ನಿಜವಾದ ‘ ನಡೆದಾಡುವ ದೇವರು’ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಬೇಗ ಗುಣಮುಖರಾಗಲಿ – ಮುಕ್ಕಣ್ಣ ಕರಿಗಾರ

    ನಿಜವಾದ ‘ನಡೆದಾಡುವ ದೇವರು’ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಬೇಗ ಗುಣಮುಖರಾಗಲಿ

              ಮುಕ್ಕಣ್ಣ ಕರಿಗಾರ

ಇಂದು (18.01.2022) ಬೆಳಿಗ್ಗೆ ನಾಲ್ಕುವರೆಯ ಸುಮಾರು ನನಗೆ ಒಂದು ಕನಸು ಬಿದ್ದಿತ್ತು.ಕನಸಿನಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಕಾಣಿಸಿಕೊಂಡು ‘ ನನ್ನ ಹುಟ್ಟು ಹಬ್ಬ ಆಚರಿಸಬೇಕು,ಅವರನ್ನು ಕರೆಯಿರಿ,ಇವರನ್ನು ಕರೆಯಿರಿ’ ಎಂದು ಸೂಚನೆಗಳನ್ನು ನೀಡಿದರು.ನಾನು ಕೂಡ ‘ ಅದ್ದೂರಿಯಾಗಿ ಫಂಕ್ಷನ್ ಮಾಡೋಣ ಬುದ್ಧಿ’ ಎಂದು ಅವರೊಂದಿಗೆ ಚರ್ಚಿಸಿ,ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಸಿದ್ಧತೆಯಲ್ಲಿ ತೊಡಗಿದಂತೆ’ ಕನಸು.ತಕ್ಷಣ ಎಚ್ಚರಾಯಿತು.ಸಮಯ ಬೆಳಗಿನ 4.30. ನಿಮಿಷಗಳು.ಏನೋ ತಳಮಳ,ಆತಂಕಗಳು ಕವಿದು ಬೆಳಗಿನ ಧ್ಯಾನ- ಪೂಜೆಗಳನ್ನು ಮುಗಿಸಿ ನನ್ನ ಆತ್ಮೀಯರಾಗಿರುವ ದೇವರಗುಡ್ಡ- ಹತ್ತಿಗೂಡೂರುಗಳ ತಪೋವನ ಮಠದ ಪೀಠಾಧೀಶರಾದ ಶ್ರೀ ಗಿರಿಮಲ್ಲದೇವರು ಸ್ವಾಮಿಗಳವರಿಗೆ ಫೋನ್ ಮಾಡಿ,ಸ್ವಪ್ನ ವೃತ್ತಾಂತ ವಿವರಿಸಿದೆ.ಅವರು ಹೇಳಿದ್ದು ‘ ಹೌದು,ಸಿದ್ಧೇಶ್ವರ ಸ್ವಾಮಿಗಳು ಸ್ನಾನಮಾಡುವಾಗ ಬಿದ್ದು ಪೆಟ್ಟುಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ’.ದುಃಖ,ಬೇಸರಗಳುಂಟಾದವು.ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳವರ ಬಗ್ಗೆ ನನ್ನಲ್ಲಿ ಅಪಾರಗೌರವ ಹಾಗೂ ಪೂಜ್ಯ ಭಾವನೆಗಳುಂಟು.