ಹರಪಥಕ್ಕೆ ಗುರುಪಥವೇ ಮೂಲ
ಮುಕ್ಕಣ್ಣ ಕರಿಗಾರ
ಆಧ್ಯಾತ್ಮಿಕ ಪರಂಪರೆಯಲ್ಲಿ ‘ ಗುರು’ವಿಗೆ ಮಹತ್ವದ ಸ್ಥಾನವಿದೆ.ಭಾರತದ ಎಲ್ಲ ಆಧ್ಯಾತ್ಮಿಕ ಪರಂಪರೆಗಳು ಗುರುವಿನ ಮಹತ್ವವನ್ನು ಸಾರುತ್ತವೆ.’ ಗುರುರ್ಬಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮಃ,ತಸ್ಮೈ ಶ್ರೀಗುರವೇ ನಮಃ ‘ ಎಂದು ಶ್ರೀಗುರುವಿನ ಮಹಿಮಾತಿಶಯವನ್ನು ಗುರು ಬ್ರಹ್ಮ,ವಿಷ್ಣು,ಮಹೇಶ್ವರ ಸ್ವರೂಪನಾಗಿರುವನಲ್ಲದೆ ಗುರುವೇ ಪರಬ್ರಹ್ಮನು ಎಂದು ಬಣ್ಣಿಸಲಾಗಿದೆ.ಎಲ್ಲ ಮತಗಳ ಆಚಾರ್ಯರು,ಸಮಾಜ ಸುಧಾರಕರುಗಳು ಮತ್ತು ಧರ್ಮಗುರುಗಳು ಸಹ ಗುರುವಿನ ಮಹಿಮೆಯನ್ನು ಪ್ರತಿಪಾದಿಸಿದ್ದಾರೆ.ಶಂಕರಾಚಾರ್ಯರಿಂದ ಹಿಡಿದು ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರವರೆಗಿನ ಎಲ್ಲ ಆಚಾರ್ಯಪರಂಪರೆಯ ಪೂಜ್ಯರುಗಳು ಗುರುವಿನ ಮಹೋನ್ನತಿಯನ್ನು ಸಾರಿದ್ದಾರೆ ಲೋಕಕ್ಕೆ.ಬಸವಣ್ಣನವರು ಸಹ ಶಿವಸಾಕ್ಷಾತ್ಕಾರಕ್ಕೆ ಗುರುವೇ ಮೂಲ,ಮೊದಲಿಗ ಎಂದು ಸಾರಿ ಗುರುಪಥದಿಂದಲೇ ಹರಪಥದತ್ತ ಸಾಗಬೇಕು ಆಧ್ಯಾತ್ಮಿಕ ಪಯಣ ಎನ್ನುತ್ತಾರೆ.
ಮಡಕೆಯ ಮಾಡುವರೆ ಮಣ್ಣೇ ಮೊದಲು ;
ತೊಡಗೆಯ ಮಾಡುವರೆ ಹೊನ್ನೇ ಮೊದಲು ;
ಶಿವಪಥವನರಿವರೆ ಗುರುಪಥವೇ ಮೊದಲು;
ಕೂಡಲ ಸಂಗಮದೇವರನರಿವರೆ ಶರಣರ ಸಂಗವೇ ಮೊದಲು.
