‘ಯೋಚಿಸಿ ನೋಡಿದರೆ ನಮಗೆ ಶತೃತ್ವ ಕೂಡ ಸಿಹಿಯಾಗಿರುತ್ತದೆ, ಆದರೆ ಅದನ್ನ ಅನುಭವಿಸಿ ನೋಡಬೇಕಷ್ಟೇ’ – ದೀಪಕ್ ಶಿಂಧೆ

‘ಯೋಚಿಸಿ ನೋಡಿದರೆ ನಮಗೆ ಶತೃತ್ವ ಕೂಡ ಸಿಹಿಯಾಗಿರುತ್ತದೆ, ಆದರೆ ಅದನ್ನ ಅನುಭವಿಸಿ ನೋಡಬೇಕಷ್ಟೇ’

         ಲೇಖಕ: ದೀಪಕ್ ಶಿಂಧೆ

ತರಕಾರಿ ಮಾರುಕಟ್ಟೆಯಲ್ಲಿ ಕುಳಿತ ಹೆಣ್ಣುಮಗಳನ್ನ ಎಬ್ಬಿಸುವದಕ್ಕಾಗಿ ಅದೇ ಬೀದಿಯ ರಸ್ತೆಗೆ ಹೊಂದಿಕೊಂಡ ಅಂಗಡಿಯ ಮಾಲೀಕ ನೆಲಕ್ಕೆ ನೀರು ಚೆಲ್ಲುತ್ತಾನೆ.ಯಾವನೊ ಸೋಂಬೇರಿಯೊಬ್ಬ ವಿನಾಕಾರಣ ನಮ್ಮನ್ನ ನೋಡಿ ಬೇಕೆಂದೆ ಕ್ಯಾಕರಿಸಿ ನೆಲಕ್ಕೆ ಉಗಿಯುತ್ತಾನೆ.ಇದನ್ನೆಲ್ಲ ಮೀರಿ ನಮ್ಮದೆ ಗೆಳೆಯರ ಬಳಗದಲ್ಲಿ ಅತ್ಯಂತ ಸಂಭಾವಿತ ಎನ್ನಿಸಿಕೊಂಡ ಗೆಳೆಯನೊಬ್ಬ ನಮ್ಮ ಬಗ್ಗೆ ಇಲ್ಲ ಸಲ್ಲದ ರೂಮರುಗಳನ್ನ ಹುಟ್ಟಿಸುತ್ತಾನೆ.ಎಕ್ಜಾಕ್ಟ ಆಗಿ ಹೇಳಬೇಕೆಂದರೆ ನಮ್ಮ ಸುತ್ತಲಿನ ಪ್ರತಿಯೊಬ್ಬ ಗಂಡಸು ಮತ್ತು ಹೆಂಗಸರಲ್ಲಿ ಒಂದಲ್ಲ ಒಂದು ಕಾರಣಗಳಿಗಾಗಿ ಸವತಿ ಮತ್ಸರವೆಂಬುದು ಲಾವಾ ರಸದಂತೆ ಕುದಿಯುತ್ತಲೇ‌ ಇರುತ್ತದೆ.

ಹೀಗೆ ಬಂದು ಹಾಗೆ ಹೋಗುವ ಈ ಪುಟ್ಟ ಬದುಕಿನಲ್ಲಿ ನಮ್ಮವರು ಯಾರೆಂದು ತಿಳಿಯಬೇಕಾದರೆ ಒಂದೇ ಒಂದು ಸಣ್ಣ ತಪ್ಪು ಮಾಡಿ ನೋಡಿ.