ನನ್ನ ಗುರುದೇವ ಪರಮಪೂಜ್ಯ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ನಂತರ ನಾನು ಗೌರವಿಸುವ,ಪೂಜ್ಯಭಾವನೆಯಿಂದ ಕಾಣುವ ಏಕೈಕ ಆಧ್ಯಾತ್ಮಿಕ ಚೇತನರು ಎಂದರೆ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು.ಆಧ್ಯಾತ್ಮ ಸಾಧಕನಾಗಿರುವ ನಾನು ಯಾವುದೇ ಮಠ ಪೀಠಗಳ ಸ್ವಾಮಿಗಳ ಬಳಿ ಹೋಗುವುದಿಲ್ಲ.ಮೃಡಮಹಾದೇವನ ನಿಜಪಥದಿ ನಡೆಯುತ್ತಿರುವ ನನಗೆ ಹುಸಿ ಆಡಂಬರದ,ಲೋಕರಂಜನೆಯ ಸ್ವಾಮಿಗಳು,ಮಠ- ಪೀಠಾಧೀಶರುಗಳ ಬಗ್ಗೆ ಆಸಕ್ತಿಯಾಗಲಿ,ಗೌರವವಾಗಲಿ ಇಲ್ಲ. ಆದರೆ ಶ್ರೀ ಸಿದ್ಧೇಶ್ವರಸ್ವಾಮಿಗಳವರನ್ನು ಕಾಣಲು ವಿಜಯಪುರದ ಜ್ಞಾನಯೋಗಾಶ್ರಮ ಸೇರಿದಂತೆ ಅವರು ಪ್ರವಚನ ನೀಡುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿ,ಅವರ ದರ್ಶನಾಶೀರ್ವಾದ ಪಡೆದಿದ್ದೇನೆ. ಮಹಾರಾಷ್ಟ್ರದ ಕನ್ಹೇರಿ ಮಠದಿಂದ ಹಿಡಿದು ಮೈಸೂರಿನ ಶ್ರೀ ಸುತ್ತೂರು ಮಠದವರೆಗೆ ಸ್ವಾಮಿಗಳವರು ತಂಗಿ,ಪ್ರವಚನ ನೀಡುತ್ತಿದ್ದ ಸ್ಥಳಗಳಿಗೆ ಹೋಗಿ ಅವರ ದರ್ಶನಾಶೀರ್ವಾದ ಪಡೆದಿದ್ದೇನೆ.ಕಳೆದ ಎಂಟ್ಹತ್ತು ವರ್ಷಗಳಿಂದ ಅವರನ್ನು ಕಂಡಿಲ್ಲವಾದರೂ ಅವರ ಧವಳಶುಭ್ರವ್ಯಕ್ತಿತ್ವದ ಬಗ್ಗೆ ನನ್ನಲ್ಲಿ ಗೌರವಾದರಗಳು ವೃದ್ಧಿಸುತ್ತಿವೆ.ಗಿರಿಮಲ್ಲದೇವರು ಸ್ವಾಮಿಗಳವರ ಮೂಲಕ ಸಿದ್ದೇಶ್ವರ ಸ್ವಾಮಿಗಳ ಪ್ರವಾಸ,ಪ್ರವಚನ- ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತೇನೆ.

ನವೆಂಬರ್ ೨೦೨೧ ರಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮಿಗಳವರು ಭಾಲ್ಕಿಯಲ್ಲಿ ಆಧ್ಯಾತ್ಮಿಕ ಪ್ರವಚನ ಕೈಗೊಂಡ ವಿಷಯ ತಿಳಿದು ಗಿರಿಮಲ್ಲದೇವರು ಸ್ವಾಮಿಗಳವರನ್ನು- ಸಿದ್ದೇಶ್ವರ ಸ್ವಾಮಿಗಳವರ ಶಿಷ್ಯಬಳಗವನ್ನು ಸಂಪರ್ಕಿಸಿ -ನಮ್ಮ ಮಹಾಶೈವ ಧರ್ಮಪೀಠದ ಶಿಖರ- ಕಳಶಾರೋಹಣ ಕಾರ್ಯವನ್ನು ಪೂಜ್ಯ ಸಿದ್ಧೇಶ್ವರ ಸ್ವಾಮಿಗಳವರಿಂದಲೇ ನೆರವೇರಿಸಲು ಅವರ ಅನುಮತಿಗಾಗಿ ಕೋರಲು ತಿಳಿಸಿದ್ದೆ.