ಬಸವ ದರ್ಶನ ಮಾಲೆ ೨೨ : ಶಿವನೊಲುಮೆ,ಮೋಕ್ಷಪಥಕ್ಕೆ ಸಾಧನವಾಗಿ ರುದ್ರಾಕ್ಷಿ – ಮುಕ್ಕಣ್ಣ ಕರಿಗಾರ

ಶಿವನೊಲುಮೆ,ಮೋಕ್ಷಪಥಕ್ಕೆ ಸಾಧನವಾಗಿ ರುದ್ರಾಕ್ಷಿ

          ಮುಕ್ಕಣ್ಣ ಕರಿಗಾರ

ಶೈವಧರ್ಮ ಮತ್ತು ಪರಂಪರೆಯಲ್ಲಿ ವಿಭೂತಿ ಮತ್ತು ರುದ್ರಾಕ್ಷಿಗಳಿಗೆ ಮಹತ್ವದ ,ಪೂಜ್ಯನೀಯ ಸ್ಥಾನವಿದೆ.ವಿಭೂತಿ ಮತ್ತು ರುದ್ರಾಕ್ಷಿಗಳೆರಡು ಸ್ವಯಂ ಶಿವನ ಸ್ವರೂಪವಾಗಿದ್ದರಿಂದ ಶಿವಭಕ್ತರು ವಿಭೂತಿ ಹಚ್ಚಿಕೊಳ್ಳಬೇಕು,ರುದ್ರಾಕ್ಷಿಗಳನ್ನು ಧರಿಸಬೇಕು ಎನ್ನುತ್ತವೆ ಶೈವಧಾರ್ಮಿಕ ವಿಧಿಗಳು.ವಿಭೂತಿಯ ಬಗ್ಗೆ ನಿನ್ನೆ ನೋಡಿದ್ದಾಯಿತು.ಇಂದು ರುದ್ರಾಕ್ಷಿಯ ಬಗ್ಗೆ ಬಸವಣ್ಣನವರ ವಚನಗಳೊಂದಿಗೆ ರುದ್ರಾಕ್ಷಿಯ ಬಗ್ಗೆ ಕೆಲವು ವಿಷಯಗಳನ್ನು ವಿವರಿಸುವೆ.

ಅಯ್ಯಾ,ಎನಗೆ ರುದ್ರಾಕ್ಷಿಯೇ ಸರ್ವಪಾವನ ;
ಅಯ್ಯಾ,ಎನಗೆ ರುದ್ರಾಕ್ಷಿಯೇ ಸರ್ವಸಿದ್ಧಿ.
‌ಅಯ್ಯಾ,ನಿಮ್ಮ ಪಂಚವಕ್ತ್ರಗಳೇ
ಪಂಚಮುಖದ ರುದ್ರಾಕ್ಷಿಗಳಾದುವಾಗಿ,
ಅಯ್ಯಾ,ಕೂಡಲ ಸಂಗಮದೇವಾ,
ಎನ್ನ ಮುಕ್ತಿಪಥಕ್ಕೆ,ಈ ರುದ್ರಾಕ್ಷಿ ಸಾಧನವಯ್ಯಾ

ಬಸವಣ್ಣನವರು ಈ ವಚನದಲ್ಲಿ ರುದ್ರಾಕ್ಷಿಯ ಮಹಿಮೆಯನ್ನು ವಿವರಿಸುತ್ತ ರುದ್ರಾಕ್ಷಿಯು ಮೋಕ್ಷ ಸಾಧನ ಎನ್ನುತ್ತಾರೆ.ಅಂದರೆ ಮೋಕ್ಷಾಪೇಕ್ಷಿಗಳು ರುದ್ರಾಕ್ಷಿಯನ್ನು ಧರಿಸಲೇಬೇಕು.ಬಸವಣ್ಣನವರ ಅಭಿಪ್ರಾಯದಂತೆ ರುದ್ರಾಕ್ಷಿಯು ಎಲ್ಲಕ್ಕೂ ಪವಿತ್ರವಾದುದು,ಪಾವನವಾದುದು.ರುದ್ರಾಕ್ಷಿಯ ಧಾರಣೆಯಿಂದ ಸರ್ವಸಿದ್ಧಿಗಳುಂಟಾಗುತ್ತವೆ.ಶಿವನ ಪಂಚಮುಖಗಳೇ ಪಂಚಮುಖದ ರುದ್ರಾಕ್ಷಿಗಳಾದುದರಿಂದ ಶಿವಭಕ್ತರಿಗೆ ಪಂಚಮುಖದ ರುದ್ರಾಕ್ಷಿ ಧಾರಣೆಯು ಸರ್ವಶ್ರೇಯಸ್ಕರ.ರುದ್ರಾಕ್ಷಿಯನ್ನು ಧರಿಸುವುದರಿಂದ ಮುಕ್ತಿಪಥವು ತಾನಾಗಿಯೇ ತೆರೆದುಕೊಳ್ಳುತ್ತದೆ.ರುದ್ರಾಕ್ಷಿಯನ್ನು ಧರಿಸುವವನು ಸ್ವಯಂ ಶಿವಸ್ವರೂಪನೇ ಆಗುವುದರಿಂದ ಅವರಿಗೆ ಭಯವಿಲ್ಲ,ಭವವೂ ಇಲ್ಲ.

