ವ್ಯಕ್ತಿತ್ವವಿಕಸನ
ಎಡರು- ತೊಡರುಗಳೆಲ್ಲವನ್ನು ಎದುರಿಸಿ ಗೆದ್ದು ವಿಜಯಿಗಳಾಗಬೇಕು
ಮುಕ್ಕಣ್ಣ ಕರಿಗಾರ
ಮನುಷ್ಯ ಜೀವನ ಎಂದ ಮೇಲೆ ಸಮಸ್ಯೆಗಳು,ತೊಂದರೆಗಳು ಬರುವುದು ಸಹಜ.ಎಡರು ತೊಡರುಗಳನ್ನು ತುಂಡರಿಸಿಕೊಂಡೇ ಯಶಸ್ವಿಯಾಗಬೇಕು.ಕೆಲವೇ ಕೆಲವು ಜನರ ಜೀವನದಲ್ಲಿ ಮಾತ್ರ ಯಾವ ತೊಂದರೆಗಳು ಬರದೆ ಇರಬಹುದು.ಆದರೆ ಬಹುಪಾಲು ಜನರು ಸಮಸ್ಯೆ,ತೊಂದರೆ,ಸಂಕಷ್ಟಗಳನ್ನು ಎದುರಿಸುತ್ತಾರೆ.ಸಮಸ್ಯೆಗಳು ಬಂದಾಗ ಕೆಲವರು ಅಧೀರರಾಗುತ್ತಾರೆ.ಕೆಲವರು ಸಮಸ್ಯೆಗಳನ್ನು ಎದುರಿಸಲರಿಯದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದರೆ ಇದು ಸರಿಯಲ್ಲ ಮತ್ತು ಧೀರರ ನಡೆಯಲ್ಲ.
ಮನುಷ್ಯ ಪ್ರಪಂಚದಲ್ಲಿ ಎಲ್ಲರೂ ನಮಗೆ ಬೇಕಾದವರು ಇರುವುದಿಲ್ಲ.ಎಲ್ಲವೂ ನಮ್ಮ ಇಷ್ಟದಂತೆ ನಡೆಯುವುದಿಲ್ಲ.ನಮ್ಮ ಏಳ್ಗೆಯನ್ನು ಸಹಿಸದವರೂ ಇರುತ್ತಾರೆ.ನಮ್ಮ ಎಡಬಲಗಳಲ್ಲೇ ಇರುತ್ತಾರೆ ನಮ್ಮ ಹಿತಶತ್ರುಗಳು.ನಮ್ಮ ಏಳ್ಗೆಯನ್ನು ಸಹಿಸದ ಮತ್ಸರದೇಹಿಗಳು,ಜೊತೆಗಿದ್ದೇ ಹಗೆಸಾಧಿಸುವ ಹಿತಶತ್ರುಗಳಿಂದ ನಮಗೆ ತೊಂದರೆ ಬಂದೊದಗುತ್ತದೆ.ಕೆಲವೊಮ್ಮೆ ತೀರ ವಿಪರೀತ ಎನ್ನುವ ಸಮಸ್ಯೆಗಳು ಬಂದೆರಗಬಹುದು.ಕೋರ್ಟು,ಕಛೇರಿಗಳಿಗೆ ಅಲೆದಾಡುವ ಪ್ರಸಂಗಗಳೂ ಬರಬಹುದು.ಅಂತಹ ಕೆಟ್ಟ ಪ್ರಸಂಗಗಳಲ್ಲಿ ನಮ್ಮ ಜೊತೆಗಿದ್ದವರು ನಮ್ಮಿಂದ ದೂರವಾಗುತ್ತಾರೆ.ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು.ಮನುಷ್ಯಸ್ವಭಾವವೇ ಹಾಗೆ.ನಮ್ಮ ಉನ್ನತಿ- ಉತ್ತಮಸ್ಥಿತಿಯಲ್ಲಿ ನಮ್ಮ ಜೊತೆಗಿರುವವರು ನಮ್ಮ ಕೆಟ್ಟಕಾಲದಲ್ಲಿ ನಮ್ಮೊಂದಿಗೆ ಇರುವುದಿಲ್ಲ.ಯಾರು ಜೊತೆಗಿದ್ದರೇನು ಯಾರು ಜೊತೆಗಿರದಿದ್ದರೇನು ನಾವಂತೂ ಬಾಳಿ,ಗೆಲ್ಲಲೇಬೇಕು.ಒಬ್ಬಂಟಿಯಾಗಿಯಾದರೂ ಹೋರಾಡಿ ಗೆಲ್ಲಲೇಬೇಕು.ಆತ್ಮವಿಶ್ವಾಸದಿಂದ ಎದುರಿಸಬೇಕು ವಿಪತ್ಪರಂಪರೆಗಳನ್ನು.ನಾವು ಏನನ್ನಾದರೂ ಕಳೆದುಕೊಳ್ಳಬಹುದು,ಆದರೆ ಆತ್ಮವಿಶ್ವಾಸವನ್ನು ಮಾತ್ರ ಕಳೆದುಕೊಳ್ಳಬಾರದು.