ಖೆಡ್ಡಕ್ಕೆ ಬಿದ್ದ ಆನೆಗೆ ಆಳಿಗೊಂದು ಕಲ್ಲು ಎನ್ನುವಂತೆ ಕಾರಣಗಳೇ ಇಲ್ಲದೆ ನಮ್ಮ ಬಗ್ಗೆ ಒಂದಷ್ಟು ಸಿಟ್ಟು,ಸೆಡವು ಮತ್ತು ವಿನಾಕಾರಣದ ದ್ವೇಷ ಯಾರ ಯಾರದೋ ಮನಸ್ಸಿನಲ್ಲಿ ಬಂದು ಹೋಗುತ್ತದೆ.ನಾವು ತೀರಾ ಸಣಕಲಾಗಿದ್ದರೆ ಏ ಒದ್ ಬಿಡ್ತೀನಿ ಬೋಳಿ‌ಮಗನೆ ಅಂತ ವಿನಾಕಾರಣ ಎಗರಾಡುವ ಜನ ಕೂಡ ನಮಗೆ ತಪ್ಪದೆ ಸಿಗುತ್ತಾರೆ.ಒಂದಷ್ಟು ದಢೂತಿಗಳಾಗಿದ್ದರೆ ನಾವು ನಡೆದುಹೋಗುತ್ತಿದ್ದಂತೆಯೆ ಹಿಂದೆ ನಿಂತು ಪುಸಕ್ಕನೆ ನಗುವ ಒಂದು ವರ್ಗವೂ ಖಂಡಿತ ನಮ್ಮದೆ ಆಗಿರುತ್ತದೆ.ಗೆಳೆಯನೊಬ್ಬ ತಂದ ಸೆಕೆಂಡ್ ಹ್ಯಾಂಡ್ ಕಾರು ಹತ್ತಲು ಹೋದಾಗ ನೀನು ಬೈಕಲ್ಲಿ ಬಾ ಮರಿ ಅಂತ ಕಿಚಾಯಿಸುವ ಗೆಳೆಯರಿಂದ ಹಿಡಿದು ನೋಡೋ ನಾನು ಹ್ಯಾಗಿದಿನಿ ನಿಂಗೆ ಲೈಪ್ ಲೀಡ್ ಮಾಡೋಕೆ ಬರಲ್ಲ.ಐದು ವರ್ಷದಲ್ಲಿ ಎಷ್ಟೆಲ್ಲಾ ಮಾಡಿದಿನಿ ನೋಡು ಇರೋಕೊಂದ್ ಮನೆ,ಓಡಾಡೋಕ್ ಒಂದ್ ಕಾರು,ಮುದ್ದಾದ ಹೆಂಡತಿ ಪುಟಾಣಿ ಮಕ್ಕಳು, ಮಗಾ ಮೊನ್ನೆ ಡಾಲರ್ಸ ಕಾಲೊನಿ ಯಲ್ಲಿ ಸೈಟ್ ತಗೊಂಡೆ ಅನ್ನುವ ಗೆಳೆಯರಿಂದ ಹಿಡಿದು ನಮ್ಮ ಅನಿವಾರ್ಯತೆಯನ್ನ ನಮ್ಮ ಬಡತನವನ್ನ ಆಡಿಕೊಳ್ಳುವ ಬಾಲ್ಯದ ಸ್ನೇಹಿತರ ತನಕ,ಇದ್ದಕ್ಕಿದ್ದಂತೆ ಪ್ರಪೋಜ್ ಮಾಡಿದಾಗ ನಿನ್ನ ಸ್ಯಾಲರಿ ನನ್ನ ಮೇಕಪ್ ಗೆ ಸಾಕಾಗಲ್ಲ ಅಂದ ಗೆಳತಿಯೊಬ್ಬಳ ತನಕ ಹೀಗೆ ದಿನವೂ ಒಂದಲ್ಲ ಒಂದು ಕಹಿ ಅನುಭವಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ.ಚಾಯಿಸೇಬಲ್ ಸ್ನೇಹಿತರನ್ನು ಕರೆದು ಮಗನ ಹುಟ್ಟು ಹಬ್ಬದ ಪಾರ್ಟಿ ಕೊಟ್ಟ ಬಳಿಕ ಸಾರಿ ಮಚಾ ಬ್ಯೂಜಿ ಷೆಡ್ಯೂಲ್ ಅಲ್ಲಿ ನಿನ್ನಾ ಮರೆತೆ ಬಿಟ್ಟೆ ಅಂದ ಸಹೋದ್ಯೋಗಿ ಒಬ್ಬನಿಂದ ಹಿಡಿದು ಮನೆಯಲ್ಲಿನ ಅಣ್ಣ,ತಮ್ಮ,ತಂಗಿ,ಅಕ್ಕ ಹೀಗೆ ಎಲ್ಲರೂ ಒಂದಲ್ಲ ಒಂದು ಸಾರಿ ನಮ್ಮ ಬಗ್ಗೆ ಖಂಡಿತವಾಗಿಯೂ ಅಸಡ್ಡೆ ತೋರಿಸಿರುತ್ತಾರೆ.