ರುದ್ರಾಕ್ಷಿಯು ಪಾವನ ವಸ್ತುಗಳಲ್ಲಿಯೇ ಪಾವನವಾದುದು,ದೇವಗಂಗೆಯಂತೆ ನಿತ್ಯಪರಿಶುದ್ಧವಾಗಿದ್ದು ತನ್ನನ್ನು ಧರಿಸುವವರನ್ನು ಶುದ್ಧರನ್ನಾಗಿಸುತ್ತದೆ.ರುದ್ರಾಕ್ಷಿಯು ಸಕಲ ಸಿದ್ಧಿಗಳ ಸ್ವರೂಪವಾಗಿದ್ದು ತನ್ನನ್ನು ಧರಿಸುವವರೆಗೆ ಅಣಿಮಾದಿ ಅಷ್ಟಸಿದ್ಧಿಗಳನ್ನು ನೀಡುತ್ತದೆ ರುದ್ರಾಕ್ಷಿ.ಜಗನ್ನಿಯಾಕನೂ ಜಗದ ಕರ್ತಾರನೂ ಆದ ಶಿವನು ಪ್ರಪಂಚ ವ್ಯವಹಾರದ ನಿಮಿತ್ತವಾಗಿ ಪಂಚಮುಖಗಳ ಪರಮೇಶ್ವರನಾಗಿ ಪ್ರಕಟಗೊಂಡನು,ಪಂಚಭೂತಗಳಲ್ಲಿ ತನ್ನ ವಿಶೇಷ ಶಕ್ತಿಯನ್ನಿಟ್ಟು ಭೂತಪತಿ,ಭೂತನಾಥ ಲೀಲೆ ಮೆರೆದನು.ಈಶಾನ,ತತ್ಪುರುಷ,ವಾಮದೇವ,ಸದ್ಯೋಜಾತ ಮತ್ತು ಅಘೋರ ಎನ್ನುವವು ಶಿವನ ಪಂಚಮುಖಗಳಾಗಿದ್ದು ಈ ಪಂಚಮುಖಗಳಿಂದ ವಿಶ್ವದ ಲೀಲೆಯಾಡುತ್ತಿದ್ದಾನೆ ಶಿವ.ಪಂಚಮುಖದ ರುದ್ರಾಕ್ಷಿಯು ಪಂಚಮುಖಗಳ ಪರಶಿವ ತತ್ತ್ವಸ್ವರೂಪಿಯಾಗಿದ್ದು ಶಿವಭಕ್ತರು ಪಂಚಮುಖದ ರುದ್ರಾಕ್ಷಿಗಳು ಧರಿಸಬೇಕು ಎನ್ನುವುದು ಬಸವಣ್ಣನವರ ಅಭಿಮತ.ಶಿವಭಕ್ತರಿಗೆ ,ಮೋಕ್ಷಾಪೇಕ್ಷಿಗಳಿಗೆ ರುದ್ರಾಕ್ಷಿಯೇ ಮಹಾಸಾಧನವು ಅಂದರೆ ರುದ್ರಾಕ್ಷಿ ಧಾರಣೆಯಿಂದ ಸುಲಭವಾಗಿ ಪಡೆಯಬಹುದು ಶಿವಾನುಗ್ರಹವನ್ನು,ಮೋಕ್ಷವನ್ನು.

ರುದ್ರಾಕ್ಷಿಯನ್ನು ಧರಿಸಿದವರನ್ನು ಸಾಕ್ಷಾತ್ ಪರಶಿವನೆಂದು ನಂಬುವೆ ಎನ್ನುವ ಬಸವಣ್ಣನವರು ರುದ್ರಾಕ್ಷಿ ಧರಿಸದೆ ಇರುವ ಯಾರೇ ಆಗಿರಲಿ ಅವರನ್ನು ಕನಿಷ್ಟರು ಎಂದು ಬಗೆಯುವೆ ಎನ್ನುತ್ತಾರೆ ;

ಶ್ರೀರುದ್ರಾಕ್ಷಿಯ ಧರಿಸಿದಾತನೆ ಲಿಂಗವೆಂಬೆ ;
ಶ್ರೀರುದ್ರಾಕ್ಷಿಯ ಧರಿಸದ ಅಧಮರನೆ ಭವಿಯೆಂಬೆ !
ಕೂಡಲ ಸಂಗಮದೇವಯ್ಯಾ,
ಶ್ರೀರುದ್ರಾಕ್ಷಿಯ ಧರಿಸುವ ಭಕ್ತರ ನೀನೆಂಬೆ !

