ಹಣೆಬರಹವನ್ನು ಬದಲಿಸಬಲ್ಲದು ವಿಭೂತಿ
ಮುಕ್ಕಣ್ಣ ಕರಿಗಾರ
ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ ;
ಕಹಿಸೋರೆಯ ಕಾಯ ತಂದು ವಿಭೂತಿಯ ತುಂಬಿದೊಡೆ
ಸಿಹಿಯಾಗದೆ ಮೂರು ದಿವಸಕ್ಕೆ ?
ಹಲವು ಕಾಲ ಕೊಂದ ಸೂನೆಗಾರನ
ಕತ್ತಿಯಾದರೇನು,
ಪರುಷ ಮುಟ್ಟಲಿಕೆ ಹೊನ್ನಾಗದೆ,ಅಯ್ಯಾ ?
ಲಲಾಟದಲ್ಲಿ ವಿಭೂತಿ ಬರಲಿಕೆ
ಪಾಪ ಪಲ್ಲಟವಾಗದೆ,ಕೂಡಲ ಸಂಗಮದೇವಾ ?
ಬಸವಣ್ಣನವರು ವಿಭೂತಿಯು ಹಣೆಬರಹವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ.ಜನರಲ್ಲಿ ಪಾಪ- ಕರ್ಮಗಳ ಭೀತಿಯನ್ನು ಬಿತ್ತುತ್ತ ಅವರು ಮುಂದುಗಾಣದಂತೆ ಮಾಡಿರುವ ಬುದ್ಧಿವಂತರು ಪಾಪ,ಕರ್ಮಗಳಿಂದ ಜನಸಾಮಾನ್ಯರ ಬಿಡುಗಡೆಯೇ ಇಲ್ಲ ಎನ್ನುವಂತೆ ವಾದಿಸುತ್ತಾರೆ.ತಮ್ಮ ಎಳಸು ಬುದ್ಧಿಯಿಂದ ಪರಮಾತ್ಮನು ಸರ್ವಶಕ್ತನು ಎನ್ನುವ ನಂಬಿಕೆಗೆ ಅಪಚಾರವನ್ನುಂಟು ಮಾಡುತ್ತಿದ್ದಾರೆ.ಜಗದ ಕರ್ತಾರನೂ ನಿಯಾಮಕನೂ ಆದ ಪರಮಾತ್ಮನು ಸಹ ಜೀವರುಗಳ ಕರ್ಮವನ್ನು ಮೀರಲರಿಯನು ಎಂದರೆ ಪರಮಾತ್ಮನ ಗುಣ- ವಿಶೇಷಗಳಿಗೆ ಕುಂದಲ್ಲವೆ ? ಅರೆಜ್ಞಾನಿಗಳು ಮತ್ತು ಅಜ್ಞಾನಿಗಳು ಪರಮಾತ್ಮನ ತತ್ತ್ವವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಳಲಿ,ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದಾರೆ.ಬಸವಣ್ಣನವರು ಶಿವ ಪರಮೇಶ್ವರ,ಶಿವ ಸರ್ವೇಶ್ವರ ತತ್ತ್ವವನ್ನು ಪ್ರತಿಪಾದಿಸುತ್ತ ನಿರ್ಗುಣಶಿವನ ಪ್ರತೀಕವಾದ ವಿಭೂತಿಯನ್ನು ಬಳಿದುಕೊಳ್ಳುವ ಮೂಲಕ ಪಾಪ- ಕರ್ಮಗಳಿಂದ ಮುಕ್ತಾರಾಗಬಹುದು,ಹಣೆಬರಹವನ್ನು ತೊಡೆದುಹಾಕಿ ನಮ್ಮ ಇಷ್ಟದಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎನ್ನುತ್ತಾರೆ.