ಸಾವು ಮತ್ತು ಬದುಕು
*ದೀಪಕ್ ಶಿಂಧೆ
ಸಾಯುವದೆಂದರೆ ಈ ಲೋಕದ ಜೀವಂತ ಜನರೊಂದಿಗೆ ಮಾತು ಕತೆ ಮತ್ತು ಸ್ಪರ್ಷಕ್ಕೆ ಸಿಗದಂತಾಗುವದು..
ಈಗ ಇದ್ದೆವು ಅನ್ನಿಸಿದರೂ ಇನ್ನಿಲ್ಲದಂತಾಗಿ ಬಿಡುವದು.
ಬದುಕುವದೆಂದರೆ ನಮ್ಮವರ ಜೊತೆಗೆ ಇದ್ದಷ್ಟು ದಿನ ನಗೆಯ ಅಲೆ ಹುಟ್ಟಿಸುವದು.
ಮತ್ತೊಬ್ಬರ ಕಷ್ಟಕ್ಕೆ ಹೆಗಲಾಗದಿದ್ದರೂ ಸಂತೈಸುವ ಕೈ ಮತ್ತು ಸಮಾಧಾನದ ಮಾತಾಗುವದು.
ಸಾಯುವದೆಂದರೆ ಈ ಲೋಕದ ಜಂಝಾಟ ತೊರೆದು
ಸಮಸ್ಯೆಗಳ ಸಂಕೋಲೆಗೆ ಸಿಲುಕದೆ
ಅಳು ನಗು ನೋವು ಹತಾಶೆಗಳಿಗೆ ನಾಟ್ ರೀಚೆಬಲ್ ಆಗುವದು.
ಬದುಕುವದೆಂದರೆ ದೂರದಲ್ಲಿ ಇದ್ದು ಯಾರೂ ಹೇಳದೆ ಇದ್ದರೂ ನಮ್ಮವರ ನೋವಿಗೆ ಕಿವಿಯಾಗುವದು.
ಸಾಧ್ಯವಾದಷ್ಟು ಸಮಾಧಾನಿಸಿ ಮೌನವಾಗುವದು
ಸಾಯುವದೆಂದರೆ
ಬದುಕೆಂಬ ಬಸ್ಸಿನ ಪ್ರಯಾಣ ಮುಗಿಸಿ ಕೊನೆಯ ನಿಲ್ದಾಣ ಬರುವ ಮೊದಲೇ ನಮ್ಮ ನಿಲ್ದಾಣಗಳಲ್ಲಿ ನಾವು ಇಳಿಯುತ್ತ ಹೋಗುವದು.
ಬದುಕುವದೆಂದರೆ
ಪ್ರಯಾಣ ಮುಗಿದ ಮೇಲೂ
ಬಸ್ಸಿನಲ್ಲಿ ಉಳಿದ ಮಲ್ಲಿಗೆಯ ಪರಿಮಳ,ಖಾಲಿ
ಸೀಟಿನಲ್ಲಿ ಮರೆತು ಹೋದ ಕರ್ಚಿಪ್ಪು ಕೂಡ ಮತ್ಯಾರಿಗೊ ಜಾಗವನ್ನು ಕಾದಿರಲೂ ಬಹುದು.
ಸಾಯುವದೆಂದರೆ ಒಂದಷ್ಟು ಜನರಿಗೆ ನಾವು ಬೇಗ ಹೋದೆವು ಅನ್ನಿಸಿದರೆ ಬಹಳಷ್ಟು ಜನರಿಗೆ ಹೋಗಿದ್ದೆ ಒಳ್ಳೆಯದಾಯಿತು ಎನ್ನಿಸಿರಬಹುದು.
ಒಮ್ಮೊಮ್ಮೆ ಇದ್ದೂ ಇಲ್ಲದಂತಾಗಿರಬಹುದು
ಬದುಕುವದೆಂದರೆ
ಸಿರಿ ಬಂದಾಗ ನೆಂಟರ ಒಳಗೊಂದಾಗಿ ನೋವಾದಾಗ ಒಂಟಿಯಾಗಿ ಉಳಿದಿರಬಹುದು.
ಇನ್ನೊಬ್ಬರ ಕಣ್ಣೀರು ಒರೆಸುವ ಧಾವಂತದಲ್ಲಿ ತನ್ನ ಕಣ್ಣೀರು ಮುಚ್ಚಿ ಇಟ್ಟಿರಲೂ ಬಹುದು.
ಸಾಯುವದೆಂದರೆ
ಬರೀ ಉಸಿರಷ್ಟೇ ನಿಂತು ಹೋಗಿ,ನಾಡಿಗಳು ಮಿಟುಕದೆ ಎದೆಯ ಕಾವು ಆರಿ ಹೋಗಿರಬಹುದು.
ಆದರೆ ಬದುಕುವದೆಂದರೆ
ಇದೆಲ್ಲವನ್ನೂ ಮೀರಿ
ನಾವಿಲ್ಲದ ಕಾಲಕ್ಕೂ ಇದ್ದೇವೆ ಎನ್ನಿಸುವಂತೆ ಸೋತವರಿಗೆ
ಮಿನುಕು ದೀಪವಾಗುವದು.
ಬದುಕುವದೆಂದರೆ ಈ ಜೀವದ ಪಣತಿ ಹಾರಿ,ದೇವರ ಜಗುಲಿಯ ದೀಪವಾರಿದ ಮೇಲೂ ನಾವು ಮತ್ತೆ
ಮರಳುತ್ತೇವೆಂಬ ನಿರೀಕ್ಷೆಗಳಲ್ಲಿ
ಮತ್ಯಾರೋ ನಮಗಾಗಿ ಕಾಯುಮ ಇರಬಹುದು.