ಶ್ರೀರುದ್ರಾಕ್ಷಿಯನ್ನು ಧರಿಸಿದವರೆ ಲಿಂಗ, ಅವರೇ ಶಿವ ಎನ್ನುವುದು ಬಸವಣ್ಣನವರ ನಿಲುವು,ನಿಷ್ಠೆ.ರುದ್ರಾಕ್ಷಿಯನ್ನು ಧರಿಸದವರೆ ಅಧಮರು,ಅವರೇ ಭವಿಗಳು ಎನ್ನುತ್ತಾರೆ ಬಸವಣ್ಣನವರು.ಭಕ್ತ ಮತ್ತು ಭವಿಗಳು ಎನ್ನುವ ಎರಡು ಪ್ರಕಾರದ ಜನರಿದ್ದಾರೆ ಪ್ರಪಂಚದಲ್ಲಿ.ಭಕ್ತರು ಭಗವಂತನ ಪಥದಲ್ಲಿ ನಂಬಿಕೆಯನ್ನಿರಿಸಿ ನಡೆಯುವವರಾದರೆ ಭವಿಗಳು ಭಗವಂತನನ್ನು ನಂಬದೆ ಭಗವತ್ ಪಥದಿಂದ ದೂರವಾದ ಸದ್ಗತಿ ಇಲ್ಲದ ಜನರು,ನರಕಪಾತ್ರರು.ಶ್ರೀರುದ್ರಾಕ್ಷಿಯನ್ನು ಧರಿಸಿದವರನ್ನು ಸಾಕ್ಷಾತ್ ಶಿವನೆಂದು ನಂಬಿ ಪೂಜಿಸುವೆ ಎನ್ನುವ ಬಸವಣ್ಣನವರ ಮಾತಿನಲ್ಲಿ ಶಿವನಷ್ಟೇ ಪೂಜ್ಯರು ಶಿವಲಾಂಛನಧಾರಿಗಳು ಎನ್ನುವ ಮುಗ್ಧಭಕ್ತಿಇದೆ,ಪರಿಶುದ್ಧ ಶಿವನಿಷ್ಠೆ ಇದೆ.

ಹಸ್ತಕಡಗ ಕೈಗಧಿಕ ನೋಡಾ; ಕೊಡಲಹುದು ಕೊಳ್ಳಲಹುದು.
ಬಾಹುಬಳೆ ತೋಳಿಂದಧಿಕ,ನೋಡಾ;
ಪರವಧುವನಪ್ಪಲಾಗದು.
ಕರ್ಣಕ್ಕೆ ರುದ್ರಾಕ್ಷಿ ಅಧಿಕ,ನೋಡಾ;
ಶಿವನಿಂದೆಯ ಕೇಳಲಾಗದು
ಕಂಠಮಾಲೆ ಕೊರಳಿಂದಧಿಕ,ನೋಡಾ;
ಅನ್ಯದೈವಕ್ಕೆ ತಲೆಬಾಗಲಾಗದು.
ಆವಾಗಳೂ ನಿಮ್ಮುವನೆ ನೆನೆದು,ನಿಮ್ಮುವನೇ ಪೂಜಿಸಿ,
ಕೂಡಲ ಸಂಗಯ್ಯನ ಪದಸನ್ನಿಹಿತನಾಗಿಪ್ಪಡೆ ಲಿಂಗಶಿಖಾಮಣಿಯಯ್ಯಾ !