ಹಿಂದೆಗೈದ ಪಾಪ ಕರ್ಮಗಳಿಂದ ಬಿಡುಗಡೆ ಎಂತು ಎಂದು ವ್ಯಥಿತರಾಗಿರುವ ಜನರಿಗೆ ಬಸವಣ್ಣನವರು ಕಹಿಗುಂಬಳಕಾಯಿಯ ನಿದರ್ಶನದೊಂದಿಗೆ ಮನಮುಟ್ಟುವಂತೆ ವಿವರಿಸಿದ್ದಾರೆ.ಕಹಿಯಾದ ಸೋರೆಕಾಯಿಯನ್ನು ತಂದು ಅದರಲ್ಲಿ ವಿಭೂತಿಯನ್ನು ತುಂಬಿದರೆ ಮೂರುದಿನಗಳಲ್ಲಿ ಕಹಿಸೋರೆಯು ಸಿಹಿಯಾಗುತ್ತದೆ.ಕ್ರೂರಿ ಕಟುಕನ ಕೈಯಲ್ಲಿ ನೂರಾರು ಪ್ರಾಣಿಗಳ ಕತ್ತನ್ನು ಕತ್ತರಿಸಿದ ಕತ್ತಿಯಾದರೇನು ಸ್ಪರ್ಶಮಣಿ ಮುಟ್ಟಿದ ಕೂಡಲೆ ಅದು ಚಿನ್ನವಾಗಿ ಮಾರ್ಪಡುತ್ತದೆ.ಅದರಂತೆ ಹಣೆಯಲ್ಲಿ ವಿಭೂತಿ ಧರಿಸಿದೊಡನೆ ಪಾಪವು ಪುಣ್ಯವಾಗಿ ಮಾರ್ಪಡುತ್ತದೆ ಎನ್ನುವ ಬಸವಣ್ಣನವರು ವಿಭೂತಿಯ ಮಹತ್ವವನ್ನು ವಿವರಿಸುತ್ತ ಶಿವನವಿಭೂತಿ ತತ್ತ್ವವನ್ನು ಪ್ರತಿಪಾದಿಸಿದ್ದಾರೆ.
ಕಹಿಸೋರೆಕಾಯಿಲ್ಲಿ ವಿಭೂತಿ ತುಂಬಿದಾಗ ಮೂರು ದಿನಗಳಲ್ಲಿ ಸೋರೆಕಾಯಿಯು ತನ್ನ ಕಹಿಗುಣವನ್ನು ಕಳೆದುಕೊಂಡು ಸಿಹಿಯಾಗುತ್ತದೆ.ನೂರಾರು ಮುಗ್ಧಜೀವಗಳನ್ನು ಕೊಂದಿದ್ದರೂ ಸಹ ಕಟುಕನ ಕೈಯ ಕತ್ತಿಯು ಸ್ಪರ್ಶಮಣಿಯ ಸಂಪರ್ಕಕ್ಕೆ ಬರಲು ತನ್ನ ಕಬ್ಬಿಣದ ಗುಣವನ್ನು ಕಳೆದುಕೊಂಡು ಬಂಗಾರವಾಗುತ್ತದೆ.ಶಿವಸ್ವರೂಪವಾದ ವಿಭೂತಿಯನ್ನು ಹಚ್ಚಿಕೊಂಡರೆ ಹಿಂದಿನ ಅನಂತ ಜನ್ಮಗಳ ಪಾಪವು ಕ್ಷಯವಾಗುವುದಲ್ಲದೆ ಆ ಪಾಪವೇ ಪುಣ್ಯವಾಗಿ ಮಾರ್ಪಡುತ್ತದೆ.ಬಸವಣ್ಣನವರು ಇಲ್ಲಿ ಶಿವತತ್ತ್ವದಿಂದ ಪ್ರಪಂಚ ತತ್ತ್ವದಲ್ಲಿ ಉಂಟಾಗುವ ಮಾರ್ಪಾಟು ಇಲ್ಲವೆ ಬದಲಾವಣೆಯನ್ನು ವಿವರಿಸಿದ್ದಾರೆ.ಬಸವಣ್ಣನವರ ಅಭಿಪ್ರಾಯದಂತೆ ಜಗನ್ನಿಯಾಮಕನಾದ ಶಿವನು ತನ್ನನ್ನು ನಂಬಿದ ಭಕ್ತರ ಉದ್ಧಾರಕ್ಕೆ ಸಂಕಲ್ಪಿಸೆ ಭಕ್ತರ ಪಾಪ- ಕರ್ಮಗಳು ಸುಟ್ಟು ಬೂದಿಯಾಗುತ್ತವೆ.