ಶಿವಪಥಕ್ಕೆ ಗುರುಪಥವೇ ಮೂಲ ಎನ್ನುವುದನ್ನು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ ಬಸವಣ್ಣನವರು.ಮಡಕೆ- ಗಡಿಗೆಗಳನ್ನು ಮಾಡಬೇಕಾದರೆ ಮಣ್ಣು ಬೇಕಾಗುತ್ತದೆ.ಮಡಕೆ- ಕುಡಕೆಗಳು ಎಷ್ಟೇ ಸುಂದರವಾಗಿದ್ದರೂ ಬಗೆಬಗೆಯ ಆಕಾರ- ಆಕೃತಿಗಳನ್ನು ತಳೆದಿದ್ದರೂ ಅವುಗಳ ಮೂಲಸ್ವರೂಪ ಮಣ್ಣು.ಮಣ್ಣಿಲ್ಲದೆ ಮಾಡಲಾಗದು ಮಡಕೆ- ಕುಡಕೆಗಳನ್ನು.ದೇಹದ ಅಲಂಕಾರಕ್ಕೆ ಧರಿಸುವ ಬಗೆಬಗೆಯ ಆಭರಣಗಳಿಗೆ ಬಂಗಾರವೇ ಮೂಲಾಧಾರ.ಆಭರಣಗಳ ಹೆಸರು,ಆಕಾರ,ವಿನ್ಯಾಸಗಳು ಬಗೆಬಗೆಯಾಗಿರಬಹುದಾದರೂ ಅವುಗಳ ಮೂಲ ಬಂಗಾರದ ಘಟ್ಟಿ .ಅದರಂತೆಯೇ ಶಿವಪಥವನ್ನು ತಿಳಿಯಬೇಕಾದರೆ ಗುರುಪಥವೇ ಮೂಲ,ಮೊದಲು ಎನ್ನುವ ಬಸವಣ್ಣನವರು ಕೂಡಲಸಂಗಮದೇವನನ್ನು ಅರಿತುಕೊಳ್ಳಬೇಕಾದರೆ ಶರಣರ ಸಂಗವು ಮುಖ್ಯ ಎನ್ನುತ್ತಾರೆ.ಗುರುಗಳು ಆದವರು ತಮ್ಮ ಶಿಷ್ಯರುಗಳಿಗಷ್ಟೇ ಗುರುಗಳಾಗುತ್ತಾರೆ,ತಮ್ಮ ಶಿಷ್ಯರುಗಳನ್ನಷ್ಟೇ ಉದ್ಧರಿಸುತ್ತಾರೆ.ಆದರೆ ಶಿವಶರಣರುಗಳು ಲೋಕಗುರುಗಳಾಗಿದ್ದು ಅವರು ವಿಶ್ವವನ್ನೇ ಉದ್ಧರಿಸಬಲ್ಲ ಸಾಮರ್ಥ್ಯ ಪಡೆದಿದ್ದಾರೆ.ಕೂಡಲಸಂಗಮದೇವನು ನಿರಾಕಾರ ಪರಶಿವನಾದರೆ ಶರಣರು ಲೋಕಾನುಗ್ರಹಸಂಪನ್ನರು,ಲೋಕಗುರುಗಳು ಎನ್ನುವ ಭಾವ ಧ್ವನಿತಗೊಂಡಿದೆ ಇಲ್ಲಿ.
ಗುರುವನ್ನು ಮೀರಿದ ಮತ್ತೊಂದು ತತ್ತ್ವವಿಲ್ಲ,ಮತ್ತೊಂದು ಆದರ್ಶವಿಲ್ಲ.ಗುರು ತನಗೆ ಏನನ್ನು ಉಪದೇಶಿಸಿರುತ್ತಾನೋ ,ಏನನ್ನು ಅನುಗ್ರಹಿಸಿರುತ್ತಾನೋ ಅದೇ ಪಥದಲ್ಲಿ ಮುನ್ನಡೆಯಬೇಕು ಶಿಷ್ಯ.ಗುರುಪಥವನ್ನು ಬಿಟ್ಟು ನಡೆಯುವವರು ಕೆಡುವರಲ್ಲದೆ ಅಂತಹವರು ನಿಜ ಶರಣರಲ್ಲ ಎನ್ನುತ್ತಾರೆ ಬಸವಣ್ಣನವರು ;
ನೋಡಿ ನೋಡಿ ಮಾಡುವ ನೇಮ,ಸಲ್ಲವು ! ಸಲ್ಲವು !!
ತನುವುದ್ದೇಶ ,ಮನವುದ್ದೇಶವಾಗಿ ಮಾಡುವ ನೇಮ,ಸಲ್ಲವು ! ಸಲ್ಲವು !!
ಗುರುಪಥವ ಮೀರಿ ಮಾಡುವ ನೇಮ,ಸಲ್ಲವು! ಸಲ್ಲವು !!
ಕೂಡಲ ಸಂಗಮದೇವಯ್ಯಾ,
ಇವು ನಿಮ್ಮ ನಿಜದೊಳಗೆ ನಿಲ್ಲವು ! ನಿಲ್ಲವು !!