ಈ ವಚನದಲ್ಲಿ ಬಸವಣ್ಣನವರು ದೇಹದ ವಿವಿಧ ಭಾಗಗಳಲ್ಲಿ ರುದ್ರಾಕ್ಷಿಸ್ಥಾನಗಳನ್ನು ಬಣ್ಣಿಸುತ್ತ ರುದ್ರಾಕ್ಷಿಯನ್ನು ಕಾಟಾಚಾರಕ್ಕೆ ಧರಿಸದೆ ಅದರ ಹಿಂದೆ ಇರುವ ಶಿವತತ್ತ್ವ,ಶುದ್ಧತ್ವವನ್ನು ಮೈಗೂಡಿಸಿಕೊಳ್ಳಬೇಕು ಎನ್ನುತ್ತಾರೆ.ಹಸ್ತದಲ್ಲಿ ರುದ್ರಾಕ್ಷಿ ಮಾಲೆಯನ್ನು ಕೈಕಡಗದಂತೆ ಧರಿಸಬಹುದು.ಶ್ರೀಮಂತರು ಬಂಗಾರದ ಇಲ್ಲವೆ ಬೆಳ್ಳಿಯ ಕೈಕಡಗ ಧರಿಸಿದರೆ ಶಿವಭಕ್ತರು ರುದ್ರಾಕ್ಷಿಮಾಲೆಯನ್ನು ಕೈಕಡಗವನ್ನಾಗಿ ಧರಿಸಬೇಕು.ರುದ್ರಾಕ್ಷಿ ಕಡಗ ಧರಿಸಿ ಶಿವಭಕ್ತರಾದವರು ಶಿವಭಕ್ತರೊಡನೆ ಕೊಡುಕೊಳ್ಳುವ ವ್ಯವಹಾರ ಮಾಡಬಹುದು.ಬರಿಕೈಯ್ಗಳಿಗಿಂತ ರುದ್ರಾಕ್ಷಿಕಡಗ ಧರಿಸಿದ ಕೈಯ್ಗಳು ಪವಿತ್ರವಾದವುಗಳು ಕೈಯಲ್ಲಿ ಶಿವಸಾನ್ನಿಧ್ಯವನ್ನುಂಟು ಮಾಡುವ ಮೂಲಕ.ಬಾಹುಗಳಿಗೆ ಧರಿಸುವ ರುದ್ರಾಕ್ಷಿಮಾಲೆಗಳು ಬಾಹುಗಳಿಗೆ ಶ್ರೇಷ್ಠತ್ವ ನೀಡುತ್ತವೆ.ಬಾಹುಗಳಲ್ಲಿ ರುದ್ರಾಕ್ಷಿಮಾಲೆ ಧರಿಸಿದವರು ಪರವಧುವನ್ನು ಅಪ್ಪಬಾರದು ಎನ್ನುತ್ತಾರೆ ಬಸವಣ್ಣನವರು.ಕಿವಿಗಳಿಗೆ ರುದ್ರಾಕ್ಷಿಗಳನ್ನು ಧರಿಸುವುದರಿಂದ ಕಿವಿಗಳಿಗೆ ಶ್ರೇಷ್ಠತ್ವ ಪ್ರಾಪ್ತಿಯಾಗುತ್ತದೆ.ಕರ್ಣದಲ್ಲಿ ರುದ್ರಾಕ್ಷಿಯನ್ನು ಧರಿಸಿದವರು ಶಿವನಿಂದೆಯನ್ನು ಕೇಳಬಾರದು.ಕಂಠದಲ್ಲಿ ರುದ್ರಾಕ್ಷಿಮಾಲೆ ಧರಿಸುವುದರಿಂದ ಕಂಠಕ್ಕೆ ಮಹಿಮೆ ಲಭಿಸುತ್ತದೆ.ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿದವರು ಶಿವನಲ್ಲದೆ ,ಲಿಂಗವಲ್ಲದೆ ಮತ್ತೊಂದು ದೈವಕ್ಕೆ ನಮಸ್ಕರಿಸಬಾರದು.ಸದಾಕಾಲವೂ ಶಿವನನ್ನೇ ನೆನೆಯುತ್ತಾ,ಶಿವನನ್ನೇ ಪೂಜಿಸುತ್ತ,ಶಿವನಲಿಂಗದ ಪದತಳಗಳಲ್ಲಿರುವ ಭಕ್ತನೇ ಶ್ರೇಷ್ಠಲಿಂಗಭಕ್ತ,ಶಿವಭಕ್ತ ಎನ್ನುತ್ತಾರೆ ಬಸವಣ್ಣನವರು.ರುದ್ರಾಕ್ಷಿ ಮಾಲೆಯನ್ನು ಮೈತುಂಬ ಹಾಕಿಕೊಂಡು ರುದ್ರರಾದೆವು,ಶಿವರಾದೆವು ಎಂದು ಒಣಜಂಭದ ಮಾತುಗಳನ್ನಾಡುವವರು ಬಸವಣ್ಣನವರ ಈ ವಚನವನ್ನು ಅರ್ಥೈಸಿಕೊಳ್ಳಬೇಕು.ಆಡಂಬರಕ್ಕಾಗಿ ರುದ್ರಾಕ್ಷಿಯನ್ನು,ರುದ್ರಾಕ್ಷಿ ಮಾಲೆಯನ್ನು ಧರಿಸದೆ ಅಂತರಂಗ ಬಹಿರಂಗಗಳ ಶುದ್ಧಿಗಾಗಿ ರುದ್ರಾಕ್ಷಿಧರಿಸಿ ರುದ್ರಭಾವನೆಯನ್ನು ಹೊಂದಿರಬೇಕು.ರುದ್ರಾಕ್ಷಿ ಧರಿಸಿ ರುದ್ರರೇ ಆದೆವು ಎಂದು ಬೀಗುವವರು ಶಿವನಿಂದೆಯನ್ನು ಕೇಳಬಾರದು, ಶಿವನಲ್ಲದೆ ಅನ್ಯದೈವಕ್ಕೆ ತಲೆಬಾಗಬಾರದು,ಶಿವಸರ್ವೋತ್ತಮ ತತ್ತ್ವವನ್ನು ಎತ್ತಿಹಿಡಿದು ಬದುಕಬೇಕು.ಸದಾಕಾಲವೂ ಶಿವನನ್ನೇ ನೆನೆಯುತ್ತ,ಶಿವನನ್ನೇ ಪೂಜಿಸುತ್ತ ಶಿವಸನ್ನಿಧಿಯಲ್ಲಿರುವವರೇ ಶ್ರೇಷ್ಠ ಶಿವಭಕ್ತರು ಎನ್ನುವ ಬಸವಣ್ಣನವರು ಶಿವಭಕ್ತರು ಶಿವನಲ್ಲದೆ ಮತ್ತೊಂದು ದೈವವನ್ನು ಪೂಜಿಸಬಾರದು ಎನ್ನುತ್ತಾರೆ.