ಗಿರಿಮಲ್ಲದೇವರು ಸ್ವಾಮಿಗಳು ನಮ್ಮ ಭಾಗದ ಪ್ರಗತಿಪರ ನಿಲುವಿನ,ಜನಸಾಮಾನ್ಯರನ್ನು ಹಚ್ಚಿಕೊಳ್ಳುವ ಅಪರೂಪದ ಸ್ವಾಮಿಗಳಾದ್ದರಿಂದ ೨೦೦೦ ನೇ ವರ್ಷದಿಂದ ಅವರೊಂದಿಗೆ ನನ್ನ ನಿಕಟ ಸಂಬಂಧವಿದೆ.ನಮ್ಮ ಮಠದ ಯಾವುದೇ ಕಾರ್ಯ,ಕಾರ್ಯಕ್ರಮ ಇದ್ದರೆ ನಾನು ಗಿರಿಮಲ್ಲದೇವರು ಸ್ವಾಮಿಗಳನ್ನು ಮಾತ್ರ ಆಹ್ವಾನಿಸುತ್ತೇನೆ.ಸಿದ್ಧೇಶ್ವರ ಸ್ವಾಮಿಗಳವರ ಶಿಷ್ಯಬಳಗದೊಂದಿಗೆ ನಿರಂತರ ಸಂಪರ್ಕ ಇರುವ ಗಿರಿಮಲ್ಲದೇವರು ಸ್ವಾಮಿಗಳು ನನಗೆ ಆಗಾಗ ಸಿದ್ದೇಶ್ವರ ಸ್ವಾಮಿಗಳವರ ಬಗ್ಗೆ ವರ್ತಮಾನ ನೀಡುತ್ತಿರುತ್ತಾರೆ.

ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವ- ವಿಶ್ವೇಶ್ವರಿ ದುರ್ಗಾದೇವಿಯರ ದೇವಸ್ಥಾನಗಳ ಶಿಖರದ ಪೂಜೆಯನ್ನು ದೀಪಾವಳಿ ಪಾಡ್ಯದಂದು ಪ್ರಾರಂಭಿಸಲಾಗಿತ್ತು.ಯುಗಾದಿ ಪಾಡ್ಯದಂದು ಕಳಶಾರೋಹಣ ಕಾರ್ಯಕ್ರಮ ನಿಗದಿಪಡಿಸಲು ಸಂಕಲ್ಪಿಸಿ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳನ್ನು ‘ಲೋಕಾರ್ಪಣೆ’ ಕಾರ್ಯ ನೆರವೇರಿಸಲು ಬಿನ್ನೈಸಲು ನಿರ್ಧರಿಸಲಾಗಿತ್ತು.ಈ ಮಧ್ಯೆ ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಿಂದ ನನಗೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಆಯಿತು.ಹಾಗಾಗಿ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳವರನ್ನು ಕಂಡು ಬಿನ್ನೈಸಲು ಆಗಲಿಲ್ಲ.ಇಂದು ಬೆಳಿಗ್ಗೆ ಈ ಕನಸು.