ಶಿವನೆಂಬ ಸತ್ಯದ ದರ್ಶನಕ್ಕೆ ಗುರುವೇ ಮೂಲ,ಮಾರ್ಗ.ಗುರು ತಾನು ಕಂಡುಂಡ ಶಿವದರ್ಶನವು ತನ್ನ ಶಿಷ್ಯರಿಗೂ ಆಗಲಿ ಎಂದು ಹಂಬಲಿಸಿ,ಹಾತೊರೆಯುತ್ತಾನೆ.ಶಿಷ್ಯರಾದವರು ಗುರುವಿನಲ್ಲಿ ನಿಜನಿಷ್ಠೆಯನ್ನಿಟ್ಟಿರಬೇಕು.ಗುರುವಿನಲ್ಲಿ ಸಂದೇಹ ಹೊಂದಿದರೆ ಅವರು ಶಿಷ್ಯರಲ್ಲ,ಸದ್ಗತಿಗೆ ಅರ್ಹರಲ್ಲ.ಗುರು ಉಪದೇಶಿಸಿದ ಮಂತ್ರ ಮತ್ತು ತೋರಿಸಿದ ದಾರಿ ಸರಿಯೋ ತಪ್ಪೋ ಎಂದು ವಿಚಾರಿಸದೆ ಆ ಮಂತ್ರ ಮತ್ತು ಮಾರ್ಗವನ್ನು ಒಪ್ಪಿ ನಡೆಯಬೇಕು.ಈ ಮಂತ್ರ ಸರಿಯೆ? ಇದರಿಂದ ಫಲ ಸಿಗಬಹುದೆ? ಈ ಮಂತ್ರ ವ್ಯಾಕರಣಬದ್ಧವೆ ? ಎಂಬಿತ್ಯಾದಿ ವಿಚಾರಿಸುತ್ತ ಸಂದೇಹಗ್ರಸ್ಥರಾದವರು ಮುಂದುಕಾಣದಾಗುತ್ತಾರೆ.ನೋಡಿ ನೋಡಿ ಮಾಡುವ ನೇಮ ಎಂದರೆ ಜನರು ಮಾಡುತ್ತಾರೆ ನಾನೂ ಮಾಡಬೇಕು ಎಂದು ಬಗೆಬಗೆಯ ನೇಮ- ವ್ರತಾಚರಣೆಗಳಲ್ಲಿ ಆಸಕ್ತನಾಗುವುದು.ತನ್ನ ಗುರು ಬೋಧಿಸಿದ್ದು ಸರಿಯೋ ತಪ್ಪೋ,ಇದರಿಂದ ನನ್ನ ಉದ್ಧಾರ ಸಾಧ್ಯವೆ ಎಂದು ಸಂದೇಹಕ್ಕೀಡಾಗುವುದು.ದೇಹದ ಆರೋಗ್ಯ-ಸೌಂದರ್ಯ, ರಕ್ಷಣೆ ಮತ್ತು ಸೌಖ್ಯಗಳನ್ನು ಅಪೇಕ್ಷಿಸಿ ಮಾಡುವ ಪೂಜೆಯು ಸಲ್ಲದು.ಶಿಷ್ಯನಾದವನು ತನ್ನ ತನುಮನಗಳೆರಡನ್ನೂ ಶ್ರೀಗುರುವಾರ್ಪಣ ಮಾಡಬೇಕು.ವ್ರತಗಳಿಂದ ಸಿಗುವ ಫಲಕ್ಕಿಂತ ಗುರುನಿಷ್ಠೆಯೇ ಮುಖ್ಯವಾದದ್ದು ಶಿಷ್ಯನಿಗೆ.ಗುರು ಬೋಧಿಸಿದ ಮಂತ್ರವನ್ನು ಬಿಟ್ಟು ಬೇರೊಬ್ಬರು ಹೇಳಿದ ಮಂತ್ರವನ್ನು ಜಪಿಸುವುದು,ಗುರು ತೋರಿಸಿದ ಆಧ್ಯಾತ್ಮಿಕ ಪಥವನ್ನು ಬಿಟ್ಟು ಅವರಿವರು ಹೇಳಿದ ಭಕ್ತಿ -ಯೋಗಗಳಲ್ಲಿ ಆಸಕ್ತರಾಗಿ ಅನುಸರಿಸುವವರು,ಗುರು ಉಪದೇಶಿಸಿದ ದೈವವನ್ನಲ್ಲದೆ ಮತ್ತೊಂದು ದೈವವನ್ನು ಪೂಜಿಸುವವರು ಉದ್ಧಾರವಾಗಲಾರರು.