ರುದ್ರಾಕ್ಷಿಗೆ ಭಾರತದಲ್ಲಿ ಬಹುಪ್ರಾಚೀನ ಕಾಲದಿಂದಲೂ ಮಹತ್ವದ ಸ್ಥಾನವಿದೆ.ಶಿವಮಹಾಪುರಾಣ,ಸ್ಕಂದ ಮಹಾಪುರಾಣಗಳು ಸೇರಿದಂತೆ ಶೈವಪುರಾಣಗಳು,ಧಾರ್ಮಿಕ ಗ್ರಂಥಗಳಲ್ಲಿ ಶಿವಭಕ್ತರಾದವರು ರುದ್ರಾಕ್ಷಿ ಧರಿಸಬೇಕು ಎಂದು ವಿಧಿಸಲಾಗಿದೆ.ರುದ್ರಾಕ್ಷ ಎಂದರೆ ರುದ್ರನ ಕಣ್ಣು,ರುದ್ರನ ಕಣ್ಣಿನಿಂದ ಉದುರಿದ ಹನಿಗಳಿಂದ ರುದ್ರಾಕ್ಷಿ ಮರಗಳಾದವು ಎನ್ನುತ್ತವೆ ಪುರಾಣಗಳು.ಒಮ್ಮೆ ವಿನೋದಕ್ಕಾಗಿ ಪಾರ್ವತಿಯು ತನ್ನೆರಡು ಕೈಗಳಿಂದ ಶಿವನ ಕಣ್ಣುಗಳನ್ನು ಮುಚ್ಚಿದಳಂತೆ.ಆಗ ಜಗತ್ತೆಲ್ಲವೂ ಅಂಧಕಾರಮಯವಾಗಿ ಸೃಷ್ಟಿಯಲ್ಲಿ ಅಲ್ಲೋಲ ಕಲ್ಲೋಲವಾಯಿತು.ಗಾಬರಿಗೊಂಡ ಪಾರ್ವತಿಯು ತಕ್ಷಣ ತನ್ನ ಕೈಗಳನ್ನು ತೆಗೆದಳು.ಆಗ ಶಿವನ ಕಣ್ಣುಗಳಿಂದ ದಳದಳನೆ ನೀರುಗಳು ಉದುರಿದವು.ಶಿವನ ಕಣ್ಣುಗಳ ನೀರು ಭೂಮಿಗೆ ಬಿದ್ದು ಮರಗಳಾಗಿ ಬೆಳೆದು ರುದ್ರಾಕ್ಷಿ ಮರಗಳಾದವು.ರುದ್ರನ ಕಣ್ಣುಗಳ ನೀರಿನಿಂದ ಹುಟ್ಟಿದವುಗಳಾದ್ದರಿಂದ ಅವು ರುದ್ರಾಕ್ಷಿಗಳು.ರುದ್ರಾಕ್ಷಿ ಎನ್ನುವುದು ದೇವಿಯ ಪಾರ್ವತಿಯ ಹೆಸರೂ ಹೌದು.ಪ್ರಕೃತಿಪತಿಯಾದ ಶಿವನು ಪಾರ್ವತಿಯ ಕಣ್ಣುಗಳ ಮೂಲಕ ಜಗತ್ತನ್ನು ನೋಡುತ್ತಾನೆ.ಅಂದರೆ ಸದಾ ಯೋಗಾನಂದದಲ್ಲಿ ತಲ್ಲೀನನಾಗಿರುವ ಪರಶಿವನು ಪಾರ್ವತಿಯ ಮೂಲಕ ಸೃಷ್ಟಿ ವ್ಯವಹಾರ ನಿರ್ವಹಿಸುವನು,ಪಾರ್ವತಿಯ ಅಭಿಪ್ರಾಯದಂತೆ ಜಗದ ಆಗು ಹೋಗುಗಳನ್ನು ನಿರ್ಣಯಿಸುವನು.ರುದ್ರಾಕ್ಷಿಯು ಶಕ್ತಿಯ ಪ್ರತೀಕವಾಗಿದ್ದರಿಂದ ಅದನ್ನು ಧರಿಸುವವರ ಮೇಲೆ ಶಿವನು ಪ್ರಸನ್ನನಾಗುವನು.