ಪ್ರಪಂಚದಲ್ಲಿ ಮಹಾನ್ ವ್ಯಕ್ತಿಗಳಾಗಿ ಪ್ರಸಿದ್ಧರಾದವರೆಲ್ಲರೂ ಸಮಸ್ಯೆಗಳನ್ನು ಎದುರಿಸಿ,ಗೆದ್ದವರೇ.ಅಬ್ರಹಾಂ ಲಿಂಕನ್ ಅವರು ಸೋಲು,ನೋವು- ಅಪಮಾನಗಳನ್ನು ಅನುಭವಿಸಿ,ಸೋಲದೆ ಅಮೇರಿಕದ ಅಧ್ಯಕ್ಷರಾದರು.ಸಾಮಾನ್ಯ ಬಡಗಿಯ ಮಗನಾಗಿದ್ದ ಲಿಂಕನ್ ಅಮೇರಿಕಾದ ಅಧ್ಯಕ್ಷರಾಗಿ ವಿಶ್ವಪ್ರಸಿದ್ಧರಾದರು.ಅಬ್ದುಲ್ ಕಲಾಂ ಅವರು ಕಡುಬಡತನದ ಸಾಮಾನ್ಯ ಮನೆತನದಲ್ಲಿ ಹುಟ್ಟಿ ವಿಜ್ಞಾನದಲ್ಲಿ ಅತ್ಯದ್ಭುತ ಸಾಧನೆ ಮಾಡಿ,ಭಾರತದ ಬಾಹ್ಯಾಕಾಶ ವಿಜ್ಞಾನದಲ್ಲಿ ಮಹಾನ್ ಸಾಧನೆ ಮಾಡಿದರು.ಅಬ್ದುಲ್ ಕಲಾಂ ಅವರು ಪ್ರತಿಭೆ,ಪ್ರಾಮಾಣಿಕತೆ,ದೇಶಪ್ರೇಮಗಳಿಂದಾಗಿಯೇ ಭಾರತದ ರಾಷ್ಟ್ರಪತಿಗಳಾಗಿ ವಿಶ್ವದ ಯಶಸ್ವಿ ವ್ಯಕ್ತಿಗಳಲ್ಲಿ ಒಬ್ಬರೆನ್ನಿಸಿಕೊಂಡರು.ಇಂತಹ ಉನ್ನತಿಕೆಗೆ ಒಮ್ಮಿಂದೊಮ್ಮೆಲೆ ಏರಲಿಲ್ಲ ಕಲಾಂ ಅವರು.ಅವರ ಬಾಲ್ಯದ ಜೀವನ ಸಂಕಷ್ಟಗಳ ಸರಮಾಲೆಯಾಗಿತ್ತು.ಆದರೂ ಎದೆಗುಂದದೆ ಮುನ್ನುಗ್ಗಿದ್ದರಿಂದಲೇ ಕಲಾಂ ಅವರು ವಿಶ್ವಪ್ರಸಿದ್ಧರಾದರು.ಜೀವನದಲ್ಲಿ ಯಶಸ್ವಿಗಳಾಗಬೇಕು ಎನ್ನುವವರಿಗೆ ಅಬ್ದುಲ್ ಕಲಾಂ ಅವರ ಜೀವನ ಸ್ಫೂರ್ತಿದಾಯಕವಾದುದು.