ಕೆಲವರು ತಮಗೆ ಗುರುಬೋಧಿಸಿದ ಮಂತ್ರದಲ್ಲಿಯೇ ಸಂಶಯ ತಾಳುತ್ತಾರೆ.ಗುರು ಸರಳಸ್ವಭಾವದ,ಮುಗ್ಧಭಾವದವರಿದ್ದರಂತೂ ಮುಗಿಯಿತು– ಕಂಡಕಂಡ ಪ್ರವಚನಕಾರರು,ಯೋಗಪ್ರದರ್ಶಕರು,ವಾದ ಮಂಡಿಸುವವರ ಬಳಿ ಹೋಗಿ ಅವರ ಬಣ್ಣಬಣ್ಣದ ಮಾತುಗಳಲ್ಲಿ ಆಸಕ್ತರಾಗಿ ತಮ್ಮ ಗುರುಪಥವನ್ನು ತೊರೆಯುವರಲ್ಲದೆ ಪ್ರವಚನಕಾರರ ಮಾತುಗಳನ್ನು ನಂಬಿ ಗುರುಉಪದೇಶಿಸಿದ ಪಥದಲ್ಲೇ ಸಂಶಯತಾಳುತ್ತಾರೆ.ಗುರು ಪಂಡಿತನಲ್ಲದೆ ಇರಬಹುದು,ರಂಜನೀಯವಾಗಿ ಮಾತನಾಡದೆ ಇರಬಹುದು ಆದರೆ ಪರಮಾತ್ಮನ ತತ್ತ್ವ ದರ್ಶನ ಮಾಡಿರುತ್ತಾನೆ.ಅಂತಹ ಗುರುವನ್ನು ಬಿಟ್ಟು ವಾಗಾಡಂಬರದ,ಮಾತಿನ ಮಲ್ಲರನ್ನು ನಂಬಿ ಕೆಡುವುದು ಉತ್ತಮ ಶಿಷ್ಯರ ಲಕ್ಷಣವಲ್ಲ.ಪ್ರವಚನಕಾರರು ಮತ್ತು ಸ್ವಯಂಘೋಷಿತ ಅವತಾರಿಗಳು,ದೇವಮಾನವರುಗಳು ಎಷ್ಟೇ ಸುಂದವಾದ ಮಾತುಗಳ ಮಾಲೆ ಪೋಣಿಸಿರಲಿ ಅದು ತನ್ನ ಗುರುಸಾನ್ನಿಧ್ಯದ ಕ್ಷಣಗಳಿಗೆ ಸಮನಲ್ಲ.ಆ ವ್ರತ,ಈ ಆಚರಣೆ ಎಂದು ದೇಹದಂಡನೆ ಮಾಡುವುದಾಗಲಿ,ಬಗೆಬಗೆಯ ವಸ್ತ್ರಭೂಷಣಗಳಿಂದ ಸಿಂಗರಿಸಿಕೊಳ್ಳುವುದಾಗಲಿ ಸಲ್ಲದು ಆಧ್ಯಾತ್ಮ ಮಾರ್ಗಕ್ಕೆ.’ಕೂಡಲಸಂಗಮದೇವನ ನಿಜದೊಳಗು’ ಎಂದರೆ ಪರಮಾತ್ಮನ ನಿತ್ಯಾನಂದದ ಪಥ,ಅದು ಗುರುವಾನುಗ್ರಹದ ಮೂಲಕ ನಡೆಯುವ ಆಧ್ಯಾತ್ಮಿಕ ಪಯಣ.ಗುರುವು ಹರಸ್ವರೂಪಿಯಾದ್ದರಿಂದ ಗುರುಪಥದ ಮೂಲಕವೇ ಸಾಧ್ಯ ಶಿವಪಥ.
ಗುರುವಿನ ಮಾತು ವಚನವೆನ್ನಿಸಿಕೊಳ್ಳುತ್ತದೆ,ನುಡಿ ಎನ್ನಿಸಿಕೊಳ್ಳುತ್ತದೆ.ಗುರುವಿನ ಮಾತೇ ಮಂತ್ರವಾಗುತ್ತದೆ.ಗುರೂಪದೇಶ ಮತ್ತು ಗುರುಮಾರ್ಗದ ಹೊರತು ಶಿವನ ಅನುಗ್ರಹ ಸಿದ್ಧಿಸದು ಎನ್ನುವುದನ್ನು ಸಾರುವ ಬಸವಣ್ಣನವರ ವಚನ ;
ಗುರುವಚನವಲ್ಲದೆ ಲಿಂಗವೆಂದೆನಿಸದು;
ಗುರುವಚನವಲ್ಲದೆ ನಿತ್ಯವೆಂದೆನಿಸದು ;
ಗುರುವಚನವಲ್ಲದೆ ನೇಮವೆಂದೆನಿಸದು.