ರುದ್ರಾಕ್ಷಿಯ ಗಿಡಗಳು ಎಲ್ಲಿ ಬೇಕು ಅಲ್ಲಿ ಬೆಳೆಯುವುದಿಲ್ಲ.ಹಿಮಾಲಯದ ತಪ್ಪಲು ಪ್ರದೇಶ,ನೇಪಾಳ,ಸುಮಾತ್ರ,ಜಾವ ಮತ್ತು ಇಂಡೋನೇಷ್ಯಾ ದೇಶಗಳಲ್ಲಿ ರುದ್ರಾಕ್ಷಿ ಗಿಡಗಳು ಬೆಳೆಯುತ್ತವೆ.ರುದ್ರಾಕ್ಷಿಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಸಂಶೋಧನೆಗಳಾಗಿವೆ.ರುದ್ರಾಕ್ಷಿಯು ರೋಗನಿವಾರಕ,ಪೀಡಾಪರಿಹಾರಕ,ಅನಿಷ್ಟಪರಿಹಾರಕ ಮತ್ತು ಸಂಪತ್ಪ್ರದಾಯಕವಾದುದು.ರುದ್ರಾಕ್ಷಿ ಧರಿಸುವ ಭಕ್ತರು ರೋಗ ಮತ್ತು ಅಪಮೃತ್ಯುವಿನ ಭಯದಿಂದ ಮುಕ್ತರಾಗಿರುತ್ತಾರೆ.

ಸಂಶೋಧನೆಗಳಂತೆ ರುದ್ರಾಕ್ಷಿಯಲ್ಲಿ 50.031% ಇಂಗಾಲ,0.95% ಸಾರಜನಕ,17.897% ಜಲಜನಕ,30.53% ಆಮ್ಲಜನಕ ಇದ್ದುದಾಗಿ ಗೊತ್ತಾಗಿದೆ.ರುದ್ರಾಕ್ಷಿಯು ಬೆಳೆದು ರೂಪುಗೊಳ್ಳಲು 15 ರಿಂದ 16 ವರ್ಷಗಳ ಕಾಲಾವಧಿ ಹಿಡಿಯುತ್ತದೆ.

ರುದ್ರಾಕ್ಷಿಗೆ ಶೈವಸಂಪ್ರದಾಯದಲ್ಲಿ ವಿಶಿಷ್ಟಸ್ಥಾನವಿದೆ.ರುದ್ರಾಕ್ಷಿಯಲ್ಲಿ ಹಲವು ಪ್ರಕಾರಗಳಿದ್ದು ಒಂದರಿಂದ ಇಪ್ಪತ್ತೊಂದು ಮುಖಗಳ ರುದ್ರಾಕ್ಷಿಗಳಿವೆ.ಏಕಮುಖ ರುದ್ರಾಕ್ಷಿ ಮತ್ತು ಪಂಚಮುಖಿರುದ್ರಾಕ್ಷಿಗಳು ಸಾರ್ವತ್ರಿಕ ಮನ್ನಣೆಗಳಿಸಿವೆ.ರುದ್ರಾಕ್ಷಿಯು ಮೂಲತಃ ಶಿವನ ಪ್ರತೀಕವಾಗಿದ್ದು,ಶೈವರಿಗೆ ಸಂಬಂಧಿಸಿದ ಲಾಂಛನವಾಗಿದ್ದರೂ ಎಲ್ಲ ಮತದವರಿಗೂ ರುದ್ರಾಕ್ಷಿಯು ಪವಿತ್ರ ಎನ್ನುವ ಕಾರಣದಿಂದ ರುದ್ರಾಕ್ಷಿಯ ಇಪ್ಪತ್ತೊಂದು ಮುಖಗಳಿಗೆ ಒಬ್ಬೊಬ್ಬ ದೇವರನ್ನು ಅಧಿಪತಿಯನ್ನಾಗಿಸಿ,ಗ್ರಹೋಪಗ್ರಹಗಳನ್ನು ಕಲ್ಪಿಸಿ,ಮಂತ್ರಗಳನ್ನು ಸಂಯೋಜಿಸಿ ಸರ್ವಮತಗಳ ಸಮನ್ವಯವನ್ನು ಎತ್ತಿಹಿಡಿಯಲಾಗಿದೆ.ಏಕಮುಖಿ ರುದ್ರಾಕ್ಷಿಯಿಂದ ಇಪ್ಪತ್ತೊಂದು ಮುಖಿ ರುದ್ರಾಕ್ಷಿಗಳ ಬಗ್ಗೆ ತಿಳಿಯೋಣ.