ಪ್ರಪಂಚಪ್ರಳಯ ಕಾಲದಲ್ಲಿ ಮಹಾಕಾಲನಾದ ಶಿವನು ಪ್ರಪಂಚವನ್ನು ಸುಟ್ಟುಬೂದಿಮಾಡಿ ಆ ಬೂದಿಯನ್ನು ಶೇಖರಿಸಿಟ್ಟುಕೊಳ್ಳುವನು ಮತ್ತು ಪುನಃ ಸೃಷ್ಟಿಯನ್ನಾರಂಭಿಸುವನು ಹಿಂದಿನಯುಗದ ಪ್ರಪಂಚಶೇಷ ಬೂದಿಯಿಂದ.ಶಿವನು ಪ್ರಪಂಚವು ಪ್ರಳಯಕ್ಕೆ ಸಿಕ್ಕು ಸುಟ್ಟು ಬೂದಿಯಾದಾಗ ಆ ಬೂದಿಯನ್ನು ತನ್ನ ಮೈತುಂಬ ಬಡಿದುಕೊಂಡು ‘ಬೂದಿಬಡಕ’ ನಾಗುವನು.ಪ್ರಪಂಚವೆಲ್ಲವೂ ನಾಶವಾಗಿ ಜಗತ್ತೇ ಮಹಾಸ್ಮಶಾನವಾಗಿ ಮಾರ್ಪಟ್ಟಾಗ ಆ ಮಹಾಸ್ಮಶಾನದಲ್ಲಿ ತಾನೊಬ್ಬನೇ ಇರುವನಾದ್ದರಿಂದ ಶಿವನು ಸ್ಮಶಾನವಾಸಿ.ಸತ್ತಮನುಷ್ಯರ ಹೆಣಗಳನ್ನು ಸುಡುವ ಇಲ್ಲವೆ ಹೂಳುವ ನೆಲವೇ ಸ್ಮಶಾನವಾಗಿದ್ದು ತನ್ನಿಂದ ಹೊರಹೊಮ್ಮಿದ ಜೀವರುಗಳು ತನ್ನಲ್ಲಿಯೇ ಐಕ್ಯರಾಗುತ್ತಾರೆ ಎನ್ನುವ ಸಂದೇಶಸಾರುವುದರಿಂದ ಶಿವನು ಸ್ಮಶಾನವಾಸಿ.ಶಿವನು ಹೆಣಗಳನ್ನು ಸುಟ್ಟಬೂದಿಯನ್ನು ಅಂದರೆ ಚಿತಾಭಸ್ಮವನ್ನು ತನ್ನ ಹಣೆ,ಮೈಗೆಲ್ಲ ಲೇಪಿಸಿಕೊಳ್ಳುವನು.ವಿಭೂತಿ ಎಂದರೆ ಭಸ್ಮ.ಯಾವುದು ಅಳಿದ ಜಗತ್ತನ್ನು ತನ್ನಲ್ಲಿಟ್ಟುಕೊಂಡು ಪುನರ್ ಸೃಷ್ಟಿಸುವುದೇ ಅದೇ ವಿಭೂತಿ.ಶಿವನ ಹಣೆಗಣ್ಣಿನಿಂದ ಹೊರಟ ಅಗ್ನಿಜ್ವಾಲೆಯು ರುದ್ರನರ್ತನಗೈದು ಪ್ರಪಂಚವನ್ನು ಪ್ರಳಯಮಾಡುತ್ತದೆ,ಶಿವನ ಅದೇ ಹಣೆಯು ಬೂದಿಯಾಗಿದ್ದ ಪ್ರಳಯಗೊಂಡ ಪ್ರಪಂಚವನ್ನು ತನ್ನ ಹಣೆಗೆ ಸಿಂಗರಿಸಿಕೊಳ್ಳುತ್ತದೆ.ಪ್ರಪಂಚದ ಸೃಷ್ಟಿ- ಸ್ಥಿತಿ- ಲಯಗಳು ಪರಶಿವನ ಆಧೀನ ಎನ್ನುವುದನ್ನು ವಿಭೂತಿ ಸಂಕೇತಿಸುತ್ತದೆ.ಜಗದ ಕರ್ತಾರನಾದ ಶಿವನ ಸ್ವರೂಪವೇ ಆದ ವಿಭೂತಿಯನ್ನು ಹಣೆಯಲ್ಲಿ ಧರಿಸುವ ಮೂಲಕ ಮನುಷ್ಯರು ಪಾಪಮುಕ್ತರಾಗಬಹುದು.