ನಾನು ಅತ್ಯಂತ ಪೂಜ್ಯಭಾವನೆಯಿಂದ ಗೌರವಿಸುವ ಋಷಿಸದೃಶ ವ್ಯಕ್ತಿತ್ವದ ಆಧ್ಯಾತ್ಮಿಕ ಚೇತನ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಎಂದು ಹೇಳಿದೆನಷ್ಟೆ.ಅದರ ಕಾರಣವೂ ಇಲ್ಲದಿಲ್ಲ.ನನ್ನ ಗುರುದೇವ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ನನಗೆ ೧೯೯೨ ರಲ್ಲಿ ಒಮ್ಮೆ ‘ ನೀನು ಸಿದ್ಧೇಶ್ವರ ಸ್ವಾಮಿಗಳನ್ನು ಕಾಣು ‘ ಎಂದಿದ್ದರು.ಸಾಮಾನ್ಯವಾಗಿ ಯಾರನ್ನೂ ಭೇಟಿ ಮಾಡಲು ಹೇಳುತ್ತಿರಲಿಲ್ಲ ಗುರುದೇವ.ಆದರೆ ಅವರು ಸಿದ್ದೇಶ್ವರ ಸ್ವಾಮಿಗಳನ್ನು ಭೇಟಿಯಾಗಲು ಹೇಳಿದ್ದರಿಂದ ಅವರು ವಿಶೇಷ ವ್ಯಕ್ತಿಗಳೇ ಇರಬೇಕು ಎಂದು ಭಾವಿಸಿದ್ದೆ.ಸರಕಾರಿ ಅಧಿಕಾರಿಯಾಗಿ ಇಂಡಿ ತಾಲೂಕಿನ ಪರೀಕ್ಷಾರ್ಥ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂದು ವೃತ್ತಿ ಜೀವನ ಆರಂಭಿಸಿದ ೧೯೯೮ ರ ದಿನಗಳಲ್ಲಿ ಒಮ್ಮೆ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳವರ ದರ್ಶನವಾಯಿತು.ಇಂಡಿ ತಾಲೂಕಿನ ಗ್ರಾಮ ಪಂಚಾಯತಿ ಕಟ್ಟಡ ಒಂದರ ಉದ್ಘಾಟನೆಗೆ ಅವರು ಆಗಮಿಸಿದ್ದರು.ಮೊದಲ ಭೇಟಿಯಲ್ಲೇ ನನ್ನ ಮೇಲೆ ಪ್ರಭಾವ ಬೀರಿದರು.ಬಳಿಕ ಕನ್ನಡ ಉಪನ್ಯಾಸಕರಾಗಿ ನನ್ನ ವಿದ್ಯಾಗುರುಗಳಾಗಿದ್ದ ಮನೋಹರ ಬಡಿಗೇರ ಅವರ ಮೂಲಕ ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ತೆರಳಿ ಪೂಜ್ಯರ ದರ್ಶನ ಪಡೆದುಕೊಂಡೆ.ಪೂಜ್ಯ ಸಿದ್ಧೇಶ್ವರ ಸ್ವಾಮಿಗಳವರ ಸರಳ ನಿರಾಡಂಬರ ವ್ಯಕ್ತಿತ್ವ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿತು.ಆಗಾಗ ಅವರ ಸನ್ನಿಧಿಗೆ ತೆರಳುತ್ತಿದ್ದೆ.ನಾನು ಶ್ರೀಕುಮಾರಸ್ವಾಮಿಗಳವರ ಶಿಷ್ಯ ಎಂದರಿತದ್ದರಿಂದ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳವರು ನನ್ನಲ್ಲಿ ವಿಶೇಷ ವಾತ್ಸಲ್ಯ ತೋರುತ್ತಿದ್ದರು.