ಏಕಮುಖಿ ರುದ್ರಾಕ್ಷಿ

ಅಧಿದೈವ –ಶಿವ
ಗ್ರಹ — ಎಲ್ಲ ಗ್ರಹಗಳು
ಬೀಜಮಂತ್ರ –ಓಂ ನಮಃ ಶಿವಾಯ
ಏಕಮುಖ ರುದ್ರಾಕ್ಷಿಯು ಸ್ವಯಂ ಶಿವನ ಸ್ವರೂಪವಾಗಿದ್ದು ಅದರ ಧಾರಣೆಯಿಂದ ಸಕಲ ಅನಿಷ್ಟಗಳು ತೊಲಗುತ್ತವೆ,ಭಕ್ತಿ- ವೈರಾಗ್ಯಗಳು ಮೂಡುತ್ತವೆ.ವಿರಕ್ತರು,ಸಂನ್ಯಾಸಿಗಳಿಗೆ ಏಕಮುಖಿ ರುದ್ರಾಕ್ಷಿ ಧಾರಣೆಯನ್ನು ವಿಧಿಸಲಾಗಿದೆ.

ಎರಡು ಮುಖದ ರುದ್ರಾಕ್ಷಿ

ದೇವತೆ — ಅರ್ಧನಾರೀಶ್ವರ
ಗ್ರಹ — ಚಂದ್ರ
ಬೀಜಮಂತ್ರ –ಓಂ ನಮಃ
ಶಿವಶಕ್ತಿ ಸಮನ್ವಯ ತತ್ತ್ವದ ರುದ್ರಾಕ್ಷಿ ಇದು.

