್ಮ ಸಮಾಜ ವ್ಯವಸ್ಥೆಯನ್ನು ವಿಡಂಬಿಸುವ ಸೊಗಸಾದ ಕೆಡೆನುಡಿಯಾಗಿದೆ– ಕಲ್ಲುನಾಗರಕ್ಕೆ ಹಾಲನ್ನೆರೆಯುವ ಜನರು ನಿಜವಾದ ಹಾವು ಬಂದರೆ ಕೊಲ್ಲು ಕೊಲ್ಲು ಎನ್ನುತ್ತಾರೆ;ಕೊಲ್ಲುತ್ತಾರೆ ಕೂಡ.ಹಸಿವಿನಿಂದ ಕಂಗಲಾಗಿ ಬೇಡುತ್ತಬಂದ ವ್ಯಕ್ತಿಗೆ ಅನ್ನವನ್ನು ನೀಡದೆ ಮುಂದೆ ನಡೆ ಎನ್ನುವವರು ಉಣ್ಣದ ಶಿವಲಿಂಗದೆದುರು ಷಡ್ರಸೋಪೇತ ಭಕ್ಷ್ಯಭೋಜ್ಯಗಳ ನೈವೇದ್ಯ ಸಮರ್ಪಿಸುತ್ತಾರೆ !’ ಭವತಿ ಭಿಕ್ಷಾಂ ದೇಹಿ’ ಎಂದು ಬೇಡಿ ಬಂದವರಲ್ಲಿ ಉದಾಸೀನ ಮಾಡಿ,ದೇವರೆದುರು ಮಾಡುವ ಎಲ್ಲ ಪೂಜೆ,ಸೇವೆಗಳು ವ್ಯರ್ಥ ಎನ್ನುವ ಬಸವಣ್ಣನವರು ಹಸಿದವರಿಗೆ ಅನ್ನವನ್ನಿಕ್ಕದವರು ಕಲ್ಲಿಗೆ ಬಡಿದ ಮರುಳಹೆಂಟೆಯು ಪುಡಿಪುಡಿಯಾಗುವಂತೆ ಸರ್ವನಾಶವಾಗುತ್ತಾರೆ ಎನ್ನುತ್ತಾರೆ.ಈ ವಚನದಲ್ಲಿ ಬಸವಣ್ಣನವರು ಹಸಿದ ಒಡಲುಗಳಿಗೆ ಅನ್ನವನ್ನಿಕ್ಕುವುದೇ ಮಹಾಪೂಜೆ,ಶಿವಸೇವೆ ಎನ್ನುತ್ತಾರೆ.ಕಲ್ಲುನಾಗರ ಹಾಲಿನ ಸವಿಯನ್ನುಣ್ಣದು,ಜೀವಂತನಾಗರಕ್ಕೆ ಹಾಲನ್ನಿತ್ತರೆ ಅದು ಕುಡಿಯುತ್ತದೆ.ಹಸಿವಿನ ಪರಿತಾಪ ತಾಳದೆ ಅನ್ನನೀಡಿ ಎಂದು ದೈನ್ಯದಿಂದ ಬೇಡಿ ಬಂದವರಿಗೆ ಅನ್ನವನ್ನು ನೀಡದೆ ಶಿವಲಿಂಗ,ದೇವರ ಮೂರ್ತಿಯೆದುರು ಬಗೆಬಗೆಯ ಭಕ್ಷ್ಯಭೋಜ್ಯಗಳ ನೈವೇದ್ಯ ಇತ್ತರೆ ಫಲವೇನು ?

ಮತ್ತೊಂದು ವಚನದಲ್ಲಿ ಯಾವ ನೇಮ- ವ್ರತಗಳನ್ನಾಚರಿಸಿ ಫಲವೇನು ಬೇಡಿದವರಿಗೆ ನೀಡದೆ ಎಂದು ಪ್ರಶ್ನಿಸುವ ಬಸವಣ್ಣನವರು ವ್ರತ- ನೇಮಗಳ ಹೆಸರಿನಲ್ಲಿಪುರೋಹಿತರಿಗೆ,ಆಚಾರ್ಯರುಗಳಿಗೆ ಧನ- ಕನಕಗಳ ಕಾಣಿಕೆ ನೀಡದೆ ಹಸಿದವರಿಗೆ,ಅವಶ್ಯಕತೆಯುಳ್ಳವರಿಗೆ ನೀಡಬೇಕು ಎನ್ನುತ್ತಾರೆ ;

ಆವ ನೇಮವಾದರೇನು ?
ಹೇಮವಿಲ್ಲದಂಗೈಸಬಹುದೆ ?
ಕೊಡಲಿಲ್ಲೆಂಬುದರಿಂದ ಸಾಯಲುಬಹುದು: ಸೈರಿಸಬಾರದು!
ಬೇಡುವವರ ನೋಡಿ ನೋಡಿ,ಈಯಲಿಲ್ಲದವನ
ಜೀವನವದೇತಕೊ ಕೂಡಲ ಸಂಗಮದೇವಾ ?

ಹೊಟ್ಟೆಯ ಪರಿತಾಪದಿ ಬೆಂದು ದಗ್ಧರಾಗಿ ಅಂಗಲಾಚಿ ಬೇಡುವವರನ್ನು ನೋಡಿಯೂ ನೋಡದಂತೆ ನಡೆಯುವ ‘ ಪ್ರಜ್ಞಾವಂತರುಗಳು’ ಅರ್ಥಮಾಡಿಕೊಳ್ಳಬೇಕು ಬಸವಣ್ಣನವರ ವಚನದ ಹಿಂದಿನ ಮನುಷ್ಯತ್ವದ ಧ್ವನಿಯನ್ನು,ಹಸಿದವರ ಪರವಾಗಿರುವ ಬಸವ ಕಾರುಣ್ಯವನ್ನು.

ಮುಕ್ಕಣ್ಣ ಕರಿಗಾರ

 

21.01.2022