ಬೇಜಾರಿನ ವಿಷಯಗಳನ್ನ ಹಂಚಿಕೊಂಡಾಗ ಬಾ ಮಚ್ಚಾ ಎಣ್ಣೆ ಹೊಡೆಯೋಣ ನಾನೆ ಬಿಲ್ಲ್ ಕೊಡ್ತೀನಿ ಅಂದ ಗೆಳೆಯನೊಬ್ಬ ವೇಟರ್ ಬಿಲ್ ತಂದು ಕೊಡುವ ಮೊದಲೆ… ಬಂದೆ ಇರು ಮಗಾ ಅಂತ ಹೊರಗೆ ಹೋದವನು ಬರದೆ ಇದ್ದಾಗ ಆಗುವ ಅಪಮಾನ,ನೋವು ಮತ್ತು ಹಿಂಸೆಯಿಂದ ಹಿಡಿದು ನಿನ್ನಂತ ದಡ್ಡನ ಜೊತೆಗೆ ಸಂಸಾರ ಮಾಡ್ತಾ ಇದ್ದೀನಲ್ಲ ಒಂದಿನಾನಾದ್ರು ನೀನಗೆನ್ ಬೇಕು ಅಂತಾ ಕೇಳಿದಿಯಾ ಅಂತ ಹಂಗಿಸುವ ಹೆಂಡತಿಯ ತನಕ ಶುದ್ಧಾನು-ಶುದ್ಧ ದ್ವೇಷ ನಮಗೆ ಖಂಡಿತ ಎದುರಾಗಿರುತ್ತದೆ.ಹಾಗಂತ ಅವರನ್ನು ನಾವು ದ್ವೇಷಿಸುತ್ತ ಕುಳಿತರೆ ಅದರಿಂದ ನಮಗೇ ನೋವಾಗುತ್ತದೆ ಯಾಕೆಂದರೆ ದ್ವೇಷಿಸುವ ಭರದಲ್ಲಿ ನೈತಿಕವಾಗಿ ಅವರಷ್ಟೇ ಕೆಳಮಟ್ಟಕ್ಕೆ ನಾವು ಕೂಡ ಇಳಿದುಬಿಟ್ಟಿರುತ್ತೇವೆ.ಅವರು ತಮ್ಮ ಮನೆಯ ಫಂಕ್ಷಣ್ ಗೆ ಕರೀಲಿಲ್ಲ ನಾವ್ಯಾಕೆ ಕರಿಬೇಕು ಅನ್ನುವದರಿಂದ ಹಿಡಿದು ನಿನ್ನೆ ಅವನು ಪೋನ್ ಎತ್ತಿಲ್ಲ ಈವತ್ತೂ ನಾನೂ ಕೂಡ ಫೋನ್ ಎತ್ತುವದಿಲ್ಲ ಅನ್ನುವದರ ತನಕ ಪುಟ್ಟ ಪುಟ್ಟ ದ್ವೇಷಗಳೇ ಅಸೂಯೆಯ ಜ್ವಾಲೆಯಾಗಿ ಕುದಿಯತೊಡಗಿ ಸಮಯ ಬಂದಾಗ ನಾವೂ ಕೂಡ ಅವರನ್ನ ಹಾಗೇ ಅಪಮಾನ ಮಾಡೋಣ ಅನ್ನುವಷ್ಟು ಮನಸ್ಸು ಕಲ್ಲಾಗಿ ಬಿಟ್ಟಿರುತ್ತದೆ.ಆದರೆ ವಿಷಯ ಅದಲ್ಲ ನಮ್ಮ ಸಿಟ್ಟು,ಸೆಡವು ದ್ವೇಷವೆಂಬುದು ಆರೋಗ್ಯಕರ ವಾಗಿರುವಂತೆ ಅಪಮಾನ ಮಾಡಿದವರ ಮುಂದೆಯೇ ಹೆಂಗೆ ಬೆಳೆದು ನಿಲ್ತೀನಿ ನೋಡು ಅನ್ನುವದರಿಂದ ಆರಂಭವಾಗಬೇಕೇ ಹೊರತು ವಿನಾಕಾರಣ ಅಂಥಹವರನ್ನ ದ್ವೇಷಿಸುತ್ತ ಕೂತು ಕಾಲಹರಣ ಮಾಡುವಂತಾಗಬಾರದು ಅಲ್ಲವೇ?? ನಮಗೆ ತಿಳಿದ ಉದ್ಯೋಗ, ನಮಗೆ ಹೊಂದುವ ಹುದ್ದೆಯ ಜೊತೆಗೆ ಒಂದಷ್ಟು ಎಕ್ಸಟ್ರಾ ಕ್ವಾಲೀಫಿಕೇಷನ್ ಗಳನ್ನ ನಮ್ಮದಾಗಿಸಿಕೊಳ್ಳುತ್ತ,ದಿನದ ಎಂಟುಗಂಟೆ ದುಡಿಮೆಯ ಬಳಿಕವೂ ಎಕ್ಸಟ್ರಾ ಎರಡುಗಂಟೆಗಳ ಕೆಲಸ ಮಾಡುತ್ತ,ಬದುಕಿನ ಪ್ರತಿ ಪುಟ್ಟ ಸಂತಸಗಳನ್ನು ಕೂಡ ದೊಡ್ಡದಾಗಿ ಎಂಜಾಯ್ ಮಾಡುತ್ತ ಯಶಸ್ಸಿನ ಒಂದೊಂದೇ ಮೆಟ್ಟಿಲು ಹತ್ತುವ ನಿರಂತರ ಪ್ರಯತ್ನ ನಮ್ಮದಾಗಬೇಕು.