ಅದು ಮನುಷ್ಯ ಸಂಬಂಧಗಳಾಚೆಯ ಅನುಭಾವ ಪ್ರಪಂಚದ ‘ ಕರುಳ ಬಳ್ಳಿಯ’ ಸಂಬಂಧವಾಗಿತ್ತು.ನನ್ನ ಗುರುದೇವ ಕುಮಾರಸ್ವಾಮಿಗಳವರು ಅತ್ಯುನ್ನತ ಸಿದ್ಧಿಯ ಯೋಗಿಗಳು,ಆಧುನಿಕ ಭಾರತದ ಪಂಚಾಚಾರ್ಯರು( ಶ್ರೀ ರಾಮಕೃಷ್ಣ ಪರಮಹಂಸರು,ಶ್ರೀ ವಿವೇಕಾನಂದರು,ಶ್ರೀ ಅರವಿಂದ ಮಹರ್ಷಿಗಳು,ಶ್ರೀ ರಮಣ ಮಹರ್ಷಿಗಳು ಮತ್ತು ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರನ್ನು ಆಧುನಿಕ ಭಾರತದ ಪಂಚಾಚಾರ್ಯರು ಎನ್ನುತ್ತೇನೆ, ನಾನು)ಗಳಲ್ಲಿ ಒಬ್ಬರು ಎನ್ನುವ ಖ್ಯಾತಿಯ ಅದ್ಭುತ ಯೋಗಿಗಳು.ಅವರು ಸಿದ್ಧೇಶ್ವರ ಸ್ವಾಮಿಗಳವರನ್ನು ತುಂಬ ಪ್ರೀತ್ಯಾದರಗಳಿಂದ ಕಾಣುತ್ತಿದ್ದರು,’ಸಿದ್ಧೇಶ’ ಎಂದು ಆತ್ಮೀಯವಾಗಿ ಸಂಬೋಧಿಸುತ್ತಿದ್ದರು.ತಪೋವನಕ್ಕೆ ಸಿದ್ಧೇಶ್ವರ ಸ್ವಾಮಿಗಳವರನ್ನೇ ಉತ್ತರಾಧಿಕಾರಿಗಳನ್ನಾಗಿ ನೇಮಿಸಬಯಸಿದ್ದರಂತೆ.ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಆಸೆ- ಆಶಯದಂತೆ ಸಿದ್ಧೇಶ್ವರ ಸ್ವಾಮಿಗಳವರು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಉತ್ತರಾಧಿಕಾರಿಗಳಾದರು; ಜ್ಞಾನಯೋಗಾಶ್ರಮದ ಪೀಠಾಧಿಪತಿಗಳು ಆಗಿಯೂ ಯಾವುದಕ್ಕೂ ನಿಲುಕದ,ಎಲ್ಲಿಯೂ ನಿಲ್ಲದ ತಮ್ಮ ಅವಿರಳಜ್ಞಾನಿಯ,ನಿರಾಳಜಂಗಮ ವ್ಯಕ್ತಿತ್ವದಿಂದ ಜ್ಞಾನಯೋಗಾಶ್ರಮವನ್ನು ಜಗತ್ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವನ್ನಾಗಿಸಿದರು.

