ಕಲ್ಯಾಣ ಕಾವ್ಯ : ಸಮನ್ವಯ ಭಾರತ – ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ

ಸಮನ್ವಯ ಭಾರತ

ಮುಕ್ಕಣ್ಣ ಕರಿಗಾರ

ನಡೆಯೋಣ ಸಮನ್ವಯ ಭಾರತ ಪಥದಿ
ದುಡಿಯೋಣ ಸರ್ವೋದಯಕೆ
ಬಿತ್ತಿ ಬೆಳೆಯೋಣ ಭಾರತಿಯರೆಲ್ಲರೊಂದೇ ಎನ್ವ
ದೇಶಬಾಂಧವ್ಯದ ಅಮೃತ ಬೀಜಗಳ
ಪಡೆಯೋಣ ಸರ್ವೋದಯ ಫಲ,ಸಿದ್ಧಿಯನು.

ಬೇಡ ನಮ್ಮೊಳು ಕಾದಾಡುವ ಗುಣ
ನಾವೇ ನಾಡ ನಿರ್ಮಾತೃಗಳು
ಜನಪದರ ಭಾರತವಿದು ಜನಸಾಮಾನ್ಯರ ನಾಡು
ಹೊಟ್ಟೆಪಾಡಿಗಾಗಿ ಬದುಕುವ
ಕೋಟಿಕೋಟಿ ಜನರ ನಾಡು.
ದುಡಿಯುವವರ ಕರ್ಮಭೂಮಿ
ನೇಗಿಲಯೋಗಿಗಳ ಧರ್ಮಕ್ಷೇತ್ರ
ಕಾಯಕಯೋಗಿಗಳ ಕೈಲಾಸ
ನಾವು ಜನಸಾಮಾನ್ಯರೆ ದೇಶಕಟ್ಟುವವರು
ಬೇಡ ನಮ್ಮೊಳು ಜಾತಿ ಮತ ಧರ್ಮಗಳ ಪ್ರತ್ಯೇಕತೆ
ನಮಗೆಲ್ಲರಿಗು ಉಂಟು ಹೊಟ್ಟೆ ಬಟ್ಟೆ
ಮತ್ತೆ ದುಡಿಯುವ ಸಮಸ್ಯೆ.

ಬೇಡವೆಮಗೆ ನಿಜ ಭಾರತವಲ್ಲದ ದೇಶ!
ಬೇಕು ನಮಗೆ ನಮ್ಮದೇ ದೇಶ
ಬಡವರ ಭಾರತ
ದುಡಿಯುವವರ ಭಾರತ
ಕಡೆಗಣಿಸಲ್ಪಟ್ಟವರ ಭಾರತ
ಕಟ್ಟೋಣ ನಾವು ನಮ್ಮದೆ ಭಾರತ
‘ ಬದುಕ’ ಜನರ ಭಾರತ.
ಕೂಡಿ ಬಾಳುತ್ತ,ಕೂಡಿ ಉಣ್ಣುತ್ತ
ಕೂಡಿಯೇ ಉದ್ಧಾರವಾಗೋಣ

ಹಸಿವು ಬಡತನ ದೌರ್ಭಾಗ್ಯಗಳ ಹೊದ್ದು ಮಲಗಿದ ಜನ ನಾವು
ಎದ್ದೇಳಲೇ ಬೇಕು ಈಗಲಾದರೂ
ಇಲ್ಲದಿದ್ದರೆ ಶತಮಾನಗಳುರುಳಿದರೂ
ತಪ್ಪದೆಮಗೆ ಉಳ್ಳವರ ಪದತಲಗಳಲಿ
ಹೊರಳಾಡುವ ‘ಭಾಗ್ಯ’!
ಬಿಸಿಲ್ಗುದುರೆಯ ತೋರುತ್ತ ಬಣ್ಣದ ಮಾತುಗಳಲ್ಲಿ
ಕಸಿದುಕೊಂಡಿಹರು ನಮ್ಮ ಕನಸುಗಳ
ಕುಂದಿಸಿಹರು ನಮ್ಮ ಕಸುವ
ವಿಷಬೀಜಗಳ ಬಿತ್ತಿ ಬೆಳೆಯುತ್ತಿಹರು
ಅಯ್ಯೋ! ಪಶುಪತಿಯ ನಾಡು
ವಿಷದ ಬೀಡಾಯಿತಲ್ಲ !

ಭಾವಾವೇಶವಲ್ಲ, ಬದುಕು ಮುಖ್ಯ
ಭಾಷಣವಲ್ಲ, ಬಡವರುದ್ಧಾರ ಮುಖ್ಯ
ಘೋಷಣೆಗಳಲ್ಲ, ಶೋಷಣೆಮುಕ್ತ ಭಾರತ ನಮ್ಮ ಕನಸು- ಆಶಯ.

ನಡೆಯಿರಿ ನಡೆಯಿರಿ ನಡೆಯಿರಿ
ಕಟ್ಟೋಣ ನಮ್ಮದೇ ಭಾರತ
‘ ಬದುಕ’ ಜನರ ಭಾರತ
ಸರ್ವರೇಳ್ಗೆಯ ಸಮನ್ವಯ ಭಾರತ
ಸರ್ವಜನಸಮತೆಯ ಸಾಮಾನ್ಯರ ರಾಜ್ಯ

ಮುಕ್ಕಣ್ಣ ಕರಿಗಾರ

20.01.2022