ತಲೆಯಿಲ್ಲದಟ್ಟೆಗೆ ಪಟ್ಟವ ಕಟ್ಟುವ
ಉಭಯಭ್ರಷ್ಟರ ಮೆಚ್ಚುವನೆ ನಮ್ಮಕೂಡಲ ಸಂಗಮದೇವ?
ಸ್ಥಾವರಲಿಂಗದ ಪೂಜೆಯಾಗಿರಲಿ ಇಲ್ಲವೆ ಇಷ್ಟಲಿಂಗದ ಪೂಜೆಯಾಗಿರಲಿ ಶಿವಪೂಜೆಗೆ ಗುರೂಪದೇಶ ಅಗತ್ಯ.ಗುರೂಪದೇಶವಿಲ್ಲದೆ ಸಾಧನೆ ಮುಂದುವರೆಯದು,ಸಾಕ್ಷಾತ್ಕಾರ ಸಿದ್ಧಿಸದು.ಗುರುತೋರಿದ ಮಾರ್ಗದಲ್ಲಿ ನಡೆಯುವುದೇ ನಿಯಮ,ಆಚರಣೆ ಸಂಪ್ರದಾಯವಲ್ಲದೆ ಗುರುಮಾರ್ಗಬಿಟ್ಟು ಮತ್ತೊಂದು ನೇಮವಿಲ್ಲ. ತಲೆ ಇಲ್ಲದ ಬರಿದೇಹ ಇಲ್ಲವೆ ರುಂಡವಿಲ್ಲದ ಮುಂಡಕ್ಕೆ ಅರಸುತನದ ಪಟ್ಟಕಟ್ಟಲು ಇಲ್ಲವೆ ಶಿವ ದೀಕ್ಷೆಯನ್ನು ನೀಡಲು ಸಾಧ್ಯವೆ ? ಹಾಗೊಂದು ವೇಳೆ ತಲೆಯಿಲ್ಲದ ಬರಿದೇಹಕ್ಕೆ ದೀಕ್ಷೆ ನೀಡದರೆ ಅದು ಲೋಕವಿಪರೀತವೆನ್ನಿಸಿಕೊಳ್ಳದೆ ? ಗುರೂಪದೇಶ ಪಡೆದವರನ್ನು ಶಿವಮಾರ್ಗಿಗಳು,ಹಿರಿಯರು ಎಂದು ಗೌರವಿಸಬೇಲ್ಲದೆ ಗುರುವಚನವನ್ನು ಧಿಕ್ಕರಿಸಿ ನಡೆಯುವವರನ್ನು ಗೌರವಿಸಲಾಗದು.ಒಂದು ವೇಳೆ ಹಾಗೆ ಮಾಡಿದರೆ ಅಂದರೆ ಗುರುವಿಲ್ಲದವನಿಗೆ,ಗುರುವಲ್ಲದವನಿಗೆ ಮಾನ ಮನ್ನಣೆ ನೀಡಿದರೆ ಮನ್ನಣೆ ನೀಡಿದವರೂ ಮನ್ನಣೆ ಮಾಡಿಸಿಕೊಂಡವರು ಹೀಗೆ ಇಬ್ಬರೂ ಹಾಳಾಗುತ್ತಾರೆ.ಗುರುವಿಲ್ಲದವನು ಮತ್ತು ಅವನನ್ನು ಹಿರಿಯನೆಂದು ಪೂಜಿಸುವವನು ಇಬ್ಬರೂ ಭ್ರಷ್ಟರೆ,ಪಥಭ್ರಷ್ಟರೆ !