ಸಿದ್ಧೇಶ್ವರ ಸ್ವಾಮಿಗಳನ್ನು ವರ್ಷಕ್ಕೆ ನಾಲ್ಕಾರು ಬಾರಿ ಕಾಣುತ್ತಿದ್ದೆ ಹಿಂದೆ.ಅವರು ಪ್ರವಚನ ನೀಡುತ್ತಿದ್ದ ಸ್ಥಳಗಳಿಗೆ ನಮ್ಮೂರು ಗಬ್ಬೂರಿನ ಹಿರಿಯರು- ಗೆಳೆಯರುಗಳನ್ನು ಕರೆದುಕೊಂಡು ಹೋಗುತ್ತಿದ್ದೆ.ನಮ್ಮೆಲ್ಲರನ್ನು ತುಂಬ ಆತ್ಮೀಯವಾಗಿ ಮಾತನಾಡಿಸಿ,ಆಶೀರ್ವದಿಸುತ್ತಿದ್ದರು ಸಿದ್ದೇಶ್ವರ ಸ್ವಾಮಿಗಳವರು.ಒಮ್ಮೆ ಮಹಾರಾಷ್ಟ್ರದ ಕಣ್ಹೇರಿ ಮಠದಲ್ಲಿ ಅವರು ತಂಗಿದ್ದರು.ಅಲ್ಲಿಗೆ ಗೆಳೆಯರ ಜೊತೆ ಹೋಗಿದ್ದ ನನಗೆ ಸ್ವತಃ ತಿಂಡಿ ಬಡಿಸಿ,ಬೇಡಬೇಡವೆಂದರೂ ನಾಲ್ಕಾರು ಬಾರಿ ಇಡ್ಲಿ ಬಡಿಸಿ ಮಾತೃವಾತ್ಸಲ್ಯ ವಿಶೇಷ ಮೆರೆದಿದ್ದ ಅವಿಸ್ಮರಣೀಯ ಕ್ಷಣಗಳು ಈಗಲೂ ಹಸಿರಾಗಿವೆ ನನ್ನ ಮಧುರಸ್ಮೃತಿಮಾಲೆಯಲ್ಲಿ.ನನ್ನ ಮೇಲಿನ ವಿಶೇಷ ಪ್ರೀತಿಯಿಂದ ಎರಡುಬಾರಿ ನಮ್ಮ ಮಠಕ್ಕೆ ಬಂದಿದ್ದರು.ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಹೆಸರಿನಲ್ಲಿ ನಾನು ಪ್ರಾರಂಭಿಸಿದ್ದ ‘ ತಪೋವನದ ಬೆಳಗು’ ಎನ್ನುವ ಆಧ್ಯಾತ್ಮಿಕ ಮಾಸಪತ್ರಿಕೆಯನ್ನು ಬಿಡುಗಡೆ ಮಾಡಲು ಒಮ್ಮೆ ಮತ್ತೊಮ್ಮೆ ಗುರುದೇವನ ಕುರಿತಾದ ನನ್ನ ಪುಸ್ತಕಗಳ ಬಿಡುಗಡೆಗೆ ಹೀಗೆ ಎರಡುಬಾರಿ ಆಗಮಿಸಿ ನಮ್ಮ ಮಠದ ನೆಲವನ್ನು ಪಾವನಗೊಳಿಸಿದ್ದರು ತಮ್ಮ ತೀರ್ಥಸ್ವರೂಪ ವ್ಯಕ್ತಿತ್ವದಿಂದ.ಮಸ್ಕಿಯಲ್ಲಿ ನಡೆದಿದ್ದ ಪ್ರವಚನದಲ್ಲಿ ನನ್ನ ವೈಚಾರಿಕ ಲೇಖನಗಳ ಸಂಕಲನ ‘ ಕನಕನ ಕಿಂಡಿ’ ಮತ್ತು ‘ ಕಜ್ಜೂರ’ ಕವನ ಸಂಕಲನಗಳನ್ನು ಬಿಡುಗಡೆ ಮಾಡಿ ಆಶೀರ್ವದಿಸಿದ್ದರು.

ಪೂಜ್ಯ ಸಿದ್ಧೇಶ್ವರ ಸ್ವಾಮಿಗಳವರಲ್ಲಿ ಸ್ವಲ್ಪ ಆಧ್ಯಾತ್ಮಿಕ ಸಲುಗೆಯ ಭಾವದಿಂದ ಆಗಾಗ ಅವರ ಆಶೀರ್ವಾದ,ಮಾರ್ಗದರ್ಶನ ಕೋರುತ್ತಿದ್ದೆ.ನಾನು ಉತ್ತರಕನ್ನಡ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಆಗಿ ಕಾರವಾರದಲ್ಲಿದ್ದಾಗ ಬೆಳಗಾವಿಗೆ ಪ್ರವಚನಕ್ಕೆ ಬಂದಿದ್ದ ಪೂಜ್ಯರನ್ನು ಭೇಟಿಯಾಗಿ ನಾನು’ ಮಹಾಶೈವ ಧರ್ಮ’ ಎನ್ನುವ ಪ್ರತ್ಯೇಕ ಧರ್ಮ ಒಂದನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿ ಅವರ ಆಶೀರ್ವಾದ ಕೋರಿ ‘ ಮಹಾಶೈವ ದರ್ಶನ’ ಮಾಸಪತ್ರಿಕೆಯನ್ನು ಅವರಿಗೆ ಸಮರ್ಪಿಸಿದ್ದೆ.