ಬ್ರಹ್ಮನು ಪ್ರತಿಜೀವಿಯ ಜೀವಿತೋದ್ದೇಶವನ್ನು ‘ಹಣೆಬರಹ’ ಎನ್ನುವ ಮೂರು ಸಾಲುಗಳಲ್ಲಿ ಮೀರಲಾಗದ ‘ ವಿಧಿಲಿಖಿತ’ ವನ್ನು ಬರೆದರೆ ಶಿವಭಕ್ತರು ಬ್ರಹ್ಮನ ಬರಹದ ಮೇಲೆ ಶಿವನ ವಿಭೂತಿಯನ್ನು ಧರಿಸುವ ಮೂಲಕ ಹಣೆಬರಹವನ್ನು ಬದಲಿಸಬಹುದು,ಅಳಿಸಬಹುದು ಎನ್ನುವ ಸಂದೇಶ ಸಾರುತ್ತಾರೆ ಲೋಕಕ್ಕೆ.ಭಕ್ತಿಯಲ್ಲಿ ಭಗವಂತನನ್ನು ಗೆಲ್ಲುವ ಶಕ್ತಿಯಿದೆ; ನಂಬಿಕೆಯಲ್ಲಿ ಹಣೆಬರಹ ಬದಲಿಸುವ ಸಾಮರ್ಥವಿದೆ.ವಿಭೂತಿಯ ಕಹಿಸೋರೆಯನ್ನು ಸಿಹಿಯಾಗಿಸುವಂತೆ ತನ್ನನ್ನು ಧರಿಸಿದ ಭಕ್ತರ ಅವಗುಣಗಳನ್ನು ಕಳೆದು ಅವುಗಳನ್ನು ಶಿವಗುಣಗಳನ್ನಾಗಿ ಪರಿವರ್ತಿಸುತ್ತದೆ.ಶಿವಗುಣ ಇದ್ದಲ್ಲಿಗೆ ಬರಲೇಬೇಕು ಶಿವನು.ವಿಭೂತಿಯು ಧರಿಸಿದವರ ಪಾಪ- ಕರ್ಮಗಳನ್ನು ಸುಟ್ಟು ಅವರನ್ನು ಶಿವಾನುಗ್ರಹಕ್ಕೆ ಪಾತ್ರರನ್ನಾಗಿಸುತ್ತದೆ.ಕಟುಕನ ಕೈಯಲ್ಲಿದ್ದು ನೂರಾರು ಮುಗ್ಧ ಜೀವರುಗಳ ಪ್ರಾಣಹರಣಗೈದರೂ ಕತ್ತಿಯು ಸ್ಪರ್ಶಮಣಿಯು ತನ್ನನ್ನು ಮುಟ್ಟಲು ಬಂಗಾರವಾಗುತ್ತದೆ.ನೆತ್ತರುಕುಡಿದು ಮೈತುಂಬ ಪಾಪಲೇಪನ ಮಾಡಿಕೊಂಡಿದ್ದರೂ ಕಬ್ಬಿಣವು ಸ್ಪರ್ಶಮಣಿಯ ಸಂಪರ್ಕಕ್ಕೆ ಬಂದೊಡನೆ ಬಂಗಾರವಾಗುತ್ತದೆ.ಸ್ಪರ್ಶಮಣಿಯ ಗುಣವೇ ಅಂತಹದ್ದು.ಶಿವನ ಸ್ವರೂಪವಾದ ವಿಭೂತಿಯನ್ನು ಧರಿಸಿದೊಡನೆ ಕಡುಪಾಪಿಯೂ ಪಾಪಮುಕ್ತನಾಗಿ ಪುಣ್ಯಾತ್ಮನಾಗುತ್ತಾನೆ.ಬಸವಣ್ಣನವರು ಈ ವಚನದಲ್ಲಿ ಪುರೋಹಿತಶಾಹಿಯು ಉಗ್ಗಡಿಸುವ ಮೀರಲಾಗದ,ಅನುಭವಿಸಿಯೇ ತೀರಬೇಕಾದ ಪಂಚಮಹಾಪಾತಕಾದಿ ಸಮಸ್ತ ಪಾಪ- ಕರ್ಮಗಳನ್ನು ವಿಭೂತಿಯು ಸುಡಬಲ್ಲದು ಎಂದು ಜನರಿಗೆ ಪಾಪಮುಕ್ತರಾಗುವ ಅಭಯದ ಪಥತೋರಿ ವಿಭೂತಿಯನ್ನು ಧರಿಸಲು ಹೇಳುತ್ತಾರೆ.