ಬಸವಣ್ಣನವರು ಈ ವಚನದಲ್ಲಿ ಗುರೂಪದೇಶದ ಮಹತ್ವವನ್ನು ಪ್ರತಿಪಾದಿಸಿದ್ದಾರೆ.ಶಿವಯೋಗವೆಂದು ಬರಿಯ ಇಷ್ಟಲಿಂಗವನ್ನು ಪೂಜಿಸಿದರೆ ಆಗದು,ಆ ಇಷ್ಟಲಿಂಗವನ್ನು ಗುರು ಉಪದೇಶಿಸಿದ ಶಿವಮಂತ್ರದಿಂದ ಪೂಜಿಸಬೇಕು.ಗುರುಮಂತ್ರದಿಂದಲೇ ‘ ಕರಸ್ಥಳದ ಇಷ್ಟಲಿಂಗವು ಚುಳುಕಾಗುವುದು’.ಗುರು ಉಪದೇಶಿಸಿದ ಶಿವಮಂತ್ರದ ಮೂಲಕ ಇಷ್ಟಲಿಂಗದಲ್ಲಿ ದೃಷ್ಟಿಯನ್ನಿಟ್ಟು ನೋಡೆ ಆ ಲಿಂಗದಲ್ಲಿ ಶಿವನು ಜಾಗ್ರತನಾಗುವನು,ಇಷ್ಟಲಿಂಗದಲ್ಲಿ ನೀಲಕಾಂತಿ ಹೊಮ್ಮುವುದು.ಮೋಕ್ಷವು ಗುರುಮಂತ್ರದಿಂದ ಮಾತ್ರ ಸಿದ್ಧಿಸುತ್ತದೆ.ಯಜ್ಞ ಯಾಗಾದಿಗಳು,ಹೋಮ- ಹವನಗಳು,ಆ ಈ ವ್ರತಗಳಿಂದ ದೊರಕದ ಮೋಕ್ಷವು ಗುರು ಉಪದೇಶಿಸಿದ ಮಂತ್ರಾನುಷ್ಠಾನದ ಮೂಲಕ ಮಾತ್ರ ಲಭಿಸುತ್ತದೆ.ಶಿವಪೂಜೆಯ ನೇಮ ಎಂದರೆ ಅದು ಗುರು ಉಪದೇಶಿಸಿದ ಮಾರ್ಗದಲ್ಲಿ ಮಾಡುವ ಶಿವನ ಪೂಜೆಯೇ .ಗುರುಮಂತ್ರಕ್ಕಿಂತ ಹಿರಿಯ ತತ್ತ್ವವಿಲ್ಲ,ಗುರುಮಾರ್ಗಕ್ಕಿಂತ ಹಿರಿಯ ದರ್ಶನವಿಲ್ಲ.ಗುರುದೀಕ್ಷೆಯನ್ನು ನೀಡಬೇಕಾದರೆ ಎಲ್ಲರಿಗೂ ನೀಡಬಾರದು.ಗುರುವಿನಲ್ಲಿ ನಿಷ್ಠೆಯುಳ್ಳ ಹರನ ಪಥವನ್ನು ನಂಬಿ ನಡೆಯಬಲ್ಲವರಿಗೆ ಮಾತ್ರ ನೀಡಬೇಕು ಗುರುದೀಕ್ಷೆಯನ್ನು.ಗುರುವಿನಲ್ಲಿ ಮತ್ತು ಶಿವನಲ್ಲಿ ನಿಷ್ಠೆ – ನಂಬಿಕೆಗಳಿಲ್ಲದವರನ್ನು ಗೌರವಿಸಿ,ಆದರಿಸುವುದು ರುಂಡವಿಲ್ಲದ ಮುಂಡಕ್ಕೆ ಗುರುಪಟ್ಟ ಕಟ್ಟಿದಂತೆ ವ್ಯರ್ಥಸಾಹಸ.
ಬಸವಣ್ಣನವರು ಈ ಮೂರುವಚನಗಳಲ್ಲಿ ಶಿವಪಥಕ್ಕೆ ಗುರುಪಥವೇ ಮೊದಲು ಎನ್ನುವುದನ್ನು ನಿರೂಪಿಸುತ್ತಾ ಗುರುವಿಲ್ಲದೆ ಕಾಣಲಾಗದು ಹರನನ್ನು,ಗುರುವನ್ನು ಕಡೆಗಣಿಸಿ ಅವರಿವರಲ್ಲಿ ನಡೆದುಕೊಂಡರೆ ಫಲವಿಲ್ಲ; ಗುರು ಒಬ್ಬನೇ ಶಿವ ಸಾಕ್ಷಾತ್ಕಾರ ಮತ್ತು ಮೋಕ್ಷಗಳನ್ನು ಕರುಣಿಸಬಲ್ಲ ಸಮರ್ಥ ಎಂದು ಸಾರಿದ್ದಾರೆ.

15.01.2022