ಆಗ ಪೂಜ್ಯರು ತಪೋವನದ ಬಗ್ಗೆ ಕಾಳಜಿ ವಹಿಸುವ ಬಗ್ಗೆ ತಿಳಿಸಿದರು.ತಪೋವನದಲ್ಲಾಗುತ್ತಿರುವ ನನ್ನ ಮನಸ್ಸಿಗೆಕಿರಿಕಿರಿಯನ್ನುಂಟು ಮಾಡುತ್ತಿದ್ದ ವಿದ್ಯಮಾನಗಳನ್ನು ಪೂಜ್ಯರಿಗೆ ತಿಳಿಸಿದ್ದೆ.’ ಹಾಗಿದ್ದರೆ ಬಸವಧರ್ಮ’ ವನ್ನು ಬೆಳಸಬಹುದಲ್ಲ?’ ಎಂದು ಪ್ರಶ್ನಿಸಿದ್ದರು.ಈಗಾಗಲೇ ಮಹಾಶೈವ ಧರ್ಮ ಸ್ಥಾಪಿಸಿರುವುದರಿಂದ ಆ ಯಾವ ಧರ್ಮಗಳ ಬಗ್ಗೆ ಆಸಕ್ತಿ ಇಲ್ಲ ಎಂದು ಪೂಜ್ಯರಲ್ಲಿ ನಿವೇದಿಸಿಕೊಂಡು ಮಹಾಶೈವ ಧರ್ಮದ ಧರ್ಮಗ್ರಂಥ ‘ ಮಹಾಶೈವ ಧರ್ಮ ತಿರುಳು’ ಗ್ರಂಥವನ್ನು ಅವರಿಗೆ ಸಮರ್ಪಿಸಿದೆ.ನಸುನಗುತ್ತ ಮೌನಸಮ್ಮತಿಯನ್ನಿತ್ತ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು ಅಲ್ಲಿಯೇ ಇದ್ದ ಮಲ್ಲಯ್ಯಸ್ವಾಮಿಗಳು ಎನ್ನುವ ದೇವಿ ಉಪಾಸಕ ಸ್ವಾಮಿಗಳನ್ನು ಪರಿಚಯಿಸಿ ಅವರೊಂದಿಗೆ ಚರ್ಚಿಸಲು ತಿಳಿಸಿದರು.ಅದಾದ ಬಳಿಕ ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಒಮ್ಮೆ ಅವರ ದರ್ಶನ ಪಡೆದಿದ್ದೆ.ಇತ್ತೀಚಿನ ಎಂಟ್ಹತ್ತು ವರ್ಷಗಳಲ್ಲಿ ಸ್ವಾಮಿಗಳವರ ದರ್ಶನ ಸಾಧ್ಯವಾಗಿಲ್ಲ.

ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಕರುನಾಡಿನ ಪುಣ್ಯವೇ ಮೂರ್ತಿವೆತ್ತು ಆಕಾರ ತಳೆದಂತಿಹ ಅಪರೂಪದ ಆಧ್ಯಾತ್ಮಿಗಳು,ಯೋಗಿಗಳು.ಭಾರತಾಂಬೆಯ ಆಧ್ಯಾತ್ಮಿಕ ಅಂತಃಸತ್ತ್ವದ ಮೂರ್ತರೂಪವೇ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಎಂದರೆ ತಪ್ಪಾಗದು.ನಿಜವಾದ ಜಂಗಮ,ನಿಜವಾದ ಋಷಿ ಎಂದರೆ ಶ್ರೀ ಸಿದ್ಧೇಶ್ವರ ಸ್ವಾಮಿಗಳೆ.ಯೋಗ ಮತ್ತು ಆಧ್ಯಾತ್ಮ ತತ್ತ್ವ,ಆದರ್ಶಗಳ ಸಾಕಾರರೂಪ ಮಹೋನ್ನತ ವ್ಯಕ್ತಿತ್ವ ಅವರದು.