ಮೂರು ಮುಖದ ರುದ್ರಾಕ್ಷಿ

ದೇವತೆ — ಅಗ್ನಿ
ಗ್ರಹ — ಸೂರ್ಯ
ಬೀಜಮಂತ್ರ — ಓಂ ಕ್ಲೀಂ

ನಾಲ್ಕು ಮುಖದ ರುದ್ರಾಕ್ಷಿ

ದೇವತೆ — ಬೃಹಸ್ಪತಿ
ಗ್ರಹ — ಗುರು
ಬೀಜಮಂತ್ರ — ಓಂ ಹ್ರೀಂ ನಮಃ

ಐದು ಮುಖದ ರುದ್ರಾಕ್ಷಿ

ದೇವತೆ — ಕಾಲಾಗ್ನಿ ರುದ್ರ
ಗ್ರಹ — ಗುರು
ಬೀಜಮಂತ್ರ — ಓಂ ಹ್ರೀಂ ನಮಃ

ಆರು ಮುಖದ ರುದ್ರಾಕ್ಷಿ

ದೇವತೆ — ಕಾರ್ತಿಕೇಯ ( ಷಣ್ಮುಖ
ಗ್ರಹ — ಮಂಗಳ
ಬೀಜಮಂತ್ರ — ಓಂ ಹ್ರೀಂ ಹೂಂ ನಮಃ

ಏಳು ಮುಖದ ರುದ್ರಾಕ್ಷಿ

ದೇವತೆ –ಲಕ್ಷ್ಮೀ
ಗ್ರಹ — ಬುಧ
ಬೀಜಮಂತ್ರ — ಓಂ ಹೂಂ ನಮಃ

ಎಂಟು ಮುಖದ ರುದ್ರಾಕ್ಷಿ

ದೇವತೆ — ಗಣೇಶ
ಗ್ರಹ — ಕೇತು
ಬೀಜಮಂತ್ರ –ಓಂ ಹೂಂ ನಮಃ

ಒಂಬತ್ತು ಮುಖದ ರುದ್ರಾಕ್ಷಿ

ದೇವತೆ — ದುರ್ಗಾ
ಗ್ರಹ — ರಾಹು
ಬೀಜಮಂತ್ರ — ಓಂ ಹ್ರೀಂ ಹೂಂ ನಮಃ

ಹತ್ತುಮುಖದ ರುದ್ರಾಕ್ಷಿ

ದೇವತೆ — ವಿಷ್ಣು ( ಕೃಷ್ಣ)
ಗ್ರಹ — ಎಲ್ಲಾ ಗ್ರಹಗಳು
ಬೀಜಮಂತ್ರ — ಓಂ ಹ್ರೀಂ ನಮಃ ನಮಃ

ಹನ್ನೊಂದು ಮುಖದ ರುದ್ರಾಕ್ಷಿ

ದೇವತೆ — ಏಕಾದಶ ರುದ್ರರು ( 11 ರುದ್ರರು )
ಗ್ರಹ — ಎಲ್ಲ ಗ್ರಹಗಳು
ಬೀಜಮಂತ್ರ — ಓಂ ಹ್ರೀಂ ಹೂಂ ನಮಃ

ಹನ್ನೆರಡು ಮುಖದ ರುದ್ರಾಕ್ಷಿ

ದೇವತೆ — ಸೂರ್ಯ
ಗ್ರಹ — ಗ್ರಹ
ಬೀಜಮಂತ್ರ — ಓಂ ಕ್ರಾಂ ಕ್ಷಾಂ ಕ್ರೌಂ ನಮಃ

ಹದಿಮೂರು ಮುಖದ ರುದ್ರಾಕ್ಷಿ

ದೇವತೆ — ಕಾಮದೇವ
ಗ್ರಹ — ಬುಧ
ಬೀಜಮಂತ್ರ — ಓಂ ಹ್ರೀಂ ನಮಃ

ಹದಿನಾಲ್ಕು ಮುಖದ ರುದ್ರಾಕ್ಷಿ

ದೇವತೆ — ಆಂಜನೇಯ
ಗ್ರಹ — ಮಂಗಳ
ಬೀಜಮಂತ್ರ –ಓಂ ನಮಃ

ಹದಿನೈದು ಮುಖದ ರುದ್ರಾಕ್ಷಿ

ದೇವತೆ — ಪಶುಪತಿ
ಗ್ರಹ — ಶುಕ್ರ
ಬೀಜಮಂತ್ರ — ಓಂ ಹ್ರೀಂ ನಮಃ

ಹದಿನಾರು ಮುಖದ ರುದ್ರಾಕ್ಷಿ

ದೇವತೆ — ಮಹಾಮೃತ್ಯುಂಜಯ ಶಿವ
ಗ್ರಹ — ಚಂದ್ರ
ಬೀಜಮಂತ್ರ — ಓಂ ಹ್ರೀಂ ಹೂಂ ನಮಃ

ಹದಿನೇಳು ಮುಖದ ರುದ್ರಾಕ್ಷಿ

ದೇವತೆ — ಕಾತ್ಯಾಯನಿ ದೇವಿ
ಗ್ರಹ — ಶನಿ
ಬೀಜಮಂತ್ರ — ಓಂ ಹ್ರೀಂ ಹೂಂ ನಮಃ

ಹದಿನೆಂಟು ಮುಖದ ರುದ್ರಾಕ್ಷಿ

ದೇವತೆ — ಭೂಮಿದೇವಿ
ಗ್ರಹ — ಭೂಮಿ
ಬೀಜಮಂತ್ರ — ಓಂ ಹ್ರೀಂ ಶ್ರೀಂ ವಸುಧಾಯೆ ನಮಃ

ಹತ್ತೊಂಬತ್ತು ಮುಖದ ರುದ್ತಾಕ್ಷಿ

ದೇವತೆ — ನಾರಾಯಣ
ಗ್ರಹ — ಶುಕ್ರ
ಬೀಜಮಂತ್ರ — ಓಂ ವಂ ವಿಷ್ಣವೇ ಶೀರ್ಷಾಯ್ನೇ ನಮಃ

ಇಪ್ಪತ್ತು ಮುಖದ ರುದ್ರಾಕ್ಷಿ

ದೇವತೆ — ಬ್ರಹ್ಮ
ಗ್ರಹ — ಭೂಮಿ
ಬೀಜಮಂತ್ರ — ರುದ್ರರೂಪಾಯೆ ಕಲ್ಪಾಂತೆ ನಮಸ್ತುಭ್ಯಂ ತ್ರಿಮೂರ್ತಯೇ

ಇಪ್ಪತ್ತೊಂದು ಮುಖದ ರುದ್ರಾಕ್ಷಿ

ದೇವತೆ — ಕುಬೇರ
ಗ್ರಹ — ಭೂಮಿ
ಬೀಜಮಂತ್ರ — ಓಂ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯ ಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ

ಮುಕ್ಕಣ್ಣ ಕರಿಗಾರ

17.01.2022