ಜೀವನದ ಅನುಭವವನ್ನ,ಮತ್ತು ಬದುಕು ಕಲಿಸಿಕೊಟ್ಟ ಪಾಠವನ್ನ ಅರಿತುಕೊಂಡು ಮತ್ತೊಬ್ಬರು ನಮ್ಮನ್ನು ದ್ವೇಷಿಸುತ್ತಾರೆಂದು ನಾವೂ ಅವರನ್ನ ದ್ವೇಷಿಸುತ್ತ ಕೂಡುವ ಬದಲು ಒಂದಷ್ಟು ನಿತ್ಯದ ದುಡಿಮೆಯತ್ತ,ಇಲ್ಲವೇ ನಮಗೆ ಸರಿ ಅನ್ನಿಸಿದ ಮತ್ತು ನಾಲ್ಕು ಜನರ ನಡುವೆ ಶಹಬ್ಬಾಷಗಿರಿ ಗಿಟ್ಟಿಸಬಹುದಾದ ಹವ್ಯಾಸಗಳತ್ತ ಮನಸ್ಸನ್ನು ಕೇಂದ್ರೀಕರಿಸೋಣ.ಯಾಕೆಂದರೆ ಅನುಭವಿಸಿ ನೋಡಿದರೆ ಕೆಲವಷ್ಟು ದ್ವೇಷ ಮತ್ತು ಅಸೂಯೆಗಳನ್ನ ನಾವು ಆರೋಗ್ಯಕರವಾಗಿ ತೆಗೆದುಕೊಂಡರೆ ಖಂಡಿತ ನಾವು ನಮ್ಮ ಬದುಕನ್ನ ಗೆಲ್ಲಬಹುದು.ನಮಗಾದ ಅಪಮಾನವನ್ನ ಮೆಟ್ಟಿ ನಿಲ್ಲಬಹುದು.
ಅವರು ಮಾಡಿದಷ್ಟು ದುಡ್ಡು,ಆಸ್ತಿ,ಒಡವೆ,ಮತ್ತು ಅಂತಸ್ತನ್ನು ನಮ್ಮಿಂದ ಘಳಿಸಲು ಆಗದೆ ಇದ್ದರೂ ಕೂಡ ಒಂದು ಹಂತಕ್ಕಾದರೂ ಬೆಳೆದು ನಿಲ್ಲುವಷ್ಟು ಖಂಡಿತ ಸಶಕ್ತರಾಗಿರುತ್ತೇವೆ.ಈ ಜಗತ್ತಿನಲ್ಲಿ ಬಿತ್ತಿದ ಯಾವ ಬೀಜವೂ ಕೂಡ ದಿಢೀರನೆ ಬೆಳೆದು ನಿಂತು ಫಸಲು ಕೊಟ್ಟ ಉದಾಹರಣೆ ನಮಗೆ ಖಂಡಿತ ಸಿಗುವುದಿಲ್ಲ. ಎಲ್ಲದಕ್ಕೂ ಅದರದ್ದೆ ಆದ ಸಮಯ ಮತ್ತು ಕಾಲಾವಕಾಶದ ಜೊತೆಗೆ ಒಂದಷ್ಟು ಕಾಳಜಿಯ ಅಗತ್ಯ ಖಂಡಿತ ಇರುತ್ತದೆ.ಅಂದ ಹಾಗೆ ಕನಸು ಕಾಣುವದು ತಪ್ಪಲ್ಲ ಆದರೆ ಅವುಗಳನ್ನು ಸಾಕಾರಗೊಳಿಸಲು ಯಾವ ಪ್ರಯತ್ನವನ್ನೂ ಮಾಡದೆ ಇರುವದು ಖಂಡಿತ ತಪ್ಪು.
ಯಾಕೆಂದರೆ ಕಾಲವೆಂಬುದು ಯಾರ ಕೈ ಕೆಳಗಿನ ಗುಲಾಮನೂ ಅಲ್ಲ ಅನ್ನೋದು ನಿಮಗೆಲ್ಲ ನೆನಪಿರಲಿ.

ದೀಪಕ್ ಶಿಂಧೆ
ಪತ್ರಕರ್ತ ಮೊ:9482766018