ಉಪನಿಷತ್ತುಗಳ ಋಷಿಗಳ ದರ್ಶನವನ್ನು ಬಾಳುತ್ತ,ಬೆಳಕಾದ ಋಷಿಪುಂಗವರು ಅವರು.ಸಂನ್ಯಾಸಿಗಳಾದರೂ ಕಾಷಾಯಧಾರಿಗಳಲ್ಲ; ಪೀಠಾಧಿಪತಿಗಳಾದರೂ ಎಲ್ಲಿಯೂ ನಿಲ್ಲದ ನಿರಾಂಡಬರ,ನಿರಾಳ ಜಂಗಮರವರು.ತಾಯ್ತನದ ಕರುಳ ನೋಟದಿಂದ ಬಳಿ ಬಂದವರನ್ನು ವಿಚಾರಿಸಿ,ಉದ್ಧರಿಸುವವರು.ಬಯಲ ವ್ಯಕ್ತಿತ್ವದ ಈ ಮಹಾಬಯಲು ಸಿದ್ಧೇಶ್ವರ ಸ್ವಾಮಿಗಳವರದ್ದು ಮಾತುಮಂತ್ರವಾದ ,ನುಡಿ ಬೆಳಕಾದ,ನಡೆ ಪಥವಾದ ಅಪೂರ್ವ ವ್ಯಕ್ತಿತ್ವ.ನಿಜವಾದ ಅರ್ಥದ ‘ನಡೆದಾಡುವ ದೇವರು’ ಅವರು.ಬಸವಣ್ಣ,ಅಲ್ಲಮಪ್ರಭುಗಳಂತಹ ಮೇರು ವ್ಯಕ್ತಿತ್ವಗಳ ಬಗ್ಗೆ ಓದಿ,ಬಲ್ಲ ನಮಗೆ ಸಿದ್ಧೇಶ್ವರ ಶ್ರೀಗಳನ್ನು ಕಂಡಾಗ ಬಸವ – ಅಲ್ಲಮರ ಪರಂಪರೆಯ ವಾರಸುದಾರರನ್ನು ಕಂಡ ಅನುಭವ,ಆನಂದ ಉಂಟಾಗುತ್ತದೆ.ಕನ್ನಡ ನಾಡಿನ ಪುಣ್ಯದ ಫಲವಾದ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು ಇಪ್ಪತ್ತೊಂದನೇ ಶತಮಾನದ ‘ಭುವನದ ಭಾಗ್ಯ’,’ಆಧ್ಯಾತ್ಮ ಲೋಕದ ಆಶ್ಚರ್ಯ’ ಮತ್ತು ಯುಗಯುಗಗಳಿಗೊಮ್ಮೆ ಇಳಿದುಬರಬಹುದಾದ ಪರಶಿವನ ಚಿತ್ಕಳೆಯ ಪ್ರಭಾಪುಂಜ’.

ಸಿದ್ಧೇಶ್ವರ ಸ್ವಾಮಿಗಳವರು ಬೇಗ ಗುಣಮುಖರಾಗಲಿ ,ಅವರ ಅಮೃತಧಾರೆಯ ಉಪದೇಶಾಮೃತವನ್ನು ನೂರ್ಕಾಲ ಸವಿಯುವ ಭಾಗ್ಯವನ್ನು ನಾಡುಪಡೆಯಲಿ ಎನ್ನುವ ಪ್ರಾರ್ಥನೆಯನ್ನು ಜಗನ್ಮಾತಾಪಿತರುಗಳಾದ ವಿಶ್ವೇಶ್ವರ ಶಿವ,ವಿಶ್ವೇಶ್ವರಿ ದುರ್ಗಾದೇವಿಯರಲ್ಲಿ ನಿವೇದಿಸುತ್ತಾ ಸಿದ್ಧೇಶ್ವರ ಸ್ವಾಮಿಗಳವರ ಮಾತುಮನಂಗಳಿಂದತ್ತತ್ತವಾಗಿರುವ,ವ್ಯೋಮಸ್ವರೂಪಿ ‘ ಅನುಪಮವ್ಯಕ್ತಿತ್ವ’ ವನ್ನು ಕುರಿತ ತೊದಲುನುಡಿಗಳ ಈ ವ್ಯಕ್ತಿಚಿತ್ರಣವನ್ನು ಶ್ರೀಗುರುದೇವ ಕುಮಾರಸ್ವಾಮಿಗಳವರ ಪದತಲಗಳಿಗೆ ಸಮರ್ಪಿಸುವೆ.

ಮುಕ್ಕಣ್ಣ ಕರಿಗಾರ

18.01.2022