ಶಿವಭಕ್ತರು ಶಿವಲಾಂಛನವಾಗಿ ಹಣೆಗೆ ತ್ರಿಪುಂಡ್ರ ಧಾರಣೆ ಮಾಡಬೇಕು ಎನ್ನುವ ಬಸವಣ್ಣನವರು ಶಿವಶರಣರ ನೊಸಲಿಗೆ ವಿಭೂತಿಯೇ ಶೃಂಗಾರ ಎನ್ನುವುದು ಹಲವು ಉಪಮೆ,ರೂಪಕ,ದೃಷ್ಟಾಂತಗಳ ಮೂಲಕ ಸುಂದರವಾಗಿ ವಿವರಿಸಿದ್ದಾರೆ.
ನೀರಿಂಗೆ ನೆಯ್ದಿಲೆ ಶೃಂಗಾರ ; ಸಮುದ್ರಕ್ಕೆ ತೆರೆಯೇ ಶೃಂಗಾರ ;
ನಾರಿಗ ಗುಣವೇ ಶೃಂಗಾರ ; ಗಗನಕ್ಕೆ ಚಂದ್ರಮನೇ ಶೃಂಗಾರ ;
ನಮ್ಮ ಕೂಡಲ ಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.
ಕೆರೆ ಸರೋವರಗಳ ನೀರಿಗೆ ನೈದಿಲೆ ಹೂವು ಇಲ್ಲವೆ ತಾವರೆಹೂವು ಶೃಂಗಾರ,ಸಮುದ್ರಕ್ಕೆ ಅದರ ತೆರೆಗಳೇ ಶೃಂಗಾರ, ಕುಲಸ್ತ್ರೀಗೆ ಅವಳ ಸಾತ್ವಿಕಗುಣವೇ ಅಲಂಕಾರ,ಆಭರಣ,ಆಕಾಶಕ್ಕೆ ಚಂದ್ರನೇ ಅಲಂಕಾರ.ಅದರಂತೆಯೇ ಶಿವಶರಣರಿಗೆ ಅವರ ಹಣೆಯ ವಿಭೂತಿಯೇ ಅಲಂಕಾರ ಎನ್ನುವ ಬಸವಣ್ಣನವರು ಶಿವಭಕ್ತರಾದವರು ವಿಭೂತಿಯನ್ನು ಧರಿಸಲೇಬೇಕು ಎನ್ನುತ್ತಾರೆ.ಕೆರೆ,ಬಾವಿ,ಹಳ್ಳ,ನದಿಗಳ ತಟದಲ್ಲಿ ಬೆಳೆಯುವ ತಾವರೆಯ ಹೂವು ತನ್ನ ಮುಗ್ಧಕೋಮಲತೆ ಮತ್ತು ಕಂಪಿನಿಂದ ಜಲತಾಣಕ್ಕೆ ಸೌಂದರ್ಯವನ್ನುಂಟು ಮಾಡುತ್ತದೆ.ಸಮುದ್ರವು ಎಷ್ಟೇ ವಿಸ್ತಾರವಾಗಿದ್ದರೂ ಅದಕ್ಕೆ ಅರ್ಥ ಮತ್ತು ಮಹತ್ವ ಬರುವುದು ಅದರಲ್ಲಿ ಉಕ್ಕೇರಿ,ಭೋರ್ಗರೆವ ಅಲೆಗಳಿಂದ.ತೆರೆಗಳಿಂದಾಗಿಯೇ ಸಮುದ್ರದ ಜೀವಂತಿಕೆಯು ಕಳೆಕಟ್ಟುತ್ತದೆ.ಉತ್ತಮಸ್ತ್ರೀಯು ತನ್ನ ಗಂಡನೇ ತನ್ನ ಸರ್ವಸ್ವ ಎಂದು ತಿಳಿದು ಪತಿಯಲ್ಲೇ ಆಸಕ್ತಳಾಗಿರುತ್ತಾಳೆ.ಆಕಾಶಕ್ಕೆ ಚಂದ್ರನೇ ಅಲಂಕಾರ.ಇಲ್ಲಿ ಒಂದು ಸಂಗತಿಯನ್ನು ಲಕ್ಷಿಸಬೇಕು,ಬಸವಣ್ಣನವರು ಆಕಾಶಕ್ಕೆ ಚಂದ್ರನೇ ಶೃಂಗಾರ ಎನ್ನುತ್ತಾರೆ,ಸೂರ್ಯನನ್ನು ಶೃಂಗಾರ ಎನ್ನುವುದಿಲ್ಲ !.