ಸಮಾಜ ಜೀವನ,ವೃತ್ತಿಜೀವನ ಮತ್ತು ಸಾರ್ವಜನಿಕ ಜೀವನದಲ್ಲಿ ತೊಂದರೆಯನ್ನನುಭವಿಸುವ ಮುಜುಗರವನ್ನನುಭವಿಸುವ ಪ್ರಸಂಗಗಳು ಬರಬಹುದು.’ ಮಾಡಿಕೊಂಡು ತಿಂದರೆ ಮನುಷ್ಯರ ಕಾಟ,ಬೇಡಿಕೊಂಡು ತಿಂದರೆ ನಾಯಿಗಳ ಕಾಟ’ ಎನ್ನುವ ಗಾದೆ ಮಾತು ಒಬ್ಬರು ನೆಟ್ಟಗಿರುವುದನ್ನು ಸಹಿಸದ ಸಮಾಜದ ಮನೋಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ.ತಾವು ನೆಟ್ಟಗಿರದೆ ಇದ್ದುದರಿಂದ ಇತರರು ನೆಟ್ಟಗಿರಬಾರದು ಎನ್ನುವದು ಮನುಷ್ಯರಲ್ಲಿ ಕೆಲವರ ಭಾವನೆಯಾದರೆ ತಾವು ಮಾತ್ರ ನೆಟ್ಟಗಿರಬೇಕು ಮತ್ತೊಬ್ಬರು ನೆಟ್ಟಗಿರಲೇಬಾರದು ಎನ್ನುವ ಧೋರಣೆಯವರು ಬಹಳಷ್ಟು ಜನರು ! ಇಂತಹ ವ್ಯಕ್ತಿಗಳು ಏಳ್ಗೆ ಹೊಂದುವವರನ್ನು ತುಳಿಯಲು ಏನೆಲ್ಲ ತಂತ್ರ- ಕುತಂತ್ರಗಳನ್ನು ಮಾಡುತ್ತಾರೆ.ಕುತಂತ್ರಗಳಿಗೆ ಬಲಿಯಾದ ವ್ಯಕ್ತಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಾರೆ.ಒಬ್ಬ ವ್ಯಕ್ತಿ ಮಹಾನ್ ಸಾಧನೆ ಮಾಡಿರಬಹುದು,ಮಾಡುತ್ತಿರಲೂಬಹುದು. ಅದನ್ನು ಮೆಚ್ಚುವ ಗುಣ ಇರದೆ ಇದ್ದರೂ ಅವರನ್ನು ಹಾಳು ಮಾಡುವ ಕೆಟ್ಟಗುಣ ಇರಬಾರದು.ಇಂತಹ ಕೆಟ್ಟಗುಣಗಳುಳ್ಳವರಿಂದಾಗಿಯೇ ತೊಂದರೆಗೀಡಾಗುವ ಸತ್ಪುರುಷರು ಆ ಸಂಕಷ್ಟಗಳನ್ನು ಮೀರಿ ನಿಲ್ಲಬೇಕು,ಎದುರಿಸಿ ಗೆಲ್ಲಬೇಕು.
ಆತ್ಮಬಲವೊಂದನ್ನು ನಂಬಿ ನಡೆಯಬೇಕು.ಆತ್ಮಬಲದ ಎದುರು ಯಾವ ಬಲವೂ ಏನೂ ಮಾಡದು.ಎಂತಹದೆ ಸಂಕಷ್ಟ ಬಂದೆರಗಿದರೂ ಇದನ್ನು ನಿವಾರಿಸಿಕೊಳ್ಳಬಲ್ಲೆ ಎನ್ನುವ ಆತ್ಮಬಲ ನಮ್ಮದಾಗಬೇಕು.ಪರಿಹಾರವಿಲ್ಲದ ಯಾವ ಸಮಸ್ಯೆಯೂ ಇಲ್ಲ.ಧುತ್ತೆಂದು ಬಂದೆರಗಿದ ಸಮಸ್ಯೆ,ಆಪತ್ತುಗಳು ಕರಗಲೇಬೇಕು.ಸಂಯಮಚಿತ್ತರಾಗಿ ಆಪತ್ತುಗಳ ನಿವಾರಣೆಗೆ ಪ್ರಯತ್ನಿಸಬೇಕು.’ ಕಾಲು ಎಳೆಯುವವರ’ ದುಷ್ಟಬುದ್ಧಿ- ಬಲಗಳಿಗೆ ಸಿಲುಕದಷ್ಟು ಬಲಶಾಲಿಗಳಾಗಬೇಕು.ನಡೆಯುವವರು ಎಡಹುದು ಸಹಜ; ಆದರೆ ತೊಡರುಗಾಲು ಒಡ್ಡಿ ಕೆಡಹುವವರ ಬಗ್ಗೆ ಎಚ್ಚರಿಕೆ ಅಗತ್ಯ.ಬಿದ್ದ ನೆಲದಲ್ಲಿಯೇ ಎದ್ದು ಮೇಲೇರಬೇಕು,ಎಸೆದ ನೆಲದಲ್ಲಿ ಹಸಿರಾಗಿ ನಳನಳಿಸಿ ಚಿಗುರಬೇಕು.ನವೋಲ್ಲಾಸ,ನವೋತ್ಸಾಹಗಳಿಂದ ಮುನ್ನುಗ್ಗುತ್ತಿರಬೇಕು ಏನೇ ಬಂದರೂ ಎದುರಿಸುವೆ,ಗೆಲ್ಲುವೆ,ವಿಜಯಿಯಾಗುವೆ ಎನ್ನುವ ಅಮಿತೋತ್ಸಾಹದಿಂದ.ಆತ್ಮವಿಶ್ವಾಸ,ಉತ್ಸಾಹ ಮತ್ತು ಪರಿಶ್ರಮಗಳು ಯಶಸ್ಸಿನ ರಹಸ್ಯ.

19.01.2022