ಸೂರ್ಯನು ಜಗತ್ತಿನ ಶಕ್ತಿಯ ಮೂಲವಾಗಿ,ಅಂಧಕಾರ ನಿವಾರಕನಾಗಿದ್ದರೂ ಮತ್ತು ಎಲ್ಲ ಗ್ರಹಗಳಿಗೆ ರಾಜನಾಗಿದ್ದರೂ ಪ್ರತ್ಯಕ್ಷದೈವ ಎಂಬ ಬಿರುದು ಪಡೆದಿದ್ದರೂ ಸೂರ್ಯನು ಆಕಾಶದ ಶೃಂಗಾರ ಎನ್ನುವುದಿಲ್ಲ ಬಸವಣ್ಣನವರು.ನಮಗೆ ಬೆಳಕು ಬೇಕೇ ಹೊರತು ಬೆಂಕಿಯು ಬೇಕಿಲ್ಲ.ಸೂರ್ಯನು ಉರಿಯುಗುಳುವ ಬೃಹತ್ ಕೆಂಡದುಂಡೆ.ಚಂದ್ರನಂತೆ ನೋಡಿ ಆನಂದಿಸಲಾಗದು ಸೂರ್ಯರಶ್ಮಿಯನ್ನು.ಚಂದ್ರನಂತೆ ಸೂರ್ಯನು ಮನಸ್ಸುಗಳನ್ನು ಮುದಗೊಳಿಸಲಾರ,ಅರಳಿಸಲಾರ.ಚಂದ್ರನ ಬೆಳದಿಂಗಳು ಮೈಮನಸ್ಸುಗಳನ್ನು ಅರಳಿಸುತ್ತದೆ.ಚಂದ್ರನು ಬೆಳದಿಂಗಳನ್ನು ಮಾತ್ರ ಹೊರಸೂಸುವುದಿಲ್ಲ ಅವನು ಅಮೃತ ತತ್ತ್ವದ ಅಧಿಪತಿಯೂ ಹೌದು.ಸೂರ್ಯನು ಶಕ್ತಿಯ ಮೂಲವಾದರೆ ಚಂದ್ರನು ಅಮೃತ ತತ್ತ್ವದ ಪ್ರತೀಕ.ಶಿವಶರಣರಿಗೆ ಯಾವುದೇ ಆಭರಣ,ಅಲಂಕಾರಗಳು ಬೇಕಿಲ್ಲ,ಅವರ ಹಣೆಯಲ್ಲಿರುವ ವಿಭೂತಿಯೇ ಮಹಾಶೃಂಗಾರ.ಶಿವಭಕ್ತರ ಹಣೆಯಲ್ಲಿನ ತ್ರಿಪುಂಡ್ರವು ಅದನ್ನು ಧರಿಸಿದವರ ಪಾಪ- ಕರ್ಮಗಳನ್ನು ನಾಶ ಮಾಡುವುದಲ್ಲದೆ ವಿಭೂತಿ ಧರಿಸಿದವರನ್ನು ನೋಡುವವರ,ಅವರ ಸಂಪರ್ಕಕ್ಕೆ ಬರುವವರಲ್ಲಿಯೂ ಭಗವದ್ಬುದ್ಧಿಯುಂಟಾಗುವಂತೆ ಪ್ರೇರೇಪಿಸುತ್ತದೆ.ವಿಭೂತಿಯು ತನ್ನನ್ನು ಧರಿಸಿದವರನ್ನೂ ಧರಿಸಿದವರನ್ನು ನೋಡುವವರನ್ನೂ ಉದ್ಧರಿಸುವ ಸಾಮರ್ಥ್ಯ ಹೊಂದಿದೆ.ಆದರೆ ಇಂದು ವಿಭೂತಿಯನ್ನು ಧರಿಸುವವರ ಸಂಖ್ಯೆ ಕಡಿಮೆ,ಧರಿಸಿದ್ದರೂ ಕಾಟಾಚಾರಕ್ಕೆ ಧರಿಸುವ ಪರಂಪರೆಯ ಮಂದಿ.ಶಿವಭಕ್ತರಾದವರು ನಿಜನಿಷ್ಠೆಯಿಂದ ಸ್ವಯಂ ಉದ್ಧಾರ ಮತ್ತು ಲೋಕೋದ್ಧಾರ ಭಾವನೆಯಿಂದ ಧರಿಸಬೇಕು ವಿಭೂತಿಯನ್ನು.

16.01.2022